
ʼಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟದ್ದು, ದಾವಣಗೆರೆಯಲ್ಲಿ ಪಕ್ಷ ವಿರೋಧಿ ಕಾರ್ಯ ನಡೆದಿದ್ದರೂ ಸೋಲಲ್ಲʼ
ಕಾಂಗ್ರೆಸ್ ಪಕ್ಷ ಸೋಲು ಒಪ್ಪಿಕೊಂಡಿಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಖಂಡಿತ. ತಲೆದಂಡಕ್ಕೆ ಚುನಾವಣೆಯ ಸೋಲು ಗೆಲುವು ಕಾರಣವಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸಂಪುಟ ಪುನಾರಚನೆಗೆ ಆಗ್ರಹಿಸಿ ಪಕ್ಷದ ಹಿರಿಯ ಶಾಸಕರು ದೆಹಲಿ ಯಾತ್ರೆ ಕೈಗೊಂಡಿರುವುದು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸಂಪುಟ ಪುನಾರಚನೆಗೆ ಹೈಕಮಾಂಡ್ ಹಸಿರುನಿಶಾನೆ ತೋರಿದರೆ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ, ಸಂಪುಟದಿಂದ ಯಾರೆಲ್ಲರ ತಲೆದಂಡ ಆಗಲಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಈ ಮಧ್ಯೆ, ಸಚಿವ ಸ್ಥಾನದ ಆಕಾಂಕ್ಷಿಗಳು ನವದೆಹಲಿಗೆ ಭೇಟಿ ನೀಡಿರುವುದರಲ್ಲೇ ತಪ್ಪೇನು ಇಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಸಂಪುಟ ಪುನಾರಚನೆ ಒಲವು ತೋರಿರುವುದು ಸಂಲನ ಮೂಡಿಸಿದೆ.
ಚಿಕ್ಕಮಗಳೂರಿನ ಎನ್.ಆರ್.ಪುರ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಂಪುಟ ಪುನಾರಚನೆಗೆ ಒತ್ತಾಯಿಸುವುದರಲ್ಲಿ ತಪ್ಪೇನಿಲ್ಲ. ಸಂಪುಟ ಪುನಾರಚನೆ ಕಾರ್ಯ ಬಾಕಿಯಿದೆ. ಐದು ರಾಜ್ಯಗಳ ಚುನಾವಣೆ, ಬಜೆಟ್ ಅಧಿವೇಶನದಿಂದ ಸಂಪುಟ ಪುನಾರಚನೆಗೆ ವಿಳಂಬವಾಯಿತು. ಈಗ ಶಾಸಕರು ದೆಹಲಿಗೆ ಹೋಗಿದ್ದು, ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಪಕ್ಷ ವಿರೋಧಿ ಕಾರ್ಯ ನಡೆದಿದ್ದರೂ ಕಾಂಗ್ರೆಸ್‌ಗೆ ಗೆಲುವು
ಕಾಂಗ್ರೆಸ್ ನಲ್ಲಿ ಪಕ್ಷ ವಿರೋಧಿಗಳ ರಾಜಿನಾಮೆ ಪರ್ವ ಆರಂಭವಾಗಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಇದುವರೆಗೆ ರಾಜಿನಾಮೆ ನೀಡಿಲ್ಲ. ನೀಡಬಹುದೇನೋ ಎಂದರು.
ಕಾಂಗ್ರೆಸ್ ಪಕ್ಷ ಸೋಲು ಒಪ್ಪಿಕೊಂಡಿಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಖಂಡಿತ. ತಲೆದಂಡಕ್ಕೆ ಚುನಾವಣೆಯ ಸೋಲು ಗೆಲುವು ಕಾರಣವಲ್ಲ. ಸಲೀಂ ಅಹ್ಮದ್ ಅವರು ಪಕ್ಷದ ಮುಖಂಡರು. ಅವರು, ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಕೆಲವರ ಪಕ್ಷವಿರೋಧಿ ಕಾರ್ಯಗಳ ಬಗ್ಗೆ ಹೇಳಿಕೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ಹೊರತು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರಾಜಿತವಾಗಲಿದೆ ಎಂದು ಹೇಳಿರುವುದಿಲ್ಲ. ಪಕ್ಷವಿರೋಧಿ ಚಟುವಟಿಕೆಗಳ ನಡುವೆಯೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದರು.
ಮಲೆನಾಡಿನಲ್ಲಿ ರೆಸಾರ್ಟ್‌ಗಳಿಗೆ ಬೇಕಾಬಿಟ್ಟಿಯಾಗಿ ಅನುಮತಿ ನೀಡುತ್ತಿರುವ ಸರ್ಕಾರ, ಅರಣ್ಯವಾಸಿಗಳಿಗೆ ಹಕ್ಕು ಪತ್ರ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅರಣ್ಯ ಇಲಾಖೆಯಿಂದ ಹಕ್ಕು ಪತ್ರ ನೀಡುವುದೂ ಸೇರಿದಂತೆ ಹಲವು ವಿಷಯದ ಬಗ್ಗೆ ಸದ್ಯದಲ್ಲಿಯೇ ಸಭೆ ನಡೆಸಲಾಗುವುದು ಎಂದರು.
ಪ್ರವಾಸಿಗರಿಗೆ ಕರ್ನಾಟಕ ಸುರಕ್ಷಿತ
ಪ್ರವಾಸಿಗರಿಗೆ ಕರ್ನಾಟಕ ಸುರಕ್ಷಿತ ತಾಣವಲ್ಲ ಎಂದು ಕೇರಳ ರಾಜ್ಯದಿಂದ ಟೀಕೆಗಳು ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇರಳ ರಾಜ್ಯದ ಬಾಲಕಿ ಚಿಕ್ಕಮಗಳೂರಿಗೆ ಬಂದು ಮೃತಪಟ್ಟಿರುವ ವಿಷಯ ತನಿಖೆಯಾಗಲಿದೆ. ಆದರೆ ಕರ್ನಾಟಕ ರಾಜ್ಯ ಪ್ರವಾಸಿಗರಿಗೆ ಸುರಕ್ಷಿತವಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದರು.
ನರಸಿಂಹರಾಜಪುರದಲ್ಲಿ ಸೇತುವೆ ನಿರ್ಮಾಣ ಬಹುದಿನದ ಬೇಡಿಕೆಯಾಗಿತ್ತು. ಈಗ ನನ್ನ ಅವಧಿಯಲ್ಲಿಯೇ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ಬಿಜೆಪಿಯವರ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ಯಾವುದೇ ಕ್ರಮವಾಗಿರಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

