ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 56,432 ಹುದ್ದೆಗಳ ಭರ್ತಿಗೆ ಸಂಪುಟ ಅಸ್ತು; ಒಳಮೀಸಲಾತಿ ಸದ್ಯಕ್ಕಿಲ್ಲ
x

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 56,432 ಹುದ್ದೆಗಳ ಭರ್ತಿಗೆ ಸಂಪುಟ ಅಸ್ತು; ಒಳಮೀಸಲಾತಿ ಸದ್ಯಕ್ಕಿಲ್ಲ

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಯಲ್ಲಿದೆ. ಆದರೆ, ಪ್ರಸ್ತುತ ನೇಮಕಾತಿಯಲ್ಲಿ ಯಾವುದೇ ರೀತಿಯ ಒಳ ಮೀಸಲಾತಿ ಇರುವುದಿಲ್ಲ.


Click the Play button to hear this message in audio format

ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದ ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 56,432 ಹುದ್ದೆಗಳನ್ನು ತಕ್ಷಣದಿಂದಲೇ ಭರ್ತಿ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮೀಸಲಾತಿ ಪ್ರಮಾಣ ಹೆಚ್ಚಳ ಹಾಗೂ ಒಳ ಮೀಸಲಾತಿಯ ಗೊಂದಲಗಳಿಂದಾಗಿ ನೆನೆಗುದಿಗೆ ಬಿದ್ದಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಈಗ ಸ್ಪಷ್ಟ ಸ್ವರೂಪ ಸಿಕ್ಕಿದ್ದು, ಶೀಘ್ರದಲ್ಲೇ ಅಧಿಸೂಚನೆಗಳು ಹೊರಬೀಳಲಿವೆ.

ಎರಡು ದಿನಗಳ ಹಿಂದೆ ಉದ್ಯೋಗ ಆಕಾಂಕ್ಷಿಗಳು ಹುಬ್ಬಳ್ಳಿಯಲ್ಲಿ ಸರ್ಕಾರದ ವಿರುದ್ಧ ಜೋರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಿಎಂ ನೇಮಕ ಮಾಡುವ ಭರವಸೆ ಕೊಟ್ಟಿದ್ದರು. ಅದರಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ, ಒಟ್ಟು ಮೀಸಲಾತಿ ಮಿತಿಯನ್ನು ಶೇಕಡಾ 56ಕ್ಕೆ ಏರಿಸಲಾಗಿತ್ತು. ಆದರೆ, ಈ ಮೀಸಲಾತಿ ಮಿತಿ ಹೆಚ್ಚಳದ ವಿಚಾರವು ಸದ್ಯ ನ್ಯಾಯಾಲಯದ ಮೆಟ್ಟಿಲೇರಿದ್ದು, ಕಾನೂನು ತೊಡಕಿನಲ್ಲಿ ಸಿಲುಕಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಶೇಕಡಾ 56ರ ಮೀಸಲಾತಿ ರೀತಿಯಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕೋರ್ಟ್ ತೀರ್ಪು ಬರುವವರೆಗೆ ಕಾಯುತ್ತಾ ಕೂತರೆ ನೇಮಕಾತಿ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ, ಪ್ರಸ್ತುತ ಚಾಲ್ತಿಯಲ್ಲಿರುವ ಹಳೆಯ ಶೇಕಡಾ 50ರ ಮೀಸಲಾತಿ ಮಿತಿಯ ಅಡಿಯಲ್ಲೇ ನೇಮಕಾತಿ ನಡೆಸಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಅದರಂತೆ ಪರಿಶಿಷ್ಟ ಜಾತಿಗಳಿಗೆ ಶೇಕಡಾ 15ರ ಆಧಾರದ ಮೇಲೆಯೇ ಅವಕಾಶ ಕಲ್ಪಿಸಲಾಗುತ್ತದೆ.

ಹೊಸ ರೋಸ್ಟರ್ ಸಿದ್ಧಪಡಿಸಲು ನಿರ್ಧಾರ

ಶೇಕಡಾ 56ರ ಮೀಸಲಾತಿಯಡಿ ನೇಮಕಾತಿ ನಡೆಯುವುದಿಲ್ಲ ಎಂದು ನಿರ್ಧಾರವಾಗಿರುವುದರಿಂದ, ನೇಮಕಾತಿ ಪ್ರಕ್ರಿಯೆಯಲ್ಲಿ 'ರೋಸ್ಟರ್' (ಮೀಸಲಾತಿ ಬಿಂದು) ಪದ್ಧತಿಯನ್ನು ಕಡ್ಡಾಯವಾಗಿ ಬದಲಿಸಬೇಕಾಗಿದೆ. ಈ ಹಿಂದೆ ಶೇಕಡಾ 56ರ ಮೀಸಲಾತಿ ನಿರೀಕ್ಷೆಯಲ್ಲಿ ಸಿದ್ಧಪಡಿಸಲಾಗಿದ್ದ ರೋಸ್ಟರ್ ಅನ್ವಯ ನೇಮಕಾತಿ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಶೇಕಡಾ 50ರ ಮೀಸಲಾತಿ ಮಿತಿಗೆ ಅನುಗುಣವಾಗಿ ಪರಿಷ್ಕೃತ ರೋಸ್ಟರ್ ಅನ್ನು ಹೊಸದಾಗಿ ಸಿದ್ಧಪಡಿಸಿ, ಆ ಬಳಿಕವಷ್ಟೇ ಅಧಿಕೃತ ನೇಮಕಾತಿ ಅಧಿಸೂಚನೆಗಳು ಹೊರಡಲಿವೆ.

ಸದ್ಯಕ್ಕಿಲ್ಲ ಒಳ ಮೀಸಲಾತಿ ಜಾರಿ

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಯಲ್ಲಿದೆ. ಆದರೆ, ಪ್ರಸ್ತುತ ಕೈಗೆತ್ತಿಕೊಳ್ಳಲಾಗುತ್ತಿರುವ ಈ 56,432 ಹುದ್ದೆಗಳ ನೇಮಕಾತಿಯಲ್ಲಿ ಯಾವುದೇ ರೀತಿಯ ಒಳ ಮೀಸಲಾತಿ ಜಾರಿ ಇರುವುದಿಲ್ಲ ಎಂದು ಸರ್ಕಾರ ಖಚಿತಪಡಿಸಿದೆ. ಒಳ ಮೀಸಲಾತಿ ಜಾರಿಗೆ ತರಲು ಮತ್ತಷ್ಟು ಕಾಲಾವಕಾಶ ಹಾಗೂ ಕಾನೂನು ಪ್ರಕ್ರಿಯೆಗಳ ಅಗತ್ಯವಿರುವುದರಿಂದ, ಈ ನೇಮಕಾತಿಯನ್ನು ಹಳೆಯ ಪದ್ಧತಿಯಂತೆಯೇ ನಡೆಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಒಳ ಮೀಸಲಾತಿಯ ಗೊಂದಲಗಳಿಲ್ಲದೆ ನೇಮಕಾತಿ ಪ್ರಕ್ರಿಯೆ ಸುಗಮವಾಗಿ ಸಾಗಲಿದೆ.

ಆರ್ಥಿಕ ಇಲಾಖೆ ಒಪ್ಪಿಗೆ, ಕೋರ್ಟ್ ತೀರ್ಪಿಗೆ ಬದ್ಧ

ಈ ಬೃಹತ್ ಪ್ರಮಾಣದ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಕೂಡ ಈಗಾಗಲೇ ತನ್ನ ಪೂರ್ಣ ಅನುಮೋದನೆ ನೀಡಿದೆ. ಮೀಸಲಾತಿ ಮಿತಿ ಹೆಚ್ಚಳದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಭವಿಷ್ಯದಲ್ಲಿ ಕೋರ್ಟ್ ನೀಡುವ ಅಂತಿಮ ತೀರ್ಪಿಗೆ ಸರ್ಕಾರ ಬದ್ಧವಾಗಿರಲಿದೆ. ನ್ಯಾಯಾಲಯದಲ್ಲಿ ಈ ವಿಚಾರ ಅಂತಿಮವಾಗಿ ಇತ್ಯರ್ಥವಾದ ಸಂದರ್ಭದಲ್ಲಿ, ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಭವಿಷ್ಯದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಥವಾ ಮೀಸಲಾತಿ ಪಟ್ಟಿಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ.

Read More
Next Story