ಗ್ಯಾರಂಟಿ ಹೆಸರಲ್ಲಿ ಲೂಟಿ; ʼಚುನಾವಣಾ ಲಕ್ಷ್ಮಿʼಯಾದ ಗೃಹಲಕ್ಷ್ಮಿ ಯೋಜನೆ
x
ಡಿ.ಕೆ. ಶಿವಕುಮಾರ್‌ ಹಾಗೂ ಬಿ.ವೈ. ವಿಜಯೇಂದ್ರ

ಗ್ಯಾರಂಟಿ ಹೆಸರಲ್ಲಿ ಲೂಟಿ; ʼಚುನಾವಣಾ ಲಕ್ಷ್ಮಿʼಯಾದ ಗೃಹಲಕ್ಷ್ಮಿ ಯೋಜನೆ

ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗುತ್ತಿರುವುದನ್ನು ಮುಚ್ಚಿಡಲು ಸರ್ಕಾರ ಈಗ ಫಲಾನುಭವಿಗಳ ಪಟ್ಟಿಗೆ ಕತ್ತರಿ ಹಾಕಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.


ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸಲಾಗದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ ಬಿಜೆಪಿ ಆರೋಪಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ತಪ್ಪು ನೀತಿಗಳಿಂದ ರಾಜ್ಯದ ಹಣಕಾಸು ಸ್ಥಿತಿ ಅಧೋಗತಿಗೆ ಇಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ಲೋಪದೋಷಗಳನ್ನು ಅಂಕಿ-ಅಂಶಗಳ ಸಹಿತ ವಿವರಿಸಿ ತರಾಟೆಗೆ ತೆಗೆದುಕೊಂಡರು.

'ಗೃಹಲಕ್ಷ್ಮಿಈಗ ಚುನಾವಣಾ ಲಕ್ಷ್ಮಿ'

ಗೃಹಲಕ್ಷ್ಮಿ ಯೋಜನೆಯಲ್ಲಾಗಿರುವ ಲೋಪಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣದ ಹೆಸರಲ್ಲಿ ಆರಂಭವಾದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕಳೆದ 4-5 ತಿಂಗಳಿಂದ ಫಲಾನುಭವಿಗಳಿಗೆ ನೀಡದೇ ತಡೆಹಿಡಿಯಲಾಗಿದೆ. ಆದರೆ, ಉಪಚುನಾವಣೆ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹತ್ತಿರ ಬಂದಾಗ ದಿಢೀರ್ ಎಂದು ಹಣ ಬಿಡುಗಡೆ ಮಾಡಲಾಗುತ್ತದೆ. ಇದು ಬಡ ಮಹಿಳೆಯರ ಕಲ್ಯಾಣಕ್ಕಾಗಿ ಮಾಡುತ್ತಿರುವ ಯೋಜನೆಯಲ್ಲ, ಬದಲಿಗೆ ಮತ ಸೆಳೆಯಲು ಬಳಸಿಕೊಳ್ಳುತ್ತಿರುವ 'ಚುನಾವಣಾ ಲಕ್ಷ್ಮಿ' ಯೋಜನೆ" ಎಂದು ಟೀಕಿಸಿದರು.

ಫಲಾನುಭವಿಗಳ ಕಡಿತದ ದುಸ್ಸಾಹಸ

ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗುತ್ತಿರುವುದನ್ನು ಮುಚ್ಚಿಡಲು ಸರ್ಕಾರ ಈಗ ಫಲಾನುಭವಿಗಳ ಪಟ್ಟಿಗೆ ಕತ್ತರಿ ಹಾಕಲು ಹೊರಟಿದೆ ಎಂದು ವಿಜಯೇಂದ್ರ ಆರೋಪಿಸಿದರು.

ತಾಂತ್ರಿಕ ಕಾರಣ ಹಾಗೂ ನಿಯಮಗಳ ಬದಲಾವಣೆ ಹೆಸರಿನಲ್ಲಿ ಲಕ್ಷಾಂತರ ಬಡವರ ಹೆಸರನ್ನು ಬಿಪಿಎಲ್ ಕಾರ್ಡ್ ಮತ್ತು ಗ್ಯಾರಂಟಿ ಪಟ್ಟಿಯಿಂದ ಕೈಬಿಡಲಾಗುತ್ತಿದೆ.

ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಾಧ್ಯವಾಗದೆ ರಾಜ್ಯದಲ್ಲಿ ರಸ್ತೆ, ನೀರಾವರಿ, ಆಸ್ಪತ್ರೆ ಹಾಗೂ ಶಾಲೆಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ ಸಿಗುತ್ತಿಲ್ಲ. ಶಾಸಕರ ಕ್ಷೇತ್ರಗಳ ಅಭಿವೃದ್ಧಿ ನಿಧಿಯನ್ನೂ ಸರ್ಕಾರ ತಡೆಹಿಡಿದಿದೆ ಎಂದು ದೂರಿದರು.

ಆಡಳಿತ ಯಂತ್ರ ಕುಸಿತ

ಸಿಎಂ ಕುರ್ಚಿ ಕಗ್ಗಂಟು ಆರಂಭದಿಂದ ಈವರೆಗೂ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಹಳಿ ತಪ್ಪಿದೆ. ಕೇವಲ ಜಾಹೀರಾತುಗಳ ಮೂಲಕವೇ ಸರ್ಕಾರ ಜೀವಂತವಾಗಿದೆ ಎಂದು ತೋರಿಸಿಕೊಳ್ಳುವ ಹತಾಶ ಪ್ರಯತ್ನ ನಡೆಯುತ್ತಿದೆ. ರೈತರು ಮಳೆ ಹಾಗೂ ಬರಗಾಲದಿಂದ ಕಷ್ಟಪಡುತ್ತಿದ್ದರೂ ಸರ್ಕಾರ ಅವರ ನೆರವಿಗೆ ಧಾವಿಸುತ್ತಿಲ್ಲ. ಕೇವಲ ಗ್ಯಾರಂಟಿಗಳ ಬೆನ್ನುಬಿದ್ದು ರಾಜ್ಯದ ಭವಿಷ್ಯವನ್ನು ಕಾಂಗ್ರೆಸ್ ಅಂಧಕಾರಕ್ಕೆ ದೂಡುತ್ತಿದೆ," ಎಂದು ವಿಜಯೇಂದ್ರ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ಪಕ್ಷವು ಬಡವರ ಬಡತನವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಈ ಭಂಡತನದ ಆಟ ಬಹಳ ದಿನ ನಡೆಯುವುದಿಲ್ಲ ಎಂದು ಅವರು ಎಚ್ಚರಿಸಿದರು.

Read More
Next Story