
ಬಿತ್ತನೆಯಿಂದ ಮಾರಾಟದವರೆಗೆ ರೈತರಿಗೆ ಬೆಂಬಲ: ಕೃಷಿ, ತೋಟಗಾರಿಕೆಗೆ ಹೈಟೆಕ್ ಸ್ಪರ್ಶ
ಕಳೆದ ಮೂರು ವರ್ಷಗಳಲ್ಲಿ ರೈತರ ಅಭ್ಯುದಯಕ್ಕಾಗಿ ಸರ್ಕಾರ ಕೈಗೊಂಡ ಕ್ರಮಗಳು ಗಮನಾರ್ಹವಾಗಿವೆ. 83 ಲಕ್ಷ ರೈತರಿಗೆ ಒಟ್ಟು 70 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಿಸಲಾಗಿದೆ.
ರೈತ ಸಮೃದ್ಧನಾದರೆ ಕರ್ನಾಟಕ ಸಮೃದ್ಧವಾಗುತ್ತದೆ" ಎಂಬ ಆಶಯದೊಂದಿಗೆ ರಾಜ್ಯ ಸರ್ಕಾರವು ಕೃಷಿ ಮತ್ತು ತೋಟಗಾರಿಕೆ ವಲಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ದಿಕ್ಸೂಚಿ ಯೋಜನೆಯನ್ನು ಪ್ರಕಟಿಸಿದೆ.
ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್‌ನಲ್ಲಿ ಹಲವು ಘೋಷಣೆಗಳನ್ನು ಮಾಡಿದ್ದು, ಬಿತ್ತನೆ ಮಾರಾಟದವರೆಗೆ ರೈತರಿಗೆ ಭದ್ರತೆ ನೀಡುವ ನಾಲ್ಕು ಪ್ರಮುಖ ಆಧಾರಸ್ತಂಭಗಳ ಮೇಲೆ ಹೊಸ ತಂತ್ರಜ್ಞಾನ ಮತ್ತು ಆರ್ಥಿಕ ನೆರವಿನ ಮಹಾಪೂರವನ್ನೇ ಹರಿಸಲಾಗಿದೆ.
ಸರ್ಕಾರವು ಕೃಷಿ ಅಭಿವೃದ್ಧಿಗಾಗಿ ವೈಜ್ಞಾನಿಕ ಮಾರ್ಗದರ್ಶನ, ಹಣಕಾಸು ನೆರವು, ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ಕೊಯ್ಲೋತ್ತರ ಸಂಸ್ಕರಣೆ ಹಾಗೂ ಮಾರುಕಟ್ಟೆ ಸಂಪರ್ಕ ಎಂಬ ನಾಲ್ಕು ಪ್ರಮುಖ ಹಂತಗಳನ್ನು ಗುರುತಿಸಿದೆ. ಈ ಮೂಲಕ ರೈತರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ದೃಢಸಂಕಲ್ಪ ಮಾಡಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ರೈತರ ಅಭ್ಯುದಯಕ್ಕಾಗಿ ಸರ್ಕಾರ ಕೈಗೊಂಡ ಕ್ರಮಗಳು ಗಮನಾರ್ಹವಾಗಿವೆ. 83 ಲಕ್ಷ ರೈತರಿಗೆ ಒಟ್ಟು 70 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಿಸಲಾಗಿದೆ. 36 ಲಕ್ಷ ಪಂಪ್‌ಸೆಟ್‌ಗಳಿಗೆ 48 ಸಾವಿರ ಕೋಟಿ ರೂ. ಮೊತ್ತದ ವಿದ್ಯುತ್ ಸಹಾಯಧನ ನೀಡಲಾಗಿದೆ. 51 ಲಕ್ಷ ರೈತರಿಗೆ 6,213 ಕೋಟಿ ರೂ.ಗಳ ಪರಿಹಾರ ಒದಗಿಸಲಾಗಿದೆ. 3.41 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣ ಹಾಗೂ 7 ಲಕ್ಷ ರೈತರಿಗೆ ಹನಿ ನೀರಾವರಿ ಸೌಲಭ್ಯ ಒದಗಿಸಲಾಗಿದೆ.
ಕೃಷಿ ತ್ಯಾಜ್ಯ ಮರುಬಳಕೆ ಮತ್ತು ಮೌಲ್ಯವರ್ಧನೆಗಾಗಿ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು. ರೈತ ಮಾಲ್ ಮತ್ತು ಕೃಷಿ ಪರಿಕರಗಳನ್ನು ಒಂದೇ ಸೂರಿನಡಿ ಒದಗಿಸಲು ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 'ರೈತ ಮಾಲ್' ಸ್ಥಾಪಿಸಲಾಗುವುದು. ಕೀಟ ಮತ್ತು ರೋಗಗಳ ಪತ್ತೆಗೆ 'ಸಸ್ಯ ಸಂಜೀವಿನಿ' ಯೋಜನೆ ಹಾಗೂ ಕೃಷಿ ಕರೆ ಕೇಂದ್ರಗಳಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಲಾಗುವುದು. ಮಣ್ಣಿನ ಗುಣಮಟ್ಟ ಹೆಚ್ಚಿಸಲು 'ವಸುಧಾಮೃತ' ಯೋಜನೆ ಮತ್ತು ಮಂಡ್ಯ ಜಿಲ್ಲೆಯ ಪಾಂಡವಪುರವನ್ನು ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ಘೋಷಿಸಲಾಗಿದೆ. ಅಥಣಿಯಲ್ಲಿ ಕೃಷಿ ಕಾಲೇಜು ಮತ್ತು ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ನಿರ್ಧರಿಸಲಾಗಿದೆ.
ಅಡಿಕೆ, ತೆಂಗು ಬೆಳೆಗಳ ರೋಗ ನಿಯಂತ್ರಣಕ್ಕೆ 10 ಕೋಟಿ ರೂ.
ತೋಟಗಾರಿಕೆಯನ್ನು ಆದಾಯದ ಇಂಜಿನ್ ಆಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದ್ದು, ಅಡಿಕೆ ಮತ್ತು ತೆಂಗು ಬೆಳೆಗಳ ರೋಗ ನಿಯಂತ್ರಣಕ್ಕೆ 10 ಕೋಟಿ ರೂ. ಮೀಸಲಿಟ್ಟಿದೆ. ದಾವಣಗೆರೆ ಮತ್ತು ವಿಜಯಪುರದಲ್ಲಿ 64 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಶೀತಲಗೃಹಗಳನ್ನು ನಿರ್ಮಿಸಲಾಗುವುದು. ಮಣ್ಣಿಲ್ಲದ ಕೃಷಿ (ಹೈಡ್ರೋಪೊನಿಕ್ಸ್) ಪ್ರೋತ್ಸಾಹಿಸಲು ವಿಶೇಷ ಆದ್ಯತೆ ನೀಡಲಾಗಿದೆ. ತೋಟಗಾರಿಕೆ ಇಲಾಖೆಯ ಕ್ಷೇತ್ರಗಳು ಮತ್ತು ನರ್ಸರಿಗಳಲ್ಲಿ ಲಭ್ಯವಿರುವ ಜಮೀನನ್ನು ಉಪಯೋಗಿಸಿ ಉತ್ಕೃಷ್ಟ ಮೌಲ್ಯದ ತೋಟಗಳ ಅಭಿವೃದ್ಧಿ, ಕೊಯ್ಲೋತ್ತರ ಸೌಲಭ್ಯಗಳು ಹಾಗೂ ತೋಟಗಾರಿಕೆ ಆಧಾರಿತ ಕೈಗಾರಿಕೆಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗುವುದು ಎಂದು ಬಜೆಟ್ ಪ್ರಕಟಿಸಿದೆ.
ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಮತ್ತು ವಿಜಯಪುರ ಜಿಲ್ಲೆಯ ತೊರವಿಯಲ್ಲಿ ಒಟ್ಟು 12 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಶೀತಲಗೃಹಗಳನ್ನು 64 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ಶೀತಲಗೃಹಗಳನ್ನು ಹಂತ ಹಂತವಾಗಿ ನಿರ್ಮಿಸಲಾಗುವುದು. ಹೆಚ್ಚಿನ ಪ್ರವಾಸಿಗರನ್ನು ಹಾಗೂ ಪರಿಸರ ಪ್ರೇಮಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಮೈಸೂರಿನ ಲಿಂಗಾಂಬುಧಿ ಸಸ್ಯ ತೋಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಒಟ್ಟಾರೆಯಾಗಿ, ಕೃಷಿ ಪ್ರಯೋಗಾಲಯಗಳಿಗೆ ಎನ್‌ಎಬಿಎಲ್ ಮಾನ್ಯತೆ ನೀಡುವುದರಿಂದ ಹಿಡಿದು, ಮಿಲೆಟ್ ಹಬ್‌ಗಳ ಸ್ಥಾಪನೆಯವರೆಗೆ ಸರ್ಕಾರವು ಹೈಟೆಕ್ ಕೃಷಿಗೆ ಒತ್ತು ನೀಡಿದ್ದು, ಇದು ಗ್ರಾಮೀಣ ಆರ್ಥಿಕತೆಯಲ್ಲಿ ಹೊಸ ಕ್ರಾಂತಿ ಮೂಡಿಸುವ ನಿರೀಕ್ಷೆಯಿದೆ.

