
Karnataka Budget 2026| ಅನ್ನಭಾಗ್ಯ ಯೋಜನೆಯಲ್ಲಿ ಭಾರಿ ಬದಲಾವಣೆ: ಇನ್ಮುಂದೆ ಸಿಗಲಿದೆ 'ಇಂದಿರಾ ಆಹಾರ ಕಿಟ್'
ಕರ್ನಾಟಕ ಬಜೆಟ್ 2026ರಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ ಘೋಷಿಸಲಾಗಿದೆ. ಇನ್ಮುಂದೆ 5 ಕೆಜಿ ಹೆಚ್ಚುವರಿ ಅಕ್ಕಿ ಬದಲು ತೊಗರಿಬೇಳೆ, ಅಡುಗೆ ಎಣ್ಣೆ ಒಳಗೊಂಡ 'ಇಂದಿರಾ ಆಹಾರ ಕಿಟ್' ಸಿಗಲಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಅನ್ನಭಾಗ್ಯ' ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ, ಇನ್ನು ಮುಂದೆ ಪೌಷ್ಟಿಕಾಂಶಯುಕ್ತ ದಿನಸಿ ಪದಾರ್ಥಗಳನ್ನೊಳಗೊಂಡ ‘ಇಂದಿರಾ ಆಹಾರ ಕಿಟ್’ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಏನಿದು ಇಂದಿರಾ ಆಹಾರ ಕಿಟ್?
ಬಡವರ ಹಸಿವು ನೀಗಿಸುವುದರ ಜೊತೆಗೆ ಪೌಷ್ಟಿಕಾಂಶವನ್ನು ಒದಗಿಸುವ ಉದ್ದೇಶದಿಂದ ಈ ಹೊಸ ಕ್ರಮ ಕೈಗೊಳ್ಳಲಾಗಿದೆ. ಈ ಕಿಟ್‌ನಲ್ಲಿ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ ಮತ್ತು ಉಪ್ಪು ಇರಲಿದೆ.
ಯೋಜನೆಯ ಮುಖ್ಯಾಂಶಗಳು:
ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ ಇನ್ನು ಮುಂದೆ ಪೌಷ್ಟಿಕಾಂಶಯುಕ್ತ ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ ಒಳಗೊಂಡ ‘ಇಂದಿರಾ ಆಹಾರ ಕಿಟ್’ ವಿತರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದು, ಈ ಹೊಸ ಉಪಕ್ರಮಕ್ಕಾಗಿ 2026-27ನೇ ಸಾಲಿನ ಬಜೆಟ್‌ನಲ್ಲಿ 6,200 ಕೋಟಿ ರೂ. ಮೀಸಲಿಡಲಾಗಿದೆ. ರಾಜ್ಯದ ಸುಮಾರು 4.54 ಕೋಟಿ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸಿಗಲಿದ್ದು, ಕಳೆದ ಮೂರು ವರ್ಷಗಳಲ್ಲಿ ಅನ್ನಭಾಗ್ಯ ಯೋಜನೆಗಾಗಿ ಸರ್ಕಾರ ಒಟ್ಟು 17,167 ಕೋಟಿ ರೂ.ಗಳನ್ನು ಯಶಸ್ವಿಯಾಗಿ ವೆಚ್ಚ ಮಾಡಿದೆ ಎಂದು ಸಿಎಂ ವಿವರಿಸಿದ್ದಾರೆ.
ಬದಲಾವಣೆಗೆ ಕಾರಣವೇನು?
ಕೇವಲ ಅಕ್ಕಿ ನೀಡುವುದಕ್ಕಿಂತ, ದೈನಂದಿನ ಅಡುಗೆಗೆ ಬಳಕೆಯಾಗುವ ಬೇಳೆ, ಎಣ್ಣೆಯಂತಹ ಪದಾರ್ಥಗಳನ್ನು ನೀಡುವುದರಿಂದ ಬಡ ಕುಟುಂಬಗಳ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಮತ್ತು ಆಹಾರದಲ್ಲಿ ಪೌಷ್ಟಿಕಾಂಶ ಹೆಚ್ಚುತ್ತದೆ ಎಂಬುದು ಸರ್ಕಾರದ ಆಶಯವಾಗಿದೆ.

