
Karnataka Budget 2026|ನೇಮಕಾತಿಯ ಸಿಹಿ, ಒಳ ಮೀಸಲಾತಿಯ ಕಹಿ
56 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಲು ಸರ್ಕಾರ ತೀರ್ಮಾನಿಸಿದೆ. ಆದರೆ, ಈ ಹುದ್ದೆಗಳಿಗೆ ಒಳಮೀಸಲು ಅನ್ವಯ ಆಗಲಿದೆಯೇ ಅಥವಾ ಇಲ್ಲವೇ ಎಂಬ ಅನುಮಾನ ಶೋಷಿತ ಸಮುದಾಯದವರಲ್ಲಿ ಕಾಡುತ್ತಿದೆ.
ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಯುವಕರಿಗೆ ನೇಮಕಾತಿ ಉಡುಗೊರೆ ನೀಡುತ್ತಾರೆಯೇ ಅಥವಾ ಕಳೆದ ಸಾಲಿನಂತೆ ಆಶ್ವಾಸನೆ ನೀಡಿ ಕಣ್ಣೊರೆಸುವ ತಂತ್ರ ಅನುಸರಿಸುತ್ತಾರೋ ಎಂಬ ಜಿಜ್ಞಾಸೆ ಎದುರಾಗಿದೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ 2.80 ಲಕ್ಷ ಹುದ್ದೆಗಳು ಖಾಲಿ ಇವೆ. ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿ ಧಾರವಾಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಸ್ಪರ್ಧಾರ್ಥಿಗಳ ಆಕ್ರೋಶಕ್ಕೆ ಮಣಿದಿದ್ದ ರಾಜ್ಯ ಸರ್ಕಾರವು ಮಾರ್ಚ್ ಅಂತ್ಯದೊಳಗೆ 56,432 ಹುದ್ದೆಗಳನ್ನು ಭರ್ತಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದ್ದರು. ಆದರೆ, ಈವರೆಗೂ ಯಾವುದೇ ಇಲಾಖೆಗಳು ನೇಮಕಾತಿ ಪ್ರಕ್ರಿಯೆ ಆರಂಭಿಸದಿರುವುದು ಯುವಜನರಲ್ಲಿ ಅನುಮಾನ ಮೂಡಿಸಿದೆ. ಹಾಗಾಗಿ, ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೇಮಕಾತಿಗೆ ಸಂಬಂಧಿಸಿದಂತೆ ಯಾವ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಒಳಮೀಸಲಿಗೆ ಕಾನೂನು ಬಲ
ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಒಳಮೀಸಲಾತಿ ನೆಪ ಹೇಳಿ ನೇಮಕಾತಿ ನಡೆಸಿರಲಿಲ್ಲ. ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗವು ನೀಡಿದ ವರದಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿ, 100 ಬಿಂದುಗಳಿಗೆ ರೋಸ್ಟರ್ ನಿಗದಿಪಡಿಸಿತ್ತು. ಆದರೆ, ಕೆಲವರು ಶೇ. 56 ಮೀಸಲಾತಿ ವಿರುದ್ದ ಹೈಕೋರ್ಟ್‌ಗೆ ಮೆಟ್ಟಿಲೇರಿದ ಪರಿಣಾಮ ನೇಮಕಾತಿ ಸ್ಥಗಿತವಾಯಿತು. ಬೆಳಗಾವಿ ಅಧಿವೇಶನದಲ್ಲಿ ಒಳ ಮೀಸಲಾತಿ ಮಸೂದೆ ಮಂಡಿಸಿ ಅದಕ್ಕೆ ರಾಜ್ಯಪಾಲರ ಅನುಮೋದನೆ ಸಿಕ್ಕಿದೆ. ಒಳಮೀಸಲು ಅನ್ವಯವೇ ಸರ್ಕಾರ 56 ಸಾವಿರ ಹುದ್ದೆಗಳಿಗೆ ನೇಮಕ ಮಾಡಬೇಕು ಎಂದು ಮಾದಿಗ ಸಮುದಾಯ ಪಟ್ಟು ಹಿಡಿದಿದೆ.
ಶೇ.6 ಬ್ಯಾಕ್‌ಲಾಗ್‌ಗೆ ಒತ್ತಾಯ
ವಿದ್ಯಾರ್ಥಿಗಳ ಹೋರಟಕ್ಕೆ ಮಣಿದಿದ್ದ ಸರ್ಕಾರ ಇದೀಗ ಸಂದಿಗ್ದ ಪರಿಸ್ಥಿತಿಗೆ ಸಿಲುಕಿದೆ. ಪರಿಶಿಷ್ಟ ಜಾತಿ ಸಚಿವರು ಶೇ.56 ಮೀಸಲಾತಿ ಅನ್ವಯ ನೇಮಕಾತಿ ನಡೆಸಬೇಕು. ಮೀಸಲು ಪ್ರಕರಣ ಹೈಕೋರ್ಟ್‌ನಲ್ಲಿ ಇರುವುದರಿಂದ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ಶೇ.50 ರಂತೆ ನೇಮಕ ನಡೆಸಿದರೆ ಪರಿಶಿಷ್ಟ ಜಾತಿಯ ಶೇ.2 ಹಾಗೂ ಪರಿಶಿಷ್ಟ ಪಂಗಡದ ಶೇ.4 ಹುದ್ದೆಗಳನ್ನು ಬ್ಯಾಕ್‌ಲಾಗ್ ಎಂದು ಪರಿಗಣಿಸಿ ನೇಮಕ ನಡೆಸಬೇಕು ಎಂದು ಸಚಿವ ಕೆ.ಎಚ್. ಮುನಿಯಪ್ಪ ಸೇರಿದಂತೆ ಎಡಗೈ ಸಮುದಾಯದ ನಾಯಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎಡಗೈ-ಬಲಗೈ ನಡುವೆ ಮೂಡದ ಒಮ್ಮತ
ಪರಿಶಿಷ್ಟ ಜಾತಿಯ ಒಳ ಪಂಗಡಗಳಿಗೆ ಮೀಸಲು ನೀಡಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಗ್ರೂಪ್ ʼಎʼ(ಎಡಗೈ) ಶೇ.6, ಗ್ರೂಪ್ ʼಬಿʼ (ಬಲಗೈ) ಶೇ.6, ಹಾಗೂ ಗ್ರೂಪ್ ʼಸಿʼ (ಸ್ಪೃಶ್ಯ) ಶೇ.5 ಮೀಸಲು ನಿಗದಿಪಡಿಸಿ ಆದೇಶಿಸಿತ್ತು. ಮಸೂದೆಯನ್ನು ಮಂಡಿಸಿ ರಾಜ್ಯಪಾಲರ ಬಳಿ ಅನುಮೋದನೆಯನ್ನು ಪಡೆದಿದೆ. ಆದರೆ ಶೇ.56 ಮೀಸಲು ವಿಚಾರ ಕೋರ್ಟ್‌ನಲ್ಲಿದ್ದು, ನೇಮಕ ಪ್ರಕ್ರಿಯೆ ಮಾಡಲೇಬೇಕಾದ ಸ್ಥಿತಿಯಲ್ಲಿ ಸರ್ಕಾರ ಸಿಲುಕಿದೆ. ಆದರೆ ಇದೀಗ ಶೇ. 50 ರಂತೆ ನೇಮಕ ಮಾಡವುದಾ ? ಅಥವಾ ಶೇ.56 ಮೀಸಲಿನಂತೆ ನೇಮಕ ಮಾಡಬೇಕ ಎಂಬ ಗೊಂದಲ ಸರ್ಕಾರಕ್ಕಿದೆ. ಈ ಮೊದಲಿನಂತೆ ಶೇ. 50 ರಂತೆ ನೇಮಕ ಪ್ರಕ್ರಿಯೆ ಆರಂಭಿಸಿದರೂ ಒಳ ಮೀಸಲು ನೀಡುವಂತೆ ಎಡಗೈ ಸಮುದಾಯ ಒತ್ತಡ ಹೇರುತ್ತಿದೆ. ಆದರೆ ಈ ಮೀಸಲಿನಂತೆ ನೇಮಕ ನಡೆದರೆ ಒಳ ಮೀಸಲು ಬೇಡ ಎಂಬುದು ಬಲಗೈ ಸಮುದಾಯದ ವಾದ.
ಶೇ.15ರಲ್ಲೇ ಒಳ ಮೀಸಲಿಗೆ ಆಗ್ರಹ
ದಲಿತ ಮುಖಂಡ ಕೊಟ್ಟ ಶಂಕರ್ ಮಾತನಾಡಿ "ರಾಜ್ಯ ಸರ್ಕಾರದ ಒಳ ಮೀಸಲು ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿರುವುದರಿಂದ ಕಾನೂನು ಬಲ ಸಿಕ್ಕಿದೆ. ಶೇ.56 ಮೀಸಲಾತಿ ವಿರುದ್ದ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಸರ್ಕಾರ ಈಗ ನಡೆಸುವ ನೇಮಕಾತಿಗೆ ಶೇ.15ರಲ್ಲೇ ಈ ಹಿಂದಿನಂತೆ ಗ್ರೂಪ್ ʼಎʼ ಗೆ ಶೇ.5.5, ಗ್ರೂಪ್ ʼಬಿʼ ಗೆ ಶೇ. 5.5 ಹಾಗೂ ಗ್ರೂಪ್ ʼಸಿʼ ಗೆ ಶೇ.4 ಮೀಸಲು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಒಳ ಮೀಸಲು ನೀಡದೆ ಅಧಿಸೂಚನೆ ಹೊರಡಿಸಿದರೆ ಕಳೆದ 4 ದಶಕಕಗಳ ಹೋರಾಟಕ್ಕೆ ಬೆಲೆ ಇಲ್ಲದಂತಾಗುತ್ತದೆ" ಎಂದರು.
ಗೊಂದಲ ಏಕೆ ?
ತಳ ಸಮುದಾಯಗಳಿಗೆ ಅನುಕೂಲವಾಗುವ ಉದ್ದೇಶದಿಂದ ಜಾರಿಗೊಳಿಸಿರುವ ಒಳ ಮೀಸಲಿನ ಪ್ರಕಾರ ರೋಸ್ಟರ್ ಬಿಂದುಗಳು ಮೊದಲು ಎಡಗೈ ಸಮುದಾಯ, ನಂತರ ಬಲಗೈ ಹಾಗೂ ಮೂರನೇ ಹಂತದಲ್ಲಿ ಸ್ಪೃಶ್ಯ ಜಾತಿಗಳಿಗೆ ಸಿಗುತ್ತವೆ. ಆದ್ದರಿಂದ ಸರ್ಕಾರ ಈಗ ನಡೆಸಲು ಉದ್ದೇಶಿಸಿರುವ 56,432 ಹುದ್ದೆಗಳ ನೇಮಕಾತಿಯಲ್ಲಿ ಎಡಗೈ ಸಮುದಾಯಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂಬುದು ಬಲಗೈ ಹಾಗೂ ಸ್ಪೃಷ್ಯ ಜಾತಿಗಳ ವಾದ. ಸರ್ಕಾರ ಒಳ ಮೀಸಲು ನೀಡಿದರೆ ಶೇ.56 ಕ್ಕೆ ನೀಡಬೇಕು. ಇಲ್ಲದಿದ್ದರೆ ಶೇ.50 ಮೀಸಲಿನಂತೆ ನೇಮಕ ನಡೆಸಿದರೆ ಈ ಹಿಂದೆ ಇದ್ದ ರೋಸ್ಟರ್ ಪದ್ದತಿ ಅನುಸರಿಸಲಿ ಎಂದು ಸರ್ಕಾರವನ್ನು ಬಲಗೈ ಸಮುದಾಯ ಆಗ್ರಹಿಸಿದೆ.
ವಿದ್ಯಾರ್ಥಿ ಸಂಘಟನೆಯಿಂದ ಹೋರಾಟದ ಎಚ್ಚರಿಕೆ
ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಸಂಘದ ಅಧ್ಯಕ್ಷ ಸಂತೋಷ್ ಮರೂರ್ ಮಾತನಾಡಿ, "ಪ್ರಸ್ತುತ ರಾಜ್ಯ ಸರ್ಕಾರವು ಘೋಷಿಸಿರುವ 56,432 ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ ಪ್ರಕ್ರಿಯೆಯಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸದೆ ಹಳೆಯ ಪದ್ಧತಿಯಲ್ಲೇ ನೇಮಕಾತಿ ನಡೆಸಲು ಮುಂದಾಗಿರುವುದು ಅತ್ಯಂತ ಖೇದಕರ ಮತ್ತು ಅನ್ಯಾಯದ ಸಂಗತಿಯಾಗಿದೆ. ಇದು ದಶಕಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಮಾದಿಗ ಮತ್ತು ಇತರ ಹಿಂದುಳಿದ ಉಪಜಾತಿಗಳ ಆಶೋತ್ತರಗಳಿಗೆ ವಿರುದ್ಧವಾಗಿದೆ. ಒಂದು ವೇಳೆ ಸರ್ಕಾರವು ನಮ್ಮ ಈ ನ್ಯಾಯಸಮ್ಮತ ಬೇಡಿಕೆಯನ್ನು ನಿರ್ಲಕ್ಷಿಸಿ, ಒಳ ಮೀಸಲಾತಿ ಇಲ್ಲದೆ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದೇ ಆದಲ್ಲಿ ರಾಜ್ಯಾದ್ಯಂತ ಇರುವ ಪರಿಶಿಷ್ಟಜಾತಿಯ ವಿದ್ಯಾರ್ಥಿಗಳು, ಯುವಕರು ಮತ್ತು ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ 2.80 ಲಕ್ಷ ಸರ್ಕಾರಿ ಹುದ್ದೆ ಖಾಲಿ
ರಾಜ್ಯ ಸರ್ಕಾರದಲ್ಲಿ ಸುಮಾರು 2.80 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ಅಧಿವೇಶನದಲ್ಲಿ ತಿಳಿಸಿತ್ತು. ಬಹುತೇಕ ಇಲಾಖೆಗಳಲ್ಲೂ ಶೇ.50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬೇಕಾದ ಒತ್ತಡದಲ್ಲಿ ನೌಕರರಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಲೇ ಬಂದಿದೆ. ರಾಜ್ಯದಲ್ಲಿ ʼಎʼ ದರ್ಜೆಯ 16,017 ಹುದ್ದೆಗಳು ಖಾಲಿ ಇವೆ. ʼಬಿʼ ದರ್ಜೆಯ 16,734 ಹುದ್ದೆಗಳು ಖಾಲಿ ಇವೆ. ʼಸಿʼ ದರ್ಜೆಯ 1,66,021 ಹುದ್ದೆಗಳು ಖಾಲಿ ಇವೆ. ʼಡಿʼ ದರ್ಜೆಯ 77,614 ಹುದ್ದೆಗಳು ಖಾಲಿ ಇವೆ.
ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ 79,694, ಆರೋಗ್ಯ & ವೈದ್ಯಕೀಯ ಶಿಕ್ಷಣ ಇಲಾಖೆ 37,572, ಪಶುಸಂಗೋಪನೆ ಇಲಾಖೆ- 11,020, ಕಂದಾಯ ಇಲಾಖೆ - 10,867, ಕೃಷಿ ಇಲಾಖೆ- 6,876, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ - 8,525, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ- 6,190, ಆರ್ಥಿಕ ಇಲಾಖೆ - 7,668, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ - 1,442, ಮೀನುಗಾರಿಕೆ ಇಲಾಖೆ - 838, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ - 37,572, ಉನ್ನತ ಶಿಕ್ಷಣ ಇಲಾಖೆ - 13,599, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ- 4,972, ಒಳಾಡಳಿತ ಇಲಾಖೆ - 28,188, ಕಾನೂನು ಇಲಾಖೆ - 7,659, ಅರಣ್ಯ ಇಲಾಖೆ - 6.478, ಶಿಕ್ಷಣ ಇಲಾಖೆ - 79,694, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ - 10,504, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ - 3,391, ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆ- 9,646 ಹುದ್ದೆಗಳು ಖಾಲಿ ಇವೆ.
ನೇಮಕಾತಿ ಪ್ರಕ್ರಿಯೆಗೆ ಸಿದ್ದತೆ ಹೇಗಿದೆ?
ಭೂ ಮಾಪನ ಇಲಾಖೆಯು 650 ಭೂಮಾಪಕ ನೇಮಕಕ್ಕೆ ಕೆಪಿಎಸ್‌ಸಿ ಮೂಲಕ ಅಧಿಸೂಚನೆ ಹೊರಡಿಸಬೇಕಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ(ಗ್ರೇಡ್-1) 212 , 298 ಗ್ರಾ.ಪಂ. ಕಾರ್ಯರ್ಶಿ ಗ್ರೇಡ್-2, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಪ್ರಾಥಮಿಕ ಶಾಲೆಗಳ 4,882 ಹಾಗೂ ಪ್ರೌಢಶಾಲೆಗಳ 385 ಹುದ್ದೆ ಸೇರಿ 5,267 ಹುದ್ದೆ ಭರ್ತಿ ಪ್ರಕ್ರಿಯೆ ಮುಂದುವರಿಸಬೇಕಿದೆ.
ಸರ್ಕಾರಿ ಪಿಯು ಕಾಲೇಜುಗಳ 814 ಉಪನ್ಯಾಸಕರ ಹುದ್ದೆಗಳು, ವೃತ್ತಿಪರ ಕಾಲೇಜುಗಳಲ್ಲಿ 1,000 ಶಿಕ್ಷಕರ ಹುದ್ದೆ, 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆ, ಪೊಲೀಸ್ ಇಲಾಖೆಯಲ್ಲಿ 8,100 ಹುದ್ದೆ, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1,500 ಕ್ಕೂ ಹೆಚ್ಚು ಎಸ್‌ಡಿಎ ಹಾಗೂ ಎಫ್‌ಡಿಎ ಹುದ್ದೆಗಳು ಸೇರಿದಂತೆ 56,432 ಹುದ್ದೆಗಳ ಸರ್ಕಾರ ಶೀಘ್ರವೇ ನೇಮಕ ಪ್ರಕ್ರಿಯೆ ಆರಂಭಿಸಬೇಕಾಗಿದೆ.

