
Karnataka Budget 2026| ನಿರೀಕ್ಷೆಯ ಮೂಟೆ ಹೊತ್ತ ರೈತ; ಕೃಷಿ-ನೀರಾವರಿ ವಲಯಕ್ಕೇನು ಸಿಗಲಿದೆ?
ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಸಮರ್ಪಕ ಅನುದಾನ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಮಾ.6) ಮಂಡಿಸಲಿರುವ ದಾಖಲೆಯ 17ನೇ ಬಜೆಟ್‌ನಲ್ಲಿ ಕೃಷಿ ಹಾಗೂ ನೀರಾವರಿ ಕ್ಷೇತ್ರಗಳು ಭರಪೂರ ನಿರೀಕ್ಷೆ ಹೊತ್ತಿವೆ. ಈಗಾಗಲೇ ಬರದ ಭೀತಿಯಲ್ಲಿರುವ ಉತ್ತರ ಕರ್ನಾಟಕದ ರೈತರು ಬಾಕಿ ಉಳಿದಿರುವ ನೀರಾವರಿ ಯೋಜನೆಗಳು, ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಯೋಜನೆ ಜಾರಿಗಾಗಿ ಕಾದು ಕುಳಿತಿದ್ದಾರೆ.
ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಸಮರ್ಪಕ ಅನುದಾನ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳ ಇಂಡಿ ಕಾಲುವೆ ವಿಸ್ತರಣೆಗೆ 2,666 ಕೋಟಿ ರೂ., ಮಲಪ್ರಭಾ ಯೋಜನೆಯ ಕಾಲುವೆಗಳ ಆಧುನೀಕರಣಕ್ಕಾಗಿ 3 ಸಾವಿರ ಕೋಟಿ ರೂ. ಮೀಸಲಿಡಲು ರೈತ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ. ಇನ್ನು ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣಕ್ಕೆ 1,444 ಕೋಟಿ ರೂ. ಅಗತ್ಯವಿದೆ. ಈ ಯೋಜನೆಗಳಿಗೆ ಅನುದಾನ ಕೋರಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಕೇಂದ್ರದಿಂದ ಸೂಕ್ತ ಸ್ಪಂದನೆ ಸಿಗದ ಕಾರಣ ರಾಜ್ಯ ಸರ್ಕಾರ ಅತಂತ್ರ ಸ್ಥಿತಿಯಲ್ಲಿದೆ.
ಜಿಲ್ಲೆಗಳ ಪ್ರಮುಖ ಬೇಡಿಕೆಗಳು
ರೈತರಿಗೆ ಸಮರ್ಪಕ ಬೀಜ, ಗೊಬ್ಬರ ಮತ್ತು ಕೃಷಿ ಉಪಕರಣಗಳನ್ನು ಪೂರೈಸಬೇಕು. ಉಪಕರಣಗಳ ಗುಣಮಟ್ಟ ತಪಾಸಣೆಗೆ ತಜ್ಞರ ತಂಡ ಹಾಗೂ ಸಂಶೋಧನಾ ಕೇಂದ್ರದ ಸ್ಥಾಪಿಸಬೇಕು. ಕೃಷಿ ಸಲಕರಣೆಗಳಿಗೆ 7 ವರ್ಷಕ್ಕೊಮ್ಮೆ ನೀಡುತ್ತಿದ್ದ ಸಬ್ಸಿಡಿಯನ್ನು ಪ್ರತಿ ವರ್ಷ ನೀಡಬೇಕು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕೃಷಿಗೆ ಅಗತ್ಯವಾಗಿ ನೀರಾವರಿ ಬೇಕಾಗಿದೆ. ಬೆಳೆದಿರುವ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಕಬ್ಬು ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗದಂತೆ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಚಿಕ್ಕಬಳ್ಳಾಪುರದ ಎಚ್.ಎನ್.ವ್ಯಾಲಿ ಹಾಗೂ ಕೋಲಾರದ ಕೆ.ಸಿ.ವ್ಯಾಲಿ ಯೋಜನೆಯಡಿ ಹರಿಸುತ್ತಿರುವ ನೀರನ್ನು ಮೂರು ಹಂತಗಳಲ್ಲಿ ಸಂಸ್ಕರಿಸಬೇಕು ಎಂಬುದು ಬಯಲು ಸೀಮೆ ಜಿಲ್ಲೆಗಳ ಬೇಡಿಕೆಯಾಗಿದೆ. ಅದಕ್ಕಾಗಿ ಅನುದಾನ ಮೀಸಲಿಡಬೇಕು. ಚಿಕ್ಕಬಳ್ಳಾಪುರದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ಮತ್ತು ನಂದಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಮನವಿ ಮಾಡಲಾಗಿದೆ. ಬಜೆಟ್‌ನಲ್ಲಿ ಈ ಸಂಬಂಧ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಹಳೆ ಮೈಸೂರು ಭಾಗದ ಚಾಮರಾಜನಗರದ ಹನೂರು ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ರೈತರು ಪಾದಯಾತ್ರೆ ನಡೆಸಿ, ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಹಾಗಾಗಿ, ಬಜೆಟ್‌ನಲ್ಲಿ ನೀರಾವರಿ ಸೌಲಭ್ಯ ಒದಗಿಸುವ ಕುರಿತು ಯೋಜನೆ ಘೋಷಿಸುವ ನಿರೀಕ್ಷೆಯಿದೆ.
ಕೃಷಿ ಕ್ಷೇತ್ರದ ಹಕ್ಕೊತ್ತಾಯವೇನು?
ಎಲ್ಲ ಬೆಳೆಗಳಿಗೂ ವೈಜ್ಞಾನಿಕ ಬೆಲೆ ಮತ್ತು ವಿಮೆ ಜಾರಿ ಮಾಡಬೇಕು. ಶೂನ್ಯ ಬಡ್ಡಿದರದ ಸಾಲದ ಮಿತಿಯನ್ನು ಹೆಚ್ಚಿಸಬೇಕು, ನ್ಯಾನೋ ಗೊಬ್ಬರಗಳ ಬಳಕೆ ಮತ್ತು ಕೃಷಿ ನವೋದ್ಯಮಗಳಿಗೆ ವಿಶೇಷ ಉತ್ತೇಜನ ನೀಡಬೇಕು ಎಂಬುದು ಕೃಷಿ ಕ್ಷೇತ್ರದ ಪ್ರಮುಖ ಬೇಡಿಕೆಗಳಾಗಿವೆ.
ವನ್ಯಜೀವಿಗಳಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಹೆಚ್ಚಿಸಬೇಕು. ಪಂಜಾಬ್ ಮಾದರಿಯಲ್ಲಿ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಟೋಲ್ ಶುಲ್ಕದಿಂದ ವಿನಾಯಿತಿ ನೀಡಬೇಕು. ಕಬ್ಬಿಗೆ ದರ ಹೆಚ್ಚಳ ಮತ್ತು ಕೈಗಾರಿಕೆಗಳಿಂದ ಕಬ್ಬು ದರ ಬಾಕಿ ಉಳಿಸಿಕೊಳ್ಳುವುದು ತಡೆಯಲು ಮತ್ತಷ್ಟು ಕಠಿಣ ನಿಯಮ ಜಾರಿ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕಬ್ಬು ಕಟಾವು, ಸಾಗಣೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳೇ ಭರಿಸುವಂತೆ ಮಾಡಬೇಕು, ರಾಜ್ಯಾದ್ಯಂತ ಎಲ್ಲ ಕೆರೆಗಳ ಹೂಳು ತೆಗೆಸಿ ರೈತರ ಜಮೀನಿಗೆ ಸಾಗಿಸಬೇಕು, ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ರದ್ದು ಮಾಡಬೇಕು. ಕಳಪೆ ಕೀಟನಾಶಕ, ಬೀಜ, ನಕಲಿ ಗೊಬ್ಬರ, ನರ್ಸರಿ ಸಸಿಗಳ ಮಾರಾಟ ತಡೆಗೆ ಬಜೆಟ್ನಲ್ಲಿ ಸ್ಪಷ್ಟ ಭರವಸೆ ಸಿಗುವ ನಿರೀಕ್ಷೆ ರೈತರಲ್ಲಿದೆ.
ಒಟ್ಟಾರೆ, ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ನಡುವೆಯೂ ಸಿಎಂ ಸಿದ್ದರಾಮಯ್ಯ ಅವರು ಕೃಷಿ ಹಾಗೂ ನೀರಾವರಿ ಕ್ಷೇತ್ರದ ಹಿತ ಕಾಯಲು ಯಾವ ರೀತಿಯ ಕಸರತ್ತು ನಡೆಸಲಿದ್ದಾರೆ ಎಂಬುದು ನಾಳಿನ ಬಜೆಟ್ ಬಳಿಕ ತಿಳಿಯಲಿದೆ.

