x

ಜಾತಿಗಣತಿ ವರದಿ ಜಾರಿಯಾಗದಿದ್ದರೆ ಸಿದ್ದರಾಮಯ್ಯ ‌ಸುಮ್ಮನಿರಲ್ಲ; ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ

ಸಿದ್ದರಾಮಯ್ಯ ಹಿಂದುಳಿದ ನಾಯಕ ಸತೀಶ್ ಜಾರಕಿಹೊಳಿ ನಡೆ ಬಗ್ಗೆ ಅನುಮಾನವಿದ್ದು ಮುಂದೆ ಎಲ್ಲಾ ಬಹಿರಂಗ ಆಗಲಿದೆ ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಹೇಳಿದ್ದಾರೆ.


ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಹಿಂದುಳಿದ ಜಾತಿಗಳ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ. ಇದೇ ವೇಳೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ವಿಚಾರ ಮುನ್ನೆಲೆಗೆ ಬಂದಿದೆ. ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.‌ರಾಮಚಂದ್ರಪ್ಪ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರ ಮಾತನಾಡಿದ್ದಾರೆ.

ಸೆಪ್ಟೆಂಬರ್ 6 ರಂದು ಹಿಂದುಳಿದ ಜಾತಿಗಳ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹಿಂದುಳಿದ ಜಾತಿಗಳ ಒಕ್ಕೂಟ ರಚನೆಯಾಗಿ 25 ವರ್ಷ ಆಗಿದೆ, ಈಗ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಸಮಾವೇಶ ನಡೆಸುತ್ತಿರುವುದು ಕಾಕತಾಳಿಯವಾಗಿದೆ ಎಂದರು.

ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ನೀಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ಜಾತಿಗಣತಿ ವರದಿ ಜಾರಿ ಮಾಡದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಜಾಗೃತಿ ಸಮಾವೇಶದಲ್ಲಿ ಈ ವರದಿ ಜಾರಿ ಬಗ್ಗೆ ಆಗ್ರಹ ಮಾಡಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಮೀಕ್ಷೆಯ ವರದಿ ಜಾರಿ ಮಾಡುತ್ತೇವೆ ಎಂದು ಈ ಹಿಂದೆ ಹೇಳಿತ್ತು ಆ ಮಾತಿಗೆ ತಪ್ಪಿದೆ. ಕಾಂಗ್ರೆಸ್ ಗೆ ನಮ್ಮ ಬೆಂಬಲ ಬೇಕು ಎಂದಾದರೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ಮಾಡಲಿ ನಮ್ಮ ಬೆಂಬಲ ಬೇಡ ಎನ್ನುವುದಾದರೆ ಸಮೀಕ್ಷೆಯ ವರದಿ ತಿರಸ್ಕಾರ ಮಾಡಲಿ ಎಂದು ಎಚ್ಚರಿಕೆ ನೀಡಿದರು.

ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಈ ಹಿಂದೆ ನಡೆಸಿದ್ದ ಸಮೀಕ್ಷಾ ವರದಿ ಜಾರಿಯಾಗಲು ಅಡ್ಡಿಪಡಿಸಿದ್ದು ಮೇಲ್ವರ್ಗದ ಜನರ ಜತೆಗೆ ಅಹಿಂದ ಜನರು ಇದ್ದಾರೆ. ಜಯಪ್ರಕಾಶ್ ಹೆಗ್ಡೆ ವರದಿ ಜಾರಿಗೆ ಕೆಲ ಅಹಿಂದ ನಾಯಕರು ಅಡ್ಡಿ ಪಡಿಸಿದ್ದಾರೆ ಯಾರು ಎಂದು ಸಮಯ ಬಂದಾಗ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಹೈಕಮಾಂಡ್ ಮೀರಿ ನಿರ್ಧಾರ ಕೈಗೊಳ್ಳಲು ಆಗಲಿಲ್ಲ. ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಜಾರಿಗೊಳಿಸಲು ಅವಕಾಶ ನೀಡಬೇಕಿತ್ತು, ಆದರೆ ನೀಡಲಿಲ್ಲ ಇದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಆಗಲಿದೆ. ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಬಿಟ್ಟು ಬೇರೆ ಯಾರೂ ಇಲ್ಲ. ಸಿದ್ದರಾಮಯ್ಯ ಅವರು ಜೀವಂತ ಇರುವವರೆಗೂ ಅವರೇ ನಮ್ಮ ನಾಯಕರು ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ಅವರು ಹಿಂದುಳಿದ ವರ್ಗಗಳ ನಾಯಕ ಎನ್ನುವ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ರಾಮಚಂದ್ರಪ್ಪ ಸತೀಶ್ ಜಾರಕಿಹೊಳಿ ಹಿಂದುಳಿದ ವರ್ಗಗಳ ನಾಯಕ ಅಲ್ಲ ಅಹಿಂದ ನಾಯಕ ಎಂದು ತಿರುಗೇಟು ನೀಡಿದರು. ಸತೀಶ್ ಜಾರಕಿಹೊಳಿ ನಡೆ ಬಗ್ಗೆ ಅನುಮಾನ ಬರುತ್ತಿದೆ ಅನುಮಾನವಿದೆ ಈಗ ಎಲ್ಲವನ್ನೂ ಹೇಳಲು ಆಗಲ್ಲ ಸಮಯ ಬಂದಾಗ ಹೇಳುತ್ತೇನೆ ಎಂದರು

ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಶಕ್ತಿ ಕುಗ್ಗಿದೆ ಅಂತಾ ಯಾರೂ ಭಾವಿಸಬಾರದು ಅವರ ಶಕ್ತಿ ಕುಂದಿಲ್ಲ ಎಂದರು. ಸಚಿವ ಸಂಪುಟ ರಚನೆ ಖಾತೆಗಳ ಹಂಚಿಕೆಯ ಗೊಂದಲದಲ್ಲಿ ಸರ್ಕಾರ ಇದೆ. ಇದಾದ ಬಳಿಕ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಜಾರಿಮಾಡದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಚಳವಳಿಗಳನ್ನು ಮಾಡಬೇಕಾಗುತ್ತದೆ ಈ ಹೋರಾಟದ ನೇತೃತ್ವವನ್ನಹ ಸಿದ್ದರಾಮಯ್ಯ ವಹಿಸಿಕೊಳ್ಳಬೇಕು ಎಂದು ಹೇಳಿದರು.

ನಮ್ಮ‌ಹಿತವನ್ನು ಸಿದ್ದರಾಮಯ್ಯ ಮಾತ್ರ ಕಾಪಾಡಬಲ್ಲರು ಬೇರೆ ಯಾರೂ ಇಲ್ಲ ಎಂದು ತಿಳಿಸಿದರು..ಸಿದ್ದರಾಮಯ್ಯ ಅವರ ಕಸನು ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯ ವರದಿ ಜಾರಿ ಮಾಡುವುದು. ಆದರೆ ವರದಿ ಜಾರಿಯಾಗದಿದ್ದರೆ ಸಿದ್ದರಾಮಯ್ಯ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನೆ ಮಾಡಿದರು.

Read More
Next Story