
ಅಲ್ಪಸಂಖ್ಯಾತ ಶಾಲಾ ವಿದ್ಯಾರ್ಥಿಗಳು
Karnataka Budget 2026 : ಸಂತ ಶಿಶುನಾಳ ಶರೀಫರ ಹೆಸರಲ್ಲಿ ಹೊಸ ಶಾಲೆ, 5,000 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ತಾಂತ್ರಿಕ ಹಾಗೂ ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ ನೀಡಲು ಐದು ಸಾವಿರ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಸಲು ತಲಾ 50,000 ರೂ.ಗಳನ್ನು ಒದಗಿಸಲಾಗುತ್ತಿದೆ.
ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಭಾರಿ ಆದ್ಯತೆ ನೀಡಲಾಗಿದ್ದು, ಶೈಕ್ಷಣಿಕ ಕ್ರಾಂತಿ, ಉದ್ಯೋಗ ಸೃಷ್ಟಿ ಹಾಗೂ ಮಹಿಳಾ ಸಬಲೀಕರಣಕ್ಕೆ ಪೂರಕವಾದ ಹಲವು ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ. ಜೈನ, ಬೌದ್ಧ ಮತ್ತು ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಮೀಸಲಿಟ್ಟಿರುವುದು ಈ ಬಾರಿಯ ಆಯವ್ಯಯದ ಪ್ರಮುಖ ಹೈಲೈಟ್ಸ್ ಆಗಿದೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ತಾಂತ್ರಿಕ ಹಾಗೂ ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ ನೀಡಲು ಐದು ಸಾವಿರ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಸಲು ತಲಾ 50,000 ರೂ.ಗಳನ್ನು ಒದಗಿಸಲಾಗುತ್ತಿದೆ. ಶೈಕ್ಷಣಿಕ ವಲಯದಲ್ಲಿ ಮಹತ್ವದ ಹೆಜ್ಜೆಯಾಗಿ, ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸಿಬಿಎಸ್‌ಇ ಪಠ್ಯಕ್ರಮದ 10 ಹೊಸ ವಸತಿ ಶಾಲೆಗಳನ್ನು ಆರಂಭಿಸಲಾಗುತ್ತಿದ್ದು, 2026-27ನೇ ಸಾಲಿನಲ್ಲಿ ಇಂಥದ್ದೇ 25 ಶಾಲೆಗಳನ್ನು ಹೊಸದಾಗಿ ತೆರೆಯಲಾಗುವುದು. ಇದರ ಜೊತೆಗೆ, 400 ಕೋಟಿ ರೂ. ವೆಚ್ಚದಲ್ಲಿ 100 ಮೌಲಾನಾ ಆಜಾದ್ ಮಾದರಿ ಹಾಗೂ ಉರ್ದು ಶಾಲೆಗಳನ್ನು ಕೆಪಿಎಸ್ ಮಾದರಿಯಲ್ಲಿ ಉನ್ನತೀಕರಿಸಲಾಗುವುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ 25 ಹೊಸ ಮೆಟ್ರಿಕ್ ನಂತರದ ವಸತಿನಿಲಯಗಳ ಸ್ಥಾಪನೆ, ಮೊರಾರ್ಜಿ ದೇಸಾಯಿ ಹಾಗೂ ಅಬ್ದುಲ್ ಕಲಾಂ ಶಾಲೆಗಳಲ್ಲಿ ಪಿಯುಸಿ ವಿಜ್ಞಾನ-ವಾಣಿಜ್ಯ ವಿಭಾಗಗಳ ಆರಂಭ ಹಾಗೂ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳ ತರಬೇತಿಗಾಗಿ ನಾಲ್ಕು ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಯುವಜನರಿಗೆ ಉದ್ಯೋಗ, ಮಹಿಳಾ ಸಬಲೀಕರಣಕ್ಕೆ ಒತ್ತು
ನಿರುದ್ಯೋಗಿ ಯುವಕ-ಯುವತಿಯರನ್ನು ಉದ್ಯಮಿಗಳನ್ನಾಗಿ ರೂಪಿಸಲು ಫಾಸ್ಟ್ ಫುಡ್ ಟ್ರಕ್, ಟ್ರೈಲರ್ ಅಥವಾ ಮೊಬೈಲ್ ಕಿಚನ್ ಕಿಯೋಸ್ಕ್ ಆರಂಭಿಸಲು ಗರಿಷ್ಠ ಮೂರು ಲಕ್ಷ ರೂಪಾಯಿ ಅಥವಾ ಘಟಕ ವೆಚ್ಚದ ಶೇ.75ರಷ್ಟು ಸಹಾಯಧನ ನೀಡುವ ವಿನೂತನ ಯೋಜನೆಯನ್ನು ಪರಿಚಯಿಸಲಾಗಿದೆ. ಮಹಿಳಾ ಸ್ವ-ಸಹಾಯ ಗುಂಪುಗಳ ಸ್ವಯಂ ಉದ್ಯೋಗಕ್ಕೆ ನೆರವಾಗಲು ಅಲ್ಪಸಂಖ್ಯಾತ ಮಹಿಳಾ ಕೋ-ಆಪರೇಟಿವ್ ಸೊಸೈಟಿಗಳನ್ನು ಸ್ಥಾಪಿಸಲಾಗುವುದು. ಬೆಂಗಳೂರಿನಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ 100 ಸಾಮರ್ಥ್ಯದ ನಾಲ್ಕು ಹೊಸ ವಸತಿನಿಲಯಗಳು ತಲೆಎತ್ತಲಿವೆ. ಅಲ್ಪಸಂಖ್ಯಾತ ಸಮುದಾಯದ ನಿರ್ಗತಿಕರಿಗಾಗಿ ಎರಡು ಮಹಿಳಾ ವೃದ್ಧಾಶ್ರಮಗಳನ್ನು ತೆರೆಯಲಾಗುತ್ತಿದ್ದು, ವಕ್ಫ್ ಸಂಸ್ಥೆಗಳ ಅಡಿಯಲಿರುವ 31 ಮಹಿಳಾ ಪಿಯು ಕಾಲೇಜುಗಳನ್ನು ಪದವಿ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಜೈನ, ಬೌದ್ಧ, ಸಿಖ್ ಮತ್ತು ಕ್ರೈಸ್ತ ಸಮುದಾಯಗಳಿಗೆ ಯೋಜನೆಗಳು
ಅಲ್ಪಸಂಖ್ಯಾತ ಸಮುದಾಯಗಳ ಏಳಿಗೆಗೆ ಆದ್ಯತೆ ನೀಡಿರುವ ಸರ್ಕಾರ, ಜೈನ, ಬೌದ್ಧ ಹಾಗೂ ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಿಟ್ಟಿದೆ. ಬೌದ್ಧ ಧರ್ಮದ ಧಮ್ಮಾಚಾರಿಗಳಿಗೆ ಮಾಸಿಕ 6,000 ರೂ. ಗೌರವಧನ ಘೋಷಿಸಲಾಗಿದೆ. ಹಿರಿಯ ನಾಗರಿಕರ ಆರೈಕೆಗಾಗಿ ಕ್ರೈಸ್ತ ಸಂಸ್ಥೆಗಳು ನಡೆಸುವ 10 ವೃದ್ಧಾಶ್ರಮಗಳಲ್ಲಿ ಸಮಗ್ರ ಜೆರಿಯಾಟ್ರಿಕ್ ಪ್ಯಾಲಿಯೇಟಿವ್ ಕೇರ್ ಘಟಕಗಳನ್ನು ಸ್ಥಾಪಿಸಲು 5 ಕೋಟಿ ರೂ. ನೀಡಲಾಗುವುದು. ಹಜ್ ಯಾತ್ರಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ಹಾಗೂ ಕಲಬುರಗಿಯಲ್ಲಿ ನೂತನ ಹಜ್ ಭವನಗಳ ನಿರ್ಮಾಣ, ಬೀದರ್‌ನ ನಾನಕ್ ಝೀರಾ ಸಾಹೇಬ್ ಗುರುದ್ವಾರದಲ್ಲಿ ಗ್ರಂಥಾಲಯ ಸ್ಥಾಪನೆ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುಸ್ತಕಗಳನ್ನು ಉರ್ದು ಭಾಷೆಗೆ ಅನುವಾದಿಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಪ್ರಕಟಿಸಲಾಗಿದೆ.

