ಕರ್ನಾಟಕ ಬಿಜೆಪಿ ಬಿಕ್ಕಟ್ಟು: ವಿಜಯೇಂದ್ರ ಬದಲಾವಣೆಗೆ ಹೈಕಮಾಂಡ್ ಮಾಸ್ಟರ್ ಪ್ಲಾನ್
x

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ತೀವ್ರಗೊಂಡಿದ್ದು, ಬಿ.ವೈ. ವಿಜಯೇಂದ್ರ ನಾಯಕತ್ವ ಬದಲಾವಣೆಗೆ ದೆಹಲಿ ಹೈಕಮಾಂಡ್ ಮಹತ್ವದ ಗೇಮ್ ಪ್ಲಾನ್ ರೂಪಿಸುತ್ತಿದೆ.

ಕರ್ನಾಟಕ ಬಿಜೆಪಿ ಬಿಕ್ಕಟ್ಟು: ವಿಜಯೇಂದ್ರ ಬದಲಾವಣೆಗೆ ಹೈಕಮಾಂಡ್ ಮಾಸ್ಟರ್ ಪ್ಲಾನ್

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ತೀವ್ರಗೊಂಡಿದ್ದು, ಬಿ.ವೈ. ವಿಜಯೇಂದ್ರ ನಾಯಕತ್ವ ಬದಲಾವಣೆಗೆ ದೆಹಲಿ ಹೈಕಮಾಂಡ್ ಮಹತ್ವದ ಗೇಮ್ ಪ್ಲಾನ್ ರೂಪಿಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.


Click the Play button to hear this message in audio format

ಕರ್ನಾಟಕ ಕಾಂಗ್ರೆಸ್‌ನಲ್ಲಿ ತಣ್ಣಗಾಗಿದ್ದ ನಾಯಕತ್ವ ಬದಲಾವಣೆಯ ಹೈಡ್ರಾಮಾ ಇದೀಗ ವಿರೋಧ ಪಕ್ಷವಾದ ಬಿಜೆಪಿಯಲ್ಲಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಾಯಕತ್ವದ ಮೇಲೆ ದೆಹಲಿ ಹೈಕಮಾಂಡ್ ಸಂಪೂರ್ಣವಾಗಿ ವಿಶ್ವಾಸ ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಲಿಂಗಾಯುತ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಯುಗಕ್ಕೆ ಇತಿಶ್ರೀ ಹಾಡಲು ಹೈಕಮಾಂಡ್ ಮುಂದಾಗುತ್ತಿದೆಯೇ ಮತ್ತು ವಿಜಯೇಂದ್ರ ಬದಲಿಗೆ ಕರ್ನಾಟಕ ಬಿಜೆಪಿಯ ಚುಕ್ಕಾಣಿ ಹಿಡಿಯುವ ಆ ಹೊಸ ಮುಖ ಯಾರು ಎಂಬ ಸಂಪೂರ್ಣ ಇನ್ಸೈಡ್ ಸ್ಟೋರಿ ಇಲ್ಲಿದೆ.

ಹಿಡಿತ ತಪ್ಪಿದ ನಾಯಕತ್ವ ಮತ್ತು ಆಂತರಿಕ ಭಿನ್ನಾಭಿಪ್ರಾಯ

ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಪರಂಪರೆಯನ್ನು ಮುಂದುವರಿಸಲು ಮತ್ತು ಲಿಂಗಾಯುತ ಮತ ಬ್ಯಾಂಕನ್ನು ಭದ್ರಗೊಳಿಸಲು ಬಿಜೆಪಿ ಹೈಕಮಾಂಡ್ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿತ್ತು. ಆದರೆ ಅವರು ಅಧಿಕಾರ ವಹಿಸಿಕೊಂಡಾಗಿನಿಂದಲೂ ಪಕ್ಷದೊಳಗಡೆ ಎಲ್ಲವೂ ಸರಿ ಇಲ್ಲ ಎಂಬುದು ಜಗಜ್ಜಾಹೀರಾಗಿದೆ. ಆರಂಭದಿಂದಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಬಿಎಸ್‌ವೈ ಕುಟುಂಬದ ವಿರುದ್ಧ ಬಹಿರಂಗವಾಗಿ ಸಮರ ಸಾರಿದೆ. ಹೈಕಮಾಂಡ್ ಯತ್ನಾಳ್ ವಿರುದ್ಧ ಕ್ರಮ ಕೈಗೊಂಡರೂ ಆಂತರಿಕ ಭಿನ್ನಾಭಿಪ್ರಾಯ ಶಮನವಾಗಿಲ್ಲ.

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ (ಕ್ರಾಸ್ ವೋಟಿಂಗ್) ಪ್ರಸಂಗ ಬಿಜೆಪಿಗೆ ತೀವ್ರ ಮುಜುಗರ ತಂದಿದ್ದು, ರಾಜ್ಯಧ್ಯಕ್ಷ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ತಮ್ಮದೇ ಶಾಸಕರ ಮೇಲೆ ಶಿಸ್ತಿನ ಹಿಡಿತ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ಮೂಡಾ ಮತ್ತು ವಾಲ್ಮೀಕಿ ಹಗರಣಗಳ ವಿರುದ್ಧ ಬಲವಾದ ಹೋರಾಟ ರೂಪಿಸಲು ಈ ನಾಯಕತ್ವ ವಿಫಲವಾಗಿದ್ದು, ಮೂಡಾ ಪಾದಯಾತ್ರೆಯು ತಾರ್ಕಿಕ ಅಂತ್ಯ ಕಾಣದ ಕಾರಣ ಹೈಕಮಾಂಡ್ ಇಬ್ಬರನ್ನೂ ದೆಹಲಿಗೆ ಕರೆಸಿ ತರಾಟೆಗೆ ತಗೊಂಡಿದೆ.

"ರಾಜಕಾರಣದಲ್ಲಿ ಈಗೋ ಪ್ರಾಬ್ಲಮ್ ಬಿಡುವ ಕೆಲಸವಾಗಬೇಕು. ಯಡಿಯೂರಪ್ಪ ಅವರು ಎಷ್ಟೇ ಸ್ಟ್ರಿಕ್ಟ್ ಆಗಿದ್ದರೂ, ಒಬ್ಬ ಕಾರ್ಯಕರ್ತನಿಗೆ ಬೈದರೆ ತಕ್ಷಣವೇ ಫೋನ್ ಮಾಡಿ 'ಏನಯ್ಯ ಭಾರಿ ಕೋಪ ನಿಂದು' ಎಂದು ಅವನ ಬೆನ್ನು ತಟ್ಟುವ ಕೆಲಸ ಮಾಡುತ್ತಿದ್ದರು. ಇವತ್ತು ಅಂತಹ ಕೆಲಸವನ್ನು ರಾಜ್ಯ ನಾಯಕರು ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಮಾಧ್ಯಮದವರೇ ಹುಡುಕಿ ಹೇಳಬೇಕು," ಎಂದು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರು ತಿಳಿಸಿದ್ದಾರೆ.

ಹೈಕಮಾಂಡ್ ಮುಂದಿರುವ ಹೊಸ ಗೇಮ್ ಪ್ಲಾನ್ ಮತ್ತು ಪರಿಣಾಮಗಳು

ಮೂಲಗಳ ಪ್ರಕಾರ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ಸ್ಥಾನಗಳ ಬಗ್ಗೆ ದೆಹಲಿ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿದ್ದು, ಹೊಸ ಮುಖಗಳಿಗೆ ಅವಕಾಶ ನೀಡುವ ಸುಳಿವು ದಟ್ಟವಾಗಿದೆ. ಆದರೆ ಯಡಿಯೂರಪ್ಪ ಕುಟುಂಬವನ್ನು ಸಂಪೂರ್ಣವಾಗಿ ಕಡೆಗಣಿಸಿದರೆ ಲಿಂಗಾಯುತ ಮತ ಬ್ಯಾಂಕ್ ಕೈತಪ್ಪಬಹುದು ಎಂಬ ಭೀತಿಯೂ ಇದೆ. ಈ ಅಸಮಾಧಾನವನ್ನು ನಿಯಂತ್ರಿಸಲು ಮುಂದಿನ ಕೇಂದ್ರ ಸಂಪುಟ ಪುನರ್ರಚನೆಯಲ್ಲಿ ಯಡಿಯೂರಪ್ಪ ಅವರ ಮತ್ತೊಬ್ಬ ಪುತ್ರ, ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕುಟುಂಬದ ಗೌರವ ಕಾಯುವ ತಂತ್ರವನ್ನು ಹೈಕಮಾಂಡ್ ಮಾಡಬಹುದು ಎನ್ನಲಾಗುತ್ತಿದೆ.

ಮತ್ತೊಂದೆಡೆ, ಆರ್‌ಎಸ್‌ಎಸ್ ಹಿನ್ನೆಲೆಯಿರುವ ಪ್ರಭಾವಿ ಒಕ್ಕಲಿಗ ನಾಯಕಿ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನು ಕಟ್ಟುವುದು ಹೈಕಮಾಂಡ್‌ನ ಮೊದಲ ಲೆಕ್ಕಾಚಾರವಾಗಿದೆ. ಇದರ ಜೊತೆಗೆ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರಿಗೆ ಸರಿಸಮಾನವಾಗಿ ಒಕ್ಕಲಿಗ ಸಮುದಾಯದ ಪ್ರಭಾವಿ ಮುಖವಾಗಿರುವ ಡಾ. ಸಿ.ಎನ್. ಅಶ್ವತ್ ನಾರಾಯಣ್ ಅಥವಾ ಹಿಂದುಳಿದ ವರ್ಗಗಳ ತೀಕ್ಷ್ಣ ಮುಖವಾಗಿರುವ ವಿ. ಸುನೀಲ್ ಕುಮಾರ್ ಅವರನ್ನು ವಿರೋಧ ಪಕ್ಷದ ನಾಯಕರ ಸ್ಥಾನದಲ್ಲಿ ಕೂರಿಸಲು ದೆಹಲಿ ಮಟ್ಟದಲ್ಲಿ ಹೈ ವೋಲ್ಟೇಜ್ ಚಿಂತನೆ ನಡೆದಿದೆ.

"ನಮ್ಮ ಕೇಂದ್ರದ ವರಿಷ್ಠರು ರಾಜ್ಯ ಬಿಜೆಪಿ ನಾಯಕರಿಗೆ ಒಂತರ ಹನಿಮೂನ್ ಪೀರಿಯಡ್ ಕೊಟ್ಟಿದ್ದರು. ಮೂರು ವರ್ಷದಲ್ಲಿ ಸರಿ ಮಾಡುತ್ತಾರೆ ಎಂದುಕೊಂಡಿದ್ದರು. ಆದರೆ ಇನ್ಮೇಲೆ ಹನಿಮೂನ್ ಮುಗಿದಿದೆ, ಇನ್ಮೇಲೆ ರಿಫಾರ್ಮ್ಸ್ ಸ್ಟಾರ್ಟ್ ಆಗುತ್ತೆ. ನಮ್ಮ ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್‌ನವರು ಉಸಿರಾಡುತ್ತಿದ್ದಾರೆ. ಇನ್ನೊಂದು ಎರಡು ತಿಂಗಳಲ್ಲಿ ಕೇಂದ್ರದ ವರಿಷ್ಠರು ಒಂದು ಒಳ್ಳೆ ಗಟ್ಟಿ ನಿರ್ಧಾರ ತಗೊಳ್ತಾರೆ. ಅದಾದ ಮೇಲೆ 2028 ಕ್ಕೆ ಜೆಡಿಎಸ್ ಜೊತೆ ಸೇರಿ 175 ಸೀಟು ಗೆಲ್ಲುವ ಟಾರ್ಗೆಟ್ ನಮ್ಮದಾಗಿದೆ," ಎಂದು ತುಮಕೂರು ಶಾಸಕ ಬಿ. ಸುರೇಶ್ ಗೌಡ ಅವರು ತಿಳಿಸಿದ್ದಾರೆ.

ಬಿಜೆಪಿಯ ಮುಂದಿನ ಭವಿಷ್ಯ ಮತ್ತು ಸಸ್ಪೆನ್ಸ್

ಯಡಿಯೂರಪ್ಪ ಅವರ ರಾಜಕೀಯ ಪ್ರಭಾವಳಿ ಕ್ಷೀಣಿಸುತ್ತಿರುವ ಈ ಹೊತ್ತಿನಲ್ಲಿ ಬಿಜೆಪಿ ಹೈಕಮಾಂಡ್ ಈ ಹೊಸ ಜೂಜಾಟಕ್ಕೆ ಮುಂದಾಗುತ್ತಿದೆ. ಲಿಂಗಾಯುತ ಸಮುದಾಯದ ಸಮೀಕರಣಕ್ಕಾಗಿ ಮಹೇಶ್ ತೆಂಗಿನಕಾಯಿ ಅಥವಾ ಅರವಿಂದ್ ಬೆಲ್ಲದ್ ಅವರ ಹೆಸರುಗಳು ಕೂಡ ಚರ್ಚೆಯಲ್ಲಿದ್ದು, ಹೈಕಮಾಂಡ್ ಯಾವ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಇಡೀ ರಾಜ್ಯ ರಾಜಕಾರಣದ ಕುತೂಹಲವಾಗಿದೆ. ಈ ಹೊಸ ಬದಲಾವಣೆಗಳು ಬಿಜೆಪಿಯನ್ನು ಸಂಪೂರ್ಣವಾಗಿ ರಾಜಕೀಯ ಹೋರಾಟದಲ್ಲಿ ಮುಳುಗಿಸುತ್ತವೆಯೇ ಅಥವಾ ಹಳೆ ಮೈಸೂರು ಭಾಗದಲ್ಲೂ ಗೆಲುವಿನ ದಡವನ್ನು ಮುಟ್ಟಿಸುತ್ತವೆಯೇ ಎಂಬುದು ಸದ್ಯದ ದೊಡ್ಡ ಸಸ್ಪೆನ್ಸ್.

Read More
Next Story