
ಸಾಂದರ್ಭಿಕ ಚಿತ್ರ
ರಾಜ್ಯದ ಎಪಿಎಂಸಿಗಳಲ್ಲಿ ಭರ್ಜರಿ ವಹಿವಾಟು: ಜನವರಿ ಅಂತ್ಯಕ್ಕೆ 476.65 ರೂ ಕೋಟಿ ಮಾರುಕಟ್ಟೆ ಶುಲ್ಕ ಸಂಗ್ರಹ
ರಾಜ್ಯದಲ್ಲಿ 170 ಎಪಿಎಂಸಿಗಳಿದ್ದು, ಅಂಗಡಿಗಳ ಹಂಚಿಕೆ ಪ್ರಕ್ರಿಯೆ ನಿರಂತರವಾಗಿರುತ್ತದೆ. 141 ಎಪಿಎಂಸಿಗಳಲ್ಲಿ ಅಂಗಡಿ ಹರಾಜು ಬಾಕಿ ಇದ್ದು, ಕ್ರಮ ಕೈಗೊಳ್ಳಲು ಸಮಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ಪ್ರಸಕ್ತ ಹಣಕಾಸು ವರ್ಷದ ಜನವರಿ ಅಂತ್ಯದ ವೇಳೆಗೆ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಬರೋಬ್ಬರಿ 71 ಲಕ್ಷ ಕೋಟಿ ರೂ. ಮೌಲ್ಯದ ವಹಿವಾಟು ನಡೆದಿದ್ದು, ಇದರಿಂದ ಬೊಕ್ಕಸಕ್ಕೆ 476.65 ಕೋಟಿ ರೂ. ಮಾರುಕಟ್ಟೆ ಶುಲ್ಕ ಸಂಗ್ರಹವಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಮಂಗಳವಾರ (ಮಾ. 10) ಶಾಸಕ ಟಿ. ಶರವಣ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ಒದಗಿಸಿದ ಸಚಿವರು, ಎಪಿಎಂಸಿಗಳ ವಹಿವಾಟು ಮತ್ತು ಪ್ರಗತಿಯ ಅಂಕಿ-ಅಂಶಗಳನ್ನು ಸದನದ ಮುಂದಿಟ್ಟರು.
ಕಳೆದ ವರ್ಷದ ದಾಖಲೆ ಉಚಿತವಾಗುವ ನಿರೀಕ್ಷೆ
ಕಳೆದ ಸಂಪೂರ್ಣ ಹಣಕಾಸು ವರ್ಷದಲ್ಲಿ ರಾಜ್ಯದ ಎಪಿಎಂಸಿಗಳಲ್ಲಿ ಒಟ್ಟು 82 ಲಕ್ಷ ಕೋಟಿ ರೂ. ವಹಿವಾಟು ನಡೆದಿತ್ತು ಹಾಗೂ 498 ಕೋಟಿ ರೂ. ಮಾರುಕಟ್ಟೆ ಶುಲ್ಕ ಸಂಗ್ರಹವಾಗಿತ್ತು. ಆದರೆ ಈ ವರ್ಷ ಜನವರಿ ಅಂತ್ಯಕ್ಕೇ 476.65 ಕೋಟಿ ರೂ. ಸಂಗ್ರಹವಾಗಿರುವುದರಿಂದ, ಮಾರ್ಚ್ ಅಂತ್ಯದ ವೇಳೆಗೆ ಒಟ್ಟು ಆದಾಯವು ಕಳೆದ ವರ್ಷದ ಸಾಧನೆಯನ್ನು ಮೀರಿಸುವ ನಿರೀಕ್ಷೆಯಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಒಟ್ಟು 170 ಎಪಿಎಂಸಿಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ವ್ಯಾಪಾರ ಮಳಿಗೆಗಳ ಹಂಚಿಕೆ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿರುತ್ತದೆ. ಪ್ರಸ್ತುತ 141 ಎಪಿಎಂಸಿಗಳಲ್ಲಿ ಅಂಗಡಿಗಳ ಹರಾಜು ಪ್ರಕ್ರಿಯೆ ಬಾಕಿ ಇದ್ದು, ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯಾ ಸಮಿತಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ನಿಯಮಗಳೇನು?
ವಾಣಿಜ್ಯ ಸ್ವರೂಪದ ಸಣ್ಣ ಮಳಿಗೆಗಳನ್ನು 55 ತಿಂಗಳ ಅವಧಿಗೆ ಮಾತ್ರ ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ. ಈ ಅವಧಿ ಮುಕ್ತಾಯವಾದ ಬಳಿಕ ಅದೇ ಗುತ್ತಿಗೆದಾರರಿಗೆ ಮಳಿಗೆಯನ್ನು ಮುಂದುವರಿಸಲು ಹಾಲಿ ನಿಯಮಗಳಲ್ಲಿ ಅವಕಾಶವಿಲ್ಲ. ಅಂತಹ ಮಳಿಗೆಗಳಿಗೆ ಬೇಡಿಕೆಗೆ ಅನುಗುಣವಾಗಿ ಹೊಸದಾಗಿ ಟೆಂಡರ್ ಕರೆದು ಪಾರದರ್ಶಕವಾಗಿ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಮಳಿಗೆಗಳು ದೀರ್ಘಕಾಲ ಹಂಚಿಕೆಯಾಗದೆ ಬಾಕಿ ಉಳಿಯುವುದು ತಪ್ಪುತ್ತದೆ.
ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ತಂದುಕೊಡುವ ಮಾರುಕಟ್ಟೆಗಳ ಪೈಕಿ ಬೆಂಗಳೂರಿನ ಯಶವಂತಪುರ ಎಪಿಎಂಸಿ ಅಗ್ರಸ್ಥಾನದಲ್ಲಿದೆ. ಇದು ರಾಜ್ಯದ ಅತಿದೊಡ್ಡ ಕೃಷಿ ಮಾರುಕಟ್ಟೆಯಾಗಿದ್ದು, ತರಕಾರಿ, ಹಣ್ಣು ಮತ್ತು ಆಹಾರ ಧಾನ್ಯಗಳ ಬೃಹತ್ ಪ್ರಮಾಣದ ವಹಿವಾಟು ಇಲ್ಲಿ ದಿನನಿತ್ಯ ನಡೆಯುತ್ತದೆ. ಹೀಗಾಗಿ, ಇದು ದೀರ್ಘಕಾಲದಿಂದ ಸರ್ಕಾರಕ್ಕೆ ಗರಿಷ್ಠ ಆದಾಯ ತರುವ ಪ್ರಮುಖ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಂಡಿದೆ.
ಇದರ ಜೊತೆಗೆ, ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ತುಮಕೂರು, ದಾವಣಗೆರೆ ಮತ್ತು ಹುಬ್ಬಳ್ಳಿ ಎಪಿಎಂಸಿಗಳು ಸಹ ಉತ್ತಮ ವಹಿವಾಟು ನಡೆಸುವ ಮೂಲಕ ಗಣನೀಯ ಪ್ರಮಾಣದ ಆದಾಯವನ್ನು ಗಳಿಸುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

