ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ದೋಷಾರೋಪ ಪಟ್ಟಿ: ಬೆಂಗಳೂರು ಉಳಿಸೋಣ ಚಳವಳಿಗೆ ಕರೆ
x

ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ದೋಷಾರೋಪ ಪಟ್ಟಿ: 'ಬೆಂಗಳೂರು ಉಳಿಸೋಣ' ಚಳವಳಿಗೆ ಕರೆ

ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ವೈಫಲ್ಯ, ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯು ಅತಿ ಪ್ರಮುಖವಾದ ನಾಲ್ಕು ನಿರ್ಣಯಗಳನ್ನು ಕೈಗೊಂಡಿದೆ.


Click the Play button to hear this message in audio format

ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ವೈಫಲ್ಯ, ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯು ಅತಿ ಪ್ರಮುಖವಾದ ನಾಲ್ಕು ನಿರ್ಣಯಗಳನ್ನು ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 'ಬ್ರಾಂಡ್ ಬೆಂಗಳೂರು' ಹೆಸರಿನಲ್ಲಿ ನಗರವನ್ನು ಕಸದ ಗುಂಡಿಯನ್ನಾಗಿ ಮಾಡುತ್ತಿರುವುದು, ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ದ್ರೋಹ ಬಗೆಯುತ್ತಿರುವುದು ಹಾಗೂ ಸರ್ಕಾರದ ನಿಷ್ಕ್ರಿಯತೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಇದೇ ವೇಳೆ, ದೇಶದ ಹೆಮ್ಮೆಯ ಸಂಕೇತವಾದ ವಂದೇ ಮಾತರಂಗೆ ಗೌರವ ತಂದ ಹಾಗೂ ಗ್ರಾಮಗಳ ಸಬಲೀಕರಣಕ್ಕೆ ಒತ್ತು ನೀಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದೆ.

ಸುಪ್ರೀಂ ಕೋರ್ಟ್ ಗಡುವಿನೊಳಗೆ ಕೂಡಲೇ ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆ ನಡೆಸಬೇಕು. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ಹೆಚ್ಚುವರಿ 3,500 ಬಸ್‌ಗಳನ್ನು ಬಿಎಂಟಿಸಿಗೆ ಸೇರಿಸಬೇಕು. ಭ್ರಷ್ಟಾಚಾರ ಮುಕ್ತ ಮತ್ತು ಕಾಲಬದ್ಧವಾಗಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ಸರ್ಕಾರ ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಬಿಜೆಪಿ "ಬೆಂಗಳೂರು ಉಳಿಸೋಣ" ಎಂಬ ಬೃಹತ್ ಜನಾಂದೋಲನವನ್ನು ಹಮ್ಮಿಕೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿಯು ಎಚ್ಚರಿಕೆ ನೀಡಿದೆ. ಬ್ರ್ಯಾಂಡ್‌ ಬೆಂಗಳೂರು ನಿರ್ಮಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಕಳೆದ ಮೂರು ವರ್ಷಗಳಲ್ಲಿ ನಗರವನ್ನು ಅಕ್ಷರಶಃ ರಿಯಲ್ ಎಸ್ಟೇಟ್ ಮಾಫಿಯಾದ ಅಖಾಡವನ್ನಾಗಿ ಮಾಡಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆಗಳು ಕೇವಲ ಕಮಿಷನ್ ದಂಧೆಗೆ ಸೀಮಿತವಾಗಿದ್ದು, ಬೆಂಗಳೂರು ಇಂದು ಕಸದ ಗುಂಡಿಯಾಗಿ ಪರಿಣಮಿಸಿದೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.

ನಗರದ ಒತ್ತಡವನ್ನು ಕಡಿಮೆ ಮಾಡುವ ಬದಲು, ಸರ್ಕಾರವು ರಿಯಲ್ ಎಸ್ಟೇಟ್ ಲಾಬಿಗಾಗಿ ಕ್ವಿನ್ ಸಿಟಿ ಸೇರಿದಂತೆ ಬೃಹತ್ ಯೋಜನೆಗಳನ್ನು ರೂಪಿಸುತ್ತಿದೆ. ಇವುಗಳಿಂದ ಬೆಂಗಳೂರಿನ ಮೇಲಿನ ಜನಸಂಖ್ಯೆ ಒತ್ತಡ ದುಪ್ಪಟ್ಟಾಗಲಿದೆಯೇ ಹೊರತು ಜನರಿಗೆ ಯಾವುದೇ ಲಾಭವಿಲ್ಲ. ಕೇವಲ ಕಮಿಷನ್ ಪಡೆಯುವ ಉದ್ದೇಶದಿಂದ ಸುರಂಗ ಮಾರ್ಗ, ಎಲಿವೇಟೆಡ್ ಕಾರಿಡಾರ್ ನಂತಹ ದುಬಾರಿ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಬಿಜೆಪಿ ಟೀಕಿಸಿದೆ. ಅಲ್ಲದೆ, ರಿಯಲ್ ಎಸ್ಟೇಟ್ ಹಿತಾಸಕ್ತಿಗಾಗಿ ರಾಮನಗರವನ್ನು 'ಬೆಂಗಳೂರು ದಕ್ಷಿಣ' ಎಂದು ಮರುನಾಮಕರಣ ಮಾಡಿರುವುದನ್ನು ಸಭೆಯು ಖಂಡಿಸಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು, ನಗರದ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪ್ರತಿದಿನ ಉತ್ಪತ್ತಿಯಾಗುವ 7 ಸಾವಿರ ಟನ್ ಕಸದಲ್ಲಿ ಕೇವಲ ಶೇ.60ರಷ್ಟು ಮಾತ್ರ ವಿಲೇವಾರಿಯಾಗುತ್ತಿದ್ದು, ನಗರದಲ್ಲಿ 150ಕ್ಕೂ ಹೆಚ್ಚು ಅನಧಿಕೃತ ಡಂಪಿಂಗ್ ಯಾರ್ಡ್‌ಗಳು ನಿರ್ಮಾಣವಾಗಿವೆ. ಕಸದ ಗುತ್ತಿಗೆಯಲ್ಲಿ 1,500 ಕೋಟಿ ಅಕ್ರಮ ನಡೆದಿದ್ದು, ಪರಿಣಾಮವಾಗಿ ಡೆಂಗ್ಯೂ ಪ್ರಕರಣಗಳು ಶೇ.30 ಹೆಚ್ಚಳವಾಗಿವೆ. ಕಾಂಗ್ರೆಸ್ ಸರ್ಕಾರವು ಸಾಮಾನ್ಯ ಜನರ ಜೇಬಿಗೆ ಕೈಹಾಕಿದೆ. ಮೆಟ್ರೋ ದರ ಏರಿಕೆ, ಪೆಟ್ರೋಲ್-ಡೀಸೆಲ್ ಮೇಲೆ 3 ರಿಂದ 5 ರೂ. ದರ ಹೆಚ್ಚಳ, ಮುದ್ರಾಂಕ ಶುಲ್ಕ ಮತ್ತು ಆಸ್ತಿ ತೆರಿಗೆ ಹೆಚ್ಚಳದ ಮೂಲಕ ಜನರನ್ನು ಸುಲಿಗೆ ಮಾಡಲಾಗುತ್ತಿದೆ. 'ಬಿ' ಖಾತಾವನ್ನು 'ಎ' ಖಾತಾ ಮಾಡುವ ಯೋಜನೆಯೂ ಆದಾಯ ಗಳಿಕೆಯ ಹಪಾಹಪಿಯಿಂದಾಗಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

ನಿಷ್ಕ್ರಿಯಗೊಂಡಿರುವ ರಾಜ್ಯ ಸರ್ಕಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ಮೂರು ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಅನುದಾನವಿಲ್ಲದೆ ಸೊರಗಿದ್ದರೂ ತಮ್ಮ ಬೆಂಬಲಿಗರನ್ನು ತೃಪ್ತಿಪಡಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಪಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಇವರೆಲ್ಲರಿಗೆ ತೆರಿಗೆ ಹಣದಲ್ಲಿ ಸಂಬಳ ಭತ್ಯೆ ನೀಡಿ ಖಜಾನೆ ಖಾಲಿ ಮಾಡುತ್ತಿದ್ದಾರೆ. ಅಭಿವೃದ್ಧಿ ಯೋಜನೆಯಿಲ್ಲದೆ ನಿಷ್ಕ್ರಿಯವಾಗಿರುವ ಸರ್ಕಾರ ಜನರ ಬವಣೆಗೆ ಸ್ಪಂದಿಸದ ನಿಷ್ಠಯೋಜಕ ಸರ್ಕಾರ ಜನರ ತೆರಿಗೆ ಹಣದಲ್ಲಿ ಅನೇಕ ಹಗರಣಗಳಲ್ಲಿ ಸಿಲುಕಿರುವ ಭ್ರಷ್ಟ ಸರ್ಕಾರ ಇರುವುದಕ್ಕಿಂತ ತೊಲಗುವುದೇ ಉತ್ತಮ. ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಬಿಜೆಪಿ ಮುಂದಿನ ದಿನಗಳಲ್ಲಿ ಜಿಲ್ಲೆ ಜಿಲ್ಲೆಯಲ್ಲಿ ಬೀದಿಗಿಳಿದು ಹೋರಾಟ ಮಾಡಲಿದೆ. ಜನರ ಕಷ್ಟ ಸುಖಕ್ಕೆ ಕಿವಿಗೊಡದ ಈ ಸರ್ಕಾರವನ್ನು ಕಿತ್ತೆಸೆಯಲು ಪಣ ತೊಟ್ಟಿದ್ದೇವೆ ಎಂದು ಕಾರ್ಯಕಾರಿಯು ನಿರ್ಣಯ ಮಾಡಲಾಗಿದೆ ಎಂದು ತಿಳಿಸಿದರು.

ಎಸ್‌ಸಿ/ಎಸ್‌ಟಿ, ಹಿಂದುಳಿದ ವರ್ಗಕ್ಕೆ ವಂಚನೆ

ಪರಿಶಿಷ್ಟ ಸಮುದಾಯಗಳಿಗೆ ಮೀಸಲಾಗಿದ್ದ ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡು ತಾವೇ ಮಾಡಿದ್ದ ಕಾನೂನನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸ್ಪಷ್ಟವಾಗಿ ಉಲ್ಲಂಘಿಸಿದೆ. ಈ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಂಡು ಈ ಸಮುದಾಯಗಳಿಗೆ ದ್ರೋಹವೆಸಗಿದೆ. ಈ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಅನುದಾನವನ್ನೂ ನೀಡದೇ, ಯಾವುದೇ ಕಲ್ಯಾಣ ಕಾರ್ಯವನ್ನು ರೂಪಿಸದೇ, ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಪಂಗಡಗಳ ವಿರೋಧಿ ಸರ್ಕಾರ ತಾನೆಂಬುದನ್ನು ಸಾಬೀತು ಪಡಿಸಿಕೊಂಡಿದೆ. ಪರಿಶಿಷ್ಟರಿಗೆ ಅನುದಾನ ನಿಗದಿ ಮಾಡಲು 42 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಆದರೆ ಹಣವನ್ನೆಲ್ಲಾ ನಿಯಮ ಮೀರಿ ದುರುಪಯೋಗಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ 2.85 ಲಕ್ಷ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿದ್ದು ಇದರಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಪಾಲಾಗಬೇಕಿದ್ದ 1,42,500 ಹುದ್ದೆಗಳನ್ನು ಭರ್ತಿಮಾಡದೆ ನಿರುದ್ಯೋಗಿ ಯುವಜನರನ್ನೂ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳನ್ನು ಈ ಸರ್ಕಾರ ವಂಚಿಸಿದೆ. ಹೆಚ್ಚುವರಿ ಮೀಸಲಾತಿ ನೆಪ ಮಾಡಿಕೊಂಡು ಶೇ. 50ರ ಮೀಸಲಾತಿ ಅನ್ವಯವೂ ಹುದ್ದೆಗಳನ್ನು ಭರ್ತಿ ಮಾಡದೇ, ಶೋಷಿತ ಸಮುದಾಯಗಳ ನಿರುದ್ಯೋಗಿಗಳು ವಯೋಮಾನ ಕಳೆದು ತಮ್ಮ ಉಜ್ವಲ ಭವಿಷ್ಯವನ್ನು ಕಳೆದುಕೊಂಡಿದ್ದಾರೆ. ಇದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಹಾಗೂ ರಾಜ್ಯದ ಲಕ್ಷಾಂತರ ನಿರುದ್ಯೋಗಿಗಳಿಗೆ ಈ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಮಾಡಿರುವ ಮಹಾದ್ರೋಹವಾಗಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗದ 1.41 ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ಸಿಗದೇ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮೊಟಕುಗೊಳಿಸುವಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ನಿರ್ಮಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ಚಾಂಪಿಯನ್ ಎಂದು ಹೇಳಿಕೊಳ್ಳುತ್ತಾರೆ. ಆದರೆ ಈ ಸಮುದಾಯಗಳ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲು ಹಾಕಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ವಿಬಿ ಜಿರಾಮ್‌ಜಿ ಜಾರಿ ಮಾಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ

ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂಬಿದ್ದು, ದೇಶಭಕ್ತಿಯನ್ನು ಮೂಡಿಸುವ ಈ ಗೀತೆಯನ್ನು ಯುವಜನರು ಸದಾ ಮನನ ಮಾಡಿಕೊಳ್ಳಬೇಕು ಮತ್ತು ರಾಷ್ಟ್ರ ಭಕ್ತಿಯಲ್ಲಿ ತಲ್ಲೀನರಾಗಬೇಕಿದೆ. ಈ ದಿಸೆಯಲ್ಲಿ ಕೇಂದ್ರ ಸರ್ಕಾರವು ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆಯಾಗಿ ಘೋಷಿಸಿದೆ. ದೇಶಾದ್ಯಂತ 150 ವರ್ಷಗಳ ಸಂಭ್ರಮಾಚರಣೆ ಮಾಡಲು ಅನುಮೋದನೆ ನೀಡಿದೆ. ದೇಶದ ಮೂಲೆ ಮೂಲೆಗಳಲ್ಲಿ ವಂದೇ ಮಾತರಂ ಗೀತೆಯ ಪಠಣ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು, ವಿವಿಧ ಚಿಂತನಾಗೋಷ್ಠಿಗಳ ಮೂಲಕ ವಂದೇ ಮಾತರಂ ಗೀತೆಯ ಸಂಭ್ರಮಾಚರಣೆ ನೆರವೇರಿಸಲು ಯೋಜಿಸಿರುವುದು ಸ್ವಾಗತಾರ್ಹ. ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಯ ಸ್ಥಾನ ಮಾನ ನೀಡಿರುವುದಕ್ಕೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರವನ್ನು ಅಭಿನಂದಿಸಿದೆ ಎಂದರು.

ಇನ್ನು, ಗ್ರಾಮೀಣ ಭಾಗದ, ಕೃಷಿ ಕೂಲಿ ಕಾರ್ಮಿಕರ ಬದುಕನ್ನು ಹಸನುಗೊಳಿಸಿ ಉದ್ಯೋಗ ಖಾತ್ರಿ ನೀಡುವುದರ ಜೊತೆಗೆ, ಅವರ ಜೀವನೋಪಾಯವನ್ನು ಬಲಪಡಿಸಲು ವಿಬಿ ಜಿ ರಾಮ್‌ ಜಿ ಕಾಯ್ದೆಯನ್ನು ಜಾರಿಗೆ ತಂದಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಈ ಹಿಂದೆ ಯುಪಿಎ ಅವಧಿಯಲ್ಲಿ ಕೇವಲ 11,300 ಕೋಟಿ ರೂ. ಮೀಸಲಿಟ್ಟಿದ್ದು, ಕೇಂದ್ರ ಸರ್ಕಾರ ಬಂದ ಮೇಲೆ 88 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಈ ವರ್ಷ ಮಂಡಿಸಿದ ಬಜೆಟ್‌ ನಲ್ಲಿ ಸುಮಾರು 95 ಸಾವಿರ ಕೋಟಿ ರೂ. ಅನುದಾನ ಹಾಗೂ ಬಾಕಿ ಇರುವ ಕೆಲಸಕ್ಕೆ ಸುಮಾರು 30 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಉದ್ಯೋಗ ಖಾತ್ರಿ ದಿನಗಳನ್ನು 100 ರಿಂದ 125 ದಿನಕ್ಕೆ ಹೆಚ್ಚಿಸಿರುವುದು, ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದ 170 ರೂ. ವೇತನವನ್ನು ಎನ್‌ಡಿಎ ಸರ್ಕಾರ 370 ರೂ.ಗೆ ಹೆಚ್ಚಿಸಿದೆ. 15 ದಿನದೊಳಗಾಗಿ ವೇತನವನ್ನು ಕಡ್ಡಾಯವಾಗಿ ನೀಡುವ ವ್ಯವಸ್ಥೆ, 60 ದಿನಗಳ ಕಾಲ ಗ್ರಾಮೀಣ ಕೃಷಿಗಾಗಿ ರಜೆ ನೀಡುವ ಸೌಲಭ್ಯ, ಜಿಪಿಎಸ್ ಮೂಲಕ ಹಾಜರಾತಿ ಧೃಡೀಕರಣ ಸೇರಿದಂತೆ ಹಲವಾರು ಪ್ರಮುಖ ಹಾಗೂ ಕ್ರಾಂತಿಕಾರಿ ಬದಲಾವಣೆಯನ್ನು ತರುವುದರ ಮೂಲಕ ಗ್ರಾಮೀಣ ಭಾರತವನ್ನು ಗ್ರಾಮಗಳೇ ರಾಮರಾಜ್ಯಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ. ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ವಿಕಸಿತ ಭಾರತದ-2047 ಕಲ್ಪನೆಗೆ ಪೂರಕವಾಗಿ ಗ್ರಾಮೀಣ ಜನರ ಬದುಕನ್ನು ಸಮೃದ್ಧಿಗೊಳಿಸುವತ್ತ ಯೋಚಿಸಿದ್ದು, ವಿಬಿ ಜಿ ರಾಮ್ ಜಿ ಮಸೂದೆಯನ್ನು ಜಾರಿಗೆ ತಂದಿರುವುದಕ್ಕೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರವನ್ನು ಅಭಿನಂದಿಸಿದೆ ಎಂದು ಹೇಳಿದರು.

Read More
Next Story