x

ಕಾವೇರಿದ ಚರ್ಚೆ; ಡಿಕೆಶಿ, ವಿಜಯ್​ ಭೇಟಿ ಮುಂದೂಡಿಕೆ; ಕೊನೆಗೂ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್; ಕೊಲೆ ಕೇಸ್​: ವಿನಯ್ ಕುಲಕರ್ಣಿಗೆ ಜಾಮೀನು

ಕಾವೇರಿ ನೀರು ವಿವಾದ ಸಂಬಂಧ ಆ.13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ನೂತನ ಸಚಿವರ ಪಟ್ಟಿಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದಪಡಿಸಿದೆ. ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಗೆ ಹೈಕೋರ್ಟ್‌ ತಡೆ ನೀಡಿದೆ.


Click the Play button to hear this message in audio format

ಕಾವೇರಿ ವಿವಾದ ಭುಗಿಲೇದಿರುವ ಹಿನ್ನೆಲೆಯಲ್ಲಿ ಆಗಸ್ಟ್ 3 ರಂದು ನಿಗದಿಯಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜೊಸೇಫ್‌ವಿಜಯ್‌ಅವರ ಭೇಟಿಯು, ರದ್ದಾಗುವ ಹಂತಕ್ಕೆ ತಲುಪಿದೆ. ಇದಲ್ಲದೇ, ಕನ್ನಡ ಪರ ಸಂಘಟನೆಗಳು ಆಗಸ್ಟ್ 13 ರಂದು ರಾಜ್ಯಾದ್ಯಂತ 'ಕರ್ನಾಟಕ ಬಂದ್'ಗೆ ಕರೆ ನೀಡಲಾಗಿದೆ.

ತಮಿಳುನಾಡು ನಾಯಕನ ಭೇಟಿ ವಿಷಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೋರಿರುವ ಎಚ್ಚರಿಕೆಯು ರಾಜಕೀಯ ಮುತ್ಸದ್ಧಿತನಕ್ಕೆ ನಿದರ್ಶನವಾಗಿದೆ. ಪರಿಸ್ಥಿತಿ ತಿಳಿಯಾದ ಬಳಿಕ ಬರಲಿ, ಸದ್ಯಕ್ಕೆ ವಿಜಯ್ ಅವರ ಭೇಟಿ ಅನಗತ್ಯ ಸಮಸ್ಯೆಗಳಿಗೆ ನಾಂದಿ ಹಾಡಬಹುದು ಎಂದು ಸಿಎಂ ಶಿವಕುಮಾರ್ ಅವರು ನೀಡಿದ ಹೇಳಿಕೆ, ಕೇವಲ ಆಡಳಿತಾತ್ಮಕ ಸೂಚನೆಯಲ್ಲ, ಬದಲಾಗಿ ಭವಿಷ್ಯದ ಅಹಿತಕರ ಘಟನೆಗಳನ್ನು ತಡೆಯುವ ಮುಂಜಾಗ್ರತಾ ಕ್ರಮವಾಗಿದೆ.

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇರ ಎಚ್ಚರಿಕೆಯು ಕನ್ನಡಿಗರ ಭಾವನೆಗಳನ್ನು ತೋರಿಸಿದೆ. ವಿಜಯ್ ಅವರು ತಮಿಳುನಾಡಿನ ಹಿತಾಸಕ್ತಿ ಕಾಪಾಡುವ ನಾಯಕ. ನಮ್ಮ ರೈತರು ಕಾವೇರಿ ನೀರಿಗಾಗಿ ಪರದಾಡುತ್ತಿರುವಾಗ, ತಮಿಳುನಾಡಿನ ನಾಯಕನನ್ನು ಬರಮಾಡಿಕೊಳ್ಳುವುದು ಕನ್ನಡಿಗರಿಗೆ ಮಾಡುವ ಅವಮಾನ ಎಂದು ಅವರು ಗುಡುಗಿದ್ದಾರೆ. ವಿಜಯ್ ರಾಜ್ಯಕ್ಕೆ ಕಾಲಿಟ್ಟರೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ, ವಿರೋಧ ಪಕ್ಷವಾದ ಬಿಜೆಪಿ ಕಾವೇರಿ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ರಾಜ್ಯಾದ್ಯಂತ ಮಳೆ ಕೊರತೆಯಿಂದ ಕೃಷಿ ನಾಶವಾಗಿರುವಾಗ ತಮಿಳುನಾಡಿಗೆ ನೀರು ಬಿಡುವುದು ರೈತರ ಬದುಕಿನೊಂದಿಗೆ ಚೆಲ್ಲಾಟವಾಡಿದಂತೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಕೆಆರ್‌ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಿದರು.

ಭಾನುವಾರ ಸಚಿವರ ಪಟ್ಟಿ ಬಿಡುಗಡೆ ಸಾಧ್ಯತೆ?

ಕಳೆದ ಹಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಯ ಗೊಂದಲಕ್ಕೆ ತೆರೆ ಬಿದ್ದಿದೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ನಡೆದ ಸುದೀರ್ಘ ಸಭೆಯ ಬಳಿಕ, ಅಂತಿಮವಾಗಿ ಸಚಿವರ ಪಟ್ಟಿಗೆ ಒಪ್ಪಿಗೆ ಸಿಕ್ಕಿದ್ದು, ಸೋಮವಾರ ಅಥವಾ ಮಂಗಳವಾರ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ. ಸಚಿವ ಸಂಪುಟ ವಿಸ್ತರಣೆ ವಿಷಯವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ರಾಹುಲ್ ಗಾಂಧಿ ಅವರ ಭೇಟಿಗೆ ಕಾಲಾವಕಾಶ ಸಿಗದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ತುಸು ವಿಳಂಬವಾಗಿತ್ತು. ಆದರೆ, ಗುರುವಾರ ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ನಿರ್ಣಾಯಕ ಸಭೆ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ. ಸಭೆಯಲ್ಲಿ ರಾಹುಲ್ ಗಾಂಧಿ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮತ್ತು ಬಿ.ಕೆ. ಹರಿಪ್ರಸಾದ್ ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಪ್ರತ್ಯೇಕವಾಗಿ ತಮ್ಮ ಆಪ್ತ ಶಾಸಕರ ಪಟ್ಟಿಯನ್ನು ರಾಹುಲ್ ಗಾಂಧಿ ಅವರ ಮುಂದಿರಿಸಿದ್ದಾರೆ. ಸಚಿವ ಸ್ಥಾನದ ರೇಸ್‌ನಲ್ಲಿರುವ ಆಕಾಂಕ್ಷಿಗಳ ಪಟ್ಟಿಯನ್ನು ಪರಿಶೀಲಿಸಿದ ರಾಹುಲ್ ಗಾಂಧಿ, ಅಂತಿಮ ನಿರ್ಧಾರವನ್ನು ತಾವೇ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಎರಡು ದಿನದೊಳಗೆ ಪರಿಷ್ಕೃತ ಅಂತಿಮ ಪಟ್ಟಿಯನ್ನು ರಾಜ್ಯಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಅಥವಾ ಸೋಮವಾರ ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.

ವಿನಯ್‌ ಕುಲಕರ್ಣಿ ಶಿಕ್ಷೆ ಅಮಾನತಿನಲ್ಲಿಟ್ಟ ಹೈಕೋರ್ಟ್‌

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ, ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿಯವರಿಗೆ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ವಿನಯ್ ಕುಲಕರ್ಣಿ ಸೇರಿದಂತೆ ಪ್ರಕರಣದ ಇತರೆ ನಾಲ್ವರು ದೋಷಿಗಳ ಶಿಕ್ಷೆಯನ್ನು ಅಮಾನತಿನಲ್ಲಿಡಲಾಗಿದೆ. ನ್ಯಾಯಾಲಯವು ವಿಧಿಸಿರುವ ಪ್ರಮುಖ ಷರತ್ತುಗಳೆಂದರೆ, 5 ಲಕ್ಷ ರೂಪಾಯಿ ಮೌಲ್ಯದ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಒದಗಿಸಬೇಕು. ನ್ಯಾಯಾಲಯದ ಅನುಮತಿಯಿಲ್ಲದೆ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಹೇಳಿದೆ. ವಿನಯ್‌ಕುಲರ್ಣಿ ಅವರ ಜತೆಗೆ ಚನ್ನಕೇಶವ ಟಿಂಗರೀಕರ್ ಸೇರಿ 10 ಮಂದಿಗೆ ಜಾಮೀನು ಮಂಜೂರು ಮಾಡಲಾಗಿದೆ. ವಿನಯ್ ಕುಲಕರ್ಣಿಯವರನ್ನು ದೋಷಿ ಎಂದು ಪರಿಗಣಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿರುವುದರಿಂದ, ಅವರ ಶಾಸಕ ಸ್ಥಾನಕ್ಕೆ ಇದ್ದ ಕಾನೂನು ಅಡಚಣೆಗಳು ನಿವಾರಣೆಯಾಗಿ, ಅವರಿಗೆ ಮರುಜೀವ ಸಿಕ್ಕಂತಾಗಿದೆ.

ಈ ಆದೇಶವು ನ್ಯಾಯಾಂಗ ವ್ಯವಸ್ಥೆಯ ಮೇಲ್ಮನವಿ ಪ್ರಕ್ರಿಯೆಯ ಭಾಗವಾಗಿದೆ. "ಶಿಕ್ಷೆಯ ಅಮಾನತು" ಅಂದರೆ ಆರೋಪದಿಂದ ಮುಕ್ತರಾದರು ಎಂದಲ್ಲ, ಬದಲಾಗಿ ಮೇಲ್ಮನವಿಯ ಅಂತಿಮ ತೀರ್ಪು ಬರುವವರೆಗೆ ಶಿಕ್ಷೆಯ ಅನುಭವವನ್ನು ತಡೆಹಿಡಿಯಲಾಗಿದೆ ಎಂದು ಅರ್ಥ. ಮುಂದಿನ ದಿನಗಳಲ್ಲಿ ನಡೆಯಲಿರುವ ವಾದ-ಪ್ರತಿವಾದಗಳು ಇಡೀ ಪ್ರಕರಣಕ್ಕೆ ಅಂತಿಮ ಮುದ್ರೆ ಒತ್ತಲಿವೆ.

Read More
Next Story