Madurai airport to be upgraded, injustice to Karnataka: Minister M.B. Patil outraged
x

ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣ 

International Airport| ಮಧುರೈಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ; ಕರ್ನಾಟಕದ ನಿಲ್ದಾಣಗಳಿಗಿಲ್ಲ ಸ್ಥಾನಮಾನ

ತಮಿಳುನಾಡು ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಕೇಂದ್ರ ಸರ್ಕಾರವು ಚುನಾವಣೆಯ ಲಾಭ ಪಡೆಯಲು ಮುಂದಾಗಿದೆ. ಕರ್ನಾಟಕದ ಬೇಡಿಕೆ ಬಗ್ಗೆ ಉದಾಸೀನ ಮನೋಭಾವ ಪ್ರದರ್ಶಿಸುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.


Click the Play button to hear this message in audio format

ತೆರಿಗೆ ಪಾಲು ಹಾಗೂ ಅನುದಾನ ಹಂಚಿಕೆ ವಿಚಾರದಲ್ಲಿ ರಾಜ್ಯದೆಡೆಗಿನ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಇದೀಗ ವಿಮಾನ ನಿಲ್ದಾಣಗಳ ಉನ್ನತೀಕರಣದಲ್ಲೂ ಮುಂದುವರಿದಿದೆ. ಕರ್ನಾಟಕದಲ್ಲಿ ‌ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಹಲವು ವಿಮಾನ ನಿಲ್ದಾಣಗಳಿದ್ದರೂ ಯಾವುದನ್ನೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಿಸಿಲ್ಲ. ಇದಕ್ಕೆ ಬದಲಾಗಿ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನ ನೀಡಿರುವುದು ಕನ್ನಡಿಗರ ಕಿಚ್ಚಿಗೆ ಕಾರಣವಾಗಿದೆ.

ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಮಂಜೂರು ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದರೂ ಘೋಷಣೆಗೆ ಹಿಂದೇಟು ಹಾಕುತ್ತಿದೆ. ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣದ ಪ್ರಸ್ತಾಪವಾದಾಗ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವ ಕುರಿತು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಅವರು ಹೇಳಿದ್ದರು. ಈಗ ದಿಢೀರನೇ ಮಧುರೈ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರ ಮೇಲ್ದರ್ಜೆಗೇರಿಸಿದೆ. ಇದರ ಹಿಂದೆ ಚುನಾವಣಾ ತಂತ್ರ ಅಡಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅವರಿಗೆ ಬೆಣ್ಣೆ, ನಮಗೆ ಸುಣ್ಣ

ಬುಧವಾರ(ಮಾ.11) ಕೇಂದ್ರದ ನಿರ್ಧಾರ ಕುರಿತಂತೆ ಮಾತನಾಡಿದ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಅವರು, "ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ‌ ನಿಲ್ದಾಣಗಳ ಬಗ್ಗೆ ಚಕಾರವೆತ್ತಿಲ್ಲ. ಇದು ಕೇಂದ್ರದ ತಾರತಮ್ಯ ಧೋರಣೆಗೆ ಸಾಕ್ಷಿಯಾಗಿದೆ. ಅಭಿವೃದ್ಧಿ ವಿಚಾರದಲ್ಲಿ ತಮಿಳುನಾಡಿಗೆ ಬೆಣ್ಣೆ, ನಮಗೆ ಸುಣ್ಣ ಹಚ್ಚಿದಂತಾಗಿದೆ ಎಂದು ಕಿಡಿಕಾರಿದ್ದಾರೆ.

ಜೋಶಿ, ಶೆಟ್ಟರ್‌, ಬೊಮ್ಮಾಯಿ ಧ್ವನಿ ಎತ್ತಲಿ

ತಮಿಳುನಾಡು ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಕೇಂದ್ರ ಸರ್ಕಾರವು ಚುನಾವಣೆಯ ಲಾಭ ಪಡೆಯಲು ಮುಂದಾಗಿದೆ. ಕರ್ನಾಟಕದ ಬೇಡಿಕೆ ಬಗ್ಗೆ ಉದಾಸೀನ ಮನೋಭಾವ ಪ್ರದರ್ಶಿಸುತ್ತಿದೆ. ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಅಂತಾರಾಷ್ಟ್ರೀಯ ದರ್ಜೆಯ ಸ್ಥಾನಮಾನ ನೀಡಬೇಕು. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಲಾಗಿದೆ.

2025 ಜೂನ್ 24ರಂದು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದಿದ್ದೆ. ಈಗ ನೋಡಿದರೆ ಕರ್ನಾಟಕವನ್ನು ಕಡೆಗಣಿಸಿದೆ. ಧಾರವಾಡ ಸಂಸದರಾಗಿರುವ, ಪ್ರಸ್ತುತ ಕೇಂದ್ರ ಸಂಪುಟದಲ್ಲಿರುವ ಪ್ರಲ್ಹಾದ್‌ ಜೋಶಿ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮತ್ತು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ದನಿಯೆತ್ತಬೇಕು ಎಂದು ಪಾಟೀಲ್‌ ಆಗ್ರಹಿಸಿದರು.

ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣದ ಪೈಕಿ ಒಂದನ್ನಾದರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಬೇಕು. ಎರಡನ್ನೂ ಉನ್ನತೀಕರಿಸಿದರೆ ಸ್ವಾಗತಾರ್ಹ. ರಾಜ್ಯದ ಅಗತ್ಯವನ್ನು ಕೇಂದ್ರ ಮನಗಾಣಬೇಕು ಎಂದರು.

ಬೆಂಗಳೂರು ವಿಮಾನ ನಿಲ್ದಾಣದ ದಟ್ಟಣೆ ಎಷ್ಟು ?

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದಲ್ಲೇ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ವಿಮಾನ ನಿಲ್ದಾಣವಾಗಿ ಪ್ರಥಮ ಸ್ಥಾನದಲ್ಲಿದ್ದು, ವಾರ್ಷಿಕವಾಗಿ ಸುಮಾರು 7.92 ಕೋಟಿ ಜನರು ಪ್ರಯಾಣಿಸುತ್ತಾರೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರ್ಷಿಕವಾಗಿ ಸುಮಾರು 5.51 ಕೋಟಿ ಜನರು ಪ್ರಯಾಣಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಾರ್ಷಿಕ 4.18 ಕೋಟಿ ಜನರು ಪ್ರಯಾಣಿಸುವುದರೊಂದಿಗೆ ದೇಶದ ಮೂರನೇ ಅತಿ ದೊಡ್ಡ ಮತ್ತು ಜನನಿಬಿಡ ನಿಲ್ದಾಣವಾಗಿದೆ.

ಸಂಚರಿಸುವ ಪ್ರಯಾಣಿಕರು ಎಷ್ಟು ?

ಉತ್ತರ ಕರ್ನಾಟಕದ ಭಾಗದ ಪ್ರಮುಖ ವಿಮಾನ ನಿಲ್ದಾಣಗಳಾದ ಹುಬ್ಬಳ್ಳಿ ಮತ್ತು ಬೆಳಗಾವಿಯಿಂದ ಪ್ರತಿ ವರ್ಷ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ. 2024 ಹಾಗೂ 25ರ ಹಣಕಾಸು ವರ್ಷದಲ್ಲಿ ಭಾರತೀಯ ವಿಮಾನಯಾನ ಪ್ರಾಧಿಕಾರ ನೀಡಿ ಅಂಕಿ ಅಂಶಗಳಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸುಮಾರು 3.46 ಲಕ್ಷ ಜನರು ಪ್ರಯಾಣಿಸಿದ್ದಾರೆ. ಇಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವುದರಿಂದ ಹೊಸ ಟರ್ಮಿನಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪೂರ್ಣಗೊಂಡ ನಂತರ ಇದು ವಾರ್ಷಿಕ 24 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರಲಿದೆ.

ಬೆಳಗಾವಿ ವಿಮಾನ ನಿಲ್ದಾಣದಿಂದ 2024 ಹಾಗೂ 25ರ ಹಣಕಾಸು ವರ್ಷದಲ್ಲಿ ಸುಮಾರು 3.40 ಲಕ್ಷ ಪ್ರಯಾಣಿಕರು ಈ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ. ಇಲ್ಲಿ ವಿಸ್ತರಣೆ ಕಾರ್ಯ ನಡೆಯುತ್ತಿದ್ದು, ಭವಿಷ್ಯದಲ್ಲಿ ವರ್ಷಕ್ಕೆ 35 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಗುರಿ ಹೊಂದಲಾಗಿದೆ.

Read More
Next Story