x

ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆ ಸ್ಥಾನಮಾನ; ಸಂಪುಟ ತೀರ್ಮಾನ

ತುಳು ಭಾಷೆಗೆ ಮಾನ್ಯತೆ ಸಿಕ್ಕಿರುವುದು ಸಂವಿಧಾನದ 8ನೇ ಪರಿಚ್ಛೇಧದ ದಶಕಗಳ ಹೋರಾಟಕ್ಕೆ ಇನ್ನಷ್ಟು ಬಲ ಸಿಗಲಿದೆ. ಆಸ್ತಿ ತೆರಿಗೆದಾರರಿಗೆ ಸಾಫ್ಟ್‌ವೇರ್‌ ಶುಲ್ಕ ವಿಧಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಇಮ್ಮಡಿ ರಾಜಧನ ನೀತಿಯನ್ನು ವಿರೋಧಿಸಿ ಕಲ್ಲು ಗಣಿಗಾರಿಕೆಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿವೆ.


ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಆಯೋಜಿಸಿದ್ದ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವಂತೆ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.

ತುಳು ಭಾಷೆಗೆ ಮಾನ್ಯತೆ ಸಿಕ್ಕಿದರೂ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ದಶಕಗಳ ಹೋರಾಟಕ್ಕೆ ಇದರಿಂದ ಇನ್ನಷ್ಟು ಬಲ ಸಿಗಲಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವವನ್ನು ಸಾರ್ವಜನಿಕ ಚರ್ಚೆಗೆ ಇಡಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಕರಾವಳಿ ಮತ್ತು ಮಲೆನಾಡು ಪ್ರದೇಶದ ಪ್ರವಾಸೋದ್ಯಮ, ಬಂದರು, ಮೀನುಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ 32,612 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಹೊಸ ಸಾಫ್ಟ್‌ವೇರ್‌ ಶುಲ್ಕ ವಿವಾದ

ಬೆಂಗಳೂರಿನಲ್ಲಿ ಆಸ್ತಿ ತೆರಿಗೆದಾರರಿಗೆ ಹೊಸದಾಗಿ ಸಾಫ್ಟ್‌ವೇರ್‌ ಶುಲ್ಕ ವಿಧಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ವಸತಿ ಆಸ್ತಿಗಳಿಗೆ 200 ರೂ. ಹಾಗೂ ವಾಣಿಜ್ಯ ಆಸ್ತಿಗಳಿಗೆ 1 ಸಾವಿರ ರೂ. ಸಾಫ್ಟ್‌ವೇರ್‌ ಶುಲ್ಕವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ತೀರ್ಮಾನಿಸಲಾಗಿದೆ.

ಈಗಾಗಲೇ ಮೂಲ ತೆರಿಗೆಯ ಮೇಲೆ ಶೇ.26ರಷ್ಟು ವಿವಿಧ ಸೆಸ್‌ಗಳನ್ನು (ಆರೋಗ್ಯ, ಗ್ರಂಥಾಲಯ, ಭಿಕ್ಷಾಟನೆ ತಡೆ, ನಗರ ಸಾರಿಗೆ) ವಸೂಲಿ ಮಾಡಲಾಗುತ್ತಿದ್ದು, ಇದರ ಜೊತೆಗೆ ಹೊಸ ಶುಲ್ಕ ಯಾಕೆ ಎಂದು ವಿಪಕ್ಷಗಳು ಪ್ರಶ್ನಿಸಿವೆ. ಇದು ಗ್ಯಾರಂಟಿ ಯೋಜನೆಗಳ ವೈಫಲ್ಯವನ್ನು ಮುಚ್ಚಿಕೊಳ್ಳುವ ಹಿಂಬಾಗಿಲಿನ ತಂತ್ರ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆರೋಪಿಸಿದ್ದಾರೆ.

ಕ್ರಷರ್ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರ

ಒಂದೇ ಕಲ್ಲಿನ ಉತ್ಪನ್ನಕ್ಕೆ ಸರ್ಕಾರ ಎರಡು ಬಾರಿ ರಾಜಧನ ವಸೂಲಿ ಮಾಡುತ್ತಿರುವ ಇಮ್ಮಡಿ ರಾಜಧನ ನೀತಿಯನ್ನು ವಿರೋಧಿಸಿ ರಾಜ್ಯಾದ್ಯಂತ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಘಟಕಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿವೆ.

ಮುಷ್ಕರದಿಂದ ಜಲ್ಲಿ ಹಾಗೂ ಎಂ-ಸ್ಯಾಂಡ್ ಪೂರೈಕೆ ಸ್ಥಗಿತಗೊಂಡಿದ್ದು, ರಸ್ತೆ, ಸೇತುವೆ, ಕಟ್ಟಡ ನಿರ್ಮಾಣ ಕಾಮಗಾರಿಗಳು ಹಾಗೂ ಮನೆ ನಿರ್ಮಾಣದ ವೆಚ್ಚ ಭಾರೀ ಪ್ರಮಾಣದಲ್ಲಿ ಹೆಚ್ಚಾಗುವ ಆತಂಕ ಎದುರಾಗಿದೆ. ಮತ್ತೊಂದೆಡೆ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಸೇರಿದ ಕಲ್ಲು ಕ್ವಾರಿಯಲ್ಲಿ ನಿಯಮ ಉಲ್ಲಂಘಿಸಿ ಹೆಚ್ಚುವರಿ ಕಲ್ಲು ಸಾಗಿಸಲಾಗಿದೆ ಎಂಬ ಆರೋಪದ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ 3 ಕೋಟಿ ರೂ. ದಂಡ ವಿಧಿಸಿರುವುದು ಮತ್ತಷ್ಟು ರಾಜಕೀಯ ಚರ್ಚೆಗೆ ಕಾರಣವಾಗಿದೆ.

Read More
Next Story