SSLC exams to begin from March 8, 2nd PUC exams to begin from April 25
x
ಸಾಂದರ್ಭಿಕ ಚಿತ್ರ

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ: 7.10 ಲಕ್ಷ ವಿದ್ಯಾರ್ಥಿಗಳು ಸಜ್ಜು, ಪಾರದರ್ಶಕತೆಗೆ ಕಟ್ಟುನಿಟ್ಟಿನ ಕ್ರಮ

ಪರೀಕ್ಷಾ ಅಕ್ರಮ ತಡೆಯಲು ಕ್ಯೂಆರ್ ಕೋಡ್ ಮತ್ತು ವೆಬ್ ಕಾಸ್ಟಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದ್ದು, ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ.


Click the Play button to hear this message in audio format

ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷೆಯಲ್ಲಿ 6,46,801 ಹೊಸಬರು, 50,540 ಪುನರಾವರ್ತಿತ ಹಾಗೂ 13,022 ಖಾಸಗಿ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೇ ಅತಿ ಹೆಚ್ಚಿದ್ದು, ಒಟ್ಟು 2,92,645 ವಿದ್ಯಾರ್ಥಿಗಳಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 2,11,174 ಹಾಗೂ ಕಲಾ ವಿಭಾಗದಲ್ಲಿ 1,42,982 ವಿದ್ಯಾರ್ಥಿಗಳಿದ್ದಾರೆ. ಪರೀಕ್ಷೆಗಳು ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ನಡೆಯಲಿದ್ದು, ಪ್ರಶ್ನೆ ಪತ್ರಿಕೆ ಓದಲು ವಿದ್ಯಾರ್ಥಿಗಳಿಗೆ ಮೊದಲ 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.

ಈ ಬಾರಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಮಂಡಳಿ ಸಜ್ಜಾಗಿದ್ದು, ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ 1,217 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ವೆಬ್‌ಕಾಸ್ಟಿಂಗ್ ಕಡ್ಡಾಯಗೊಳಿಸಲಾಗಿದ್ದು, ಮಂಡಳಿಯು ಕಚೇರಿಯಿಂದಲೇ ನೇರ ನಿಗಾ ಇಡಬಹುದಾಗಿದೆ. ಪ್ರತಿ ಪ್ರಶ್ನೆ ಪತ್ರಿಕೆಯ ಮೇಲೆ ವಿಶಿಷ್ಟವಾದ ಕ್ಯೂಆರ್ ಕೋಡ್ (QR Code) ಇರುತ್ತದೆ. ಒಂದು ವೇಳೆ ಯಾರಾದರೂ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದರೆ, ಅದು ಯಾವ ಕೇಂದ್ರದಿಂದ ಸೋರಿಕೆಯಾಗಿದೆ ಎಂದು ತಕ್ಷಣ ಪತ್ತೆ ಹಚ್ಚಬಹುದಾಗಿದೆ. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇದಕ್ಕಾಗಿ ಜಾಮರ್‌ಗಳನ್ನು ಅಳವಡಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ತರುವ ಮತ್ತು ವಿತರಿಸುವ ಸಮಯದಲ್ಲಿ ಪೊಲೀಸ್ ಭದ್ರತೆಯನ್ನು ಕಡ್ಡಾಯಗೊಳಿಸಲಾಗಿದೆ.

ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ ಮತ್ತು ಸಮೀಪದ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. ಪರೀಕ್ಷಾರ್ಥಿಗಳು ತಮ್ಮ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಮತ್ತು ಮರಳಲು ಬಿಎಂಟಿಸಿ (BMTC) ಹಾಗೂ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪ್ರಯಾಣದ ವೇಳೆ ಪ್ರವೇಶ ಪತ್ರ (Hall Ticket) ತೋರಿಸುವುದು ಕಡ್ಡಾಯವಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು (Flying Squads) ನೇಮಿಸಲಾಗಿದೆ. ವಿದ್ಯಾರ್ಥಿಗಳು ಕೇವಲ ಸಾಮಾನ್ಯ ಅನಲಾಗ್ ವಾಚ್‌ಗಳನ್ನು ಮಾತ್ರ ಧರಿಸಬಹುದಾಗಿದ್ದು, ಸ್ಮಾರ್ಟ್ ವಾಚ್ ಮತ್ತು ಮೊಬೈಲ್ ಫೋನ್‌ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಪರೀಕ್ಷಾ ವೇಳಾಪಟ್ಟಿ

ಫೆಬ್ರವರಿ 28 ರಂದು ಕನ್ನಡ ಹಾಗೂ ಅರೇಬಿಕ್ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 3 ರಂದು ಇಂಗ್ಲಿಷ್, 6 ರಂದು ಭೌತಶಾಸ್ತ್ರ, 10 ರಂದು ಅರ್ಥಶಾಸ್ತ್ರ, 14 ರಂದು ಲೆಕ್ಕಶಾಸ್ತ್ರ ಹಾಗೂ ಗಣಿತ, 16 ರಂದು ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ ಮತ್ತು 17 ರಂದು ಹಿಂದುಸ್ತಾನಿ ಸಂಗೀತ, ರಿಟೇಲ್, ಆಟೋಮೊಬೈಲ್ ಹಾಗೂ ಆರೋಗ್ಯ ರಕ್ಷಣೆ ಪರೀಕ್ಷೆಗಳು ನಡೆಯಲಿವೆ. ಏಪ್ರಿಲ್ 7 ರಂದು ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಯಿದ್ದು, ಏಪ್ರಿಲ್ 25 ರಿಂದ ಮೇ 5 ರವರೆಗೆ ಪುನರಾವರ್ತಿತ ಪರೀಕ್ಷೆಗಳು ನಡೆಯಲಿವೆ.

ವಿದ್ಯಾರ್ಥಿಗಳೇ ಇದನ್ನು ನೆನಪಿಡಿ

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಪ್ರವೇಶ ಪತ್ರವನ್ನು ಕೊಂಡೊಯ್ಯಲು ಮರೆಯಬೇಡಿ. ಪರೀಕ್ಷೆ ಆರಂಭವಾಗುವ ಕನಿಷ್ಠ 30 ರಿಂದ 45 ನಿಮಿಷಗಳ ಮೊದಲೇ ಪರೀಕ್ಷಾ ಕೇಂದ್ರದಲ್ಲಿರುವುದು ಉತ್ತಮ. ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ ಎಂಬುದು ನೆನಪಿರಲಿ.

ಪಾಸಾಗಲು 34 ಅಂಕಗಳು ಸಾಕು

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಾಸಾಗಲು 80 ಅಂಕಗಳ ಲಿಖಿತ ಪರೀಕ್ಷೆಯಲ್ಲಿ 24 ಅಂಕಗಳು ಮತ್ತು ಆಂತರಿಕ ಮೌಲ್ಯಮಾಪನದಲ್ಲಿ 10 ಅಂಕಗಳು (ಒಟ್ಟು 34) ಅವಶ್ಯಕವಾಗಿವೆ. ಹೀಗಾಗಿ 34 ಅಂಕಗಳಿಗೆ ವಿದ್ಯಾರ್ಥಿಗಳು ತೇರ್ಗಡೆಯಾಗುವ ಅವಕಾಶವಿರುವುದು ಈ ಬಾರಿಯ ಫಲಿತಾಂಶ ಸುಧಾರಣೆಗೆ ಸಹಕಾರಿಯಾಗಲಿದೆ.

ಆನ್‌ಲೈನ್ ನೋಂದಣಿ

ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇದೇ ಮೊದಲ ಬಾರಿಗೆ ಇಲಾಖೆ ಅವಕಾಶ ನೀಡಿತ್ತು. ಖಾಸಗಿ ಅಭ್ಯರ್ಥಿಗಳನ್ನು ಅವರು ಆಯ್ಕೆ ಮಾಡಿಕೊಂಡ ತಾಲ್ಲೂಕಿನಲ್ಲಿ ಲಭ್ಯವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಅಥವಾ ಶಾಲೆಗಳಿಗೆ ಮಂಡಳಿಯಿಂದ ಹಂಚಿಕೆ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಹಬ್ಬಿಸುವುದು ಅಥವಾ ನಕಲಿ ಪ್ರಶ್ನೆ ಪತ್ರಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವವರ ಮೇಲೆ ನಿಗಾ ಇರಿಸಲಾಗಿದ್ದು, ಇಂತಹ ಅಕ್ರಮ ಎಸಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಮಟ್ಟದಲ್ಲಿ ನೋಡಲ್ ಅಧಿಕಾರಿಯೊಬ್ಬರನ್ನು ಇಲಾಖೆ ನೇಮಿಸಿದೆ. ಇದರೊಂದಿಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲೂ ತಕ್ಷಣ ಪೊಲೀಸರಿಗೆ ದೂರು ನೀಡಲು ಸೂಚಿಸಲಾಗಿದೆ.

Read More
Next Story