Ballot Paper:  ಇವಿಎಂ ವಿರುದ್ಧ ಕರ್ನಾಟಕ ಕಾಂಗ್ರೆಸ್​​ನ ಬ್ಯಾಲೆಟ್ ಪೇಪರ್ ಅಸ್ತ್ರಕ್ಕೆ ಕಾನೂನು ಮುದ್ರೆ
x

Ballot Paper: ಇವಿಎಂ ವಿರುದ್ಧ ಕರ್ನಾಟಕ ಕಾಂಗ್ರೆಸ್​​ನ 'ಬ್ಯಾಲೆಟ್ ಪೇಪರ್' ಅಸ್ತ್ರಕ್ಕೆ ಕಾನೂನು ಮುದ್ರೆ

ಬಿಜೆಪಿ ನಾಯಕರ ಸತತ ವಿರೋಧದ ನಡುವೆಯೂ ವಿಧಾನಸಭೆಯ ಕಲಾಪದಲ್ಲಿ ವಿಧೇಯಕ ಮಂಡನೆ ಮಾಡಿ ಅಂಗೀ ಕಾರ ಪಡೆದುಕೊಂಡಿದ್ದು, ಇವಿಎಂ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಿದೆ.


Click the Play button to hear this message in audio format

ಕರ್ನಾಟಕ ವಿಧಾನಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ (ವಿದ್ಯುನ್ಮಾನ ಮತಯಂತ್ರ) ಬದಲಾಗಿ ಬ್ಯಾಲೆಟ್ ಪೇಪರ್ (ಮತಪತ್ರ) ಬಳಸಲು ಅವಕಾಶ ಕಲ್ಪಿಸುವ ಮಹತ್ವದ '2026ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ'ವನ್ನು ಮಂಡಿಸಲಾಯಿತು.

ಈ ವಿಚಾರ ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಭಾರಿ ವಾಗ್ವಾದಕ್ಕೆ ಕಾರಣವಾಯಿತು. ಬಿಜೆಪಿ ನಾಯಕರ ತೀವ್ರ ವಿರೋಧ ಮತ್ತು ಆಕ್ಷೇಪಗಳ ನಡುವೆಯೂ, ಬಹುಮತದ ಆಧಾರದ ಮೇಲೆ ರಾಜ್ಯ ಸರ್ಕಾರವು ಈ ವಿಧೇಯಕವನ್ನು ವಿಧಾನಸಭೆಯಲ್ಲಿ ಯಶಸ್ವಿಯಾಗಿ ಅಂಗೀಕರಿಸಿದೆ.

ಇವಿಎಂ ಮೇಲಿನ ಅಪನಂಬಿಕೆ

ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಸಂವಿಧಾನದ 326ನೇ ವಿಧಿಯ ಅನ್ವಯ ಪ್ರತಿಯೊಬ್ಬರಿಗೂ ಕಡ್ಡಾಯ ಮತದಾನದ ಹಕ್ಕಿದ್ದು, ಚುನಾವಣೆಗಳು ಮುಕ್ತ, ನ್ಯಾಯಸಮ್ಮತ ಹಾಗೂ ಗೌಪ್ಯತೆಯಿಂದ ಕೂಡಿರಬೇಕು ಎಂದು ಪ್ರತಿಪಾದಿಸಿದರು. ಇತ್ತೀಚಿನ ದಿನಗಳಲ್ಲಿ ಇವಿಎಂ ಯಂತ್ರಗಳ ಮೇಲೆ ಜನರ ವಿಶ್ವಾಸ ಕಡಿಮೆಯಾಗುತ್ತಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ ಐದು ಗಂಟೆಗಳ ಅಂತರದಲ್ಲಿ ಹತ್ತು ಲಕ್ಷ ಹೆಚ್ಚುವರಿ ಮತಗಳು ಚಲಾವಣೆಯಾಗಿರುವ ಬಗ್ಗೆ ಚುನಾವಣಾ ಆಯೋಗದ ವರದಿಯೇ ಉಲ್ಲೇಖಿಸಿದೆ. ಜೊತೆಗೆ ಹರಿಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆಗಳಲ್ಲೂ ಮತದಾನದ ಪ್ರಮಾಣದಲ್ಲಿ ದಿಢೀರ್ ಏರಿಕೆಯಾದ ಉದಾಹರಣೆಗಳಿವೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದಿಂದ ಯಾವುದೇ ಸೂಕ್ತ ಸ್ಪಷ್ಟನೆ ಸಿಗದ ಹಿನ್ನೆಲೆಯಲ್ಲಿ, ಅತ್ಯಂತ ಪಾರದರ್ಶಕ ಚುನಾವಣೆ ನಡೆಸುವ ಉದ್ದೇಶದಿಂದ ಬ್ಯಾಲೆಟ್ ಪೇಪರ್ ಮತ್ತು ಬ್ಯಾಲೆಟ್ ಬಾಕ್ಸ್ ವ್ಯವಸ್ಥೆಯನ್ನು ಮರಳಿ ತರಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.

ಪೇಪರ್ ಬ್ಯಾಲೆಟ್‌ನಲ್ಲಿ ಕಳ್ಳತನವಾದರೆ ಯಾರು ಕದ್ದಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ, ಆದರೆ ಇವಿಎಂನಲ್ಲಿ ಅದು ಸಾಧ್ಯವಿಲ್ಲ, ಹೀಗಾಗಿ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಇದು ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು.

'ತುಘಲಕ್ ದರ್ಬಾರ್' ಟೀಕೆ

ಸರ್ಕಾರದ ಈ ನಡೆಯನ್ನು ತೀವ್ರವಾಗಿ ವಿರೋಧಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಇದೊಂದು 'ತುಘಲಕ್ ದರ್ಬಾರ್' ಎಂದು ಕಟುವಾಗಿ ಲೇವಡಿ ಮಾಡಿದರು. ಮೂಲತಃ ಇವಿಎಂ ಯಂತ್ರಗಳನ್ನು ತಂದಿದ್ದೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು. ಅನೇಕ ತಜ್ಞರ ಜೊತೆ ಸುದೀರ್ಘ ಚರ್ಚೆ ನಡೆಸಿಯೇ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಈಗಾಗಲೇ ದೇಶದಲ್ಲಿ ಬಹಳಷ್ಟು ಚುನಾವಣೆಗಳು ಇವಿಎಂ ಮೂಲಕವೇ ಯಶಸ್ವಿಯಾಗಿ ನಡೆದಿವೆ ಮತ್ತು ಸುಪ್ರೀಂ ಕೋರ್ಟ್ ಕೂಡ ಇವಿಎಂ ವ್ಯವಸ್ಥೆಯನ್ನು ಎತ್ತಿ ಹಿಡಿದಿದೆ. ಕಾಂಗ್ರೆಸ್ ನಾಯಕರು ತಮ್ಮ ಸೋಲಿಗೆ ನೈಜ ಕಾರಣ ಹುಡುಕುವ ಬದಲು, ಬೀಗ ಕಳೆದುಕೊಂಡ ಜಾಗದಲ್ಲಿ ಹುಡುಕದೆ ಬೇರೆಡೆ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಕುಣಿಗಲ್‌ನಲ್ಲಿ ನಡೆದ ಬ್ಯಾಲೆಟ್ ಚುನಾವಣೆಯಲ್ಲಿ ಕಳ್ಳ ಮತದಾನವಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ (ಐಟಿ-ಬಿಟಿ) ಮುಂಚೂಣಿಯಲ್ಲಿರುವ ಕರ್ನಾಟಕವನ್ನು ಐಟಿ-ಬಿಟಿ ಸಚಿವರೇ ಶಿಲಾಯುಗಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್‌ಗೆ ತನ್ನದೇ ಆದ ಸ್ವಂತಿಕೆ ಇಲ್ಲ, ಹೀಗಾಗಿ ಈ ಬಿಲ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಹಳೆಯ ಪದ್ಧತಿ: ಶಾಸಕರ ಆಕ್ರೋಶ

ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಈ ತಿದ್ದುಪಡಿ ವಿಧೇಯಕದಲ್ಲಿ ಜನಸಾಮಾನ್ಯರ ಹಿತಾಸಕ್ತಿಗಿಂತ ಕಾಂಗ್ರೆಸ್ ಪಕ್ಷದ ವೈಯಕ್ತಿಕ ಮತ್ತು ರಾಜಕೀಯ ಹಿತಾಸಕ್ತಿಯೇ ಅಡಗಿದೆ ಎಂದು ಆರೋಪಿಸಿದರು. ಇಪ್ಪತ್ತು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮತಪೆಟ್ಟಿಗೆಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂಬುದನ್ನು ತಡೆಯಲೆಂದೇ ಇವಿಎಂ ತರಲಾಗಿತ್ತು. ಈಗ ಮತ್ತೆ ಬ್ಯಾಲೆಟ್ ಪೇಪರ್ ತರುತ್ತಿರುವುದರ ಹಿಂದೆ ಪೊಲೀಸ್ ವ್ಯವಸ್ಥೆ ಹಾಗೂ ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುವ ಬಹುದೊಡ್ಡ ಹುನ್ನಾರ ಅಡಗಿದೆ. ಸೋತ ತಕ್ಷಣ ಇವಿಎಂ ಸರಿ ಇಲ್ಲ, ಮತದಾರರ ಪಟ್ಟಿ ಸರಿ ಇಲ್ಲ, ಕೊನೆಗೆ ಮತದಾರರೇ ಸರಿ ಇಲ್ಲ ಎನ್ನುವ ಕಾಂಗ್ರೆಸ್ ಮನಸ್ಥಿತಿ ಸರಿಯಿಲ್ಲ ಎಂದು ಕಿಡಿಕಾರಿದರು.

ಶಾಸಕ ಸುರೇಶ್ ಕುಮಾರ್ ಅವರು ಸಚಿವ ಪ್ರಿಯಾಂಕ್ ಖರ್ಗೆ ಕಾಲೆಳೆದು, ಗ್ರಾಮೀಣಾಭಿವೃದ್ಧಿ ಸಚಿವರು ಮಾಹಿತಿ ತಂತ್ರಜ್ಞಾನ ಸಚಿವರ ವಿರುದ್ಧವೇ ಕೆಲಸ ಮಾಡುತ್ತಿದ್ದು, ಒಂದೇ ವ್ಯಕ್ತಿ ನಿರ್ವಹಿಸುತ್ತಿರುವ ಎರಡು ಖಾತೆಗಳು ಪರಸ್ಪರ ವಿರುದ್ಧವಾಗಿವೆ ಎಂದು ವ್ಯಂಗ್ಯವಾಡಿದರು. ಚುನಾವಣಾ ಆಯೋಗವು ಇವಿಎಂ ಹ್ಯಾಕಥಾನ್ ನಡೆಸಿ ಬಹಿರಂಗ ಸವಾಲು ಹಾಕಿದ್ದರೂ ಯಾರೂ ಸಾಬೀತುಪಡಿಸಲಿಲ್ಲ. ಇದು ಉತ್ತರ ಪ್ರದೇಶದ ಅಮೇಥಿ ಕ್ಷೇತ್ರಕ್ಕೆ ಅನುಕೂಲವಾಗುವಂತೆ ತಂದಿರುವ ಬಿಲ್ ಆಗಿದ್ದು, ಸಿಲಿಕಾನ್ ಸಿಟಿಗೆ ಬಗೆಯುತ್ತಿರುವ ದೊಡ್ಡ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಎಚ್.ಕೆ. ಪಾಟೀಲ್ ಸಮರ್ಥನೆ

ಆಡಳಿತ ಪಕ್ಷದ ಪರವಾಗಿ ಧ್ವನಿಗೂಡಿಸಿದ ಸಚಿವ ಎಚ್.ಕೆ. ಪಾಟೀಲ್, ಈ ಹಿಂದೆ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೂಡ ಇವಿಎಂ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎಂದು ಸುದೀರ್ಘ ಪತ್ರ ಬರೆದಿದ್ದರು ಮತ್ತು ಇವಿಎಂ ಎಥಿಕಲ್ ಹ್ಯಾಕಿಂಗ್ ಕುರಿತು ತಾವೇ ಚುನಾವಣಾ ಆಯೋಗಕ್ಕೂ ಮನವಿ ಮಾಡಿದ್ದಾಗಿ ಸ್ಪಷ್ಟಪಡಿಸಿದರು.

ಇದೇ ವೇಳೆ ಸದನದಲ್ಲಿ ಅಳಂದ ಮತಕಳ್ಳತನದ ವಿಚಾರ ಭಾರಿ ವಾಕ್ಸಮರಕ್ಕೆ ಕಾರಣವಾಯಿತು. ಅಳಂದದಲ್ಲಿ ಕಳ್ಳ ಮತದಾನ ಈಗಾಗಲೇ ಸಾಬೀತಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದಾಗ, ಮಧ್ಯಪ್ರವೇಶಿಸಿದ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ, ಆ ವರದಿಯನ್ನು ಮೊದಲು ಸದನದಲ್ಲಿ ಮಂಡಿಸಿ, ಆಗ ನೀವೇ ಸಿಕ್ಕಿಹಾಕಿಕೊಳ್ಳುತ್ತೀರಿ ಎಂದು ಸವಾಲು ಹಾಕಿದರು. ಇದಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಈ ಪ್ರಕರಣದಲ್ಲಿ ಇಪ್ಪತ್ತೆರಡು ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಅದರಲ್ಲಿ ಎ-1 ಹಾಗೂ ಎ-2 ಆರೋಪಿಗಳಾಗಿ ಬಿಜೆಪಿ ಅಭ್ಯರ್ಥಿಗಳು ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರೇ ಇದ್ದಾರೆ ಎಂದು ಅಂಕಿ-ಅಂಶಗಳ ಸಮೇತ ಉತ್ತರಿಸಿದರು.

ಗದ್ದಲದ ನಡುವೆಯೇ ತಿದ್ದುಪಡಿ ವಿಧೇಯಕಕ್ಕೆ ಅಸ್ತು

ಬಿಜೆಪಿ ನಾಯಕರ ಈ ಎಲ್ಲಾ ಗಂಭೀರ ಆಕ್ಷೇಪಗಳು ಹಾಗೂ ಸದನದಲ್ಲಿ ನಡೆದ ತೀವ್ರ ವಾಗ್ವಾದಗಳ ನಡುವೆಯೂ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಲಿಲ್ಲ. ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಪಾರದರ್ಶಕ ಚುನಾವಣೆ ನಡೆಸಲು ಬ್ಯಾಲೆಟ್ ಪೇಪರ್ ವ್ಯವಸ್ಥೆ ಅನಿವಾರ್ಯ ಎಂದು ಸಮರ್ಥಿಸಿಕೊಂಡ ಸರ್ಕಾರವು, ಕೊನೆಗೂ ಆಡಳಿತ ಪಕ್ಷದ ಬಹುಮತದ ಆಧಾರದ ಮೇಲೆ ಈ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಇದರೊಂದಿಗೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಇವಿಎಂ ಬದಲು ಮತ್ತೆ ಹಳೆಯ ಬ್ಯಾಲೆಟ್ ಪೇಪರ್ ಪದ್ಧತಿ ಮರುಕಳಿಸುವುದು ಖಚಿತವಾಗಿದೆ.

Read More
Next Story