
ʼಸೀರೆ ಭಾಗ್ಯʼ : ಸೀರೆ ಬದಲು ಗೌರವಧನ ಹೆಚ್ಚಿಸಲು ಅಂಗನವಾಡಿ ಕಾರ್ಯಕರ್ತೆಯರ ಒತ್ತಾಯ
ನಮಗೆ ಹೆಚ್ಚುವರಿ ʼಸೀರೆ ಭಾಗ್ಯʼ ಬೇಕಾಗಿಲ್ಲ. ಕೂಡಲೇ ರಾಜ್ಯ ಸರ್ಕಾರ ತನ್ನ ಘೋಷಣೆಯನ್ನು ಮರುಪರಿಶೀಲಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಮುಖಂಡರಾದ ಎಂ.ಜಯಮ್ಮ ಆಗ್ರಹಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಬಜೆಟ್‌ನಲ್ಲಿ ಯಾವುದೇ ಹೊಸ ಕಾರ್ಯಕ್ರಮ ಘೋಷಿಸದಿರುವುದು ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರ ಘೋಷಿಸಿರುವ ಒಂದು ಜೊತೆ ಹೆಚ್ಚುವರಿ ಸಮವಸ್ತ್ರ ನಮಗೆ ಬೇಕಾಗಿಲ್ಲ. ಕೂಡಲೇ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು. ಸರ್ಕಾರ ಸಮವಸ್ತ್ರ ಕೊಟ್ಟರೂ ಅದನ್ನು ವಾಪಸ್ ಮಾಡಲು ಅಂಗನವಾಡಿ ಕಾರ್ಯಕರ್ತೆಯರು ನಿರ್ಧರಿಸಿದ್ದಾರೆ.
ಗೌರವಧನ ಹೆಚ್ಚಳ, ಸೇವೆ ಕಾಯಂಗೊಳಿಸುವುದು, ಗ್ರಾಚ್ಯುಟಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಆದರೆ, ಇದ್ಯಾವುದೇ ಬೇಡಿಕೆಗೂ ಬಜೆಟ್‌ನಲ್ಲಿ ಪ್ರಾತಿನಿಧ್ಯ ನೀಡಿಲ್ಲ. ಹೆಚ್ಚುವರಿ ಸಮವಸ್ತ್ರ ಕೊಡುವುದರಿಂದ ಕಾರ್ಯಕರ್ತೆಯರ ಹೊಟ್ಟೆ ತುಂಬುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸರ್ಕಾರದ ನಿರ್ಲಕ್ಷ್ಯದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಿಂದ ಜನಸಾಮಾನ್ಯರಿಗೆ ಯಾವುದೇ ಉಪಯೋಗವಾಗಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರಿಗೆ ಸರ್ಕಾರ ಅನ್ಯಾಯ ಮಾಡಿದೆ. ಜೀವನ ಸಾಗಿಸಲು ಗೌರವಧನ ಹೆಚ್ಚಳ ಮಾಡುವಂತೆ ಒತ್ತಾಯಿಸಿದರೆ ಸೀರೆ ಕೊಡುವುದಾಗಿ ಹೇಳಿದ್ದಾರೆ," ಎಂದು ಟೀಕಿಸಿದ್ದಾರೆ.
‘ಕಮಿಷನ್’ಗಾಗಿ ಸಮವಸ್ತ್ರ ಘೋಷಣೆ
"ರಾಜ್ಯ ಸರ್ಕಾರ ಕಮಿಷನ್ ಆಸೆಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮವಸ್ತ್ರ ನೀಡುವುದಾಗಿ ಘೋಷಿಸಿದೆ. ಈಗಾಗಲೇ ನಮಗೆ ಎರಡು ಜೊತೆ ಸೀರೆ ಕೊಡಲಾಗಿದೆ. ನಮಗೆ ಹೆಚ್ಚುವರಿ ʼಸೀರೆ ಭಾಗ್ಯʼ ಬೇಕಾಗಿಲ್ಲ. ಕೂಡಲೇ ರಾಜ್ಯ ಸರ್ಕಾರ ತನ್ನ ಘೋಷಣೆಯನ್ನು ಮರುಪರಿಶೀಲಿಸಬೇಕು," ಎಂದು ಎಂ. ಜಯಮ್ಮ ಆಗ್ರಹಿಸಿದ್ದಾರೆ.
"ನಮ್ಮ ಜೀವನ ನಿರ್ವಹಣೆಗಾಗಿ ಗೌರವಧನ ಹೆಚ್ಚಳ ಮಾಡುವಂತೆ ಕೇಳಿದ್ದೆವು. 2011ರಿಂದ ಗ್ರಾಚ್ಯುಟಿ ನೀಡುತ್ತಿಲ್ಲ. ಸಾವಿರಾರು ಕಾರ್ಯಕರ್ತೆಯರು ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ದಿದ್ದಾರೆ, ಅವರಲ್ಲಿ ಹಲವರು ಈಗ ನಿವೃತ್ತಿಯಾಗಿದ್ದಾರೆ. ಅಂಥವರಿಗೆ ಸರ್ಕಾರ ಯಾವುದೇ ಯೋಜನೆ ಘೋಷಿಸಿಲ್ಲ. ಕಳೆದ ಒಂದು ವರ್ಷದಿಂದ ವಿವಿಧ ಬೇಡಿಕೆಗಳಿಗಾಗಿ ಹೋರಾಟ ನಡೆಸಲಾಗುತ್ತಿದೆ. ಚುನಾವಣಾ ಪೂರ್ವದಲ್ಲಿ ಆಶ್ವಾಸನೆ ನೀಡಿದ್ದ ಆರನೇ ಗ್ಯಾರಂಟಿಯನ್ನು ಬಜೆಟ್‌ನಲ್ಲಿ ಘೋಷಿಸಿಲ್ಲ. ಈಗಿನ ಬೆಲೆ ಏರಿಕೆಯಲ್ಲಿ ಜೀವನ ನಡೆಸುವುದೇ ದುಸ್ತರವಾಗಿದೆ," ಎಂದು ಅಳಲು ತೋಡಿಕೊಂಡಿದ್ದಾರೆ.
"ರಾಜ್ಯ ಸರ್ಕಾರವು ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪಡಿತರದ ಬದಲು ಬಿಸಿಯೂಟವನ್ನೇ ನೀಡಬೇಕು ಎಂದು ಹೇಳಿರುವುದು ಸ್ವಾಗತಾರ್ಹ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇರುವುದೇ ಅದಕ್ಕಾಗಿ. ನಮ್ಮ ಕರ್ತವ್ಯದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ, ನಮ್ಮ ಕೆಲಸಕ್ಕೆ ಅಗತ್ಯವಾದ ಕೂಲಿ ಕೊಡುವುದು ಸರ್ಕಾರದ ಕರ್ತವ್ಯ," ಎಂದು ಆಗ್ರಹಿಸಿದ್ದಾರೆ.
ಮಹಿಳಾ ವಿರೋಧಿ ಬಜೆಟ್
"ಕಳೆದ ಒಂದು ವರ್ಷದಿಂದ ಹಂತ ಹಂತವಾಗಿ ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ. ಈ ಬಜೆಟ್ ಸಂಪೂರ್ಣ ಮಹಿಳಾ ವಿರೋಧಿಯಾಗಿದೆ. ಕೇವಲ ಕಮಿಷನ್ ಆಧಾರಿತ ಯೋಜನೆಗಳಿಗೆ ಒತ್ತು ನೀಡಲಾಗಿದೆಯೇ ಹೊರತು, 50 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರ ಹಿತರಕ್ಷಣೆಯತ್ತ ಸರ್ಕಾರ ಗಮನ ಹರಿಸಿಲ್ಲ," ಎಂದು ಜಯಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಸಂಘದ ನಾಯಕ ಜಯಮ್ಮ ಅವರೊಂದಿಗೆ ನಡೆಸಿದ ಸಂದರ್ಶನದ ಪೂರ್ಣ ಪಾಠ ಈ ವಿಡಿಯೋದಲ್ಲಿದೆ.
ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಆಕ್ರೋಶ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಯಮ್ಮ ಅವರು, "ಗೃಹಲಕ್ಷ್ಮಿಯಂತಹ ಹೊಸ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಸಚಿವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಸಚಿವರು ಅಂಗನವಾಡಿ ಕಾರ್ಯಕರ್ತೆಯರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿಲ್ಲ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಮ್ಮ ವೇತನ ಹೆಚ್ಚಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ ಆರು ತಿಂಗಳಲ್ಲಿ ನಿವೃತ್ತರಾದವರ ಬಗ್ಗೆಯೂ ಯಾವುದೇ ಘೋಷಣೆ ಮಾಡಿಲ್ಲ," ಎಂದು ಆರೋಪಿಸಿದ್ದಾರೆ.
"ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಪರಿಷ್ಕರಿಸದೇ ಹೋದರೆ, ಜಿಲ್ಲಾ ಮಟ್ಟದಲ್ಲಿ ಆನ್‌ಲೈನ್ ಮೂಲಕ ಸಭೆ ನಡೆಸಿ ಮುಂದಿನ ಹೋರಾಟದ ಹಾದಿ ನಿರ್ಧರಿಸಲಾಗುವುದು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಬೀದಿಗಿಳಿದು ಹೋರಾಡಿದರೂ ಸರ್ಕಾರ ಬಂಡತನ ಪ್ರದರ್ಶಿಸುತ್ತಿದೆ. ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು," ಎಂದು ಜಯಮ್ಮ ಎಚ್ಚರಿಕೆ ನೀಡಿದ್ದಾರೆ.

