
ರಾಜ್ಯದ ಪ್ರಗತಿಗೆ ವೇಗ ನೀಡಲು ʼ11ಜಿʼ ಮಾದರಿ ಪರಿಚಯಿಸಿದ ಸಿಎಂ; ಏನಿದು 11ಜಿ ಮಾದರಿ ಆರ್ಥಿಕತೆ?
ಕರ್ನಾಟಕದ 45ಕ್ಕೂ ಹೆಚ್ಚಿನ ಉತ್ಪನ್ನಗಳಿಗೆ ಜಿಐ ಮಾನ್ಯತೆಗಳಿವೆ. ಈ ಮಾನ್ಯತೆಗಳು ಜನರ ಪಾರಂಪರಿಕ ಕ್ರಿಯಾಶೀಲತೆಗೆ ಸಾಕ್ಷಿಯಾಗಿದ್ದು, ಹೊಸ ಉದ್ಯೋಗಗಳ ಸೃಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ರಾಜ್ಯದ ಆರ್ಥಿಕತೆಗೆ ವೇಗ ಕೊಡುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅವರು ʼ11ಜಿʼ ಮಾದರಿಯ ಆರ್ಥಿಕತೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.
ಶುಕ್ರವಾರ ಮಂಡನೆ ಮಾಡಿದ ತಮ್ಮ 17 ನೇ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ವಿನೂತನ ಆರ್ಥಿಕತೆಯ ಮಾದರಿಯನ್ನು ಅಭಿವೃದ್ಧಿಯ ಅಳತೆಗೋಲನ್ನಾಗಿ ತೀರ್ಮಾನಿಸಿ ಘೋಷಿಸಿದ್ದಾರೆ. ಇಲ್ಲಿ ʼ11ಜಿʼ ಮಾದರಿ ಎಂದರೆ ಪ್ರಮುಖ 11 ಕ್ಷೇತ್ರಗಳಲ್ಲಿ ಸುಸ್ಥಿರ, ಸಮಗ್ರ ಅಭಿವೃದ್ಧಿಯನ್ನು ಕೇಂದ್ರೀಕರಿಸುವುದಾಗಿದೆ.
ಅಭಿವೃದ್ಧಿಯ ಆಧಾರ ಸ್ತಂಭಗಳಂತಿರುವ ಕಲ್ಯಾಣ ಯೋಜನೆ, ಗುಣಮಟ್ಟದ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಬೆಳವಣಿಗೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೆಚ್ಚು ಪ್ರಗತಿ ಸಾಧಿಸುವ ಮೂಲಕ ಆರ್ಥಿಕತೆಗೆ ವೇಗ ನೀಡುವುದು '11ಜಿ' ಉದ್ದೇಶವಾಗಿದೆ.
'11ಜಿ' ಮಾದರಿ ಆರ್ಥಿಕತೆ ಏನು?
'11ಜಿ' ಮಾದರಿ ಆರ್ಥಿಕತೆಯನ್ನು ಬಲವಾದ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ವಿನ್ಯಾಸ ಮಾಡಿದೆ. ಬಜೆಟ್‌ನಲ್ಲಿ ಪ್ರಸ್ತಾಪಿಸಿದ ನಿರ್ದಿಷ್ಟ "ಜಿ" ಅಂಶಗಳು ಕರ್ನಾಟಕದ ಸಶಕ್ತ ಹಾಗೂ ಸುಸ್ಥಿರ ಅಭಿವೃದ್ಧಿ ಮಾದರಿ ರೂಪಿಸುವ ಉದ್ದೇಶ ಹೊಂದಿದೆ. ಅವುಗಳನ್ನೇ ʼ11ಜಿʼ ಮಾದರಿ ಆರ್ಥಿಕತೆಗಳೆಂದು ತಜ್ಞರು ವ್ಯಾಖ್ಯಾನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ ʼ11ಜಿʼ ಮಾದರಿಯ ಆರ್ಥಿಕತೆಯನ್ನು ʼಗ್ಯಾರಂಟಿ ಎಕಾನಮಿ (ಕಲ್ಯಾಣ ಹಾಗೂ ಲಿಂಗ ಸಮಾನತೆ), ಗುಡ್ ಪಬ್ಲಿಕ್ ಎಜುಕೇಶನ್ ( ಸರ್ವರ ಏಳಿಗೆ ಬಯಸುವ ಸಾಮರ್ಥ್ಯದ ಸಾರ್ವಜನಿಕ ಶಿಕ್ಷಣ), ಗುಡ್ ಹೆಲ್ತ್ ಟು ಆಲ್ (ಸಮಗ್ರ ಆರೋಗ್ಯ- ಸದೃಢ ಕರ್ನಾಟಕ), ಗ್ರಾಸ್ ರೂಟ್ ಎಕಾನಮಿ (ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮ), ಗುಡ್ ಗವರ್ನೆನ್ಸ್ (ಜನಸ್ನೇಹಿ ಆಡಳಿತ), ಗಿಗ್ ಎಕಾನಮಿ (ಕಾರ್ಮಿಕ ಕಲ್ಯಾಣ ಕಾರ್ಯಕ್ರಮ), ಜಿಯೋಗ್ರಾಫಿಕಲ್ ಈಕ್ವಾಲಿಟಿ ( ಪ್ರಾದೇಶಿಕ ಅಸಮಾನತೆ ನಿವಾರಣೆ), ಗ್ಲೋಬಲ್ ಟ್ರೇಡ್ ಎಕಾನಮಿ (ವ್ಯಾಪಾರ ಮತ್ತು ಕೈಗಾರಿಕಾಭಿವೃದ್ಧಿ), ಗ್ಲೋಬ್ ಟ್ರೋಟಿಂಗ್ ಎಕಾನಮಿ (ಪ್ರವಾಸೋದ್ಯಮ ಆರ್ಥಿಕತೆ), ಗ್ರೀನ್ ಎಕಾನಮಿ (ನವೀಕರಿಸಬಹುದಾದ ಇಂಧನ ಸೇರಿದಂತೆ ಪರಿಸರ ಪೂರಕ ಆರ್ಥಿಕ ಚಟುವಟಿಕೆ), ಗ್ರೋಯಿಂಗ್ ಅರ್ಬನ್ ಎಕಾನಮಿ (ನಗರ ಕೇಂದ್ರಿತ ಸುಸ್ಥಿರ ಆರ್ಥಿಕತೆ) ಪ್ರಮುಖ ಆರ್ಥಿಕ ಮಾದರಿಗಳಾಗಿವೆ.
ಈ ಆರ್ಥಿಕ ಪ್ರಮೇಯ ಆಧಾರವಾಗಿಟ್ಟುಕೊಂಡು ನಾಡಿನ ಅಭಿವೃದ್ಧಿ ರಥ ಎಳೆಯಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಕರ್ನಾಟಕದ 45ಕ್ಕೂ ಹೆಚ್ಚಿನ ಉತ್ಪನ್ನಗಳಿಗೆ ಜಿಐ ಮಾನ್ಯತೆಗಳಿವೆ. ಈ ಮಾನ್ಯತೆಗಳು ಜನರ ಪಾರಂಪರಿಕ ಕ್ರಿಯಾಶೀಲತೆಗೆ ಸಾಕ್ಷಿಯಾಗಿದ್ದು, ಹೊಸ ಉದ್ಯೋಗಗಳ ಸೃಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ರಾಜ್ಯದ ಪ್ರಮುಖ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಆಡಳಿತ ವ್ಯವಸ್ಥೆ ಬಲಪಡಿಸುತ್ತಿದ್ದೇವೆ. ಚುನಾವಣಾ ಪ್ರಣಾಳಿಕೆಯಂತೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಇದೇ ವರ್ಷ 56,432 ಹುದ್ದೆಗಳನ್ನು ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

