
Karnataka Budget 2026 : ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪ; ವಿಕ್ಟೋರಿಯಾ ಆಸ್ಪತ್ರೆ ಮರುನಾಮಕರಣ, 2500 ಹುದ್ದೆಗಳ ಭರ್ತಿ
ವಿಜಯಪುರ ಮತ್ತು ಕೋಲಾರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಪುತ್ತೂರು ಹಾಗೂ ಬಾಗಲಕೋಟೆಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರಗಳಿಗೆ ಬೃಹತ್ ಅನುದಾನವನ್ನು ಘೋಷಿಸುವ ಮೂಲಕ ಸರ್ಕಾರ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದೆ. ಗ್ರಾಮೀಣ ಭಾಗದಿಂದ ಹಿಡಿದು ರಾಜಧಾನಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳವರೆಗೆ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಜೊತೆಗೆ, ಬಡರೋಗಿಗಳಿಗೆ ಸುಲಭವಾಗಿ ಮತ್ತು ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ಒದಗಿಸುವ ಹಲವು ಕ್ರಾಂತಿಕಾರಕ ಯೋಜನೆಗಳನ್ನು ಪ್ರಕಟಿಸಲಾಗಿದೆ.
ಹೊಸ ಆಸ್ಪತ್ರೆಗಳ ಸ್ಥಾಪನೆ ಮತ್ತು ಮೇಲ್ದರ್ಜೆಗೆ ಬೃಹತ್ ಅನುದಾನ
ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಭಾರಿ ಮೊತ್ತವನ್ನು ಮೀಸಲಿಡಲಾಗಿದೆ. 2026-27ನೇ ಸಾಲಿನಲ್ಲಿ ವೈದ್ಯಕೀಯ ಕಾಲೇಜುಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ 620 ಕೋಟಿ ರೂ. ಹಾಗೂ ಉಪಕರಣಗಳ ಖರೀದಿಗೆ 220 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಕಾರವಾರ ಮತ್ತು ಯಾದಗಿರಿಯಲ್ಲಿ ತಲಾ 100 ಕೋಟಿ ರೂ. ವೆಚ್ಚದಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು. ವಿಜಯಪುರ ಮತ್ತು ಕೋಲಾರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಪುತ್ತೂರು ಹಾಗೂ ಬಾಗಲಕೋಟೆಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಆರೋಗ್ಯ ಇಲಾಖೆಯಡಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಸಕ್ತ ಸಾಲಿನಲ್ಲಿ 900 ಕೋಟಿ ರೂ. ಒದಗಿಸಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆ ಮರುನಾಮಕರಣ, ಜಯದೇವ ವಿಸ್ತರಣೆ
ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯನ್ನು ಇನ್ನು ಮುಂದೆ 'ಶಾಂತವೇರಿ ಗೋಪಾಲಗೌಡ ಆಸ್ಪತ್ರೆ' ಎಂದು ಮರುನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನ ಗೋವಿಂದರಾಜನಗರದಲ್ಲಿರುವ ಬಿಬಿಎಂಪಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಹೊಸ ಪ್ರಾದೇಶಿಕ ಕೇಂದ್ರವನ್ನು 15 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಮೈಸೂರಿನ 400 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆಯನ್ನು 180 ಕೋಟಿ ರೂ. ವೆಚ್ಚದಲ್ಲಿ 600 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲಾಗುವುದು. ಇದಲ್ಲದೆ, ಹುಬ್ಬಳ್ಳಿಯಲ್ಲಿ 236 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಯದೇವ ಹೃದ್ರೋಗ ಪ್ರಾದೇಶಿಕ ಕೇಂದ್ರವನ್ನು ಶೀಘ್ರವೇ ಲೋಕಾರ್ಪಣೆ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಮಂಡಿಸಲಾಗಿದೆ. ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಜನರಿಗಾಗಿ ಮುನಿರಾಬಾದ್‌ನಲ್ಲಿ ಕ್ಯಾನ್ಸರ್ ಆಸ್ಪತ್ರೆ ತಲೆಎತ್ತಲಿದೆ.
ಆಯುಷ್ಮಾನ್ ಪ್ಯಾಕೇಜ್ ಪರಿಷ್ಕರಣೆ, ಡಿಜಿಟಲ್ ಹೆಲ್ತ್‌ಗೆ ಒತ್ತು
ಬಡರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಚಿಕಿತ್ಸಾ ದರಗಳನ್ನು ಪರಿಷ್ಕರಿಸಿ ಹೆಚ್.ಬಿ.ಪಿ.-2022 ಪ್ಯಾಕೇಜ್ ದರಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 400 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲಾಗಿದೆ. ಆರೋಗ್ಯ ಸೇವೆಯನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ 'ಸಮಸ್ತ' ಆ್ಯಪ್ ಮೂಲಕ ದಾಖಲೆಗಳ ನಿರ್ವಹಣೆ, ಯುಪಿಐ ಆಧಾರಿತ ಶುಲ್ಕ ಪಾವತಿ ಹಾಗೂ ಆಸ್ಪತ್ರೆಗಳಲ್ಲಿ ಟೆಲಿ-ರೇಡಿಯಾಲಜಿ ಮತ್ತು ಸ್ಮಾರ್ಟ್ ಲೇಬರ್ ರೂಮ್‌ಗಳನ್ನು ಅಳವಡಿಸಲಾಗುವುದು. ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿದೆ.
ತಾಯಿ-ಮಕ್ಕಳ ಆರೋಗ್ಯ ಮತ್ತು ವಿಶಿಷ್ಟ ಉಪಕ್ರಮಗಳು
ತಾಯಂದಿರ ಮರಣ ಪ್ರಮಾಣ ಶೂನ್ಯಕ್ಕೆ ಇಳಿಸುವ ಅಭಿಯಾನದ ಫಲವಾಗಿ ರಾಜ್ಯದಲ್ಲಿ ಮರಣ ಪ್ರಮಾಣ ಶೇ.24ರಷ್ಟು ಇಳಿಕೆಯಾಗಿದೆ. 86 ತಾಲೂಕುಗಳಲ್ಲಿರುವ ಪೌಷ್ಟಿಕ ಪುನಶ್ಚೇತನ ಕೇಂದ್ರಗಳನ್ನು ಉಳಿದ 63 ತಾಲೂಕುಗಳಿಗೂ ವಿಸ್ತರಿಸಲು 6 ಕೋಟಿ ರೂ. ಮೀಸಲಿಡಲಾಗಿದೆ. ಟೈಪ್-1 ಮಧುಮೇಹವಿರುವ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಇನ್ಸುಲಿನ್ ಪೆನ್ ವಿತರಿಸಲಾಗುವುದು. ವಾಣಿ ವಿಲಾಸ್ ಆಸ್ಪತ್ರೆ ಮತ್ತು ಕಲಬುರಗಿಯ ಜಿಮ್ಸ್‌ನಲ್ಲಿ ತಲಾ ಒಂದು ಕೋಟಿ ರೂ. ವೆಚ್ಚದಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗುವುದು. ರಾಜ್ಯದ 50 ಕೇಂದ್ರಗಳಲ್ಲಿ ಡಯಾಲಿಸಿಸ್ ಸೇವೆ ವಿಸ್ತರಿಸಲು 20 ಕೋಟಿ ರೂ. ಒದಗಿಸಲಾಗಿದೆ ಹಾಗೂ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಇಸ್ಕಾನ್ ಮೂಲಕ ರೋಗಿಗಳಿಗೆ ಆಹಾರ ಪೂರೈಸುವ ಯೋಜನೆ ಜಾರಿಗೊಳಿಸಲಾಗುವುದು.

