Karnataka Budget 2026| ಮಾಜಿ ದೇವದಾಸಿಯರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವು
x
ಮಾಜಿ ದೇವದಾಸಿಯರು

Karnataka Budget 2026| ಮಾಜಿ ದೇವದಾಸಿಯರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವು

ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ನಿರ್ವಹಣೆ ವೆಚ್ಚದ ದರಗಳ ಪರಿಷ್ಕರಣೆಗೆ ಹೆಚ್ಚುವರಿ 56 ಕೋಟಿ ರೂ. ನಿಗದಿ ಮಾಡಲಾಗಿದೆ.


ಮಾಜಿ ದೇವದಾಸಿಯರ ಮಕ್ಕಳ ಉನ್ನತ ಶಿಕ್ಷಣ, ಸ್ವಯಂ ಉದ್ಯೋಗ ಹಾಗೂ ವೈಯಕ್ತಿಕ ಆದಾಯೋತ್ಪನ್ನ ಚಟುವಟಿಕೆಗಳಿಗೆ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ 5 ಕೋಟಿ ರೂ. ಮೀಸಲಿಟ್ಟಿದೆ. ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು, ಚೇತನಾ ಹಾಗೂ ಧನಶ್ರೀ ಯೋಜನೆಯ ಫಲಾನುಭವಿಗಳಿಗೆ ನೀಡುವ ಆದಾಯೋತ್ಪನ್ನ ಚಟುವಟಿಕೆಗಳ ಪ್ರೋತ್ಸಾಹಧನವನ್ನು 45 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ.

ಮಾದಕ ವ್ಯಸನಕ್ಕೆ ಒಳಗಾದ 18 ವರ್ಷದೊಳಗಿನ ಮಕ್ಕಳಿಗಾಗಿ “ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರ” ಆರಂಭಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಹಾಗೂ ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿಯಾಗಿ 20 ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. 'ಮಾತೃಪೂರ್ಣ' ಯೋಜನೆಯಡಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಮಧ್ಯಾಹ್ನದ ಬಿಸಿಯೂಟ ನೀಡಲಾಗುವುದು. ಅಂಗನವಾಡಿ ಕೇಂದ್ರಗಳ ಸಮಗ್ರ ಸುಧಾರಣೆಗೆ ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ಘೋಷಿಸಲಾಗಿದೆ.

ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ನಿರ್ವಹಣಾ ವೆಚ್ಚದ ದರಗಳ ಪರಿಷ್ಕರಣೆಗಾಗಿ ಹೆಚ್ಚುವರಿಯಾಗಿ 56 ಕೋಟಿ ರೂ. ನಿಗದಿಪಡಿಸಲಾಗಿದೆ.

ಪ್ರತಿ ಜಿಲ್ಲೆಗೆ 150 ಸಂಖ್ಯಾಬಲದ ಒಂದು ಬಾಲಕರ ಮತ್ತು ಒಂದು ಬಾಲಕಿಯರ ವಿದ್ಯಾರ್ಥಿನಿಲಯ ಸೇರಿದಂತೆ ಒಟ್ಟು 62 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆ (Right to Education Act) ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡಲು ಅವಕಾಶ ನೀಡಲಾಗಿದೆ.

31 ವಸತಿ ಶಾಲೆಗಳ ಉನ್ನತೀಕರಣ

ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪದವಿಪೂರ್ವ ಶಿಕ್ಷಣಕ್ಕಾಗಿ ಒಟ್ಟು 31 ವಸತಿ ಶಾಲೆಗಳ ಉನ್ನತೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲದೆ, ಹೊಸದಾಗಿ 40 ವಸತಿ ಶಾಲೆಗಳನ್ನು ಪ್ರಾರಂಭಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಕ್ರೈಸ್ (KREIS) ವಸತಿ ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು 50 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ನಿವೇಶನ ಲಭ್ಯವಿರುವ 30 ಕ್ರೈಸ್ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳ ನಿರ್ಮಾಣಕ್ಕಾಗಿ 660 ಕೋಟಿ ರೂ. ಮೀಸಲಿಡಲಾಗಿದೆ. ನಾಲ್ಕು ಕ್ರೈಸ್ ವಸತಿ ಶಾಲೆಗಳನ್ನು ಕೆ-ಸೆಟ್, ಜೆಇಇ ಹಾಗೂ ನೀಟ್ ಪರೀಕ್ಷೆಗಳಿಗಾಗಿ 'ಸೆಂಟರ್ ಆಫ್ ಎಕ್ಸಲೆನ್ಸ್' (Centre of Excellence) ಗಳನ್ನಾಗಿ ಉನ್ನತೀಕರಿಸಲು ತೀರ್ಮಾನಿಸಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪಂಗಡದ ಉದ್ಯೋಗಸ್ಥ ಮಹಿಳೆಯರಿಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಹಾಗೂ ಕಲಬುರಗಿಯಲ್ಲಿ ತಲಾ 10 ಉದ್ಯೋಗಸ್ಥ ಮಹಿಳೆಯರ ವಸತಿನಿಲಯಗಳನ್ನು ಆರಂಭಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿ ಕಂದಾಯ ವಿಭಾಗಕ್ಕೆ ಒಂದರಂತೆ ಒಟ್ಟು ನಾಲ್ಕು ವಿಶೇಷ ವಸತಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ

ರಾಜ್ಯದಲ್ಲಿ ಬೌದ್ಧ ಸಮುದಾಯದವರ ಪ್ರಗತಿಗೆ ಪೂರಕವಾಗಿ 'ಬೌದ್ಧ ಅಭಿವೃದ್ಧಿ ನಿಗಮ' ಸ್ಥಾಪಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳ ವಿದ್ಯುದೀಕರಣಕ್ಕೆ ಪಾವತಿಸುವ ವೆಚ್ಚವನ್ನು 1.5 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.

ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಗೆ 1,500 ಕೋಟಿ ರೂ. ಅನುದಾನ ಒದಗಿಸಲು ಹಾಗೂ ಈ ಇಲಾಖೆಗಳಲ್ಲಿ ಖಾಲಿ ಇರುವ 2,500 ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಲಾಗಿದೆ.

ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ

ಆದಿವಾಸಿಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು 'ಕರ್ನಾಟಕ ಆದಿವಾಸಿಗಳ ಅಭಿವೃದ್ಧಿ ನಿಗಮ' ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ಬೆಂಗಳೂರಿನ ಸುಮನಹಳ್ಳಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ 'ಶ್ರೀ ಮಹರ್ಷಿ ವಾಲ್ಮೀಕಿ ಆಡಳಿತ ಸೌಧ' ಸಂಕೀರ್ಣ ನಿರ್ಮಾಣ, 150 ಸಂಖ್ಯಾಬಲದ 50 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರಾರಂಭ ಹಾಗೂ ಆಶ್ರಮ ಶಾಲೆಗಳಿಗೆ 119 ಮಹಿಳಾ ಕೇರ್ ಟೇಕರ್ ಹುದ್ದೆಗಳನ್ನು ಮಂಜೂರು ಮಾಡಲು ತೀರ್ಮಾನಿಸಲಾಗಿದೆ.

Read More
Next Story