
Internal Reservation| ನಾಗಮೋಹನ್ ದಾಸ್ ವರದಿ ತಿರಸ್ಕರಿಸಲು ಬಲಗೈ ಸಮುದಾಯ ಆಗ್ರಹ
ಪ್ರತಿಭಟನೆಯು ಕೇವಲ ಮೀಸಲಾತಿಯ ಪ್ರಶ್ನೆಯಲ್ಲ, ಬದಲಾಗಿ ಸಮುದಾಯದ ಅಸ್ಮಿತೆಯಾಗಿದೆ. ಒಳಮೀಸಲಾತಿ ವಿಚಾರದಲ್ಲಿ ಸರ್ಕಾರವು ಸಮರ್ಪಕವಾಗಿ ನಡೆದುಕೊಳ್ಳಬೇಕು ಎಂದು ಸಮುದಾಯದ ಮುಖಂಡರು ಒತ್ತಾಯಿಸಿದರು.
ರಾಜ್ಯದಲ್ಲಿ ಒಳಮೀಸಲಾತಿ ವಿವಾದವು ತೀವ್ರ ಸ್ವರೂಪ ಪಡೆದುಕೊಂಡಿದೆ. ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯು ಅವೈಜ್ಞಾನಿಕ ಮತ್ತು ಪಕ್ಷಪಾತದಿಂದ ಕೂಡಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟವು ಬುಧವಾರ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಹಕ್ಕುಗಳ ರಕ್ಷಣೆಗಾಗಿ ಆಗ್ರಹಿಸಿದರು.
ಪ್ರತಿಭಟನೆಯು ಕೇವಲ ಮೀಸಲಾತಿ ಹಂಚಿಕೆಯ ಪ್ರಶ್ನೆಯಲ್ಲ, ಬದಲಾಗಿ ಒಂದು ಸಮುದಾಯದ ಅಸ್ಮಿತೆಯಾಗಿದೆ. ಹೀಗಾಗಿ ಒಳಮೀಸಲಾತಿ ವಿಚಾರದಲ್ಲಿ ಸರ್ಕಾರವು ಸಮರ್ಪಕವಾಗಿ ನಡೆದುಕೊಳ್ಳಬೇಕು ಎಂದು ಸಮುದಾಯದ ಮುಖಂಡರು ಒತ್ತಾಯಿಸಿದರು. ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಆಯೋಗದ ವರದಿಯು ಸಮಗ್ರವಾಗಿಲ್ಲ, ತರಾತುರಿಯಲ್ಲಿ ಸಿದ್ಧಪಡಿಸಲಾಗಿದೆ. ಆಯೋಗವು ವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸದೇ ಕೆಲ ನಿರ್ದಿಷ್ಟ ಗುಂಪುಗಳಿಗೆ ಅನುಕೂಲವಾಗುವಂತೆ ವರದಿ ನೀಡಿದೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಂತಹ ಮಹಾನಗರಗಳಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಬಲಗೈ ಸಮುದಾಯದ ಜನರಿದ್ದಾರೆ. ಆದರೆ, ಆಯೋಗವು ಕೇವಲ ಶೇ.30 ಸಮೀಕ್ಷೆಯನ್ನು ಮಾತ್ರ ಪೂರ್ಣಗೊಳಿಸಿದೆ. ಈ ಅಪೂರ್ಣ ದತ್ತಾಂಶದ ಆಧಾರದ ಮೇಲೆ ಒಳ ಮೀಸಲಾತಿಯನ್ನು ಹಂಚಿಕೆ ಮಾಡುವುದು ಬಲಗೈ ಸಮುದಾಯಕ್ಕೆ ಮಾಡುವ ಐತಿಹಾಸಿಕ ಅನ್ಯಾಯ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ವರದಿ ತಿರಸ್ಕರಿಸಿ, ಮರು ಸಮೀಕ್ಷೆಗೆ ಆಗ್ರಹ
ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಸರ್ಕಾರ ಕೂಡಲೇ ತಿರಸ್ಕರಿಸಬೇಕು. ಈ ಹಿಂದೆ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ 'ಜಾತಿ ಗಣತಿ'ಯ (ಕುಟುಂಬ ಸಮೀಕ್ಷೆ) ಅಂಕಿಅಂಶಗಳೊಂದಿಗೆ ಪ್ರಸ್ತುತ ವರದಿಯನ್ನು ಹೋಲಿಕೆ ಮಾಡಬೇಕು. ಈ ಎರಡು ವರದಿಗಳ ನಡುವೆ ವ್ಯತ್ಯಾಸ ಕಂಡುಬಂದರೆ, ಪರಿಶಿಷ್ಟ ಜಾತಿಯ ಕುಟುಂಬಗಳ ಮರು ಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂಬುದು ಸಮುದಾಯದ ಆಗ್ರಹವಾಗಿದೆ. ಕಳೆದ ವರ್ಷ ಸರ್ಕಾರ ಹೊರಡಿಸಿದ ಮೀಸಲಾತಿ ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು. ಈ ಆದೇಶವು ಸಮುದಾಯದ ಹಿತಾಸಕ್ತಿಗೆ ಮಾರಕವಾಗಿದೆ. ಸರ್ಕಾರವು ಜಾತಿ ಪ್ರಮಾಣ ಪತ್ರಗಳನ್ನು ಎ, ಬಿ, ಸಿ ಮತ್ತು ಡಿ ಎಂದು ವರ್ಗೀಕರಿಸಿರುವುದು ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ವರ್ಗೀಕರಣದ ಬದಲು ಮೂಲ ಜಾತಿ ಹೆಸರಿನಲ್ಲೇ ಪ್ರಮಾಣ ಪತ್ರಗಳನ್ನು ನೀಡಬೇಕು. ಈಗಾಗಲೇ ನೀಡಿರುವ ಖಾಯಂ ಜಾತಿ ಪ್ರಮಾಣ ಪತ್ರಗಳನ್ನು ಯಾವುದೇ ಷರತ್ತಿಲ್ಲದೆ ಮಾನ್ಯ ಮಾಡಬೇಕು ಎಂಬುದು ದೃಢವಾದ ಬೇಡಿಕೆಯಾಗಿದೆ.
ಕೇಂದ್ರದ ಗಣತಿಯವರೆಗೂ ಯಾವುದೇ ಕ್ರಮ ಬೇಡ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ, ಸರ್ಕಾರವು ನಾಗಮೋಹನ್ ದಾಸ್ ಆಯೋಗಕ್ಕೆ ಸ್ಪಷ್ಟ ನಿಬಂಧನೆಗಳನ್ನು ವಿಧಿಸಿತ್ತು. ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಮುಂತಾದ ಮೂಲ ಜಾತಿಗಳ ದತ್ತಾಂಶ ಸಂಗ್ರಹಿಸುವುದು ಆಯೋಗದ ಕರ್ತವ್ಯವಾಗಿತ್ತು. ಆದರೆ ಆಯೋಗವು ವೈಜ್ಞಾನಿಕವಾಗಿ ಕೆಲಸ ಮಾಡದೆ, ಕೇವಲ 2-3 ತಿಂಗಳಲ್ಲಿ ತರಾತುರಿಯಲ್ಲಿ ವರದಿ ನೀಡಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಒಳಮೀಸಲಾತಿ ನೀಡುವ ಮೊದಲು ಆಯಾ ಸಮುದಾಯಗಳ ಪ್ರಾತಿನಿಧ್ಯದ ಬಗ್ಗೆ ಸರಿಯಾದ ದತ್ತಾಂಶ ಇರಬೇಕು. ಆದರೆ ಇಲ್ಲಿ ದತ್ತಾಂಶಗಳೇ ದೋಷಪೂರಿತವಾಗಿವೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಜಾತಿ ಗಣತಿ ನಡೆಸಲು ಮುಂದಾಗಿರುವುದರಿಂದ, ಆ ವರದಿ ಬರುವವರೆಗೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು.
ತೀವ್ರ ಸ್ವರೂಪ ಹೋರಾಟದ ಎಚ್ಚರಿಕೆ
ಕರ್ನಾಟಕ ಬಲಗೈ ಸಮುದಾಯದ ಒಕ್ಕೂಟದ ಅಧ್ಯಕ್ಷರಾದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ನಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ನಾವು ಸಹಿಸುವುದಿಲ್ಲ. ಹಳೆಯ ಮೀಸಲಾತಿ ಪದ್ಧತಿಯೇ ಮುಂದುವರಿಯಬೇಕು ಅಥವಾ ವೈಜ್ಞಾನಿಕ ದತ್ತಾಂಶದ ಆಧಾರದ ಮೇಲೆ ನ್ಯಾಯಯುತ ಹಂಚಿಕೆಯಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಈ ಹೋರಾಟವು ರಾಜ್ಯಾದ್ಯಂತ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.

