Karnataka Budget 2026| ರಾಮನಗರ, ಶಿಡ್ಲಘಟ್ಟದಲ್ಲಿ ಸಿಲ್ಕ್‌ ಪಾರ್ಕ್‌; ರೇಷ್ಮೆ ಬೆಳೆಗಾರರಿಗೆ ಬಜೆಟ್‌ನಲ್ಲಿ ಬಂಪರ್‌
x
ಸಿದ್ದರಾಮಯ್ಯ

Karnataka Budget 2026| ರಾಮನಗರ, ಶಿಡ್ಲಘಟ್ಟದಲ್ಲಿ ಸಿಲ್ಕ್‌ ಪಾರ್ಕ್‌; ರೇಷ್ಮೆ ಬೆಳೆಗಾರರಿಗೆ ಬಜೆಟ್‌ನಲ್ಲಿ ಬಂಪರ್‌

ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ರೀಲಿಂಗ್ ಶೆಡ್ ನಿರ್ಮಾಣ, ಹನಿ ನೀರಾವರಿ ಘಟಕ ಮುಂತಾದ ಚಟುವಟಿಕೆಗಳಿಗೆ ಕಳೆದ ಮೂರು ವರ್ಷಗಳಲ್ಲಿ 531 ಕೋಟಿ ರೂ. ಮೊತ್ತದ ಸಹಾಯಧನವನ್ನು 2 ಲಕ್ಷ ಫಲಾನುಭವಿಗಳಿಗೆ ಒದಗಿಸಲಾಗಿದೆ.


ರೇಷ್ಮೆನಗರಿ ರಾಮನಗರ, ಶಿಡ್ಲಘಟ್ಟ, ಹಾವೇರಿ, ಮೈಸೂರಿನ ತಾಂಡವಪುರ ಹಾಗೂ ಕಲಬುರಗಿಯಲ್ಲಿ ಸಿಲ್ಕ್ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ರಾಜ್ಯದ ಪ್ರಮುಖ 15 ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಸಂಪೂರ್ಣ ನಗದುರಹಿತ, ಡಿಜಿಟಲ್ ವಹಿವಾಟು, ಇ-ಹರಾಜು ಮತ್ತು ಇ-ಪಾವತಿ ವ್ಯವಸ್ಥೆ ಆರಂಭಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉತ್ಪಾದಿಸುವ ರೇಷ್ಮೆಗೂಡನ್ನು ಸರ್ಕಾರದ ಯಾವುದೇ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ರತಿ ಕೆ.ಜಿ. ಗೂಡಿಗೆ ನೀಡುತ್ತಿರುವ 10 ರೂ. ಸಾಗಾಣಿಕಾ ವೆಚ್ಚವನ್ನು 20 ರೂ.ಗಳಿಗೆ ಹೆಚ್ಚಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಭಾರತದ ರೇಷ್ಮೆ ಉತ್ಪಾದನೆಯಲ್ಲಿ ಶೇ.46ರಷ್ಟು ಪಾಲು ಹೊಂದಿರುವ ಕರ್ನಾಟಕವು ದೇಶದ 'ರೇಷ್ಮೆ ರಾಜಧಾನಿ'ಯಾಗಿದೆ. ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ರೀಲಿಂಗ್ ಶೆಡ್ ನಿರ್ಮಾಣ, ಹನಿ ನೀರಾವರಿ ಘಟಕ ಮುಂತಾದ ಚಟುವಟಿಕೆಗಳಿಗೆ ಕಳೆದ ಮೂರು ವರ್ಷಗಳಲ್ಲಿ 2 ಲಕ್ಷ ಫಲಾನುಭವಿಗಳಿಗೆ ಒಟ್ಟು 531 ಕೋಟಿ ರೂ. ಮೊತ್ತದ ಸಹಾಯಧನವನ್ನು ಒದಗಿಸಲಾಗಿದೆ. ರೇಷ್ಮೆ ಇಲಾಖೆಯ ಆಯ್ದ ಕ್ಷೇತ್ರಗಳಲ್ಲಿ ಲಭ್ಯವಿರುವ ಜಮೀನಿನಲ್ಲಿ ರೈತ ಉದ್ಯಮಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಸಹಯೋಗದೊಂದಿಗೆ ಚಾಕಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಹೈನುಗಾರಿಕೆ ಮತ್ತು ಪಶುಸಂಗೋಪನೆ

1 ಕೋಟಿ ಲೀಟರ್ ಮುಟ್ಟಿದ ಹಾಲು ಸಂಗ್ರಹ: ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಪ್ರತಿದಿನ 8.75 ಲಕ್ಷ ಹಾಲು ಉತ್ಪಾದಕರಿಂದ 81.78 ಲಕ್ಷ ಲೀಟರ್ ಹಾಲು ಸಂಗ್ರಹಣೆ ಮಾಡಲಾಗುತ್ತಿತ್ತು. ಪ್ರಸ್ತುತ, ಪ್ರತಿದಿನ 9.07 ಲಕ್ಷ ಹಾಲು ಉತ್ಪಾದಕರಿಂದ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಹಾಲು ಪೂರೈಕೆದಾರರಿಗೆ ಬಾಕಿ ಇದ್ದ 609 ಕೋಟಿ ರೂ. ಪ್ರೋತ್ಸಾಹಧನವನ್ನು ಒಳಗೊಂಡಂತೆ, ಇದುವರೆಗೂ ಒಟ್ಟಾರೆ 4,523 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗಿದೆ.

* ಅನುಗ್ರಹ ಯೋಜನೆ ಮತ್ತು ಕುರಿಗಾಹಿಗಳ ಕಲ್ಯಾಣ: ಅನುಗ್ರಹ ಯೋಜನೆಯಡಿ ಕುರಿ, ಮೇಕೆ ಮತ್ತು ರಾಸುಗಳ ಆಕಸ್ಮಿಕ ಸಾವಿಗೆ ನೀಡುವ ಪರಿಹಾರಧನವನ್ನು ಹೆಚ್ಚಿಸಲಾಗಿದ್ದು, ಇದುವರೆಗೂ 1.70 ಲಕ್ಷ ಫಲಾನುಭವಿಗಳಿಗೆ 101 ಕೋಟಿ ರೂ. ವಿತರಿಸಲಾಗಿದೆ. 'ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ) ಅಧಿನಿಯಮ, 2025' ಜಾರಿಗೆ ತರಲಾಗಿದ್ದು, ಇಲ್ಲಿಯವರೆಗೆ 6,702 ಕುರಿಗಾಹಿಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ.

* ಪಶುವೈದ್ಯಕೀಯ ಮೂಲಸೌಕರ್ಯ: ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 300 ಪಶುವೈದ್ಯ ಸಂಸ್ಥೆಗಳಿಗೆ ನೂತನ ಕಟ್ಟಡಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ. 2026-27ನೇ ಸಾಲಿನಲ್ಲಿ ನಬಾರ್ಡ್ ಸಹಯೋಗದೊಂದಿಗೆ ಹೊಸದಾಗಿ 100 ಕಟ್ಟಡಗಳನ್ನು ನಿರ್ಮಿಸಲಾಗುವುದು. ಜೊತೆಗೆ, ಜಿಲ್ಲಾ ಹಂತದಲ್ಲಿರುವ ತಜ್ಞ ಪಶುವೈದ್ಯಕೀಯ ವಿಶೇಷ ಸೇವೆ ವ್ಯವಸ್ಥೆಯನ್ನು ತಾಲ್ಲೂಕು ಹಂತಕ್ಕೆ ವಿಸ್ತರಿಸಲು 20 ತಾಲ್ಲೂಕುಗಳ ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್‌ಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 15 ತಾಲ್ಲೂಕು ಪಶು ಆಸ್ಪತ್ರೆಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಪಾಲಿಕ್ಲಿನಿಕ್‌ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.

* ಸಹಾಯಧನ ಮತ್ತು ಪ್ರೋತ್ಸಾಹ: ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ಪ್ರೋತ್ಸಾಹಿಸಲು ಆಯ್ದ 10,000 ಫಲಾನುಭವಿಗಳಿಗೆ ಶೇ.25ರಷ್ಟು ಸಹಾಯಧನದಲ್ಲಿ ಕುರಿ-ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ. ಹೈನುಗಾರಿಕೆ ಪ್ರೋತ್ಸಾಹಿಸಲು ಆಯ್ದ 10,000 ಫಲಾನುಭವಿಗಳಿಗೆ ಶೇ.25ರಷ್ಟು ಸಹಾಯಧನದಲ್ಲಿ ಹಸು, ಎಮ್ಮೆ ಖರೀದಿಸಲು ಪ್ರೋತ್ಸಾಹಧನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗಳಿಗೆ ಒಟ್ಟು 40 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.

ಮೈಸೂರಿನಲ್ಲಿ ಮೇಕೆ ತಳಿ ಸಂವರ್ಧನಾ ಕೇಂದ್ರ

ಸ್ಥಳೀಯ ಮೇಕೆ ತಳಿಗಳ ಉನ್ನತೀಕರಣಕ್ಕಾಗಿ ಮೈಸೂರಿನಲ್ಲಿ ಬೋಯರ್ ಮೇಕೆ ತಳಿ ಸಂವರ್ಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಬಂಡೂರು ಕುರಿ ತಳಿ ಸಂವರ್ಧನಾ ಕೇಂದ್ರದ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆಗಳನ್ನು ನಿವಾರಿಸಲು 'ವರ್ಷಕ್ಕೊಂದು ಕರು' ಎಂಬ ಘೋಷವಾಕ್ಯದೊಂದಿಗೆ ರಾಜ್ಯದ 1,000 ಗ್ರಾಮ ಪಂಚಾಯಿತಿಗಳಲ್ಲಿ 'ಫಲಧಾರೆ' ಶಿಬಿರಗಳನ್ನು 5 ಕೋಟಿ ರೂ. ವೆಚ್ಚದಲ್ಲಿ ಏರ್ಪಡಿಸಲಾಗುವುದು.

ಪಶುಗಳಲ್ಲಿನ ರೋಗಗಳನ್ನು ನಿಖರವಾಗಿ ಪತ್ತೆಹಚ್ಚಲು ರಾಜ್ಯದಲ್ಲಿ ಪ್ರಪ್ರಥಮವಾಗಿ ಬೆಂಗಳೂರು ಹಾಗೂ ಬೀದರ್‌ನ ಪಶುವೈದ್ಯಕೀಯ ಮಹಾವಿದ್ಯಾಲಯದ ಪಶು ಆಸ್ಪತ್ರೆಗಳಲ್ಲಿ ಜಾನುವಾರುಗಳ ಸಿ.ಟಿ. ಸ್ಕ್ಯಾನಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರವಾಗಿ, ಸಂತಾನಹರಣ ನಿಯಂತ್ರಣವನ್ನು ವೈಜ್ಞಾನಿಕವಾಗಿ ಜಾರಿಗೆ ತರಲು ಪಶುವೈದ್ಯರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಬೆಂಗಳೂರು ಹಾಗೂ ಬೀದರ್‌ನಲ್ಲಿ 'ಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರ'ವನ್ನು ಸ್ಥಾಪಿಸಲಾಗುವುದು.

ಮೀನುಗಾರಿಕೆ ಕ್ಷೇತ್ರಕ್ಕೆ ಉತ್ತೇಜನ

* ಮೀನುಗಾರರಿಗೆ ಉಚಿತವಾಗಿ ನೀಡುವ ಮೀನುಗಾರಿಕಾ ಸಲಕರಣೆ ಕಿಟ್ ಮೌಲ್ಯದ ದರವನ್ನು 10,000 ರೂ.ಗಳಿಂದ 20,000 ರೂ.ಗಳಿಗೆ ಹೆಚ್ಚಿಸಿ ಮೀನುಗಾರಿಕೆ ಚಟುವಟಿಕೆಗಳನ್ನು ಉತ್ತೇಜಿಸಲಾಗುವುದು.

* ಜೈವಿಕ ತಂತ್ರಜ್ಞಾನದ ಉದ್ಯಮಗಳು, ನವೀನ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಮುದ್ರ ಕೃಷಿಯನ್ನು (Mariculture) ಪ್ರೋತ್ಸಾಹಿಸಲು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ 'ಸೆಂಟರ್ ಆಫ್ ಎಕ್ಸಲೆನ್ಸ್' (Centre of Excellence) ಸ್ಥಾಪಿಸಲಾಗುವುದು.

* ಸಾರ್ವಜನಿಕರಿಗೆ ಸ್ವಚ್ಛ ಮತ್ತು ಗುಣಮಟ್ಟದ ಮೀನು ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರಿನಲ್ಲಿ ಮತ್ಸ್ಯದರ್ಶಿನಿಗಳನ್ನು ಸ್ಥಾಪಿಸಲಾಗುವುದು.

* ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆಗಳನ್ನು ನಿರ್ಮಿಸಲಾಗುವುದು. ರಾಜ್ಯದಲ್ಲಿ ಮೀನುಗಾರಿಕಾ ಸಂಪರ್ಕ ರಸ್ತೆಗಳ (Link roads) ನಿರ್ವಹಣೆಗಾಗಿ 20 ಕೋಟಿ ರೂ.ಗಳನ್ನು ಒದಗಿಸಲಾಗುವುದು.

* ಒಳನಾಡು ಮೀನುಗಾರಿಕೆಯು ಗ್ರಾಮೀಣ ಜೀವನೋಪಾಯ ಮತ್ತು ಆಹಾರ ಭದ್ರತೆಗೆ ಬಹುಮುಖ್ಯವಾಗಿದೆ. ನದಿ, ಕೆರೆ, ಕೃಷಿ ಹೊಂಡ ಹಾಗೂ ಜಲಾಶಯಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮೀನು ಉತ್ಪಾದನೆ ಹೆಚ್ಚಿಸಲು ಮೀನುಗಾರರಿಗೆ ತರಬೇತಿ ನೀಡಿ, ಸ್ಥಿರ ಆದಾಯ ಗಳಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.

Read More
Next Story