ಪ್ರಶ್ನೆ ಕೇಳಿ ಮೂರು ಬಾರಿ ಬರದಿದ್ದರೆ ಪ್ರಶ್ನೆಯೇ ರದ್ದುಗೊಳಿಸಲು ಡಿ.ಕೆ.ಶಿವಕುಮಾರ್‌ ಸಲಹೆ
x

ಪ್ರಶ್ನೆ ಕೇಳಿ ಮೂರು ಬಾರಿ ಬರದಿದ್ದರೆ ಪ್ರಶ್ನೆಯೇ ರದ್ದುಗೊಳಿಸಲು ಡಿ.ಕೆ.ಶಿವಕುಮಾರ್‌ ಸಲಹೆ

ಕೇಳಿದ ಸದಸ್ಯರೇ ಸದನದಲ್ಲಿ ಇಲ್ಲದಿದ್ದರೆ ಅಂತಹವರ ಪ್ರಶ್ನೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಯು ಜಟಾಪಟಿಗೆ ಕಾರಣವಾಯಿತು.


Click the Play button to hear this message in audio format

ವಿಧಾನಸಭೆಯ ಪ್ರಶ್ನೋತ್ತರ ಕಲಾಪ ವೇಳೆ ಪ್ರಶ್ನೆ ಕೇಳಿದ ಸದಸ್ಯರೇ ಸದನದಲ್ಲಿ ಇಲ್ಲದಿದ್ದರೆ ಅಂತಹವರ ಪ್ರಶ್ನೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಯು ಜಟಾಪಟಿಗೆ ಕಾರಣವಾಯಿತು.

ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಪ್ರಶ್ನೆಯೊಂದನ್ನು ಕೇಳಿದ್ದರು. ನಿಯಮದಂತೆ ಸಚಿವರು ಉತ್ತರ ಸಿದ್ಧಪಡಿಸಿಕೊಂಡು ಬಂದಿದ್ದರು. ಆದರೆ, ಪ್ರಶ್ನೆ ಕೇಳಿದ ರೇವಣ್ಣ ಅವರೇ ಸದನದಲ್ಲಿ ಹಾಜರಿರಲಿಲ್ಲ. ಇದನ್ನು ಗಮನಿಸಿದ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಬ್ಬ ಶಾಸಕ ಕೇಳುವ ಒಂದು ಪ್ರಶ್ನೆಗೆ ಉತ್ತರ ಸಿದ್ಧಪಡಿಸಲು ಎಷ್ಟು ಕಷ್ಟವಾಗುತ್ತದೆ ಎಂಬುದನ್ನು ಅವರು ಸದನದ ಮುಂದಿಟ್ಟರು.

ಡಿ.ಕೆ. ಶಿವಕುಮಾರ್ ಅಧಿಕಾರಿಗಳ ಶ್ರಮದ ಬಗ್ಗೆ ಮಾತನಾಡಿ, ಸದಸ್ಯರು ಕೇಳುವ ಒಂದು ಸಣ್ಣ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲು ಇಲಾಖೆಯ ಕೆಳಹಂತದ ಸಿಬ್ಬಂದಿಯಿಂದ ಹಿಡಿದು ಸರ್ಕಾರದ ಉನ್ನತ ಅಧಿಕಾರಿಗಳವರೆಗೆ ಸುಮಾರು 100ಕ್ಕೂ ಹೆಚ್ಚು ಜನರು ಕೆಲಸ ಮಾಡಬೇಕಾಗುತ್ತದೆ. ಅಂಕಿ-ಅಂಶಗಳನ್ನು ಕಲೆಹಾಕಿ, ಅದನ್ನು ಪರಿಶೀಲಿಸಿ, ಸಚಿವರಿಗೆ ಮಾಹಿತಿ ನೀಡಿ ಉತ್ತರ ಸಿದ್ಧಪಡಿಸಲಾಗುತ್ತದೆ. ಸಚಿವರಾದ ನಾವೂ ಕೂಡ ಅದರ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿ ಸದನಕ್ಕೆ ಬಂದಿರುತ್ತೇವೆ. ಆದರೆ, ಇಷ್ಟೆಲ್ಲಾ ಸಿದ್ಧತೆಯ ನಂತರ ಪ್ರಶ್ನೆ ಕೇಳಿದವರೇ ಇಲ್ಲದಿದ್ದರೆ ಇಡೀ ವ್ಯವಸ್ಥೆಯ ಶ್ರಮ ವ್ಯರ್ಥವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಶ್ನೆ ಕೇಳಿದ ಸದಸ್ಯರು ನಿರಂತರವಾಗಿ ಮೂರು ಬಾರಿ ಸದನಕ್ಕೆ ಗೈರಾಗಿದ್ದರೆ, ಅಂತಹ ಸದಸ್ಯರ ಪ್ರಶ್ನೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಮುಂದಿನ ಅಧಿವೇಶನಗಳಲ್ಲಿ ಅವರಿಗೆ ಪ್ರಶ್ನೆ ಕೇಳುವ ಹಕ್ಕನ್ನು ರದ್ದು ಮಾಡುವ ನಿಟ್ಟಿನಲ್ಲಿ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.

ಸುರೇಶ್ ಕುಮಾರ್ ತಿರುಗುಬಾಣದ ಎಚ್ಚರಿಕೆ

ಡಿ.ಕೆ.ಶಿವಕುಮಾರ್‌ ಪ್ರಸ್ತಾಪಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಬಿಜೆಪಿ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್, ಈ ನಿಯಮ ಸರ್ಕಾರಕ್ಕೆ ತಿರುಗುಬಾಣ ಆಗಬಹುದು ಎಂದು ಎಚ್ಚರಿಸಿದರು. ಜವಾಬ್ದಾರಿ ಎನ್ನುವುದು ಸದಸ್ಯರಿಗೆ ಮಾತ್ರವಲ್ಲ, ಸಚಿವರಿಗೂ ಇರಬೇಕು. ಅನೇಕ ಬಾರಿ ನಾವು ಹತ್ತಾರು ಗಂಭೀರ ಪ್ರಶ್ನೆಗಳನ್ನು ಕೇಳಿರುತ್ತೇವೆ. ಆದರೆ ಉತ್ತರ ನೀಡಲು ಸಂಬಂಧಪಟ್ಟ ಸಚಿವರೇ ಇರುವುದಿಲ್ಲ ಅಥವಾ ಸಮರ್ಪಕ ಉತ್ತರ ಸಿದ್ಧವಾಗಿರುವುದಿಲ್ಲ. ಸದಸ್ಯರು ಮೂರು ಬಾರಿ ಗೈರಾದರೆ ಕ್ರಮ ಕೈಗೊಳ್ಳಬೇಕು ಎನ್ನುವುದಾದರೆ, ಸಚಿವರು ಕೂಡ ಮೂರು ಬಾರಿ ಉತ್ತರ ನೀಡಲು ಗೈರಾದರೆ ಅಥವಾ ವಿಳಂಬ ಮಾಡಿದರೆ ಅವರ ಮೇಲೆ ಯಾವ ಕ್ರಮ ಕೈಗೊಳ್ಳುತ್ತೀರಿ? ಎಂದು ನೇರವಾಗಿ ಪ್ರಶ್ನಿಸಿದರು. ಆಗ ಡಿ.ಕೆ.ಶಿವಕುಮಾರ್‌, ಸಚಿವರ ಮೇಲೂ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಿ ಜಂಟಿ ತೀರ್ಮಾನಕ್ಕೆ ಬರೋಣ ಎಂದರು.

ಪ್ರಶ್ನೋತ್ತರ ಕಲಾಪ ಮುಕ್ತಾಯಗೊಂಡ ಬಳಿಕ ಸಚಿವ ಎಚ್.ಕೆ. ಪಾಟೀಲ್‌ ಲಿಖಿತ ಉತ್ತರಗಳನ್ನು ಸದನದಲ್ಲಿ 135 ಪ್ರಶ್ನೆಗಳ ಪೈಕಿ 55 ಪ್ರಶ್ನೆಗಳನ್ನು ಲಿಖಿತ ಉತ್ತರದ ಮೂಲಕ ಮಂಡಿಸಲಾಗಿದೆ ಎಂದರು. ಇದನ್ನು ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ ಸದಸ್ಯರು, ಸರ್ಕಾರವು ಸದಸ್ಯರ ಪ್ರಶ್ನೆಗಳಿಗೆ ಮೂರನೇ ಒಂದರಷ್ಟು ಮಾತ್ರ ಉತ್ತರ ನೀಡಿದೆ. ಲಿಖಿತವಾಗಿ ಉತ್ತರಿಸಲು ಸರ್ಕಾರಕ್ಕೆ ಸಾಧ್ಯವಿಲ್ಲದಿದ್ದರೆ ಆಡಳಿತದ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದರು. ಶಾಸಕರ ಹಕ್ಕನ್ನು ರದ್ದು ಮಾಡುವ ಬಗ್ಗೆ ಮಾತನಾಡುವ ಸರ್ಕಾರ ಮೊದಲು ತನ್ನ ಹೊಣೆಗಾರಿಕೆಯನ್ನು ನಿಭಾಯಿಸಲಿ ಎಂದು ಕಿಡಿಕಾರಿದರು.

ಉಭಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳನ್ನು ಆಲಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಚರ್ಚೆಗೆ ತೆರೆ ಎಳೆದು, ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸದಸ್ಯರ ಪ್ರತಿಯೊಂದು ಪ್ರಶ್ನೆಗೂ ಉತ್ತರ ಒದಗಿಸುವುದು ಸರ್ಕಾರದ ಕರ್ತವ್ಯ. ಒಂದು ವೇಳೆ ಮಾಹಿತಿ ಕಲೆಹಾಕಲು ವಿಳಂಬವಾಗಿದ್ದರೆ, ಈ ಅಧಿವೇಶನದ ಅವಧಿಯಲ್ಲೇ ಎಲ್ಲಾ ಉತ್ತರಗಳನ್ನು ಒದಗಿಸಬೇಕು. ಉತ್ತರ ನೀಡುವಲ್ಲಿ ಯಾವುದೇ ಇಲಾಖೆ ಅಥವಾ ಅಧಿಕಾರಿ ನಿರ್ಲಕ್ಷ್ಯ ವಹಿಸಿದರೆ ಅದನ್ನು ಸಹಿಸಲಾಗುವುದಿಲ್ಲ. ಅಂತಹ ಅಧಿಕಾರಿಗಳ ಮೇಲೆ ಸಂಬಂಧಪಟ್ಟ ಸಚಿವರು ಕೂಡಲೇ ಶಿಸ್ತು ಕ್ರಮ ಜರುಗಿಸಬೇಕು ಎಂದರು.

Read More
Next Story