
ಕೆಳಮನೆಯಲ್ಲಿ ‘ಕುರ್ಚಿ’ ಕಚಗುಳಿ: ಸಿಎಂ ಕುರ್ಚಿಯಲ್ಲಿ ಕೂರಲು ಹೋದ ಶಾಸಕನ ತಡೆದ ಡಿ.ಕೆ. ಶಿವಕುಮಾರ್
ಶಾಸಕ ಉದಯ್ ಗರುಡಾಚಾರ್ ಅರಿವಿಲ್ಲದೆ ಸಿಎಂ ಸಿದ್ದರಾಮಯ್ಯ ಕುರ್ಚಿಯಲ್ಲಿ ಕೂರಲು ಹೋದಾಗ, ಪಕ್ಕದಲ್ಲೇ ಇದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ತಕ್ಷಣ ಅವರನ್ನು ತಡೆದು, ಪಕ್ಕಕ್ಕೆ ಎಳೆದ ಘಟನೆ ನಡೆಯಿತು.
ವಿಧಾನಸಭೆಯ ಕಲಾಪ ಸಾಮಾನ್ಯವಾಗಿ ಗಂಭೀರ ಚರ್ಚೆ, ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಗುತ್ತವೆ. ಆದರೆ, ಮಂಗಳವಾರದ ಕಲಾಪದಲ್ಲಿ ಇಡೀ ಸದನ ಕ್ಷಣಕಾಲ ಅಚ್ಚರಿ ಮತ್ತು ನಂತರ ನಗೆಗಡಲಲ್ಲಿ ತೇಲುವಂತೆ ಮಾಡಿದ ಸ್ವಾರಸ್ಯಕರ ಪ್ರಸಂಗವೊಂದು ನಡೆಯಿತು. ಅದು ಮುಖ್ಯಮಂತ್ರಿಗಳ ಆಸನದ ಸುತ್ತ ನಡೆದ ‘ಕುರ್ಚಿ ಪುರಾಣ’ ಆಗಿದೆ.
ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅರಿವಿಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಯಲ್ಲಿ ಕೂರಲು ಹೋದಾಗ, ಪಕ್ಕದಲ್ಲೇ ಇದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣ ಅವರನ್ನು ತಡೆದು, ಪಕ್ಕಕ್ಕೆ ಎಳೆದ ಘಟನೆ ನಡೆಯಿತು. ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರಲಿಲ್ಲ. ಅವರ ಪಕ್ಕದ ಆಸನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಳಿತಿದ್ದರು. ಈ ಸಂದರ್ಭದಲ್ಲಿ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರು ಯಾವುದೋ ವಿಷಯದ ಬಗ್ಗೆ ಮಾತನಾಡಲು ಆಡಳಿತ ಪಕ್ಷದ ಸಾಲಿನತ್ತ ಆಗಮಿಸಿದರು. ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಲೇ, ಉದಯ್ ಅವರು ಅರಿವಿಲ್ಲದೆ ಶಿವಕುಮಾರ್ ಅವರ ಎಡಭಾಗದಲ್ಲಿ ಖಾಲಿ ಇದ್ದ ಮುಖ್ಯಮಂತ್ರಿಗಳ ಆಸನದಲ್ಲಿ ಕೂರಲು ಮುಂದಾದರು. ಇದನ್ನು ಗಮನಿಸಿದ ಡಿ.ಕೆ. ಶಿವಕುಮಾರ್ ಅವರು ಹಠಾತ್ತನೆ ಚುರುಕಾಗಿ ತಮ್ಮ ಕೈ ಅಡ್ಡ ಇಟ್ಟರು. ಉದಯ್ ಅವರನ್ನು ಕುರ್ಚಿಯಲ್ಲಿ ಕೂರದಂತೆ ತಡೆದು, ತಕ್ಷಣವೇ ಅವರನ್ನು ತಮ್ಮ ಬಲಭಾಗದಲ್ಲಿದ್ದ ಮತ್ತೊಂದು ಖಾಲಿ ಆಸನದಲ್ಲಿ ಕೂರಿಸಿಕೊಂಡರು.
ಸದನದಲ್ಲಿ ಅಚ್ಚರಿ ಹಾಗೂ ಕಿಚಾಯಿಸುವಿಕೆ
ಈ ದೃಶ್ಯವನ್ನು ಕಂಡ ಸ್ಪೀಕರ್ ಯು.ಟಿ. ಖಾದರ್, ಆಡಳಿತ ಪಕ್ಷದ ಸಚಿವರು ಮತ್ತು ಪ್ರತಿಪಕ್ಷದ ಸದಸ್ಯರು ಒಂದು ಕ್ಷಣ ಅಚ್ಚರಿಗೊಂಡರು. ಮುಖ್ಯಮಂತ್ರಿಯವರ ಆಸನಕ್ಕೆ ಇರುವ ಶಿಷ್ಟಾಚಾರ ಮತ್ತು ಪಾವಿತ್ರ್ಯತೆಯ ಹಿನ್ನೆಲೆಯಲ್ಲಿ ಈ ಪ್ರಸಂಗ ಅಚ್ಚರಿ ಮೂಡಿಸಿತು. ತಕ್ಷಣವೇ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಅವರು ಸದನದಲ್ಲಿ ತಮಾಷೆಯ ದಾಟಿಯಲ್ಲಿ ಮಾತನಾಡಿ, "ಅಲ್ಲಾ ಉದಯ್ ಅವರೇ, ಯಾರೋ ಒಬ್ಬರು ಕೂರಬೇಕು ಎಂದು ಕಾದು ಕುಳಿತಿರುವ ಕುರ್ಚಿಯಲ್ಲಿ ಹೋಗಿ ನೀವು ಕೂರುತ್ತಿದ್ದೀರಲ್ಲಾ?" ಎಂದು ಲೇವಡಿ ಮಾಡಿದರು. ಸುನಿಲ್ ಕುಮಾರ್ ಈ ಮಾತಿನ ಒಳಾರ್ಥವು ಆಡಳಿತ ಪಕ್ಷದ ಒಳಗಿನ ರಾಜಕೀಯ ಪರಿಸ್ಥಿತಿಯನ್ನು ಸೂಚಿಸುವಂತಿದ್ದು, ಇಡೀ ಸದನದಲ್ಲಿ ನಗೆಯ ಅಲೆ ಎದ್ದಿತು. ಡಿ.ಕೆ. ಶಿವಕುಮಾರ್ ಮತ್ತು ಉದಯ್ ಇಬ್ಬರೂ ಈ ಮಾತನ್ನು ಕೇಳಿ ನಕ್ಕರು.
ತಾನು ಮಾಡಿದ್ದು ತಪ್ಪು ಎಂದು ಅರಿವಾಗುತ್ತಿದ್ದಂತೆಯೇ ಉದಯ್ ಗರುಡಾಚಾರ್ ಅವರು ತಲೆ ಚಚ್ಚಿಕೊಂಡರು. ನಂತರ ತಮಾಷೆಯಾಗಿ ಪ್ರತಿಪಕ್ಷದ ಸಾಲಿನತ್ತ ತಿರುಗಿ, ಬಾಯಿಯ ಮೇಲೆ ಬೆರಳಿಟ್ಟುಕೊಂಡು "ಶೂ...! ಶೂ...!" ಎಂದು ಸನ್ನೆ ಮಾಡಿದರು. ಅಂದರೆ, ಈ ವಿಷಯವನ್ನು ಯಾರೂ ದೊಡ್ಡದು ಮಾಡಬೇಡಿ ಎಂದು ವಿನಂತಿಸುವಂತೆ ಅವರ ಹಾವಭಾವಗಳಿದ್ದವು. ಅವರ ಈ ಮುಗ್ಧ ಪ್ರತಿಕ್ರಿಯೆ ಸದನದ ವಾತಾವರಣವನ್ನು ತಿಳಿಗೊಳಿಸಿತು.
ಆರ್. ಅಶೋಕ್ ಬುದ್ಧಿಮಾತು
ನಂತರ ಉದಯ್ ಅವರು ಪ್ರತಿಪಕ್ಷದ ಸಾಲಿಗೆ ಮರಳಿದಾಗ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಗಂಭೀರವಾಗಿಯೇ ಬುದ್ಧಿವಾದ ಹೇಳಿದರು. "ನೋಡಿ ಉದಯ್, ನೀವು ಆ ಸಾಲಿಗೆ (ಆಡಳಿತ ಪಕ್ಷದ ಸಾಲಿಗೆ) ಹೋಗಿದ್ದೇ ತಪ್ಪು. ಅಲ್ಲಿಗೆ ಹೋಗಿ ಈ ರೀತಿ ಮಾಡುವುದೇ? ಹೋಗಿ ಆ ಕುರ್ಚಿಯಲ್ಲಿ ಕೂರಲು ಮುಂದಾಗೋದಾ?" ಎಂದು ಹೇಳಿದರು. ಸದನದಲ್ಲಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಸಭಾಧ್ಯಕ್ಷರ ಆಸನಗಳಿಗೆ ಅತ್ಯಂತ ಗೌರವವಿರುತ್ತದೆ. ಅಪ್ಪಿತಪ್ಪಿಯೂ ಇತರ ಸದಸ್ಯರು ಆ ಆಸನಗಳಲ್ಲಿ ಕೂರುವುದಿಲ್ಲ. ಉದಯ್ ಗರುಡಾಚಾರ್ ಅವರು ಡಿ.ಕೆ. ಶಿವಕುಮಾರ್ ಅವರೊಂದಿಗೆ ಸೌಹಾರ್ದ ಸಂಬಂಧ ಹೊಂದಿರುವುದರಿಂದ, ಮಾತಿನ ಭರದಲ್ಲಿ ಈ ಎಡವಟ್ಟು ಮಾಡಿದ್ದಾರೆ ಎನ್ನಲಾಗಿದೆ.

