State Budget 2026-27: Liquor pricing to be deregulated; Excise revenue target of Rs 45,000 crore
x

ಸಾಂದರ್ಭಿಕ ಚಿತ್ರ

ರಾಜ್ಯ ಬಜೆಟ್ 2026: ಮದ್ಯದ ಬೆಲೆ ನಿಗದಿ ನಿಯಂತ್ರಣ ಮುಕ್ತ; 45,000 ಕೋಟಿ ರೂ. ಅಬಕಾರಿ ಆದಾಯ ಗುರಿ

ಮುಂಬರುವ 2026ರ ಏಪ್ರಿಲ್‌ನಿಂದ ಪಾನೀಯಗಳಲ್ಲಿನ ಮದ್ಯದ ಪ್ರಮಾಣವನ್ನು (AIB) ಆಧರಿಸಿದ ಜಾಗತಿಕ ಮಟ್ಟದ ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.


Click the Play button to hear this message in audio format

ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯ ಸಮಗ್ರ ಸುಧಾರಣೆಗೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 60 ವರ್ಷಗಳಷ್ಟು ಹಳೆಯದಾದ ಕಾಯ್ದೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಮದ್ಯದ ದರ ನಿಗದಿಯನ್ನು ನಿಯಂತ್ರಣ ಮುಕ್ತಗೊಳಿಸುವ ಜೊತೆಗೆ ವಿನೂತನ ತೆರಿಗೆ ನೀತಿ ಹಾಗೂ ಬೃಹತ್ ಆದಾಯದ ಗುರಿಯನ್ನು ಘೋಷಿಸಲಾಗಿದೆ.

ಮುಂಬರುವ 2026ರ ಏಪ್ರಿಲ್‌ನಿಂದ ಪಾನೀಯಗಳಲ್ಲಿನ ಮದ್ಯದ ಪ್ರಮಾಣವನ್ನು (AIB) ಆಧರಿಸಿದ ಜಾಗತಿಕ ಮಟ್ಟದ ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಮದ್ಯದ ಬೆಲೆ ನಿಗದಿಪಡಿಸುವ ಪ್ರಕ್ರಿಯೆಯಿಂದ ಸರ್ಕಾರ ಸಂಪೂರ್ಣವಾಗಿ ಹಿಂದೆ ಸರಿದಿದ್ದು, ಮಾರುಕಟ್ಟೆ ಪೈಪೋಟಿ ಆಧಾರದ ಮೇಲೆ ದರ ಹಾಗೂ ಸ್ಲ್ಯಾಬ್‌ಗಳನ್ನು ನಿರ್ಧರಿಸುವ ಅಧಿಕಾರವನ್ನು ನೇರವಾಗಿ ಉತ್ಪಾದಕರಿಗೆ ನೀಡಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಇರುವ 16 ದರ ನಿಗದಿ ಸ್ಲ್ಯಾಬ್‌ಗಳನ್ನು ಕೇವಲ ಎಂಟಕ್ಕೆ ಇಳಿಸುವ ಮೂಲಕ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಿಸಲಾಗಿದೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಮದ್ಯದ ಅಂಶವನ್ನು ಆಧರಿಸಿದ ತೆರಿಗೆ ಪದ್ಧತಿಗೆ ರಾಜ್ಯದ ಅಬಕಾರಿ ವಲಯ ಸಂಪೂರ್ಣವಾಗಿ ತೆರೆದುಕೊಳ್ಳಲಿದೆ.

45 ಸಾವಿರ ಕೋಟಿ ಆದಾಯದ ಗುರಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಫೆಬ್ರವರಿ ಅಂತ್ಯದ ವೇಳೆಗೆ ಅಬಕಾರಿ ಇಲಾಖೆಯು 36,492 ಕೋಟಿ ರೂ. ಆದಾಯ ಸಂಗ್ರಹಿಸಿದ್ದು, ಕಳೆದ ಬಾರಿಗಿಂತ ಶೇಕಡಾ 12.7ರಷ್ಟು ಭಾರಿ ಪ್ರಗತಿ ದಾಖಲಿಸಿದೆ. ಈ ಉತ್ಸಾಹದಲ್ಲಿ 2026-27ನೇ ಸಾಲಿಗೆ ಬರೋಬ್ಬರಿ 45,000 ಕೋಟಿ ರೂಪಾಯಿಗಳ ಬೃಹತ್ ಅಬಕಾರಿ ಆದಾಯ ಸಂಗ್ರಹದ ಗುರಿಯನ್ನು ಇಲಾಖೆಗೆ ನಿಗದಿಪಡಿಸಲಾಗಿದೆ. ತೆರಿಗೆ ಸೋರಿಕೆ ತಡೆಗಟ್ಟಲು ಬ್ಲಾಕ್‌ಚೈನ್ ಆಧಾರಿತ ಡಿಜಿಟಲ್ ಟ್ರ್ಯಾಕಿಂಗ್ ಹಾಗೂ ಮದ್ಯ ಸಾಗಾಣಿಕೆಗೆ ಬೆಂಗಾವಲು ವಾಹನದ ಬದಲು ಜಿಯೋ-ಫೆನ್ಸ್ಡ್ ಇ-ಲಾಕ್ (geo-fenced e-lock) ವ್ಯವಸ್ಥೆಯನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಪಾರದರ್ಶಕತೆ ಕಾಯ್ದುಕೊಳ್ಳಲು ಇಲಾಖೆಯ ಎಲ್ಲ ಹಂತದ ಅಧಿಕಾರಿಗಳ ವರ್ಗಾವಣೆಯನ್ನು ಕಡ್ಡಾಯವಾಗಿ ಡಿಜಿಟಲ್ ಕೌನ್ಸಿಲಿಂಗ್ ಮೂಲಕವೇ ನಡೆಸಲು ನಿರ್ಧರಿಸಲಾಗಿದೆ.

ಮದ್ಯ ಪ್ರವಾಸೋದ್ಯಮಕ್ಕೆ ವಿಶೇಷ ಉತ್ತೇಜನ

ಅಬಕಾರಿ ವಲಯದಲ್ಲಿ ಸುಲಲಿತ ವ್ಯಾಪಾರಕ್ಕೆ (Ease of Doing Business) ಉತ್ತೇಜನ ನೀಡಲು ಹಲವು ಬಿಗಿ ನಿಯಮಗಳನ್ನು ಸಡಿಲಿಸಲಾಗಿದೆ. ಸನ್ನದುಗಳ ಮಾನ್ಯತೆಯನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದ್ದು, ಉತ್ಪಾದನಾ ಸನ್ನದುಗಳು ಹಾಗೂ ಲೇಬಲ್ ಅನುಮೋದನೆಯನ್ನು ಆನ್‌ಲೈನ್ ಮೂಲಕ ಸಂಪೂರ್ಣ ಸ್ವಯಂಚಾಲಿತಗೊಳಿಸಲಾಗಿದೆ. ಮದ್ಯ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ವಿನೂತನ ಹೆಜ್ಜೆಯಾಗಿ, ಡಿಸ್ಟಿಲರಿಗಳು ಮತ್ತು ಬ್ರೂವರಿಗಳಲ್ಲಿಯೇ ಪ್ರವಾಸಿಗರಿಗೆ ಮದ್ಯ ಸವಿಯಲು (Tasting) ಹಾಗೂ ಖರೀದಿಸಲು ಮೊದಲ ಬಾರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಡಿಸ್ಟಿಲರಿಗಳಿಗೆ ದಿನದ 24 ಗಂಟೆ ಕಾರ್ಯಾಚರಣೆ ನಡೆಸಲು ಅನುಮತಿ ನೀಡಲಾಗಿದ್ದು, ಇನ್ಮುಂದೆ ಅಬಕಾರಿ ಇಲಾಖೆಯು ಕೇವಲ ತೆರಿಗೆ ಸಂಗ್ರಹದ ಕಡೆ ಗಮನಹರಿಸಲಿದ್ದು, ಮದ್ಯ ವ್ಯಸನಮುಕ್ತಿ ಮತ್ತು ಪುನರ್ವಸತಿ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಆರೋಗ್ಯ ಇಲಾಖೆಗೆ ವಹಿಸಲಾಗಿದೆ.

Read More
Next Story