
ಸದನ ಮುಂದೂಡಿಕೆ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ: ಮರುಕಳಿಸಲು ಅವಕಾಶ ನೀಡಲ್ಲ ಎಂದ ಸರ್ಕಾರ
ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಕಾರಣ ಸಭಾಧ್ಯಕ್ಷರ ಅಸಮಾಧಾನ ನ್ಯಾಯಯುತವಾಗಿದೆ. 230 ಪ್ರಶ್ನೆಗಳ ಪೈಕಿ ಕೇವಲ 84ಕ್ಕೆ ಉತ್ತರ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಚುಕ್ಕೆ ಗುರುತು ಇಲ್ಲದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡದ ಸರ್ಕಾರ ನಡೆಗೆ ಸಭಾಧ್ಯಕ್ಷ ಯು.ಟಿ.ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಸದನದಲ್ಲಿ ಸಮಸ್ಯೆಯನ್ನು ಶಮನಗೊಳಿಸುವ ಪ್ರಯತ್ನ ನಡೆಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸರ್ಕಾರ ಪರವಾಗಿ ವಿಷಾದ ವ್ಯಕ್ತಪಡಿಸಿದರು
ಭೋಜನ ವಿರಾಮದ ಬಳಿಕ ಸದನ ಆರಂಭಗೊಳ್ಳುತ್ತಿದ್ದಂತೆ ಸಚಿವ ಡಾ.ಜಿ. ಪರಮೇಶ್ವರ್ ಉತ್ತರ ನೀಡಿದರು. ಈ ವೇಳೆ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ ಕಾರಣ ಸಭಾಧ್ಯಕ್ಷರ ಅಸಮಾಧಾನ ನ್ಯಾಯಯುತವಾಗಿದೆ. 230 ಪ್ರಶ್ನೆಗಳ ಪೈಕಿ ಕೇವಲ 84ಕ್ಕೆ ಉತ್ತರ ನೀಡಿರುವುದು ಸರಿಯಾದ ಕ್ರಮವಲ್ಲ. ಯಾವುದೇ ಇಲಾಖೆಯ ಕಾರ್ಯದರ್ಶಿಗಳು ಮಾಡಿರುವ ಇಂತಹ ನಿರ್ಲಕ್ಷ್ಯದ ಕಾರ್ಯ ಒಪ್ಪುವಂತಹದ್ದಲ್ಲ ಎಂದರು.
ಇದನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿರುವ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸುವಂತೆ ಸೂಚನೆ ನೀಡಿದರು. ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಬಾಕಿ ಇರುವ ಪ್ರಶ್ನೆಗಳಿಗೆ ಶೀಘ್ರವಾಗಿ ಉತ್ತರ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಭಾಧ್ಯಕ್ಷರ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸಿದರು. ಸಭಾಧ್ಯಕ್ಷರು ಕೈಗೊಂಡ ತೀರ್ಮಾನವು ಅತ್ಯಂತ ಸಮಂಜಸವಾಗಿದೆ ಮತ್ತು ಇದು ಶಾಸಕಾಂಗದ ಗೌರವವನ್ನು ಎತ್ತಿಹಿಡಿಯುವಂತಿದೆ ಎಂದರು. ಕಂದಾಯ ಇಲಾಖೆಯ 90 ಪ್ರಶ್ನೆಗಳ ಪೈಕಿ ಕೇವಲ 20 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ವಸತಿ ಇಲಾಖೆಯ 31 ಪ್ರಶ್ನೆಗಳಲ್ಲಿ ಕೇವಲ 4 ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ಕಿದೆ. ಸರ್ಕಾರದ ಅಧಿಕಾರಿಗಳು ಸದನವನ್ನು ಮತ್ತು ಶಾಸಕರ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮುಖ್ಯ ಕಾರ್ಯದರ್ಶಿಗಳು ಕೂಡ ಈ ಬಗ್ಗೆ ಸರಿಯಾದ ಮೇಲ್ವಿಚಾರಣೆ ನಡೆಸಿಲ್ಲ. ಇದು ಸದನದ ದಾಖಲೆಯಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ಕಿಡಿಕಾರಿದರು.
ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಕೇಳುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರ ನೀಡಬೇಕಾದದ್ದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿ. ಆದರೆ, ಬಹುತೇಕ ಸಚಿವರು ಮತ್ತು ಅಧಿಕಾರಿಗಳು ಈ ಬಗ್ಗೆ ಬೇಜವಾಬ್ದಾರಿತನ ತೋರಿದ್ದರಿಂದ ಸ್ಪೀಕರ್ ಯು.ಟಿ. ಖಾದರ್ ಅವರು, ಸದನ ನಡೆಯುವುದು ಶಾಸಕರಿಗಾಗಿ, ಸಚಿವರಿಗಲ್ಲ ಎಂದು ಮಾರ್ಮಿಕವಾಗಿ ನುಡಿದು, ಸ್ಪಷ್ಟನೆ ಸಿಗುವವರೆಗೂ ಸದನ ನಡೆಸುವುದಿಲ್ಲ ಎಂದು ಹೊರನಡೆದಿದ್ದರು.

