
ಶ್ರೀ ಮಾತಾ ವೈಷ್ಣೋದೇವಿ ದೇವಾಲಯ
Karnataka Budget 2026 : ವೈಷ್ಣೋದೇವಿ ಯಾತ್ರಾರ್ಥಿಗಳಿಗೆ 5 ಸಾವಿರ ರೂ. ನೆರವು
ಕರ್ನಾಟಕದಿಂದ ಜಮ್ಮು-ಕಾಶ್ಮೀರದ ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರೆ ಕೈಗೊಳ್ಳುವ ಭಕ್ತಾದಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ತಲಾ 5,000 ರೂಪಾಯಿಗಳ ಸಹಾಯಧನವನ್ನು ಘೋಷಿಸಿದೆ.
ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಜರಾಯಿ (ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ) ಇಲಾಖೆಗೆ ಸಂಬಂಧಿಸಿದಂತೆ ಹಲವು ಜನಪ್ರಿಯ ಹಾಗೂ ಅಭಿವೃದ್ಧಿಪರ ಯೋಜನೆಗಳನ್ನು ಪ್ರಕಟಿಸಲಾಗಿದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಆರ್ಥಿಕ ನೆರವು, ಪ್ರಸಿದ್ಧ ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಹಾಗೂ ಹೊರರಾಜ್ಯಗಳಲ್ಲಿರುವ ಕರ್ನಾಟಕದ ಛತ್ರಗಳ ನವೀಕರಣಕ್ಕೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ.
ಕರ್ನಾಟಕದಿಂದ ಜಮ್ಮು-ಕಾಶ್ಮೀರದ ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರೆ ಕೈಗೊಳ್ಳುವ ಭಕ್ತಾದಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ತಲಾ 5,000 ರೂಪಾಯಿಗಳ ಸಹಾಯಧನವನ್ನು ಘೋಷಿಸಿದೆ. ಈ ಮೊತ್ತವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ವಿತರಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಐದು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇದಲ್ಲದೆ, ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ 'ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ' ಮತ್ತು 'ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ'ಗಳ ಮೂಲಸೌಕರ್ಯಗಳನ್ನು ಜಾಗತಿಕ ಮಟ್ಟಕ್ಕೆ ಏರಿಸುವ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳುವ ಉದ್ದೇಶದಿಂದ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲು ಬಜೆಟ್‌ನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಹೊರರಾಜ್ಯಗಳ ಪುಣ್ಯಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಸುಸಜ್ಜಿತ ಛತ್ರ
ಹೊರರಾಜ್ಯಗಳ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಕನ್ನಡಿಗರಿಗೆ ಅನುಕೂಲ ಕಲ್ಪಿಸಲು, ಅಲ್ಲಿನ ಕರ್ನಾಟಕ ರಾಜ್ಯದ ಛತ್ರಗಳ ನವೀಕರಣಕ್ಕೆ ಸರ್ಕಾರ ಮುಂದಾಗಿದೆ. ವಾರಣಾಸಿ ಮತ್ತು ತುಳಜಾಪುರದಲ್ಲಿ ಪ್ರಸ್ತುತ ಶಿಥಿಲಾವಸ್ಥೆಯಲ್ಲಿರುವ ಛತ್ರಗಳ ಜಾಗದಲ್ಲಿ ಸಂಪೂರ್ಣ ಹೊಸ ಛತ್ರಗಳನ್ನು ನಿರ್ಮಿಸಲಾಗುವುದು. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಜಾಗದಲ್ಲಿರುವ ಹಾಲಿ ಛತ್ರವನ್ನು ಸಮಗ್ರವಾಗಿ ನವೀಕರಿಸಲು ಹಾಗೂ ಶ್ರೀಶೈಲಂ ಕ್ಷೇತ್ರದಲ್ಲಿ ಭಕ್ತರಿಗಾಗಿ ಹೊಸದಾಗಿ 'ಯಾತ್ರಿ ನಿವಾಸ' ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ಅನ್ಯರಾಜ್ಯಗಳಿಗೆ ತೆರಳುವ ರಾಜ್ಯದ ಭಕ್ತರಿಗೆ ಸುಸಜ್ಜಿತ ಹಾಗೂ ಕೈಗೆಟುಕುವ ವಸತಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ.
ಕಲ್ಯಾಣಿಗಳ ಜೀರ್ಣೋದ್ಧಾರ ಹಾಗೂ ಬೆಂಗಳೂರಲ್ಲಿ ವಿದ್ಯಾರ್ಥಿ ನಿಲಯ
ದೇವಾಲಯಗಳ ಆವರಣದಲ್ಲಿರುವ ಪಾರಂಪರಿಕ ಜಲಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ 'ಜಲ ನಿಧಿ ಕಲ್ಯಾಣಿಗಳ ಪುನಃಶ್ಚೇತನ ಯೋಜನೆ'ಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ 259 ಕಲ್ಯಾಣಿಗಳನ್ನು ಐದು ಕೋಟಿ ರೂ. ವೆಚ್ಚದಲ್ಲಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಪುನರುಜ್ಜೀವನಗೊಳಿಸಲಾಗುವುದು. ಇದರ ಜೊತೆಗೆ, ಬೆಂಗಳೂರಿನ ಹೃದಯ ಭಾಗವಾದ ಕೆಂಪೇಗೌಡ ವೃತ್ತದಲ್ಲಿರುವ (ಮೆಜೆಸ್ಟಿಕ್) ಇಲಾಖೆಗೆ ಸೇರಿದ ಬಂಡಿಶೇಷಮ್ಮ ಛತ್ರದ ಜಾಗದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) ವಾಣಿಜ್ಯ ಸಂಕೀರ್ಣ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ವಸತಿ ಕಲ್ಪಿಸುವ ಬೃಹತ್ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗುವುದು. ಇಲಾಖೆಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ತರಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವರ್ಗಾವಣೆಯನ್ನು ಇನ್ಮುಂದೆ ತಂತ್ರಜ್ಞಾನ ಆಧಾರಿತ ಕೌನ್ಸೆಲಿಂಗ್ ಮೂಲಕವೇ ನಡೆಸಲು ತೀರ್ಮಾನಿಸಲಾಗಿದೆ.

