Anganwadi workers begin indefinite strike, demand fulfillment of 17 key demands
x

ಅಂಗನವಾಡಿ ನೌಕರರ ಸಂಘದವತಿಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

ಅಂಗನವಾಡಿ ನೌಕರರ ಅಹೋರಾತ್ರಿ ಧರಣಿ; ಎಲ್‌ಕೆಜಿ-ಯುಕೆಜಿ ಆರಂಭಿಸದಂತೆ ಆಗ್ರಹ

ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು ನಿರ್ಧರಿಸಿರುವುದು ಅಂಗನವಾಡಿ ವ್ಯವಸ್ಥೆಯನ್ನು ದುರ್ಬಲಗೊಳಿಸಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.


Click the Play button to hear this message in audio format

ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಜಾರಿಯಾಗಿ 50 ವರ್ಷ ಪೂರೈಸಿದರೂ ಯೋಜನೆಯ ಬೆನ್ನೆಲುಬಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆ ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುವ ಮೂಲಕ ಅಂಗನವಾಡಿ ವ್ಯವಸ್ಥೆಯನ್ನು ದುರ್ಬಲ ಮಾಡುತ್ತಿದೆ ಎಂದು ಆರೋಪಿಸಿ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

2013ರ ಆಹಾರ ಭದ್ರತಾ ಕಾಯ್ದೆ ಮತ್ತು 2009ರ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳನ್ನು ಬಲಪಡಿಸುವ ಬದಲು ಮಕ್ಕಳನ್ನು ಸ್ಥಳಾಂತರಿಸುವ ಮೂಲಕ ಯೋಜನೆಯನ್ನು ಹಳ್ಳಹಿಡಿಸುತ್ತಿದೆ. ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಅಂಗನವಾಡಿ ನೌಕರರು

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳೇನು?

ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುವ ಆದೇಶ ರದ್ದುಗೊಳಿಸಬೇಕು. ಬದಲಿಗೆ ಎಲ್ಲಾ ಅಂಗನವಾಡಿ ಕೇಂದ್ರಗಳನ್ನೇ ಪ್ರೀ-ಪ್ರೈಮರಿ ಶಾಲೆಗಳಾಗಿ ಪರಿವರ್ತಿಸಿ ಬಜೆಟ್ ಮೀಸಲಿಡಬೇಕು. 1948ರ ಕನಿಷ್ಠ ವೇತನ ಕಾಯ್ದೆಯಡಿ ನೌಕರರನ್ನು ತರಬೇಕು. ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ನೀಡಬೇಕು. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಗೌರವಧನ ಹೆಚ್ಚಿಸಬೇಕು. ನಿವೃತ್ತರಾದವರಿಗೆ 10 ಸಾವಿರ ರೂ. ಮಾಸಿಕ ಪಿಂಚಣಿ ನೀಡಬೇಕು. 2011 ರಿಂದ 2023ರ ವರೆಗೆ ನಿವೃತ್ತರಾದ ನೌಕರರಿಗೆ ಬರಬೇಕಾದ 183 ಕೋಟಿ ರೂ. ಗ್ರಾಚ್ಯುಟಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಕಳಪೆ ಆಹಾರ ಪೂರೈಸುವ ಪರವಾನಗಿಗಳನ್ನು ರದ್ದುಗೊಳಿಸಿ, ಸ್ಥಳೀಯವಾಗಿ ಲಭ್ಯವಿರುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಪೂರೈಸಲು ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ

ಮುಂದುವರಿದು, ಖಾಲಿ ಇರುವ ಕಾರ್ಯಕರ್ತೆ, ಸಹಾಯಕಿ, ಮೇಲ್ವಿಚಾರಕಿ ಮತ್ತು ಸಿಡಿಪಿಒ ಹುದ್ದೆಗಳನ್ನು ಕೂಡಲೇ ತುಂಬಬೇಕು. ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ, ಸಾಮೂಹಿಕ ವಿಮೆ ಮತ್ತು ಮುಟ್ಟಿನ ರಜೆ ಸೌಲಭ್ಯಗಳನ್ನು ಒದಗಿಸಬೇಕು. ಬಿಎಲ್‌ಒ ನಂತಹ ಚುನಾವಣಾ ಕೆಲಸಗಳಿಂದ ಮುಕ್ತಿ ನೀಡಬೇಕು ಮತ್ತು ಎಫ್‌ಆರ್‌ಎಸ್ ಹಾಜರಾತಿ ಪದ್ಧತಿ ಕೈಬಿಡಬೇಕು ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌. ವರಲಕ್ಷ್ಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬಜೆಟ್‌ನಲ್ಲಿ ನಿರ್ಲಕ್ಷ್ಯ

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳಿದ್ದರೂ ನಮ್ಮನ್ನು 3 ಮತ್ತು 4ನೇ ದರ್ಜೆ ನೌಕರರೆಂದು ಪರಿಗಣಿಸಲು ಸರ್ಕಾರಗಳು ವಿಳಂಬ ಮಾಡುತ್ತಿವೆ. ಬಜೆಟ್‌ನಲ್ಲಿ ನಮ್ಮ ಬೇಡಿಕೆಗಳು ನಿರ್ಲಕ್ಷಿಸಲ್ಪಟ್ಟಿವೆ ಎಂದು ನೌಕರರ ಸಂಘಟನೆಗಳು ದೂರಿದ್ದಾರೆ. ಮೊಟ್ಟೆ ವಿತರಣೆಯ ಬದಲಿಗೆ ನೇರ ನಗದು ವರ್ಗಾವಣೆ ಮಾಡುವ ಸರ್ಕಾರದ ಪ್ರಸ್ತಾಪಕ್ಕೂ ತೀವ್ರ ವಿರೋಧ ವ್ಯಕ್ತವಾಗಿದೆ.

Read More
Next Story