BJP abandons Dharmasthala oath-taking, daughter kills parents for opposing live-in relationship
x

ಧರ್ಮಸ್ಥಳದ ಆಣೆ-ಪ್ರಮಾಣ ಕೈಬಿಟ್ಟ ಬಿಜೆಪಿ, ಲಿವ್-ಇನ್ ರಿಲೇಷನ್‌ಶಿಪ್ ವಿರೋಧಿಸಿದ್ದಕ್ಕೆ ಹೆತ್ತವರನ್ನೇ ಕೊಂದ ಮಗಳು

ಅಡ್ಡಮತದಾನ ಮಾಡಿದವರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಆಣೆ ಮಾಡಿಸುವುದು ಹೈಕಮಾಂಡ್ ಸಂಸ್ಕೃತಿಗೆ ತಕ್ಕುದಲ್ಲ ಎಂದು ಹಿರಿಯ ಶಾಸಕ ಸುರೇಶ್ ಕುಮಾರ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ ಪತ್ರ ಬರೆದಿದ್ದರು.


Click the Play button to hear this message in audio format

ವಿಧಾನಪರಿಷತ್ ಚುನಾವಣೆಯ ಅಡ್ಡಮತದಾನದ ಕಿಚ್ಚು ಈಗ ಕಮಲ ಪಾಳಯದಲ್ಲಿ ದೊಡ್ಡ ಹೈಡ್ರಾಮಾಗೆ ಕಾರಣವಾಗಿದೆ. "ಯಾರು ಆ ದ್ರೋಹಿ ಶಾಸಕರು?" ಎಂದು ಪತ್ತೆ ಹಚ್ಚಲು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸಲು ಹೊರಟಿದ್ದ ಬಿಜೆಪಿ ನಾಯಕರು, ಈಗ ಸ್ವಪಕ್ಷದವರಿಂದಲೇ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸದ್ದಿಲ್ಲದೆ ಉಲ್ಟಾ ಹೊಡೆದಿದ್ದಾರೆ! ಧರ್ಮಸ್ಥಳದ ಆಣೆ-ಪ್ರಮಾಣದ ಹರಕೆಯನ್ನು ಬಿಜೆಪಿ ನಾಯಕತ್ವ ಕೈಬಿಟ್ಟಿದೆ.

ಟ್ವಿಸ್ಟ್ ಕೊಟ್ಟ ಸುರೇಶ್ ಕುಮಾರ್, ಜೋಷಿ!

ಅಡ್ಡಮತದಾನ ಮಾಡಿದವರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಆಣೆ ಮಾಡಿಸುವುದು ಹೈಕಮಾಂಡ್ ಸಂಸ್ಕೃತಿಗೆ ತಕ್ಕುದಲ್ಲ ಎಂದು ಹಿರಿಯ ಶಾಸಕ ಸುರೇಶ್ ಕುಮಾರ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಆರ್. ಅಶೋಕ್ ಜೊತೆ ಮಾತನಾಡಿ, "ರಾಜಕೀಯಕ್ಕೆ ಧರ್ಮಸ್ಥಳದ ಹೆಸರನ್ನು ಎಳೆಯುವುದು ಬೇಡ, ಸಭೆಯನ್ನು ರದ್ದು ಮಾಡಿ" ಎಂದು ಸೂಚನೆ ನೀಡಿದ್ದರು. ಇದರಿಂದ ಎಚ್ಚೆತ್ತ ವಿಪಕ್ಷ ನಾಯಕ ಆರ್. ಅಶೋಕ್, "ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಬೇಡವೇ ಬೇಡ" ಎಂದು ಕಂಪ್ಲೀಟ್ ಯು-ಟರ್ನ್ ಹೊಡೆದಿದ್ದಾರೆ.

ಕೂಲ್ ಆಗಿರಲು ಬುದ್ಧಿಮಾತು ಹೇಳಿದ ಹೆಚ್‌ಡಿಕೆ!

ಇಷ್ಟೆಲ್ಲಾ ಆಗುತ್ತಿರುವಾಗ ಈ ಹೈಡ್ರಾಮಾಗೆ ಅಸಲಿ ಟ್ವಿಸ್ಟ್ ಕೊಟ್ಟಿದ್ದೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ! ಅಡ್ಡಮತದಾನದ ಬಗ್ಗೆ ರಿಯಾಕ್ಟ್ ಮಾಡಿದ ಹೆಚ್‌ಡಿಕೆ, ಬಿಜೆಪಿಗೆ ಶಾಕಿಂಗ್ ಸಲಹೆಯೊಂದನ್ನು ನೀಡಿದ್ದಾರೆ. "ನನಗೆ ಕ್ರಾಸ್ ವೋಟಿಂಗ್ ಹೊಸದೇನಲ್ಲ, ಬಿಜೆಪಿಯವರು ಯಾಕೆ ಇಷ್ಟೊಂದು ಆತಂಕಕ್ಕೆ ಒಳಗಾಗುತ್ತಿದ್ದಾರೆ? ಕ್ಷೇತ್ರದಲ್ಲಿ ಈಗ ಅಭಿವೃದ್ಧಿ ಕುಂಠಿತವಾಗಿದೆ. ಇತ್ತೀಚಿನ ಮುಖ್ಯಮಂತ್ರಿಗಳು ಧಾರಾಳವಾಗಿದ್ದಾರೆ. ಹಾಗಾಗಿ ಅಭಿವೃದ್ಧಿ ಹೆಸರಲ್ಲಿ ಕ್ಷೇತ್ರದ ಜನರ ಮುಂದೆ ಹೋಗಲು ಆ ಶಾಸಕರು ಕ್ರಾಸ್ ವೋಟ್ ಮಾಡಿರಬಹುದು. ಇದನ್ನು ಇಲ್ಲಿಗೇ ಬಿಟ್ಟುಬಿಡಿ!" ಎಂದಿದ್ದಾರೆ.

ದೆಹಲಿ ಅಂಗಳಕ್ಕೆ ತಲುಪಿದ ಹೈಡ್ರಾಮಾ

ಇನ್ನೊಂದೆಡೆ, "ಕುದುರೆ ವ್ಯಾಪಾರ ಮಾಡಿದ್ದು ಕಾಂಗ್ರೆಸ್‌ನವರು. ಅವರೇ ನಾವು ಮಾಡಿಲ್ಲ ಅಂತ ಹೇಳಲಿ. ಇದನ್ನು ಆಪರೇಷನ್ ಹಸ್ತ ಅನ್ನಬೇಕೋ ಏನೋ ಗೊತ್ತಿಲ್ಲ" ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಸದ್ಯ ಹೈಕಮಾಂಡ್ ಕರೆದಿಲ್ಲದಿದ್ದರೂ, ಆದರೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಆರ್. ಅಶೋಕ್ ದೆಹಲಿ ಅಂಗಳಕ್ಕೆ ತಲುಪಿದ್ದಾರೆ. ದ್ರೋಹ ಬಗೆದ ಶಾಸಕರಿಗೆ ದೆಹಲಿ ಹೈಕಮಾಂಡ್ ಯಾವ ಶಿಕ್ಷೆ ಕೊಡುತ್ತದೆ ಎಂಬುದು ಸದ್ಯದ ಬಿಗ್ ಸಸ್ಪೆನ್ಸ್!

ಸಿಲಿಕಾನ್ ಸಿಟಿಯಲ್ಲಿ ಭೀಕರ ತ್ರಿವಳಿ ಕೊಲೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅತ್ಯಂತ ಭೀಕರ ಹಾಗೂ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಪ್ರೀತಿ ಮತ್ತು ಲಿವ್-ಇನ್ ರಿಲೇಷನ್‌ಶಿಪ್ ಹುಚ್ಚು ತಲೆಗೇರಿದರೆ ಮನುಷ್ಯ ಎಷ್ಟು ಕ್ರೂರಿಯಾಗಬಹುದು ಎಂಬುದಕ್ಕೆ ಕೆ.ಆರ್. ಪುರಂ ಸಮೀಪದ ಸಿಗೇಹಳ್ಳಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತನ್ನ ಲಿವ್-ಇನ್ ಸಂಬಂಧವನ್ನು ವಿರೋಧಿಸಿದರು ಎಂಬ ಒಂದೇ ಒಂದು ಕಾರಣಕ್ಕೆ, ಹಿರಿಯ ಮಗಳೊಬ್ಬಳು ಪ್ರಿಯಕರನ ಜೊತೆ ಸೇರಿ ಇಡೀ ಕುಟುಂಬವನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾಳೆ!

ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ರಕ್ತಪಾತ

ಸಿಗೇಹಳ್ಳಿಯ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘೋರ ಹತ್ಯಾಕಾಂಡ ನಡೆದಿದೆ. ಕೊಲೆಯಾದ ದುರ್ದೈವಿಗಳನ್ನು ಸೋಮಸುಂದರ್ (55), ಅವರ ಪತ್ನಿ ಮುತ್ತುಲಕ್ಷ್ಮಿ (48) ಮತ್ತು ಅವರ ಕಿರಿಯ ಮಗಳು ಸುಪ್ರಿಯಾ (20) ಎಂದು ಗುರುತಿಸಲಾಗಿದೆ. ಇವರನ್ನು ಕೊಂದ ಪಾಪಿಗಳು ಬೇರೆ ಯಾರೂ ಅಲ್ಲ, ಇವರದ್ದೇ ಹಿರಿಯ ಮಗಳು ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನೆತ್! ಇವರಿಬ್ಬರೂ ಮದುವೆಯಾಗದೆ ಕಳೆದ ಕೆಲವು ತಿಂಗಳುಗಳಿಂದ ಇದೇ ಅಪಾರ್ಟ್‌ಮೆಂಟ್‌ನಲ್ಲಿ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದರು.

ಬುದ್ಧಿ ಹೇಳಲು ಹೋದಾಗ ನಡೆದಿದ್ದೇನು?

ಮಗಳ ಭವಿಷ್ಯ ಹಾಳಾಗುತ್ತಿದೆ ಎಂದು ಆತಂಕಗೊಂಡಿದ್ದ ಪೋಷಕರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸೋಮವಾರ ರಾತ್ರಿ, ಮಗಳಿಗೆ ಬುದ್ಧಿವಾದ ಹೇಳಿ ಮನೆಗೆ ಕರೆದುಕೊಂಡು ಹೋಗೋಣ ಎಂದು ತಂದೆ ಸೋಮಸುಂದರ್, ತಾಯಿ ಮತ್ತು ಕಿರಿಯ ಮಗಳ ಜೊತೆ ಶ್ವೇತಾಳ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಾರೆ. ಆದರೆ ಅಲ್ಲಿ ಶುರುವಾದ ಮಾತುಕತೆ ವಿಕೋಪಕ್ಕೆ ತಿರುಗಿದೆ. ಜಗಳ ಜೋರಾಗುತ್ತಿದ್ದ ಹಾಗೆ ಇಬ್ಬರೂ ಆರೋಪಿಗಳು ಚಾಕುವಿನಿಂದ ಸೋಮಸುಂದರ್, ಮುತ್ತುಲಕ್ಷ್ಮಿ ಮತ್ತು ತಂಗಿ ಸುಪ್ರಿಯಾ ಮೇಲೆ ಮನಸೋಇಚ್ಛೆ ಮುಗಿಬಿದ್ದಿದ್ದಾರೆ. ಕತ್ತಲ ಕೋಣೆಯಲ್ಲಿ ಅನಿರೀಕ್ಷಿತವಾಗಿ ನಡೆದ ಈ ದಾಳಿಯಿಂದ ಪಾರಾಗಲು ಆ ಅಸಹಾಯಕ ಪೋಷಕರಿಗೆ ಸಾಧ್ಯವಾಗಲೇ ಇಲ್ಲ. ತೀವ್ರ ರಕ್ತಸ್ರಾವದಿಂದ ತಾಯಿ ಮತ್ತು ತಂಗಿ ಸ್ಥಳದಲ್ಲೇ ಉಸಿರು ನಿಲ್ಲಿಸಿದರೆ, ತಂದೆ ಸೋಮಸುಂದರ್ ಕೂಡ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

ಮೂವರ ಶವಗಳನ್ನು ಅಲ್ಲೇ ಬಿಟ್ಟು ಶ್ವೇತಾ ಪ್ರಿಯಕರನ ಜೊತೆ ಸ್ಥಳದಿಂದ ಪರಾರಿಯಾಗಿದ್ದಾಳೆ. ಸ್ಥಳಕ್ಕೆ ವೈಟ್‌ಫೀಲ್ಡ್ ಡಿಸಿಪಿ ಸೈದುಲು ಅದಾವತ್ ಹಾಗೂ ಕೆ.ಆರ್. ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಶವಗಳನ್ನು ಪೋಸ್ಟ್ ಮಾರ್ಟಮ್‌ಗೆ ರವಾನಿಸಲಾಗಿದ್ದು, ತಲೆಮರೆಸಿಕೊಂಡಿರುವ ಹಂತಕಿ ಶ್ವೇತಾ ಮತ್ತು ಕೆನೆತ್ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳು ಬಲೆ ಬೀಸಿವೆ.

ನವಿಲುಗರಿ ಡ್ರೆಸ್ ಧರಿಸಿ ರೀಲ್ಸ್: ದೂರು!

ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಧರಿಸಿದ್ದ ಹುಲಿ ಉಗುರು ಪ್ರಕರಣ ರಾಜ್ಯಾದ್ಯಂತ ದೊಡ್ಡ ಚರ್ಚೆ ಸೃಷ್ಟಿಸಿದ್ದ ಬೆನ್ನಲ್ಲೇ, ಈಗ ಕನ್ನಡ ಕಿರುತೆರೆಯ ಜನಪ್ರಿಯ ನಟ ಕಿಶನ್ ಬಿಳಗಲಿ ಹಾಗೂ ನಟಿ ನಿವೇದಿತಾ ಗೌಡ ನವಿಲುಗರಿ ಬಳಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಜವಾದ ನವಿಲುಗರಿಗಳನ್ನು ಬಳಸಿ ಸಿದ್ಧಪಡಿಸಲಾಗಿದ್ದ ಉಡುಪುಗಳನ್ನು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹಂಚಿಕೊಂಡಿದ್ದ ಈ ಜೋಡಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪ

ನಟ ಕಿಶನ್ ಹಾಗೂ ನಿವೇದಿತಾ ಗೌಡ ಅವರು ನಾಲ್ಕೈದು ದಿನಗಳ ಹಿಂದೆ ನವಿಲು ಗರಿಗಳಿರುವ ಉಡುಪು ಧರಿಸಿ ರೀಲ್ಸ್ ಮಾಡಿದ್ದರು. ನೈಜ ನವಿಲು ಗರಿಗಳನ್ನು ಬಳಸಿ ಉಡುಪು ತಯಾರಿಸಿ ಸಾರ್ವಜನಿಕವಾಗಿ ಪ್ರದರ್ಶಿಸಿರುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುವುದು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ಬೆಂಗಳೂರು ಪ್ರಾದೇಶಿಕ ನಗರ ವಿಭಾಗದ ವ್ಯಾಪ್ತಿಯ ಕಗ್ಗಲಿಪುರ ಅರಣ್ಯ ವಲಯ ಅಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಪಾರದರ್ಶಕ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.

ದೂರಿನಲ್ಲಿರುವ ಪ್ರಮುಖ ಆಗ್ರಹಗಳೇನು?

ವೈರಲ್ ಆಗಿರುವ ವಿಡಿಯೋ ಹಾಗೂ ಛಾಯಾಚಿತ್ರಗಳ ತಾಂತ್ರಿಕ ಪರಿಶೀಲನೆ ನಡೆಸಿ, ಉಡುಪಿನಲ್ಲಿ ಬಳಸಲಾದ ಗರಿಗಳು ನೈಜವೇ ಅಥವಾ ಕೃತಕವೇ ಎಂಬುದನ್ನು ದೃಢೀಕರಿಸಬೇಕು. ಒಂದು ವೇಳೆ ಅವು ನೈಜ ನವಿಲು ಗರಿಗಳಾಗಿದ್ದರೆ, ಕಿಶನ್ ಹಾಗೂ ನಿವೇದಿತಾ ಗೌಡ ಬಳಸಿರುವ ಉಡುಪುಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು. ಆ ನವಿಲು ಗರಿಗಳ ಮೂಲ, ಖರೀದಿ, ಸಾಗಣೆ ಹಾಗೂ ಸಂಗ್ರಹಣೆಯ ಕುರಿತು ಸಮಗ್ರ ತನಿಖೆಯಾಗಬೇಕು. ಗರಿಗಳನ್ನು ಪೂರೈಸಿದ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ನವಿಲು ಗರಿಗಳನ್ನು ಪಡೆಯುವ ಉದ್ದೇಶದಿಂದ ಯಾವುದಾದರೂ ಅಕ್ರಮ ಬೇಟೆ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚಲು ವಿಶೇಷ ತನಿಖೆ ನಡೆಸಬೇಕು ಎಂದರು.

Read More
Next Story