ಜಾನುವಾರುಗಳಿಗೂ ‘ಆಧಾರ್’ ಭಾಗ್ಯ; ಮೂಗಿನ ರೇಖೆ ಸ್ಕ್ಯಾನ್ ಮಾಡಿ ವಂಚನೆಗೆ ಬ್ರೇಕ್!
x

ಜಾನುವಾರುಗಳಿಗೂ ‘ಆಧಾರ್’ ಭಾಗ್ಯ; ಮೂಗಿನ ರೇಖೆ ಸ್ಕ್ಯಾನ್ ಮಾಡಿ ವಂಚನೆಗೆ ಬ್ರೇಕ್!

"ಮನುಷ್ಯರ ಹೆಬ್ಬೆಟ್ಟಿನ ರೇಖೆಗಳು ಹೇಗೆ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತವೆಯೋ, ಅದೇ ರೀತಿ ಪ್ರತಿ ಜಾನುವಾರುಗಳ ಮೂಗಿನ ಮೇಲಿರುವ ರೇಖೆಗಳು ಮತ್ತು ಬಿಂದುಗಳು ವಿಶಿಷ್ಟವಾಗಿರುತ್ತವೆ. ಒಂದರ ರೇಖೆ ಮತ್ತೊಂದಕ್ಕೆ ಹೋಲುವುದಿಲ್ಲ.


ಪಶುಸಂಗೋಪನಾ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ರಾಜ್ಯ ಸರ್ಕಾರ ಮುನ್ನುಡಿ ಬರೆದಿದೆ. ಮನುಷ್ಯರ ಬೆರಳಚ್ಚು ಮಾದರಿಯಲ್ಲೇ ಜಾನುವಾರುಗಳ ಮೂಗಿನ ರೇಖೆ ಆಧರಿಸಿ ಡಿಜಿಟಲ್ ಗುರುತಿನ ಚೀಟಿ ನೀಡುವ ಅತ್ಯಾಧುನಿಕ ತಂತ್ರಜ್ಞಾನವನ್ನು ಜಾರಿಗೆ ತರುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಾರಿಗೆ ಬರುತ್ತಿರುವ ಈ ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಸ್ಥೆಯು, ಪಶುಸಂಗೋಪನೆ ಇಲಾಖೆಯಲ್ಲಿ ನಡೆಯುವ ಹಗರಣ ಹಾಗೂ ವಂಚನೆಗಳಿಗೆ ಬ್ರೇಕ್ ಹಾಕಲಿದೆ.

ಏನಿದು ಹೊಸ ಯೋಜನೆ?

ಜಾನುವಾರುಗಳಿಗೂ ಡಿಜಿಟಲ್‌ ಗುರುತಿನ ಚೀಟಿ ನೀಡುವ ವ್ಯವಸ್ಥೆಯ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಮಾಹಿತಿ ನೀಡಿದ್ದಾರೆ. "ಮನುಷ್ಯರ ಹೆಬ್ಬೆಟ್ಟಿನ ರೇಖೆಗಳು ಹೇಗೆ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತವೆಯೋ, ಅದೇ ರೀತಿ ಪ್ರತಿ ಜಾನುವಾರುಗಳ ಮೂಗಿನ ಮೇಲಿರುವ ರೇಖೆಗಳು ಮತ್ತು ಬಿಂದುಗಳು ವಿಶಿಷ್ಟವಾಗಿರುತ್ತವೆ. ಒಂದರ ರೇಖೆ ಮತ್ತೊಂದಕ್ಕೆ ಹೋಲುವುದಿಲ್ಲ. ಇದನ್ನು ಆಧರಿಸಿ ಜಾನುವಾರುಗಳ ನಿಖರ ಗುರುತಿನ ವ್ಯವಸ್ಥೆ ರೂಪಿಸಲಾಗಿದೆ," ಎಂದು ವಿವರಿಸಿದ್ದಾರೆ.

ಕಿವಿ ಚುಚ್ಚುವ ಪದ್ಧತಿಗೆ ಮುಕ್ತಿ

ಪ್ರಸ್ತುತ, ಜಾನುವಾರುಗಳ ಗುರುತಿಗಾಗಿ ಅವುಗಳ ಕಿವಿ ಚುಚ್ಚಿ ಪ್ಲಾಸ್ಟಿಕ್ ಟ್ಯಾಗ್ ಹಾಕಲಾಗುತ್ತಿದೆ. ಇದರಿಂದ ಮೂಕ ಪ್ರಾಣಿಗಳಿಗೆ ನೋವಾಗುವುದಲ್ಲದೆ, ಟ್ಯಾಗ್ಗಳು ಕಳೆದುಹೋಗುವ ಅಥವಾ ವಿಮೆ ಹಣಕ್ಕಾಗಿ ಟ್ಯಾಗ್ಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಹೊಸ 'ಎಐ' ವ್ಯವಸ್ಥೆಯಿಂದ ಪ್ರಾಣಿಗಳಿಗೆ ಯಾವುದೇ ಹಿಂಸೆಯಿಲ್ಲದೆ ಕೇವಲ ಮೂಗಿನ ಫೋಟೋ ಸ್ಕ್ಯಾನ್ ಮಾಡುವ ಮೂಲಕ ನಿಖರ ಮಾಹಿತಿ ಪಡೆಯಬಹುದು.

ರೈತರಿಗೇನು ಲಾಭ?

ಈ ವ್ಯವಸ್ಥೆಯಡಿ ನೋಂದಣಿಯಾದ ಜಾನುವಾರುಗಳ ಮಾಲೀಕರಿಗೆ ಆಯಾ ಜಾನುವಾರುಗಳಿಗೆ ಹಾಕಿಸಬೇಕಾದ ಲಸಿಕೆಗಳ ದಿನಾಂಕದ ಕುರಿತು ಮೊಬೈಲ್ಗೆ ನೇರ ಎಸ್‌ಎಂಎಸ್ ಸಂದೇಶ ಬರಲಿದೆ. ಹೊಸದಾಗಿ ಜನಿಸಿದ ಕರುಗಳಿಗೂ ಈ ಡಿಜಿಟಲ್ ಗುರುತಿನ ಚೀಟಿ (ಆಧಾರ್ ಮಾದರಿ) ಸಿದ್ಧಪಡಿಸಬಹುದು. ಮುಂದಿನ ದಿನಗಳಲ್ಲಿ ಕೇವಲ ಜಾನುವಾರುಗಳ ಮೂಗಿನ ಫೋಟೋ ಸ್ಕ್ಯಾನ್ ಮಾಡುವ ಮೂಲಕವೇ ಅವುಗಳ ಆರೋಗ್ಯ ಸ್ಥಿತಿ, ಹಳೆಯ ಕಾಯಿಲೆಗಳು ಮತ್ತು ಚಿಕಿತ್ಸೆಯ ಇತಿಹಾಸವನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನೂ ಅಳವಡಿಸಲಾಗುತ್ತಿದೆ.

ವಂಚನೆ ಮತ್ತು ವಿಮೆ ಹಗರಣಗಳಿಗೆ ಮುದ್ರೆ

ಕೇಂದ್ರ ಇ-ಆಡಳಿತ ಕೋಶದ ಕೃತಕ ಬುದ್ಧಿಮತ್ತೆ ವಿಭಾಗದ ಯೋಜನಾ ನಿರ್ದೇಶಕ ಶ್ರೀವ್ಯಾಸ ಎಚ್.ಎಂ. ಮಾಹಿತಿ ನೀಡಿ, "ರಾಜ್ಯದಲ್ಲಿ ಪ್ರಸ್ತುತ 1 ಕೋಟಿಗೂ ಅಧಿಕ ಜಾನುವಾರುಗಳಿವೆ. ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಹೊಸ ಕರುಗಳು ಜನಿಸುತ್ತವೆ. ಜಾನುವಾರುಗಳ ಸಾವು ಅಥವಾ ವಿಮೆ ಕ್ಲೈಮ್ ಮಾಡುವಾಗ ಜಾನುವಾರುಗಳನ್ನು ಅದಲು-ಬದಲು ಮಾಡಿ ವಂಚಿಸುವ ಜಾಲವೂ ಇದೆ. ಆದರೆ ಈ 'ಮೂಗಿನ ರೇಖೆ' ತಂತ್ರಜ್ಞಾನದಿಂದಾಗಿ ಜಾನುವಾರುಗಳ ಟ್ರ್ಯಾಕಿಂಗ್ ಹಾಗೂ ದೃಢೀಕರಣ ಪ್ರಕ್ರಿಯೆ ನೂರಕ್ಕೆ ನೂರರಷ್ಟು ಪಾರದರ್ಶಕವಾಗಲಿದೆ. ಇದರಿಂದ ನಕಲಿ ದಾಖಲೆ ಸೃಷ್ಟಿಸಲು ಸಾಧ್ಯವೇ ಇಲ್ಲ," ಎಂದಿದ್ದಾರೆ.

ಒಟ್ಟಾರೆ ತಂತ್ರಜ್ಞಾನದ ಗೂಡಾಗಿರುವ ಕರ್ನಾಟಕದಲ್ಲಿ ಹೈನುಗಾರಿಕೆಯನ್ನು ನಂಬಿರುವ ಲಕ್ಷಾಂತರ ರೈತರಿಗೆ ಹಾಗೂ ಪಶುಸಂಗೋಪನೆ ಇಲಾಖೆಗೆ ಈ 'ಡಿಜಿಟಲ್ ಆಡಳಿತ'ದ ಹೊಸ ಸ್ಪರ್ಶ ಆನೆಬಲ ತರಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

Read More
Next Story