ಕರ್ನಾಟಕಕ್ಕೆ ಶೀಘ್ರ ನೂತನ ನಾಗರಿಕ ವಿಮಾನಯಾನ ನೀತಿ: ಸಚಿವ ಎಂ.ಬಿ. ಪಾಟೀಲ್
x

ಕರ್ನಾಟಕಕ್ಕೆ ಶೀಘ್ರ ನೂತನ ನಾಗರಿಕ ವಿಮಾನಯಾನ ನೀತಿ: ಸಚಿವ ಎಂ.ಬಿ. ಪಾಟೀಲ್

ರಾಜ್ಯ ಸರ್ಕಾರದ ನೂತನ ನಾಗರಿಕ ವಿಮಾನಯಾನ ನೀತಿಯು ಕೇವಲ ಪ್ರಯಾಣಿಕರ ಓಡಾಟಕ್ಕೆ ಮಾತ್ರ ಸೀಮಿತವಾಗಿರದೆ, ಸಮಗ್ರ ಆರ್ಥಿಕ ಕಾರಿಡಾರ್ ನಿರ್ಮಾಣಕ್ಕೆ ಮುನ್ನುಡಿ ಬರೆಯಲಿದೆ.


Click the Play button to hear this message in audio format

ರಾಜ್ಯದಲ್ಲಿ ಪ್ರಾದೇಶಿಕ ವೈಮಾನಿಕ ಸಂಪರ್ಕವನ್ನು ಬಲಪಡಿಸಲು ಮತ್ತು ಆರ್ಥಿಕ ಪ್ರಗತಿಗೆ ಹೊಸ ವೇಗ ನೀಡಲು ರಾಜ್ಯ ಸರ್ಕಾರವು ಅತ್ಯಂತ ಸಮಗ್ರ ಹಾಗೂ ಮಹತ್ವಾಕಾಂಕ್ಷಿ ನಾಗರಿಕ ವಿಮಾನಯಾನ ನೀತಿಯನ್ನು ಸಿದ್ಧಪಡಿಸಿದೆ. ಇದನ್ನು ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅಧಿಕೃತ ಅನುಮೋದನೆ ಪಡೆಯಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಪ್ರಕಟಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನಯಾನ ನೀತಿಯ ರೂಪರೇಷೆಗಳನ್ನು ವಿವರಿಸಿದ್ದಲ್ಲದೆ, ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ದೋಷಗಳು, ವಿಮಾನ ನಿಲ್ದಾಣಗಳ ಖಾಸಗೀಕರಣ ನೀತಿ ಹಾಗೂ ದೇಶದಲ್ಲಿ ತಲೆದೋರಿರುವ ಎಥೆನಾಲ್ ಗೊಂದಲದ ಬಗ್ಗೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಪ್ರಹ್ಲಾದ ಜೋಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ನೂತನ ನಾಗರಿಕ ವಿಮಾನಯಾನ ನೀತಿಯು ಕೇವಲ ಪ್ರಯಾಣಿಕರ ಓಡಾಟಕ್ಕೆ ಮಾತ್ರ ಸೀಮಿತವಾಗಿರದೆ, ಸಮಗ್ರ ಆರ್ಥಿಕ ಕಾರಿಡಾರ್ ನಿರ್ಮಾಣಕ್ಕೆ ಮುನ್ನುಡಿ ಬರೆಯಲಿದೆ. ರಾಜ್ಯ ಸರ್ಕಾರವೇ ತನ್ನ ಸ್ವಂತ ಅನುದಾನದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣಗಳನ್ನು ಕೇಂದ್ರಕ್ಕೆ ಒಪ್ಪಿಸದೆ, ರಾಜ್ಯವೇ ಸಮರ್ಥವಾಗಿ ನಿರ್ವಹಣೆ ಮಾಡುವ ಚೌಕಟ್ಟನ್ನು ಈ ನೀತಿಯಲ್ಲಿ ರೂಪಿಸಲಾಗಿದೆ. ವಿಮಾನಯಾನ ಸಂಸ್ಥೆಗಳು ಸಣ್ಣ ನಗರಗಳಿಗೆ ನಿರಂತರವಾಗಿ ಸೇವೆ ಒದಗಿಸಲು ಪ್ರೋತ್ಸಾಹ ನೀಡುವಂತೆ ‘ವಯಾಬಿಲಿಟಿ ಗ್ಯಾಪ್ ಫಂಡಿಂಗ್’ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ರನ್‌ವೇ ವಿಸ್ತರಣೆ, ನೈಟ್‌ ಲ್ಯಾಂಡಿಂಗ್ ವ್ಯವಸ್ಥೆ, ಅತ್ಯಾಧುನಿಕ ಕಾರ್ಗೋ (ಸರಕು ಸಾಗಣೆ) ಟರ್ಮಿನಲ್ ಹಾಗೂ ಏರೋಸ್ಪೇಸ್ ಪಾರ್ಕ್‌ಗಳ ಅಭಿವೃದ್ಧಿಗೆ ಅಗತ್ಯವಿರುವ ನಿಧಿ ಸಂಗ್ರಹ ಮತ್ತು ಹಂಚಿಕೆಯನ್ನು ಈ ನೀತಿ ಒಳಗೊಂಡಿದೆ. ನಮ್ಮ ನೀತಿಯು ಪ್ರಾದೇಶಿಕ ವಿಮಾನ ನಿಲ್ದಾಣಗಳ ಸುಸ್ಥಿರ ಕಾರ್ಯಾಚರಣೆಗೆ ಒತ್ತು ನೀಡಲಿದ್ದು, ಇದು ಇಡೀ ದೇಶಕ್ಕೇ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಡಾನ್-2 ನೀತಿಯ ಲೋಪ: 17 ವಿಮಾನ ನಿಲ್ದಾಣಗಳು ಸ್ಥಗಿತ

ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಾದ ಉಡಾನ್-2 ಅವೈಜ್ಞಾನಿಕ ನಿಯಮಗಳಿಂದ ಕೂಡಿದೆ ಎಂದು ದೂರಿದ ಸಚಿವರು, ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಸ್ಥಗಿತಗೊಂಡಿರುವುದಕ್ಕೆ ಕೇಂದ್ರವೇ ನೇರ ಹೊಣೆ ಎಂದರು. ಉಡಾನ್ ಯೋಜನೆಯ ಸಬ್ಸಿಡಿ ಅವಧಿಯನ್ನು ಕೇವಲ 3 ವರ್ಷಗಳಿಗೆ ಸೀಮಿತಗೊಳಿಸದೆ ಕನಿಷ್ಠ 5 ವರ್ಷಗಳಿಗೆ ವಿಸ್ತರಿಸಬೇಕು. ಆ ನಂತರ ಮುಂದಿನ 5 ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ. 50:50 ವೆಚ್ಚ ಅನುಪಾತದಲ್ಲಿ ಹೊಣೆ ಹೊತ್ತು ವಿಮಾನ ಹಾರಾಟ ನಡೆಸಿದರೆ ಪ್ರಾದೇಶಿಕ ವಿಮಾನ ನಿಲ್ದಾಣಗಳು ಲಾಭದಾಯಕವಾಗಿ ಬೆಳೆಯುತ್ತವೆ ಎಂಬ ಪ್ರಾಯೋಗಿಕ ಸಲಹೆಯನ್ನು ನಾವು ಕೇಂದ್ರಕ್ಕೆ ನೀಡಿದ್ದೆವು. ಆದರೆ ಕೇಂದ್ರ ಸರ್ಕಾರ ನಮ್ಮ ಮಾತಿಗೆ ಬೆಲೆ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೇಂದ್ರದ ಅವಿವೇಕಿ ಧೋರಣೆಯ ಕಾರಣದಿಂದಾಗಿ ಸಬ್ಸಿಡಿ ಮುಗಿದ ತಕ್ಷಣ ವಿಮಾನಯಾನ ಕಂಪನಿಗಳು ಸೇವೆ ನಿಲ್ಲಿಸುತ್ತಿವೆ. ಪರಿಣಾಮವಾಗಿ ಇಂದು ದೇಶಾದ್ಯಂತ ಶಿವಮೊಗ್ಗ ಸೇರಿದಂತೆ ಬರೋಬ್ಬರಿ 17 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಣೆ ಇಲ್ಲದೆ ಸಂಪೂರ್ಣ ಸ್ಥಗಿತಗೊಂಡಿವೆ ಎಂದರು.

ಸಾವಿರಾರು ಕೋಟಿ ರಾಜ್ಯದ್ದು, ಮಜಾ ಅದಾನಿಯವರದ್ದಾ?

ವಿಮಾನ ನಿಲ್ದಾಣಗಳ ನಿರ್ಮಾಣ ಮತ್ತು ಖಾಸಗೀಕರಣದ ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಸಚಿವರು ಕಟುವಾಗಿ ಟೀಕಿಸಿದರು. ಕಲಬುರಗಿ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಬರೋಬ್ಬರಿ 1,000 ಕೋಟಿ ರೂಪಾಯಿ ಖರ್ಚು ಮಾಡಿದೆ. ಆದರೆ ಅದನ್ನು ಕೇಂದ್ರದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸುಪರ್ದಿಗೆ ಕೊಟ್ಟ ನಂತರ ರಾಜ್ಯ ಸರ್ಕಾರಕ್ಕೆ ಅದರಿಂದ ನಯಾಪೈಸೆಯ ಆದಾಯವೂ ಬರುತ್ತಿಲ್ಲ. ರಾಜ್ಯದ ಸಂಪತ್ತಾದ ಮಂಗಳೂರು ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರ ಅದಾನಿ ಗ್ರೂಪ್‌ಗೆ ವಹಿಸಿಕೊಟ್ಟಿತು. ಈಗ ಸುಸಜ್ಜಿತ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನೂ ಖಾಸಗೀಕರಣ ಮಾಡಲು ಹೊರಟಿದ್ದಾರೆ. ರಾಜ್ಯದ ತೆರಿಗೆದಾರರ ಹಣದಲ್ಲಿ ನಾವು ಮೂಲಸೌಕರ್ಯ ನಿರ್ಮಿಸಿ, ಅದನ್ನು ಕೇಂದ್ರವು ಖಾಸಗಿ ಬಂಡವಾಳಶಾಹಿಗಳಿಗೆ ಧಾರೆ ಎರೆಯುವುದನ್ನು ನಾವು ಒಪ್ಪುವುದಿಲ್ಲ. ಈ ಕಹಿ ಅನುಭವಗಳಿಂದ ಪಾಠ ಕಲಿತಿರುವ ರಾಜ್ಯ ಸರ್ಕಾರ, ಇನ್ನು ಮುಂದೆ ತಾನು ನಿರ್ಮಿಸುವ ವಿಮಾನ ನಿಲ್ದಾಣಗಳನ್ನು ಕೇಂದ್ರಕ್ಕೆ ಬಿಟ್ಟುಕೊಡದಿರಲು ನಿರ್ಧರಿಸಿದೆ. ಶಿವಮೊಗ್ಗ, ರಾಯಚೂರು ಮತ್ತು ವಿಜಯಪುರ ವಿಮಾನ ನಿಲ್ದಾಣಗಳನ್ನು ರಾಜ್ಯ ಸರ್ಕಾರವೇ ತನ್ನ ಸುಪರ್ದಿಯಲ್ಲಿಟ್ಟುಕೊಂಡು ನಿರ್ವಹಣೆ ಮಾಡಲಿದೆ ಎಂದು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರಗೆ ನೇರ ಸವಾಲು

ಶಿವಮೊಗ್ಗ ವಿಮಾನಯಾನ ಸ್ಥಗಿತದ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಎಂ.ಬಿ. ಪಾಟೀಲ್ ಹರಿಹಾಯ್ದರು. ರಾಘವೇಂದ್ರ ಅವರು ವಾಸ್ತವ ಅರಿತು ಮಾತನಾಡಬೇಕು. ಸ್ಥಗಿತಗೊಂಡಿದ್ದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಶೇ. 80 ಮತ್ತು ರಾಜ್ಯ ಸರ್ಕಾರದಿಂದ ಶೇ. 20ರಷ್ಟು ಹಣ ಭರಿಸಿ ನಾವೇ ಮತ್ತೆ ವಿಮಾನ ಸೇವೆ ಆರಂಭಿಸಿದ್ದೇವೆ. ಸಂಸದ ರಾಘವೇಂದ್ರ ಅವರಿಗೆ ತಾಕತ್ತು, ಸಾಮರ್ಥ್ಯ ಇದ್ದರೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೂ ಇದೇ ಮಾದರಿಯಲ್ಲಿ ಕೇಂದ್ರದಿಂದ ಹಣ ತಂದು ಪುನರಾರಂಭಿಸಲಿ ನೋಡೋಣ ಎಂದು ಸವಾಲು ಹಾಕಿದರು.

ಎಥೆನಾಲ್ ಗೊಂದಲಕ್ಕೆ ನಿತಿನ್ ಗಡ್ಕರಿ ಕಾರಣ: ಸಮಗ್ರ ತನಿಖೆಗೆ ಆಗ್ರಹ

ಪೆಟ್ರೋಲ್‌ನಲ್ಲಿ ಮಿತಿಮೀರಿ ಎಥೆನಾಲ್ ಮಿಶ್ರಣ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಇದಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೇ ಪ್ರಧಾನ ಕಾರಣ ಎಂದು ಗಂಭೀರ ಆರೋಪ ಮಾಡಿದರು. ಯಾವುದೇ ಹೊಸ ನೀತಿಯನ್ನು ತರುವಾಗ ದೇಶದ ನಾಲ್ಕೈದು ಜಿಲ್ಲೆಗಳಲ್ಲಿ ಪ್ರಾಯೋಗಿಕ ಸ್ವರೂಪದಲ್ಲಿ ಜಾರಿಗೊಳಿಸಿ ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕಿತ್ತು. ಆದರೆ ಸಚಿವ ನಿತಿನ್ ಗಡ್ಕರಿ ಅವರು ಯಾವುದೇ ಪೂರ್ವಸಿದ್ಧತೆ ಇಲ್ಲದೆ ಏಕಾಏಕಿ ಇಡೀ ದೇಶದ ಮೇಲೆ ಎಥೆನಾಲ್ ಮಿಶ್ರಣ ವ್ಯವಸ್ಥೆಯನ್ನು ಹೇರಿದರು. ಈಗ ವಾಹನಗಳ ಎಂಜಿನ್‌ಗಳು ಹಾಳಾಗುತ್ತಿದ್ದು, ಜನ ಸಾಮಾನ್ಯರು ತತ್ತರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ಉತ್ಪಾದನೆ ಮಾಡಲು ವಿಪರೀತ ಉತ್ತೇಜನ ನೀಡಿತು. ಕಾರ್ಖಾನೆಗಳು ಸಾವಿರಾರು ಕೋಟಿ ಹೂಡಿಕೆ ಮಾಡಿ ಎಥೆನಾಲ್ ಘಟಕಗಳನ್ನು ಸ್ಥಾಪಿಸಿದವು. ಆದರೆ ಉತ್ಪಾದನೆ ಹೆಚ್ಚಾದ ನಂತರ ಈಗ ಕೇಂದ್ರವು ಎಥೆನಾಲ್ ಖರೀದಿಸದೆ ಕೈಚೆಲ್ಲಿದೆ. ಇದರಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಲ್ಲಿ ಎಥೆನಾಲ್ ದಾಸ್ತಾನು ಮಿತಿಮೀರಿ ನಿಂತಿದೆ. ಉತ್ತರ ಪ್ರದೇಶದಲ್ಲಿ ಮಾತ್ರ ಪರಿಸ್ಥಿತಿ ಕೊಂಚ ಪರವಾಗಿಲ್ಲ ಎಂದರು.

ನಾನು ಹೇಳುತ್ತಿರುವುದು ಸುಳ್ಳು ಎನ್ನುವುದಾದರೆ, ಸ್ವತಃ ಬಿಜೆಪಿಯ ಪ್ರಮುಖ ನಾಯಕರಾದ ಮುರುಗೇಶ ನಿರಾಣಿ ಮತ್ತು ಪ್ರಭಾಕರ ಕೋರೆ ಅವರನ್ನೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೇಳಿ ನೋಡಲಿ. ಅವರ ಸಕ್ಕರೆ ಕಾರ್ಖಾನೆಗಳಲ್ಲೂ ಎಥೆನಾಲ್ ಮಾರಾಟವಾಗದೆ ಕೊಳೆಯುತ್ತಿರುವುದು ಸತ್ಯವಲ್ಲವೇ? ಎಂದು ಪ್ರಶ್ನಿಸಿದರು. ನಾವು ಪೆಟ್ರೋಲ್‌ನ ಗುಣಮಟ್ಟದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು ಕೇಂದ್ರ ಸರ್ಕಾರದ ಅಧಿಕೃತ ಪ್ರಯೋಗಾಲಯಗಳಿಗೇ ಹೊರತು ಬೇರೆಲ್ಲೂ ಅಲ್ಲ. ಆ ವರದಿಗಳಲ್ಲೇ ಎಥೆನಾಲ್ ಪ್ರಮಾಣದ ವ್ಯತ್ಯಾಸ ಸಾಬೀತಾಗಿದೆ. ಹಾಗಿದ್ದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈ ವೈಫಲ್ಯವನ್ನು ಸಮರ್ಥಿಸಿಕೊಳ್ಳುತ್ತಿರುವುದೇಕೆ? ಈ ಹಗರಣದ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

Read More
Next Story