
ಸಾಂದರ್ಭಿಕ ಚಿತ್ರ
2026-27ನೇ ಸಾಲಿನ ಬಜೆಟ್: ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆಗೆ ಗ್ರೀನ್ ಸಿಗ್ನಲ್
ಹೊಸದಾಗಿ ಆರಂಭವಾಗಲಿರುವ ಪೊಲೀಸ್ ಠಾಣೆಗಳ ಪೈಕಿ ಸಾಮಾನ್ಯ ಕಾನೂನು ಸುವ್ಯವಸ್ಥೆ ಠಾಣೆಗಳ ಜೊತೆಗೆ, ಮೂರು ಸಂಚಾರ (ಟ್ರಾಫಿಕ್) ಪೊಲೀಸ್ ಠಾಣೆಗಳು ಹಾಗೂ ಒಂದು ಕೈಗಾರಿಕಾ ವಲಯದ ಪೊಲೀಸ್ ಠಾಣೆ ಸೇರಿದೆ.
2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಒಳಾಡಳಿತ ಇಲಾಖೆಗೆ ಮಹತ್ವದ ಕೊಡುಗೆ ನೀಡಲಾಗಿದೆ. ರಾಜ್ಯಾದ್ಯಂತ ಒಟ್ಟು ಹನ್ನೆರಡು ಹೊಸ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಲು ಸರ್ಕಾರ ಅಧಿಕೃತವಾಗಿ ಅನುಮೋದನೆ ನೀಡಿದ್ದು, ಈ ಕುರಿತು ಬಜೆಟ್ ಪ್ರತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಬೆಳೆಯುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ ಹಾಗೂ ಕೈಗಾರಿಕಾ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಈ ಹೊಸ ಠಾಣೆಗಳನ್ನು ಮಂಜೂರು ಮಾಡಿದೆ.
ಹೊಸದಾಗಿ ಆರಂಭವಾಗಲಿರುವ ಪೊಲೀಸ್ ಠಾಣೆಗಳ ಪೈಕಿ ಸಾಮಾನ್ಯ ಕಾನೂನು ಸುವ್ಯವಸ್ಥೆ ಠಾಣೆಗಳ ಜೊತೆಗೆ, ಮೂರು ಸಂಚಾರ (ಟ್ರಾಫಿಕ್) ಪೊಲೀಸ್ ಠಾಣೆಗಳು ಹಾಗೂ ಒಂದು ಕೈಗಾರಿಕಾ ವಲಯದ ಪೊಲೀಸ್ ಠಾಣೆ ಸೇರಿದೆ. ವಿಶೇಷವೆಂದರೆ, ದಕ್ಷಿಣ ಕನ್ನಡ ಜಿಲ್ಲೆಗೆ ಅತಿಹೆಚ್ಚು, ಅಂದರೆ ಮಾಣಿ ಪೊಲೀಸ್ ಠಾಣೆ ಹಾಗೂ ಸಜಿಪನಡು ಪೊಲೀಸ್ ಠಾಣೆಗಳು ಮಂಜೂರಾಗಿವೆ.
ವಿವಿಧ ಜಿಲ್ಲೆಗಳಲ್ಲಿ ನೂತನ ಠಾಣೆಗಳು
ರಾಜ್ಯದ ಇತರೆ ಭಾಗಗಳಲ್ಲೂ ನೂತನ ಠಾಣೆಗಳು ತಲೆಎತ್ತಲಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ಸಂಚಾರ ಪೊಲೀಸ್ ಠಾಣೆ, ಬೆಳಗಾವಿಯಲ್ಲಿ ಯರಗಟ್ಟಿ ಪೊಲೀಸ್ ಠಾಣೆ ಹಾಗೂ ಯಾದಗಿರಿಯಲ್ಲಿ ಕಕ್ಕೇರಾ ಪೊಲೀಸ್ ಠಾಣೆಯನ್ನು ತೆರೆಯಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಚಿತ್ರದುರ್ಗದಲ್ಲಿ ಹಿರಿಯೂರು ಸಂಚಾರ ಪೊಲೀಸ್ ಠಾಣೆ, ದಾವಣಗೆರೆಯಲ್ಲಿ ಆನಗೋಡು ಪೊಲೀಸ್ ಠಾಣೆ ಮತ್ತು ಹಾವೇರಿಯಲ್ಲಿ ತಿಳುವಳ್ಳಿ ಪೊಲೀಸ್ ಠಾಣೆಗಳು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ.
ಸಂಚಾರ ಮತ್ತು ಕೈಗಾರಿಕಾ ಭದ್ರತೆಗೆ ಒತ್ತು
ಮೈಸೂರು ನಗರದಲ್ಲಿ ಉದಯಗಿರಿ ದಕ್ಷಿಣ ಪೊಲೀಸ್ ಠಾಣೆ ಹಾಗೂ ವಿಜಯಪುರದಲ್ಲಿ ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸ್ಥಾಪಿಸಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಕೈಗಾರಿಕಾ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೋಲಾರದಲ್ಲಿ ನರಸಾಪುರ ಕೈಗಾರಿಕಾ ವಲಯ ಪೊಲೀಸ್ ಠಾಣೆ ಹಾಗೂ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಚಾಮರಾಜನಗರದಲ್ಲಿ ಗುಂಡ್ಲುಪೇಟೆ ಸಂಚಾರ ಪೊಲೀಸ್ ಠಾಣೆಯನ್ನು ಮಂಜೂರು ಮಾಡಲಾಗಿದ್ದು, ಆಯಾ ಭಾಗದ ಜನರಿಗೆ ಇದರಿಂದ ಹೆಚ್ಚಿನ ಭದ್ರತೆ ಮತ್ತು ಅನುಕೂಲ ದೊರೆಯಲಿದೆ.

