
Siddaramaiah| ಕೊರತೆ ಬಜೆಟ್ ನಡುವೆಯೂ ವಿತ್ತೀಯ ಶಿಸ್ತು; ಬಜೆಟ್ ಸಮರ್ಥಿಸಿಕೊಂಡ ಸಿಎಂ
2025-26 ರಲ್ಲಿ ದೇಶದ ಜಿಡಿಪಿಯು ಸ್ಥಿರ ಬೆಲೆಗಳಲ್ಲಿ ಶೇ.7.4 ರಷ್ಟು ಬೆಳವಣಿಗೆ ದಾಖಲಿಸಿದರೆ, ರಾಜ್ಯದ ಜಿ.ಎಸ್.ಡಿ.ಪಿಯು ಶೇ.8.1 ರಷ್ಟು ಬೆಳವಣಿಗೆ ದಾಖಲಿಸಿದೆ.
ದಕ್ಷಿಣ ಭಾರತದ ಪ್ರಗತಿಶೀಲ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ವಿತ್ತೀಯ ಕೊರತೆ ಪ್ರಮಾಣ ನಿಗದಿತ ಮಟ್ಟದ ಒಳಗೆ ಇದೆ. ಆ ಮೂಲಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡದಂತೆ ವಿತ್ತೀಯ ಶಿಸ್ತು ಕಾಪಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸಭಾ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, 2025-26 ರ ಪರಿಷ್ಕೃತ ಅಂದಾಜಿನಲ್ಲಿ ರಾಜ್ಯದ ವಿತ್ತೀಯ ಕೊರತೆ ಶೇ.2.95 ರಷ್ಟು ಇರಲಿದೆ. ಮಹಾರಾಷ್ಟದಲ್ಲಿ ಶೇ.3, ಆಂಧ್ರಪ್ರದೇಶದಲ್ಲಿ ಶೇ.4.5, ಕೇರಳದಲ್ಲಿ ಶೇ.3.8 ಹಾಗೂ ತಮಿಳುನಾಡು ಶೇ.3.5 ರಷ್ಟು ಇದೆ. 16 ನೇ ಹಣಕಾಸು ಆಯೋಗದ ಮಾರ್ಗಸೂಚಿ ಅನ್ವಯ ರಾಜ್ಯಗಳು ಶೇ.3 ರೊಳಗೆ ಹಾಗೂ ಕೇಂದ್ರ ಸರ್ಕಾರ ಶೇ.4.2 ರೊಳಗೆ ವಿತ್ತೀಯ ಕೊರತೆ ಹೊಂದಿರಬೇಕು. ಆದರೆ, ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಅನುಷ್ಠಾನ ಮಾಡಿಲ್ಲ ಎಂದು ಸದನದಲ್ಲಿ ಆರೋಪಿಸಿದರು.
ವಾಸ್ತವವಾಗಿ ಆದಾಯ ಕೊರತೆ ಇರಬಾರದು. ಆದರೆ, ಕೇಂದ್ರ ಸರ್ಕಾರ ಒಳಗೊಂಡು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಆದಾಯ ಕೊರತೆ ಇದೆ. ಆದರೆ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರಮಾಣ ಕಡಿಮೆ ಇದೆ. ರಾಜ್ಯದ ಪ್ರಸಕ್ತ ಸಾಲಿನ ಬಜೆಟ್ ಗಾತ್ರ 4,48,004 ಕೋಟಿ ರೂ.ಗಳಷ್ಟಾಗಿದೆ. 2025-26ರಲ್ಲಿ ಬಜೆಟ್ ಗಾತ್ರ 4,09,549 ರೂಗಳಷ್ಟಿತ್ತು. ಕಳೆದ ವರ್ಷದ ಆಯವ್ಯಯಕ್ಕೆ ಹೋಲಿಸಿದರೆ ಈ ಆಯವ್ಯಯವು 38,455 ಕೋಟಿ ರೂಗಳಷ್ಟು ಹೆಚ್ಚಿನ ಗಾತ್ರದ್ದಾಗಿದೆ. ಶೇ.9.4ರಷ್ಟು ಬೆಳವಣಿಗೆಯಾಗಿದೆ ಎಂದು ವಿವರಿಸಿದರು.
2025-26 ರಲ್ಲಿ ದೇಶದ ಜಿಡಿಪಿಯು ಸ್ಥಿರ ಬೆಲೆಗಳಲ್ಲಿ ಶೇ.7.4 ರಷ್ಟು ಬೆಳವಣಿಗೆ ದಾಖಲಿಸಿದರೆ, ರಾಜ್ಯದ ಜಿ.ಎಸ್.ಡಿ.ಪಿಯು ಶೇ.8.1 ರಷ್ಟು ಬೆಳವಣಿಗೆ ದಾಖಲಿಸಿದೆ. ಕರ್ನಾಟಕದ ಜಿಎಸ್ಡಿಪಿ ದೇಶದ ಜಿಡಿಪಿ ಬೆಳವಣಿಗೆಗಿಂತ ಹೆಚ್ಚಿದೆ. ನಮ್ಮ ಸರ್ಕಾರ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಅರ್ಥಿಕ ಪ್ರಗತಿಗೆ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.
ಕರ್ನಾಟಕದ್ದಷ್ಟೇ ಸಮಸ್ಯೆಯಲ್ಲ
ವಿರೋಧ ಪಕ್ಷದ ವಿಜಯೇಂದ್ರ ಸೇರಿ ಹಲವರು ಆದಾಯ ಸರಿಯಾಗಿ ಸಂಗ್ರಹವಾಗದ ಕಾರಣ ಪ್ರತಿ ವರ್ಷ ಬಜೆಟ್ ಅನ್ನು ಪರಿಷ್ಕರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆಯವ್ಯಯ ಅಂದಾಜಿಗೆ ಹೋಲಿಸಿದರೆ ಪಕ್ಕದ ರಾಜ್ಯಗಳ ಸ್ವಂತ ರಾಜಸ್ವ ಸಂಗ್ರಹಣೆಯು ವಾಸ್ತವ ಹಾಗೂ ಪರಿಷ್ಕೃತ ಸಂಗ್ರಹಣೆಯಲ್ಲಿ ಕಡಿಮೆ ಆಗಿದೆ.
ಇದು ಕರ್ನಾಟಕ ರಾಜ್ಯದ್ದೊಂದೇ ಸಮಸ್ಯೆಯಲ್ಲ. ಕೇಂದ್ರ ಸರ್ಕಾರದ ಅಪಕ್ವ ಆರ್ಥಿಕ ನೀತಿಗಳಿಂದ ಉಂಟಾಗುತ್ತಿರುವ ಸಮಸ್ಯೆಯಾಗಿದೆ. ಆದರೆ ನಮ್ಮ ಅಕ್ಕ ಪಕ್ಕದ ರಾಜ್ಯಗಳಿಗೆ ಹೋಲಿಸಿದರೂ ಸಹ ನಮ್ಮ ಸ್ವಂತ ರಾಜಸ್ವ ಸಂಗ್ರಹ ಉತ್ತಮವಾಗಿದೆ.
ಕೇಂದ್ರ ಸರ್ಕಾರದವರು ಕಳೆದ ವರ್ಷ ವರ್ಷದ ಮಧ್ಯ ಭಾಗದಲ್ಲಿ ಇದ್ದಕ್ಕಿದ್ದಂತೆ ಜಿಎಸ್ಟಿ ದರಗಳನ್ನು ತರ್ಕಬದ್ಧಗೊಳಿಸುತ್ತೇವೆಂದು ಹೇಳಿ ಪರಿಷ್ಕರಣೆ ಮಾಡಿದ ಕಾರಣಕ್ಕೆ ರಾಜ್ಯದ ಆರ್ಥಿಕತೆಯ ಮೇಲೆ ಹೊಡೆತ ಬಿತ್ತು. 2025-26ನೇ ಸಾಲಿನಲ್ಲಿ ಜಿ.ಎಸ್.ಟಿ ತರ್ಕಬದ್ಧಗೊಳಿಸುವಿಕೆಗೂ ಮುನ್ನ, ರಾಜ್ಯದ ಸರಾಸರಿ ಮಾಸಿಕ ಜಿ.ಎಸ್.ಟಿ ರಾಜಸ್ವ ಸಂಗ್ರಹಣೆಯು ಶೇ.10ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಆದರೆ ದರ ತರ್ಕಬದ್ಧಗೊಳಿಸುವಿಕೆಯ ನಂತರ, ಜಿ.ಎಸ್.ಟಿ ಸಂಗ್ರಹಣೆಯ ಮಾಸಿಕ ಬೆಳವಣಿಗೆಯು ಶೇ.4ಕ್ಕೆ ಕಡಿಮೆಯಾಗಿದೆ. 2025-26ನೇ ಸಾಲಿನಲ್ಲಿ ಸುಮಾರು 10,000 ಕೋಟಿ ಕೊರತೆಯಾದರೆ 26-27ರಲ್ಲಿ 15,000 ಕೋಟಿ ರೂ.ಗಳಷ್ಟು ಕೊರತೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಕಾರಣದಿಂದ 2025-26ರ ಪರಿಷ್ಕೃತ ಅಂದಾಜಿನಲ್ಲಿ 22,957 ಕೋಟಿ ರೂ. ರಾಜಸ್ವ ಕೊರತೆಯಾಗಿದೆ ಎಂದು ಹೇಳಿದರು.
ಜಿಎಸ್ಟಿ ಪರಿಷ್ಕರಣೆಯಿಂದ ಯಾರಿಗೂ ಲಾಭವಿಲ್ಲ
ಜಿಎಸ್ಟಿ ದರ ಪರಿಷ್ಕರಣೆಯಿಂದ ಜನರಿಗೆ ಲಾಭವಾಗಿಲ್ಲ. ಕಾರು, ಬೈಕ್ಗಳ ಬೆಲೆ ತುಸು ಕಡಿಮೆಯಾಗಿದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ಲಾಭಾಂಶವನ್ನು ಬಹುರಾಷ್ಟ್ರೀಯ ಕಂಪೆನಿಗಳು, ಕಾರ್ಪೊರೇಟ್ ಕುಳಗಳು ಹೊತ್ತುಕೊಂಡು ಹೋಗುತ್ತಿದ್ದಾರೆ. ಇಷ್ಟರ ನಡುವೆಯೂ ಕಳೆದ ವರ್ಷದ ಆಯವ್ಯಯಕ್ಕಿಂತ ಸುಮಾರು 22,573 ಕೋಟಿ ರೂ. ಹೆಚ್ಚಿನ ಆದಾಯ ಸಂಗ್ರಹವಾಗಬಹುದೆಂದು ಅಂದಾಜಿಸಿದ್ದೇವೆ. 2.92 ಲಕ್ಷ ಕೋಟಿ ರೂ.ಗಳಷ್ಟಿದ್ದ ಕಳೆದ ವರ್ಷದ ಅಂದಾಜು ಈ ವರ್ಷ 3.15 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಲಿದೆಯೆಂದು ಅಂದಾಜು ಮಾಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದ ತೆರಿಗೆ ಹಂಚಿಕೆಯ ಪಾಲು 14ನೇ ಹಣಕಾಸು ಆಯೋಗದ ಶಿಫಾರಸ್ಸು ಶೇ.4.713 ರಿಂದ 15ನೇ ಹಣಕಾಸು ಆಯೋಗದ ಶಿಫಾರಸ್ಸು ಶೇ.3.647ಕ್ಕೆ ಇಳಿಕೆಯಾಗಿದ್ದು, ಹಿಂದಿನ ಆಯೋಗದ ಶಿಫಾರಸ್ಸಿಗೆ ಹೋಲಿಸಿದರೆ ಶೇ.23ರಷ್ಟು ಕಡಿಮೆಯಾಗಿದೆ. ರಾಜ್ಯಗಳಿಗೆ ನ್ಯಾಯಯುತ ತೆರಿಗೆ ಹಂಚಿಕೆ ಮಾಡಲು ಸಮಾನತೆ ಮತ್ತು ಬೆಳವಣಿಗೆ ಎರಡಕ್ಕೂ ಪ್ರಾಮುಖ್ಯತೆ ನೀಡುವ ಸೂತ್ರವನ್ನು ಶಿಫಾರಸ್ಸು ಮಾಡಬೇಕು ಎಂದು ರಾಜ್ಯವು 16ನೇ ಹಣಕಾಸು ಆಯೋಗಕ್ಕೆ ಮನವಿ ಮಾಡಿತ್ತು. 16ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶೇ.4.131 ರಷ್ಟು ತೆರಿಗೆ ಪಾಲನ್ನು ಶಿಫಾರಸ್ಸು ಮಾಡಿದೆ. ಇದು 15ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ ಪಾಲಿಗಿಂತ ಶೇ.13 ರಷ್ಟು ಹೆಚ್ಚಳವಾಗಿದ್ದು, ನಮ್ಮ ಬೇಡಿಕೆಯನ್ನು ಭಾಗಶಃ ಪರಿಗಣಿಸಿದಂತಾಗಿದೆ. ಆದರೆ ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಪಾಲು ಸಿಗಲಿಲ್ಲ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ Surplus budget ಮಾಡಿದ್ದೇವೆ. ನಿಮ್ಮದು Deficit budget ರಾಜಸ್ವ ಕೊರತೆಯ ಬಜೆಟ್ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ನಾನು 2000 ನೇ ಇಸವಿಯಿಂದಲೂ ರಾಜ್ಯದ ಎಲ್ಲ ಬಜೆಟ್ಗಳನ್ನು ನೋಡಿದ್ದೇನೆ. ಎಲ್ಲ ಬಜೆಟ್ಗಳಲ್ಲೂ ವಿತ್ತೀಯ ಕೊರತೆ ಇದ್ದೇ ಇತ್ತು. ನಿಮ್ಮ ನಾಲ್ಕು ವರ್ಷಗಳ ಅವಧಿಯಲ್ಲೂ ಫಿಸ್ಕಲ್ ಡಿಫಿಸಿಟ್ ಇತ್ತು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಕೇಂದ್ರದಿಂದಾಗಿ 2 ಲಕ್ಷ ಕೋಟಿ ರೂ. ನಷ್ಟ
2017ರಲ್ಲಿ ಜಿಎಸ್ಟಿ ಜಾರಿ, 15ನೇ ಹಣಕಾಸು ಆಯೋಗ ಮಾಡಿದ ಅನ್ಯಾಯ ಹಾಗೂ ಆಯೋಗದ ಶಿಫಾರಸ್ಸು ಜಾರಿ ಮಾಡದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಸುಮಾರು 2,00,000 ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟ ಉಂಟಾಗಿದೆ. ಪರಿಸ್ಥಿತಿ ಹೀಗಾದರೆ ರಾಜ್ಯಗಳ ಆರ್ಥಿಕತೆ ಹೇಗೆ ಉಳಿಯುತ್ತದೆ?, ಇಷ್ಟೆಲ್ಲದರ ನಡುವೆಯೂ ನಮ್ಮ ರಾಜ್ಯವನ್ನು ನಾವು ಮುನ್ನಡೆಸುತ್ತಿದ್ದೇವೆ. ಗ್ಯಾರಂಟಿಯಂಥ ಜನ ಕಲ್ಯಾಣ ಯೋಜನೆಗಳಿಗಾಗಿ ನಯಾಪೈಸೆ ಖರ್ಚು ಮಾಡದ ಗುಜರಾತ್ ರಾಜ್ಯವು ಈ ಬಾರಿ 1,00,000 ಕೋಟಿ ರೂಗಳಷ್ಟು ಸಾಲ ಮಾಡುತ್ತಿದೆ ಎಂದು ಸಿಎಂ ವಿವರಿಸಿದರು.
ಕೇಂದ್ರ ಸರ್ಕಾರವೂ ತನ್ನ ವೆಚ್ಚ ನಿರ್ವಹಣೆಗೆ ಸಾಲದ ಮೇಲೆ ಅವಲಂಬಿತವಾಗಿದೆ. ವರ್ಷದಿಂದ ವರ್ಷಕ್ಕೆ ಕೇಂದ್ರ ಸರ್ಕಾರದ ಸಾಲದ ಪ್ರಮಾಣವೂ ಹೆಚ್ಚಾಗುತ್ತಾ ಬಂದಿದೆ. 2024-25 ರಲ್ಲಿ 14.72 ಲಕ್ಷ ಕೋಟಿ ರೂ. ಇದ್ದದ್ದು, 2026-27ನೇ ಸಾಲಿಗೆ 16.96 ಲಕ್ಷ ಕೋಟಿ ರೂ. ಆಗಿದೆ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 16ನೇ ಹಣಕಾಸು ಆಯೋಗದ ಮಾರ್ಗಸೂಚಿ ಶೇ 4.2 ಗಿಂತ ಹೆಚ್ಚಿಗೆ ಇದೆ. ಕೇಂದ್ರ ಸರ್ಕಾರ ಮಾಡಿದ ಸಾಲ 2014 ರ ಮಾರ್ಚ್ಗೆ ಹೋಲಿಸಿದರೆ 2027 ರ ಮಾರ್ಚ್ ವೇಳೆಗೆ 165.52 ಲಕ್ಷ ಕೋಟಿ ರೂಗಳಷ್ಟು ಹೆಚ್ಚಾಗುತ್ತಿದೆ. 53.11 ಲಕ್ಷ ಕೋಟಿ ರೂಗಳಿದ್ದದ್ದು ಈಗ 218.63 ಲಕ್ಷ ಕೋಟಿ ರೂ.ಗೆ ಏರಿಕೆಯಾಗುತ್ತಿದೆ ಎಂದು ಹೇಳಿದರು.

