ಮರ್ಯಾದಾಗೇಡು ಹತ್ಯೆ ತಡೆಗೆ ಮಾಸ್ಟರ್ ಪ್ಲಾನ್- ಏನಿದು ಇವ ನಮ್ಮವ ಇವ ನಮ್ಮವ ವಿಧೇಯಕ?
x
ಮರ್ಯಾದಾಗೇಡು ಹತ್ಯೆಯಂತಹ ಕ್ರೂರ ಕೃತ್ಯಗಳಿಗೆ ಕಡಿವಾಣ ಹಾಕಲು ಮಹತ್ವದ ಮಸೂದೆ ಜಾರಿ(AI ರಚಿತ ಚಿತ್ರ)

ಮರ್ಯಾದಾಗೇಡು ಹತ್ಯೆ ತಡೆಗೆ 'ಮಾಸ್ಟರ್ ಪ್ಲಾನ್'- ಏನಿದು 'ಇವ ನಮ್ಮವ ಇವ ನಮ್ಮವ' ವಿಧೇಯಕ?

Iva Nammava Bill| ಮರ್ಯಾದಾಗೇಡು ಹತ್ಯೆಯಂತಹ ಅಮಾನವೀಯ ಕೃತ್ಯಗಳನ್ನು ಬೇರುಸಹಿತ ಕಿತ್ತೆಸೆಯಲು ‘ಇವ ನಮ್ಮವ ಇವ ನಮ್ಮವ ವಿಧೇಯಕ-2026’ ಕ್ಕೆ ಸಚಿವ ಸಂಪುಟವು ಐತಿಹಾಸಿಕ ಒಪ್ಪಿಗೆ ನೀಡಿದೆ.


Click the Play button to hear this message in audio format

ಅಂತರ್ಜಾತಿ ವಿವಾಹವಾದ ಜೋಡಿಗಳಿಗೆ ರಕ್ಷಣೆ ನೀಡಲು ಮತ್ತು ಮರ್ಯಾದಾಗೇಡು ಹತ್ಯೆಯಂತಹ ಕ್ರೂರ ಕೃತ್ಯಗಳಿಗೆ ಕಡಿವಾಣ ಹಾಕಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಐತಿಹಾಸಿಕ ‘ಇವ ನಮ್ಮವ ಇವ ನಮ್ಮವ ವಿಧೇಯಕ-2026’ ಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಪ್ರಸಕ್ತ ಅಧಿವೇಶನದಲ್ಲೇ ಈ ವಿಧೇಯಕ ಮಂಡನೆಯಾಗಲಿದ್ದು, ಪ್ರೇಮಿಗಳು ಮತ್ತು ಅಂತರ್ಜಾತಿ ವಿವಾಹವಾಗುವವರಿಗೆ ಇದು ದೊಡ್ಡ ಕಾನೂನು ಬಲ ನೀಡಲಿದೆ.

ವಿಧೇಯಕದ ಅಧಿಕೃತ ಹೆಸರು ಮತ್ತು ಉದ್ದೇಶ

ಈ ಕಾನೂನನ್ನು ಅಧಿಕೃತವಾಗಿ ‘ಕರ್ನಾಟಕ ವಿವಾಹ ಮತ್ತು ಸಂಗಾತಿ ಆಯ್ಕೆ ಸ್ವಾತಂತ್ರ್ಯ ಹಾಗೂ ಗೌರವ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ವಿಧೇಯಕ-2026’ ಎಂದು ಕರೆಯಲಾಗಿದೆ. ಸಂವಿಧಾನದ 14, 15 ಮತ್ತು 21ನೇ ವಿಧಿಯಡಿ ಸಿಗುವ ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿಯುವುದು ಇದರ ಪ್ರಮುಖ ಉದ್ದೇಶವಾಗಿದೆ.

ಜಾತಿ ನೆಪದಲ್ಲಿ ಮದುವೆ ನಿರಾಕರಿಸಿದರೆ 'ಅತ್ಯಾಚಾರ' ಕೇಸ್!

ಮದುವೆಯ ಭರವಸೆ ನೀಡಿ ಯುವತಿಯ ಜೊತೆ ದೈಹಿಕ ಸಂಬಂಧ ಬೆಳೆಸಿ, ನಂತರ ಜಾತಿ ಅಥವಾ ಮನೆಯವರ ಒತ್ತಡದ ನೆಪ ನೀಡಿ ಮದುವೆಗೆ ನಿರಾಕರಿಸಿದರೆ ಅಂತಹ ಪ್ರಕರಣವನ್ನು ‘ಅತ್ಯಾಚಾರ’ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ 5 ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಬಿಎನ್‌ಎಸ್-2023ರ ಸೆಕ್ಷನ್ 69ಕ್ಕೆ ಹೆಚ್ಚುವರಿ ಬಲ ನೀಡಲಿದೆ.

ಮರ್ಯಾದಾಗೇಡು ಹತ್ಯೆಗೆ ಜೈಲು ಶಿಕ್ಷೆ

ಗೌರವದ ಹೆಸರಿನಲ್ಲಿ ದಂಪತಿಗಳ ಹತ್ಯೆ ಮಾಡಿದರೆ, ಬಿಎನ್‌ಎಸ್ ಅಡಿ ಸಿಗುವ ಶಿಕ್ಷೆಯ ಹೊರತಾಗಿ ಈ ವಿಶೇಷ ಕಾಯ್ದೆಯಡಿ ಕನಿಷ್ಠ 5 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೀವಂತ ಇರುವಾಗಲೇ ಮಗಳಿಗೆ 'ತಿಥಿ' ಮಾಡುವುದು ಅಥವಾ ಸಾಮಾಜಿಕ ಬಹಿಷ್ಕಾರ ಹಾಕುವುದನ್ನು ಅಪರಾಧ ಎಂದು ಪರಿಗಣಿಸಲಾಗಿದೆ.

ಅಂತರ್ಜಾತಿ ವಿವಾಹವಾದವರಿಗೆ ಪೊಲೀಸ್ ರಕ್ಷಣೆ

ಅಂತರ್ಜಾತಿ ವಿವಾಹವಾದ ಜೋಡಿಗಳಿಗೆ ಜೀವ ಬೆದರಿಕೆ ಇದ್ದರೆ ರಕ್ಷಣೆ ನೀಡುವುದು ಪೊಲೀಸರ ಜವಾಬ್ದಾರಿಯಾಗಿದೆ. ಇಂತಹ ದಂಪತಿಗಳಿಗಾಗಿ ಸರ್ಕಾರವು ‘ಸುರಕ್ಷಿತ ಮನೆಗಳನ್ನು’ ಸ್ಥಾಪಿಸಲಿದೆ. ಇಂತಹ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿ ತ್ವರಿತವಾಗಿ ನ್ಯಾಯ ಒದಗಿಸಲಾಗುತ್ತದೆ.

ಇವ ನಮ್ಮವ ವೇದಿಕೆ ಸ್ಥಾಪನೆ

ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ಮತ್ತು ಸುಗಮವಾಗಿ ನೆರವೇರಿಸಲು ಜಿಲ್ಲಾ ಮಟ್ಟದಲ್ಲಿ ‘ಇವ ನಮ್ಮವ ಇವ ನಮ್ಮವ ವೇದಿಕೆ’ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಜಾತಿ ಆಧಾರಿತ ತಾರತಮ್ಯ ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಶಿಕ್ಷೆಯ ಪ್ರಮಾಣ

'ಇವ ನಮ್ಮವ ಇವ ನಮ್ಮವ ವಿಧೇಯಕ-2026' ಅಡಿಯಲ್ಲಿ ವಿವಿಧ ಅಪರಾಧಗಳಿಗೆ ಕಠಿಣ ಶಿಕ್ಷೆಗಳನ್ನು ನಿಗದಿಪಡಿಸಲಾಗಿದ್ದು, ಮರ್ಯಾದಾಗೇಡು ಹತ್ಯೆ ಮಾಡಿದವರಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ, ದಂಪತಿಗಳ ಮೇಲೆ ಗಂಭೀರ ಹಲ್ಲೆ ನಡೆಸಿದರೆ 3 ವರ್ಷಗಳವರೆಗೆ ಜೈಲು ಹಾಗೂ ಸಾಧಾರಣ ಹಲ್ಲೆ ನಡೆಸಿದಲ್ಲಿ 2 ವರ್ಷಗಳ ಜೈಲು ಶಿಕ್ಷೆಯೊಂದಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶವಿದೆ. ಅತ್ಯಂತ ಪ್ರಮುಖವಾಗಿ, ಮದುವೆಯ ಭರವಸೆ ನೀಡಿ ಜಾತಿಯ ನೆಪವೊಡ್ಡಿ ವಂಚಿಸಿದರೆ ಅದನ್ನು ಅತ್ಯಾಚಾರ ಪ್ರಕರಣವೆಂದು ಪರಿಗಣಿಸಿ ಜೀವಾವಧಿ ಶಿಕ್ಷೆಯವರೆಗೆ ದಂಡನೆ ನೀಡಬಹುದಾಗಿದೆ; ಇದರೊಂದಿಗೆ ಅಂತರ್ಜಾತಿ ವಿವಾಹವಾದವರಿಗೆ ಸಾಮಾಜಿಕ ಅಥವಾ ಆರ್ಥಿಕ ಬಹಿಷ್ಕಾರ ಹಾಕುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಮತ್ತು ದಂಡದ ಎಚ್ಚರಿಕೆ ನೀಡಲಾಗಿದೆ.

ಖಾಪ್ ಪಂಚಾಯತ್ ಮಾದರಿ ಕೂಟಗಳಿಗೆ ನಿಷೇಧ

ಅಂತರ್ಜಾತಿ ಅಥವಾ ಪ್ರೇಮ ವಿವಾಹಗಳನ್ನು ವಿರೋಧಿಸಿ ಪಂಚಾಯಿತಿ ನಡೆಸುವುದು ಅಥವಾ ಗುಂಪು ಸೇರಿ ಬೆದರಿಕೆ ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ದಂಪತಿಗಳ ವೈಯಕ್ತಿಕ ಆಯ್ಕೆಗೆ ಅಡ್ಡಿಪಡಿಸುವ ಯಾರೇ ಆಗಲಿ ಈ ಕಾಯ್ದೆಯಡಿ ಶಿಕ್ಷೆಗೆ ಗುರಿಯಾಗಲಿದ್ದಾರೆ.

Read More
Next Story