ಖಾತೆ ಹಂಚಿಕೆಯ ಕಗ್ಗಂಟಿಗೆ ತೆರೆ: ಸಂಪುಟದ ನೂತನ ಜವಾಬ್ದಾರಿಗಳ ಪಟ್ಟಿ ಬಿಡುಗಡೆ
x

ಖಾತೆ ಹಂಚಿಕೆಯ ಕಗ್ಗಂಟಿಗೆ ತೆರೆ: ಸಂಪುಟದ ನೂತನ ಜವಾಬ್ದಾರಿಗಳ ಪಟ್ಟಿ ಬಿಡುಗಡೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸರ್ಕಾರದ ಖಾತೆಗಳ ಹಂಚಿಕೆ ವಿವಾದಕ್ಕೆ ತೆರೆ ಬಿದ್ದಿದ್ದು, ಅಧಿಕೃತವಾಗಿ ಖಾತೆ ಹಂಚಿಕೆ ಮಾಡಲಾಗಿದೆ. ಕೆಲವೊಬ್ಬರ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ನಿರೀಕ್ಷಿಸಲಾಗಿದ್ದ ಖಾತೆಗಳ ಹಂಚಿಕೆ ವಿವಾದಕ್ಕೆ ತೆರೆ ಬಿದ್ದಿದ್ದು, ಅಧಿಕೃತವಾಗಿ ಖಾತೆ ಹಂಚಿಕೆ ಮಾಡಲಾಗಿದೆ. ಕೆಲವೊಬ್ಬರ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ. ಹಿರಿಯ ನಾಯಕರಿಗೆ ಮಣೆ ಹಾಕುವ ಜೊತೆಗೆ, ಯುವ ಪೀಳಿಗೆಗೆ ಅವಕಾಶ ನೀಡುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಪಾಡಿಕೊಳ್ಳುವ ಪ್ರಯತ್ನ ನಡೆಸಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ಬಳಿ ಹಣಕಾಸು, ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ಮಾಹಿತಿ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಕೃಷಿ ಮಾರುಕಟ್ಟೆ, ಮತ್ತು ಬಿಡಿಎ ಹಾಗೂ ಬಿಎಂಆರ್‌ಡಿಎ ಅಡಿಯಲ್ಲಿ ಬರುವ ಎಲ್ಲಾ ನಗರಾಡಳಿತ ಸಂಸ್ಥೆಗಳ ಜವಾಬ್ದಾರಿಯನ್ನು ಇಟ್ಟುಕೊಂಡಿದ್ದಾರೆ. ಕೆ.ಎಚ್‌.ಮುನಿಯಪ್ಪ ಮತ್ತು ರಾಮಲಿಂಗಾರೆಡ್ಡಿ ಅವರಿಗೆ ನೀಡಲಾಗಿರುವ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ. ಸಂಪುಟದ ಇತರ ಸಚಿವರುಗಳಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು,ಯು.ಟಿ. ಖಾದರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಜೊತೆಗೆ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಖಾತೆಯನ್ನು ನೀಡಲಾಗಿದೆ. ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಜವಾಬ್ದಾರಿ ದೊರೆತರೆ, ಬಸವರಾಜ ರಾಯರೆಡ್ಡಿ ಅವರು ಉನ್ನತ ಶಿಕ್ಷಣ ಸಚಿವ ಸ್ಥಾನ ಸಿಕ್ಕಿದೆ.

ಚಲುವರಾಯಸ್ವಾಮಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿದೆ. ಕೆ.ಎಚ್. ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ, ಟಿ. ರಘುಮೂರ್ತಿಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಶಿವರಾಜ್ ತಂಗಡಗಿ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಲಾಗಿದೆ.

ಜಮೀರ್ ಅಹಮದ್ ಖಾನ್ ಅವರಿಗೆ ವಸತಿ ಖಾತೆ, ರಾಮಲಿಂಗ ರೆಡ್ಡಿ ಅವರಿಗೆ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ, ಲಕ್ಷ್ಮಣ ಸವದಿ ಅವರಿಗೆ ಸಹಕಾರ ಖಾತೆಗಳನ್ನು ನೀಡಲಾಗಿದೆ. ರುದ್ರಪ್ಪ ಲಮಾಣಿ ಅವರು ಸಕ್ಕರೆ ಮತ್ತು ಜವಳಿ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಅದೇ ರೀತಿ, ಡಾ. ಅಜಯ್ ಸಿಂಗ್ ಅವರಿಗೆ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ, ಶಿವಲಿಂಗೇಗೌಡ ಅವರಿಗೆ ಅಬಕಾರಿ, ಪುಟ್ಟರಂಗ ಶೆಟ್ಟಿ ಅವರಿಗೆ ಪಶುಸಂಗೋಪನೆ ಮತ್ತು ರೇಷ್ಮೆ, ವಿಜಯಾನಂದ ಕಾಶಪ್ಪನವರ್‌ಗೆ ಸಣ್ಣ ಕೈಗಾರಿಕೆಗಳು, ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಮತ್ತು ಉದ್ಯೋಗ, ಕೆ.ಎಸ್. ಬಸವಂತಪ್ಪ ಅವರಿಗೆ ಮುಜರಾಯಿ ಮತ್ತು ಬಂದರು ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಎಸ್‌.ಎಸ್‌.ಮಲ್ಲಿಕಾರ್ಜುನ ಅವರಿಗೆ ಗಣಿ, ಭೂವಿಜ್ಞಾನ, ತೋಟಗಾರಿಕೆ, ರಿಜ್ವಾನ್‌ ಅರ್ಷದ್‌ ಅವರಿಗೆ ಅಹಾರ ಮತ್ತು ನಾಗರಿಕ ಸರಬರಾಜು ಖಾತೆ ನೀಡಲಾಗಿದೆ. ನರೇಂದ್ರ ಸ್ವಾಮಿ ಅವರಿಗೆ ಕೃಷಿ, ಎಚ್‌.ಡಿ.ಬಾಲಕೃಷ್ಣ ಅವರಿಗೆ ಪೌರಾಡಳಿತ ಮತ್ತು ಬಿ.ನಾಗೇಂದ್ರ ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದವಧಿಯಲ್ಲಿ ಕೆಲವರಿಗೆ ನೀಡಿದ ಖಾತೆಗಳನ್ನೇ ಈ ಬಾರಿಯು ಮುಂದುವರಿಸಲಾಗಿದೆ. ಶಿವರಾಜ್‌ ತಂಗಡಗಿ ಮತ್ತು ಸಂತೋಷ್‌ ಲಾಡ್‌ ಅವರಿಗೆ ಹಳೆಯ ಖಾತೆಯಲ್ಲಿಯೇ ಮುಂದುವರಿಸಲಾಗಿದೆ. ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿರುವ ಆರೋಪಗಳು ಇರುವುದರಿಂದ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ಯೋಜನೆ ಮತ್ತು ಸಾಂಖ್ಯಿಕ ಖಾತೆಯನ್ನು ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

Read More
Next Story