ಬಸ್ ಪ್ರಯಾಣ ದರ ಏರಿಕೆಗೆ ಜನರ ಆಕ್ರೋಶ; ಗ್ಯಾರಂಟಿ ಹೆಸರಲ್ಲಿ ನಮ್ಮ ಜೇಬಿಗೆ ಕತ್ತರಿ ಎಂದ ಪ್ರಯಾಣಿಕರು!
ಬೆಂಗಳೂರಿನ ಬಿಎಂಟಿಸಿ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಪ್ರಯಾಣಿಕರನ್ನು ಮಾತನಾಡಿಸಿದಾಗ, ಈಗಾಗಲೇ ಹಾಲು, ಮೊಸರು, ಅಡುಗೆ ಎಣ್ಣೆ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಅದರ ನಡುವೆ ಬಸ್ ಟಿಕೆಟ್ ದರವೂ ಏರಿಕೆಯಾದರೆ ಜೀವನ ನಿರ್ವಹಣೆ ಮತ್ತಷ್ಟು ಕಷ್ಟವಾಗಲಿದೆ ಎಂಬುದು ಪ್ರಯಾಣಿಕರ ಆತಂಕ.
ರಾಜ್ಯದಲ್ಲಿ ಈಗಾಗಲೇ ಹಾಲಿನ ದರ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಬಸ್ ಪ್ರಯಾಣ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದೆ. ನವೆಂಬರ್ 5ರಿಂದ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಬದಲಿಗೆ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ ಎಂಬುದಾಗಿ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರಿನ ಬಿಎಂಟಿಸಿ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಪ್ರಯಾಣಿಕರನ್ನು ಮಾತನಾಡಿಸಿದಾಗ, ಬಹುತೇಕರು ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಾಲು, ಮೊಸರು, ಅಡುಗೆ ಎಣ್ಣೆ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಅದರ ನಡುವೆ ಬಸ್ ಟಿಕೆಟ್ ದರವೂ ಏರಿಕೆಯಾದರೆ ಜೀವನ ನಿರ್ವಹಣೆ ಮತ್ತಷ್ಟು ಕಷ್ಟವಾಗಲಿದೆ ಎಂಬುದು ಪ್ರಯಾಣಿಕರ ಆತಂಕ.
ವಿಶೇಷವಾಗಿ ದಿನನಿತ್ಯ ಕೆಲಸಕ್ಕೆ ತೆರಳುವ ಕಾರ್ಮಿಕರು, ಮಧ್ಯಮ ವರ್ಗದವರು ಹಾಗೂ ಕಡಿಮೆ ಆದಾಯ ಹೊಂದಿರುವವರಿಗೆ ದರ ಏರಿಕೆ ಹೊರೆಯಾಗಲಿದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಸರ್ಕಾರದ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಪ್ರಶ್ನಿಸಿದ್ದು, ಒಂದು ವರ್ಗಕ್ಕೆ ಉಚಿತ ಪ್ರಯಾಣದ ಸೌಲಭ್ಯ ನೀಡಿ ಮತ್ತೊಂದು ವರ್ಗದ ಪ್ರಯಾಣಿಕರ ಮೇಲೆ ದರ ಏರಿಕೆಯ ಹೊರೆ ಹಾಕುವುದು ಸರಿಯಲ್ಲ ಎಂದಿದ್ದಾರೆ.
ಇನ್ನು ಕೆಲವರು ಎಲ್ಲರಿಗೂ ಉಚಿತ ಪ್ರಯಾಣ ನೀಡುವ ಬದಲು ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಬೇಕು. ಉಳಿದವರಿಗೆ ಕೈಗೆಟುಕುವ ದರದಲ್ಲಿ ಬಸ್ ಸೇವೆ ಒದಗಿಸಬೇಕು ಎಂದು ಸಲಹೆ ನೀಡಿದ್ದಾರೆ. ಬಿಎಂಟಿಸಿ ನಿರ್ವಹಣೆ ಮತ್ತು ಖಾಸಗಿ ಸಂಸ್ಥೆಗಳಿಗೆ ನೀಡಿರುವ ಗುತ್ತಿಗೆಗಳ ಬಗ್ಗೆಯೂ ಕೆಲ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರಿಗೆ ಸಂಸ್ಥೆಗಳ ನಷ್ಟಕ್ಕೆ ಕಾರಣವೇನು ಎಂಬುದರ ಬಗ್ಗೆ ಸರ್ಕಾರ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
