Karnataka Budget 2026: Huge economic blow from GST cut, repetition in the budget
x

ಸಿಎಂ ಸಿದ್ದರಾಮಯ್ಯ

Karnataka Budget 2026 : ಜಿಎಸ್‌ಟಿ ಕಡಿತದಿಂದ ಭಾರಿ ಆರ್ಥಿಕ ಹೊಡೆತ, ಬಜೆಟ್​ನಲ್ಲಿ ಪುನರುಚ್ಛಾರ

ಜಿಎಸ್‌ಟಿ ಸಂಗ್ರಹಣೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದರೂ, ತೆರಿಗೆ ಹಂಚಿಕೆ ವಿಚಾರದಲ್ಲಿ ಕರ್ನಾಟಕ ನಿರಂತರ ಸವಾಲುಗಳನ್ನು ಎದುರಿಸುತ್ತಿರುವುದು ಬಜೆಟ್ ಭಾಷಣದಲ್ಲಿ ಪ್ರತಿಧ್ವನಿಸಿದೆ.


Click the Play button to hear this message in audio format

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಹಣಕಾಸು ಪರಿಸ್ಥಿತಿಯ ಕುರಿತು ನೈಜ ಚಿತ್ರಣವನ್ನು ಬಿಚ್ಚಿಡಲಾಗಿದೆ. ಕೇಂದ್ರ ಸರ್ಕಾರದ ಜಿಎಸ್‌ಟಿ ದರ ತರ್ಕಬದ್ಧಗೊಳಿಸುವಿಕೆ ನಿರ್ಧಾರದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಭಾರಿ ಪ್ರಮಾಣದ ಆದಾಯ ಖೋತಾ ಉಂಟಾಗಿದ್ದರೂ, ಆರ್ಥಿಕ ಶಿಸ್ತನ್ನು ಕಾಯ್ದುಕೊಳ್ಳುವಲ್ಲಿ ಹಾಗೂ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ.

ಜಿಎಸ್‌ಟಿ ಸಂಗ್ರಹಣೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದರೂ, ತೆರಿಗೆ ಹಂಚಿಕೆ ವಿಚಾರದಲ್ಲಿ ಕರ್ನಾಟಕ ನಿರಂತರ ಸವಾಲುಗಳನ್ನು ಎದುರಿಸುತ್ತಿರುವುದು ಬಜೆಟ್ ಭಾಷಣದಲ್ಲಿ ಪ್ರತಿಧ್ವನಿಸಿದೆ.

ಜಿಎಸ್‌ಟಿ ದರ ಪರಿಷ್ಕರಣೆಯಿಂದ 15 ಸಾವಿರ ಕೋಟಿ ರೂ. ಕೊರತೆ

ರಾಜ್ಯದ ಸ್ವಂತ ತೆರಿಗೆ ರಾಜಸ್ವದಲ್ಲಿ ಜಿಎಸ್‌ಟಿ ಶೇಕಡಾ 43ರಷ್ಟು ಪ್ರಮುಖ ಪಾಲು ಹೊಂದಿದೆ. ಆದರೆ, ಕೇಂದ್ರ ಸರ್ಕಾರವು ಆರ್ಥಿಕ ವರ್ಷದ ಮಧ್ಯದಲ್ಲಿ ಅನಿರೀಕ್ಷಿತವಾಗಿ ಜಿಎಸ್‌ಟಿ ದರಗಳನ್ನು ತರ್ಕಬದ್ಧಗೊಳಿಸಿದ್ದರಿಂದ ರಾಜ್ಯದ ಮಾಸಿಕ ಜಿಎಸ್‌ಟಿ ಸಂಗ್ರಹಣಾ ಬೆಳವಣಿಗೆಯು ಶೇ.10 ರಿಂದ ಶೇ.4 ಕ್ಕೆ ಕುಸಿದಿದೆ. ಈ ದರ ಪರಿಷ್ಕರಣೆಯಿಂದಾಗಿ ಪ್ರಸಕ್ತ ಸಾಲಿನಲ್ಲಿಯೇ ರಾಜ್ಯಕ್ಕೆ ಅಂದಾಜು 10,000 ಕೋಟಿ ರೂ. ಕೊರತೆ ಉಂಟಾಗಿದ್ದು, ಮುಂದಿನ ವರ್ಷದಲ್ಲಿ ಇದು 15,000 ಕೋಟಿ ರೂ.ಗಳಿಗೆ ತಲುಪುವ ಅಂದಾಜಿದೆ. ಒಂದೆಡೆ ರಾಜ್ಯಗಳು ರಾಜಸ್ವ ನಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಕೇಂದ್ರ ಸರ್ಕಾರವು ಮಾದಕ ಹಾಗೂ ಐಷಾರಾಮಿ ವಸ್ತುಗಳ ಮೇಲಿನ ಸೆಸ್‌ನಿಂದ ಬರುವ ಸಂಪೂರ್ಣ ಆದಾಯವನ್ನು ತನ್ನ ಬಳಿಯೇ ಉಳಿಸಿಕೊಳ್ಳುತ್ತಿರುವುದಕ್ಕೆ ಬಜೆಟ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ.

16ನೇ ಹಣಕಾಸು ಆಯೋಗದ ಪಾಲು ಶೇ.4.13ಕ್ಕೆ ಏರಿಕೆ

ಕೇಂದ್ರದ ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಕೊಂಚ ನಿರಾಳತೆ ಸಿಕ್ಕಿದೆ. 15ನೇ ಹಣಕಾಸು ಆಯೋಗದಲ್ಲಿ ಶೇ.3.647ಕ್ಕೆ ಇಳಿದಿದ್ದ ರಾಜ್ಯದ ತೆರಿಗೆ ಪಾಲನ್ನು, 16ನೇ ಹಣಕಾಸು ಆಯೋಗವು 2026–31ರ ಅವಧಿಗೆ ಶೇ.4.131ಕ್ಕೆ ಹೆಚ್ಚಿಸಿ ಶಿಫಾರಸು ಮಾಡಿದೆ. ಇದರಿಂದ 15ನೇ ಆಯೋಗದ ಅವಧಿಯಲ್ಲಿ ಸುಮಾರು 65,000 ಕೋಟಿ ರೂ. ನಷ್ಟ ಅನುಭವಿಸಿದ್ದ ರಾಜ್ಯಕ್ಕೆ, ಇದೀಗ ಹಿಂದಿನ ಪಾಲಿಗಿಂತ ಶೇ.13ರಷ್ಟು ಹೆಚ್ಚಿನ ತೆರಿಗೆ ಲಭ್ಯವಾಗಲಿದೆ. ರಾಜ್ಯದ ಆರ್ಥಿಕ ಕಾರ್ಯಕ್ಷಮತೆ ಮತ್ತು ದೇಶದ ಜಿಡಿಪಿಗೆ ನೀಡುವ ಕೊಡುಗೆಯನ್ನು ಆಯೋಗವು ಮಾನದಂಡವಾಗಿ ಪರಿಗಣಿಸಿರುವುದನ್ನು ರಾಜ್ಯ ಸರ್ಕಾರ ಸ್ವಾಗತಿಸಿದ್ದು, 14ನೇ ಆಯೋಗದಲ್ಲಿದ್ದ ಶೇ.4.71ರಷ್ಟು ಹಳೆಯ ಪಾಲನ್ನು ಮರಳಿ ನೀಡಬೇಕೆಂಬ ತನ್ನ ಬೇಡಿಕೆಯನ್ನು ಮತ್ತೆ ಪುನರುಚ್ಚರಿಸಿದೆ.

ಗ್ಯಾರಂಟಿ ನಿರ್ವಹಣೆ ಜೊತೆಗೆ ವಿತ್ತೀಯ ಶಿಸ್ತು

ತೆರಿಗೆ ಸಂಗ್ರಹಣೆ ಕುಸಿತ ಹಾಗೂ ಆದಾಯ ನಿರ್ಬಂಧಗಳ ನಡುವೆಯೂ, ರಾಜ್ಯ ಸರ್ಕಾರವು ಜನಸಾಮಾನ್ಯರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಹಿಂದೆ ಬಿದ್ದಿಲ್ಲ. ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ 2026ರ ಫೆಬ್ರವರಿ ಅಂತ್ಯದವರೆಗೆ ಬರೋಬ್ಬರಿ 1,21,598 ಕೋಟಿ ರೂ.ಗಳನ್ನು ಸರ್ಕಾರ ಯಶಸ್ವಿಯಾಗಿ ವೆಚ್ಚ ಮಾಡಿದೆ. ಆರ್ಥಿಕ ಸವಾಲುಗಳ ಮಧ್ಯೆಯೂ ಸತತ ಮೂರು ವರ್ಷಗಳಿಂದ ವಿತ್ತೀಯ ಶಿಸ್ತನ್ನು ಜವಾಬ್ದಾರಿಯುತವಾಗಿ ಪಾಲಿಸಿಕೊಂಡು ಬರಲಾಗಿದ್ದು, ಪ್ರಸ್ತುತ ಸಾಲಿನಲ್ಲಿಯೂ 'ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ'ದನ್ವಯ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿಯ ಶೇ.3 ರೊಳಗೆ ಹಾಗೂ ಒಟ್ಟು ಸಾರ್ವಜನಿಕ ಹೊಣೆಗಾರಿಕೆಗಳನ್ನು ಶೇ.25 ರೊಳಗೆ ಯಶಸ್ವಿಯಾಗಿ ನಿಯಂತ್ರಣದಲ್ಲಿಡಲಾಗಿದೆ.

Read More
Next Story