
ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಉದ್ಯೋಗ ಲೆಕ್ಕ ಕೇಳಲು ಕರವೇ ‘ಆಗ್ರಹ ಅಭಿಯಾನ’
ಖಾಸಗಿ, ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನ್ಯಾಯಯುತ ಉದ್ಯೋಗಾವಕಾಶ ಕಲ್ಪಿಸಬೇಕು ಎಂಬ ದೃಢ ಸಂಕಲ್ಪದೊಂದಿಗೆ ಕರವೇ ಆರಂಭಿಸಿರುವ ‘ಆಗ್ರಹ ಅಭಿಯಾನ’ ರಾಜ್ಯದ ಗಮನ ಸೆಳೆದಿದೆ.
ಕನ್ನಡ ಪರ ಸಂಘಟನೆಗಳ ಹೋರಾಟವೆಂದರೆ ಕೇವಲ ಬೀದಿಗಿಳಿದು ಘೋಷಣೆ ಕೂಗುವುದು, ಧರಣಿ ನಡೆಸುವುದು ಅಥವಾ ಕಪ್ಪು ಮಸಿ ಬಳಿಯುವುದು ಎಂಬ ರೂಢಿಗತ ಕಲ್ಪನೆಯನ್ನು ಮುರಿದು, ದತ್ತಾಂಶ ಆಧಾರಿತ ಮತ್ತು ಸಂವಾದಾತ್ಮಕ ಮಾರ್ಗ ಕಂಡುಕೊಳ್ಳುವ ಹೊಸ ಶಕೆಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮುನ್ನುಡಿ ಬರೆದಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ನ್ಯಾಯಯುತ ಉದ್ಯೋಗಾವಕಾಶ ಕಲ್ಪಿಸಬೇಕು ಮತ್ತು ನೇಮಕಾತಿಯಲ್ಲಿ ಪಾರದರ್ಶಕತೆ ತರಬೇಕು ಎಂಬ ದೃಢ ಸಂಕಲ್ಪದೊಂದಿಗೆ ಕರವೇ ಆರಂಭಿಸಿರುವ ‘ಆಗ್ರಹ ಅಭಿಯಾನ’ ರಾಜ್ಯದ ಗಮನ ಸೆಳೆದಿದೆ.
ರಾಜ್ಯೋತ್ಸವದ ಸಂಭ್ರಮದ ನವೆಂಬರ್ ತಿಂಗಳಲ್ಲಿ, ಕೇವಲ ಸಾಂಸ್ಕೃತಿಕ ಆಚರಣೆಗಳಿಗೆ ಸೀಮಿತವಾಗದೆ, ಕನ್ನಡಿಗರ ಆರ್ಥಿಕ ಮತ್ತು ಉದ್ಯೋಗ ಭದ್ರತೆಯ ಹಕ್ಕನ್ನು ಮುಂಚೂಣಿಗೆ ತಂದಿರುವುದು ಈ ಅಭಿಯಾನದ ವೈಶಿಷ್ಟ್ಯ. ರಾಜ್ಯದ ವಿವಿಧೆಡೆ 150ಕ್ಕೂ ಹೆಚ್ಚು ಐಟಿ ಮತ್ತು ಖಾಸಗಿ ಕಂಪನಿಗಳಿಗೆ ಭೇಟಿ ನೀಡಿ, ಸಂಸ್ಥೆಗಳ ಮುಖ್ಯಸ್ಥರಿಗೆ ಮನವಿ ಪತ್ರ ಸಲ್ಲಿಸಿರುವ ಕರವೇ ನಿಯೋಗಗಳು, ಕಾರ್ಪೊರೇಟ್ ಜಗತ್ತಿನೊಂದಿಗೆ ರಚನಾತ್ಮಕ ಮುಖಾಮುಖಿಗೆ ನಾಂದಿ ಹಾಡಿವೆ.
ಸೌಹಾರ್ದಯುತ ಸಂವಾದ ಮತ್ತು ಸಂಸ್ಥೆಗಳ ಸ್ಪಂದನೆ
ಅಭಿಯಾನದ ಮೊದಲ ದಿನವಾದಂದು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕರವೇ ಮುಖಂಡರ ಹತ್ತಕ್ಕೂ ಹೆಚ್ಚು ಸುಶಿಕ್ಷಿತ ಹಾಗೂ ಶಿಸ್ತುಬದ್ಧ ತಂಡಗಳು ಕಾರ್ಯಾಚರಣೆ ನಡೆಸಿದವು. ಎಲೆಕ್ಟ್ರಾನಿಕ್ ಸಿಟಿ, ವೈಟ್ಫೀಲ್ಡ್, ಹೊರವರ್ತುಲ ರಸ್ತೆ ಮತ್ತು ಬನ್ನೇರುಘಟ್ಟ ರಸ್ತೆಯಂತಹ ಪ್ರಮುಖ ಕೈಗಾರಿಕಾ ಮತ್ತು ಐಟಿ ವಲಯಗಳಲ್ಲಿ ಕಾರ್ಯಾಚರಣೆ ನಡೆದಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ರಿಲಯನ್ಸ್ ರೀಟೇಲರ್ ಮುಖ್ಯ ಕಚೇರಿಗೆ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎ. ಧರ್ಮರಾಜ್ ಗೌಡ ಅವರ ನೇತೃತ್ವದ ನಿಯೋಗ ಭೇಟಿ ನೀಡಿತು. ಈ ಭೇಟಿಯ ವೇಳೆ ಸಂಸ್ಥೆಯ ಮಾನವ ಸಂಪನ್ಮೂಲ ಪ್ರತಿನಿಧಿಗಳು ನೀಡಿದ ಮಾಹಿತಿ ಗಮನಾರ್ಹವಾಗಿತ್ತು. ಸಂಸ್ಥೆಯಲ್ಲಿ ಒಟ್ಟು 74,000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಶೇ. 75 ಕ್ಕೂ ಹೆಚ್ಚು ಮಂದಿ ಕನ್ನಡಿಗರೇ ಇದ್ದಾರೆ ಎಂಬ ಅಧಿಕೃತ ವಿವರವನ್ನು ಹಂಚಿಕೊಂಡರು. ಅಲ್ಲದೆ, ಕರವೇ ನೀಡಿದ ಆಗ್ರಹ ಪತ್ರವನ್ನು ಗೌರವದಿಂದ ಸ್ವೀಕರಿಸಿ, ಲಿಖಿತ ರೂಪದಲ್ಲೂ ಸಮಗ್ರ ಮಾಹಿತಿ ಒದಗಿಸುವುದಾಗಿ ಭರವಸೆ ನೀಡಿದರು.
ಕರವೇ ರಾಜ್ಯ ಉಪಾಧ್ಯಕ್ಷರಾದ ಹಯಾತ್ ಕಾರ್ಗಲ್ ಅವರ ನೇತೃತ್ವದ ನಿಯೋಗವು ಬನ್ನೇರುಘಟ್ಟ ರಸ್ತೆಯ ಅರಕೆರೆ ವ್ಯಾಪ್ತಿಯಲ್ಲಿರುವ ಬಹುರಾಷ್ಟ್ರೀಯ ಸಂಸ್ಥೆಗಳಾದ LKQ ಇಂಡಿಯಾ, ಸೋಲಾರ್ ಎಡ್ಜ್, ಎಸ್ಜೆಆರ್ ಪ್ರೈಮ್ ಕಾರ್ಪ್ ಮತ್ತು ಸಿನೆಪೊಲಿಸ್ ಕಂಪನಿಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಿತು. ಎಲ್ಲಾ ಸಂಸ್ಥೆಗಳ ಆಡಳಿತ ಮಂಡಳಿಗಳು ಕರವೇ ನಿಯೋಗವನ್ನು ಸೌಜನ್ಯದಿಂದ ಬರಮಾಡಿಕೊಂಡು, ಸ್ಥಳೀಯರ ಉದ್ಯೋಗದ ಕುರಿತ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಉತ್ತರಿಸಲು ಮುಂದಾಗಿವೆ. ಎಲ್ಲಿಯೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ, ಉದ್ಯೋಗಿಗಳ ಕರ್ತವ್ಯಕ್ಕೆ ಅಡ್ಡಿಯಾಗದಂತೆ, ಕೇವಲ ಆಡಳಿತ ವಿಭಾಗದ ಮುಖ್ಯಸ್ಥರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ರೀತಿ ಅಭಿಯಾನಕ್ಕೆ ಕಾರ್ಪೊರೇಟ್ ವಲಯದಿಂದಲೂ ಮೆಚ್ಚುಗೆ ತಂದುಕೊಟ್ಟಿದೆ.
ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ ಅಭಿಯಾನದ ಎರಡನೇ ದಿನವಾದ ಮಂಗಳವಾರ ಮಹದೇವಪುರ ವ್ಯಾಪ್ತಿಯ ಹಲವು ಸಂಸ್ಥೆಗಳಿಗೆ ಕರವೇ ರಾಜ್ಯ ಉಪಾಧ್ಯಕ್ಷ ವೀರಭದ್ರ ಅವರ ನೇತೃತ್ವದ ತಂಡ ಭೇಟಿ ನೀಡಿ ಆಗ್ರಹ ಪತ್ರ ಸಲ್ಲಿಸಿತು. ಕರವೇ ಮಹದೇವಪುರ ಕ್ಷೇತ್ರದ ಅಧ್ಯಕ್ಷ ಲೋಹಿತ್, ಕೆ. ಆರ್. ಪುರ ಕ್ಷೇತ್ರದ ಅಧ್ಯಕ್ಷ ಮಂಜುನಾಥ್ , ಮುಖಂಡರಾದ ರಾಮ, ಲಕ್ಷ್ಮಣ, ಆನಂದ್, ನಾಗರಾಜ್ ಮುಂತಾದವರು ತಂಡದಲ್ಲಿದ್ದರು. ಕರವೇ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತ ಮೋಹನ್ ನೇತೃತ್ವದಲ್ಲಿ ಮುಖಂಡರ ತಂಡ ಬೆಳ್ಳಂದೂರಿನ ಕ್ವೆಸ್ಟ್ ಗ್ಲೋಬಲ್ ಕಂಪನಿ ಗೆ ಭೇಟಿ ನೀಡಿ ಆಗ್ರಹ ಪತ್ರ ಸಲ್ಲಿಸಿದರು.
ಹೋರಾಟದ ಹಿಂದಿನ ಅಸಲಿ ನೋವು
ಕರ್ನಾಟಕ, ವಿಶೇಷವಾಗಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ರಾಜಧಾನಿಯಾಗಿ ಬೆಳೆದಿದೆ. ಆದರೆ, ಈ ಐಟಿ ಕ್ರಾಂತಿಯ ಫಲ ಸ್ಥಳೀಯ ಯುವ ಸಮುದಾಯಕ್ಕೆ ಸಮರ್ಪಕವಾಗಿ ತಲುಪುತ್ತಿದೆಯೇ ಎಂಬುದು ದಶಕಗಳಿಂದ ಉತ್ತರವಿಲ್ಲದ ಪ್ರಶ್ನೆಯಾಗಿದೆ. ರಾಜ್ಯದಲ್ಲಿ ನೂರಾರು ಎಂಜಿನಿಯರಿಂಗ್ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಿದ್ದು, ವಾರ್ಷಿಕ ಲಕ್ಷಾಂತರ ಪ್ರತಿಭಾವಂತ ತಾಂತ್ರಿಕ ಪದವೀಧರರು ಹೊರಬರುತ್ತಿದ್ದಾರೆ. ಆದರೂ, ಖಾಸಗಿ ಸಂಸ್ಥೆಗಳಲ್ಲಿ ಮತ್ತು ಐಟಿ ದಿಗ್ಗಜ ಕಂಪನಿಗಳಲ್ಲಿ ಉನ್ನತ ಹುದ್ದೆಗಳಿರಲಿ, ಆರಂಭಿಕ ಹಂತದ ನೇಮಕಾತಿಗಳಲ್ಲೂ ಕನ್ನಡಿಗರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಗಂಭೀರ ಆರೋಪಗಳಿವೆ.
ಕಂಪನಿಗಳ ಮಾನವ ಸಂಪನ್ಮೂಲ ವಿಭಾಗಗಳಲ್ಲಿ ನಿರ್ದಿಷ್ಟ ಭಾಷಿಕ ಸಮುದಾಯಗಳ ಹಿಡಿತ ಹೆಚ್ಚಾಗಿದ್ದು, ಕ್ಯಾಂಪಸ್ ಸಂದರ್ಶನಗಳಲ್ಲಿ ಕರ್ನಾಟಕದ ಗ್ರಾಮೀಣ ಹಾಗೂ ಎರಡನೇ ಹಂತದ ನಗರಗಳ ಎಂಜಿನಿಯರಿಂಗ್ ಕಾಲೇಜುಗಳನ್ನು ಕಡೆಗಣಿಸಲಾಗುತ್ತಿದೆ ಎಂಬುದು ಕನ್ನಡಿಗ ಐಟಿ ವೃತ್ತಿಪರರ ದೂರು. ನೆರೆಯ ರಾಜ್ಯಗಳಿಂದ ಅಭ್ಯರ್ಥಿಗಳನ್ನು ಸಾರಾಸಗಟಾಗಿ ಕರೆತಂದು ಸ್ಥಳೀಯರನ್ನು ಕಡೆಗಣಿಸುವ ವ್ಯವಸ್ಥಿತ ಜಾಲವಿದೆ ಎಂಬ ಅಸಮಾಧಾನ ತೀವ್ರಗೊಂಡಿದೆ. ಹೀಗಾಗಿಯೇ, ಕನ್ನಡಿಗ ಐಟಿ ನೌಕರರೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದು, ಇದು ಕರವೇ ರೂಪಿಸಿರುವ ಈ ದತ್ತಾಂಶ ಕೇಂದ್ರಿತ ಹೋರಾಟಕ್ಕೆ ಪ್ರಮುಖ ಪ್ರೇರಣೆಯಾಗಿದೆ.
ಪ್ರತಿಭಟನೆಯಲ್ಲ, ಮಾಹಿತಿ ಸಂಗ್ರಹ
ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಈ ಅಭಿಯಾನದ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಅವರ ಪ್ರಕಾರ, ಇದು ಕಂಪನಿಗಳ ವಿರುದ್ಧದ ಹಗೆತನವಲ್ಲ ಅಥವಾ ಯಾವುದೇ ಬಗೆಯ ‘ನೈತಿಕ ಪೊಲೀಸ್ಗಿರಿ’ ಅಲ್ಲ. ರಾಜ್ಯ ಸರ್ಕಾರವು ಖಾಸಗಿ ಕಂಪನಿಗಳಿಗೆ ರಿಯಾಯಿತಿ ದರದಲ್ಲಿ ಭೂಮಿ, ವಿದ್ಯುತ್, ನೀರು ಮತ್ತು ರಸ್ತೆ ಮೂಲಸೌಕರ್ಯಗಳನ್ನು ಒದಗಿಸಿದೆ. ಹೀಗಿರುವಾಗ, ಈ ಸಂಸ್ಥೆಗಳಿಗೆ ಸ್ಥಳೀಯ ಸಮಾಜಕ್ಕೆ ಮರಳಿ ನೀಡುವ ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆ ಇರುತ್ತದೆ. ಸ್ಥಳೀಯರಿಗೆ ಉದ್ಯೋಗ ನೀಡುವುದು ಔದಾರ್ಯವಲ್ಲ, ಅದು ಸಾಮಾಜಿಕ ನ್ಯಾಯ. ಗಾಳಿಯಲ್ಲಿ ಗುಂಡು ಹಾರಿಸುವುದಕ್ಕಿಂತ, ಕಂಪನಿಗಳಿಂದಲೇ ನೇರ ಮಾಹಿತಿ ಪಡೆಯುವುದು ಕರವೇ ತಂತ್ರಗಾರಿಕೆ. ಸಂಸ್ಥೆಗಳಲ್ಲಿ ಒಟ್ಟು ಉದ್ಯೋಗಿಗಳು ಎಷ್ಟು? ಅದರಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು? ಕಳೆದ ಮೂರು ವರ್ಷಗಳಲ್ಲಿ ಆದ ನೇಮಕಾತಿ ಎಷ್ಟು? ಎಂಬ ನಿಖರ ಅಂಕಿ-ಅಂಶಗಳನ್ನು ಕಲೆಹಾಕಿ, ಒಂದು ಅಧಿಕೃತ ಶ್ವೇತಪತ್ರದ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದು ಈ ಅಭಿಯಾನದ ಅಂತಿಮ ಗುರಿಯಾಗಿದೆ.
ತಮಿಳುನಾಡು ಐಪಿಎಸ್ ಅಧಿಕಾರಿಯ ಬೇಜವಾಬ್ದಾರಿ ಹೇಳಿಕೆ
ಕರವೇ ನಡೆಸುತ್ತಿರುವ ಶಾಂತಿಯುತ, ಪ್ರಜಾಸತ್ತಾತ್ಮಕ ಅಭಿಯಾನಕ್ಕೆ ಕನ್ನಡಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ನಡುವೆಯೇ, ತಮಿಳುನಾಡು ಕೇಡರ್ನ ಐಪಿಎಸ್ ಅಧಿಕಾರಿ ಧನುಷ್ ಕುಮಾರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಭಾರೀ ವಿವಾದಕ್ಕೆ ಕಾರಣವಾಯಿತು. ಕರವೇ ಕಾರ್ಯಕರ್ತರು ಕಂಪನಿಗಳಿಗೆ ಭೇಟಿ ನೀಡುತ್ತಿರುವ ದೃಶ್ಯಗಳನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ್ದ ಐಪಿಎಸ್ ಅಧಿಕಾರಿ ಧನುಷ್ ಕುಮಾರ್, “ಕೆಲಸವಿಲ್ಲದವರೆಲ್ಲರೂ ಸೇರಿಕೊಂಡು ಇತರರು ಕೆಲಸ ಮಾಡುವುದನ್ನು ತಡೆಯುತ್ತಿದ್ದಾರೆ” ಎಂಬ ತೀರಾ ಕೀಳು ಅಭಿರುಚಿಯ, ಅಪಹಾಸ್ಯದ ಹೇಳಿಕೆಯನ್ನು ನೀಡಿದ್ದರು.
ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಯೊಬ್ಬರು, ಸಂವಿಧಾನಬದ್ಧವಾಗಿ ತಮ್ಮ ನೆಲದ ಉದ್ಯೋಗ ಹಕ್ಕುಗಳಿಗಾಗಿ ಶಾಂತಿಯುತವಾಗಿ ಮಾಹಿತಿ ಕೇಳುತ್ತಿರುವ ಸಂಘಟನೆಯನ್ನು ಮತ್ತು ಕನ್ನಡಿಗರನ್ನು ‘ಕೆಲಸವಿಲ್ಲದವರು’ ಎಂದು ಗೇಲಿ ಮಾಡಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಯಿತು. ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸ್ವತಃ ಐಟಿ ಉದ್ಯಮಿಯಾಗಿರುವ ಅರುಣ್ ಜಾವಗಲ್ ಅವರು ಈ ಪೋಸ್ಟ್ಗೆ ತಕ್ಷಣವೇ ಟೀಕಿಸಿದ್ದಾರೆ. ಅವರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಡಿಜಿಪಿ ಅವರಿಗೆ ಅಧಿಕಾರಿಯ ಪೋಸ್ಟ್ ಟ್ಯಾಗ್ ಮಾಡಿ, "ಸಂವಿಧಾನದ ಚೌಕಟ್ಟಿನಲ್ಲಿ ಮಾಹಿತಿ ಕೇಳುತ್ತಿರುವುದನ್ನು ಉದ್ಯೋಗಕ್ಕೆ ಅಡ್ಡಿಪಡಿಸುವುದು ಎನ್ನಲು ಹೇಗೆ ಸಾಧ್ಯ? ನಿಮ್ಮ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಐಪಿಎಸ್ ಅಧಿಕಾರಿಯೊಬ್ಬರು ಕನ್ನಡಿಗರ ನ್ಯಾಯಯುತ ಹೋರಾಟವನ್ನು ಅವಹೇಳನ ಮಾಡುವುದು ಎಷ್ಟು ಸರಿ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ಸಾರ್ವಜನಿಕ ವಲಯದಿಂದ, ಕನ್ನಡಿಗರಿಂದ ತೀವ್ರ ಆಕ್ರೋಶ ಮತ್ತು ಛೀಮಾರಿ ವ್ಯಕ್ತವಾದ ಬೆನ್ನಲ್ಲೇ, ತಾನು ಮಾಡಿದ ಪ್ರಮಾದದ ಅರಿವಾಗಿ ಅಧಿಕಾರಿ ಧನುಷ್ ಕುಮಾರ್ ತಮ್ಮ ಪೋಸ್ಟ್ ಅನ್ನು ಅಳಿಸಿ ಮುಖಭಂಗದಿಂದ ಪಾರಾಗಲು ಯತ್ನಿಸಿದರು.
ಮಾಹಿತಿ ಕೇಳುವುದು ಅಪರಾಧವೇ? ಸಾಂವಿಧಾನಿಕ ಹಕ್ಕುಗಳ ವಿಶ್ಲೇಷಣೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸಂಘಟನೆ ಅಥವಾ ಪ್ರಜೆಯು ಉದ್ಯೋಗ ಮಾರುಕಟ್ಟೆಯ ವಾಸ್ತವ ಸ್ಥಿತಿಯನ್ನು ತಿಳಿಯಲು ಕಂಪನಿಗಳಿಗೆ ಮನವಿ ಸಲ್ಲಿಸುವುದು ಅಪರಾಧವಲ್ಲ. ಕರವೇ ಕಾರ್ಯಕರ್ತರು ಯಾವುದೇ ಕಂಪನಿಯ ಒಳಗಡೆ ನುಗ್ಗಿ ದಾಂಧಲೆ ನಡೆಸಿಲ್ಲ, ಘೋಷಣೆ ಕೂಗಿಲ್ಲ, ನೌಕರರಿಗೆ ಕೆಲಸ ಮಾಡಲು ಅಡ್ಡಿಪಡಿಸಿಲ್ಲ. ಕೇವಲ ಕಚೇರಿಯ ಮುಂಭಾಗದಲ್ಲಿ ಗೌರವಯುತವಾಗಿ ನಿಂತು ಎಚ್ಆರ್ ಪ್ರತಿನಿಧಿಗಳಿಗೆ ಪತ್ರ ನೀಡಿದ್ದಾರೆ. ಕರವೇ ಕೇಳಿರುವ ಮಾಹಿತಿಯನ್ನು ನೀಡುವುದು ಅಥವಾ ನಿರಾಕರಿಸುವುದು ಆಯಾ ಕಂಪನಿಗಳ ಆಡಳಿತ ಮಂಡಳಿಗೆ ಬಿಟ್ಟ ವಿಚಾರ. ಅದರಲ್ಲಿ ಯಾವುದೇ ಕಾನೂನುಬಾಹಿರ ಒತ್ತಡವಿಲ್ಲದಿರುವಾಗ, ಇದನ್ನು ಕೆಲಸಕ್ಕೆ ಅಡ್ಡಿಪಡಿಸುವುದು ಎಂದು ಬಿಂಬಿಸುವುದು ಅಕ್ಷಮ್ಯ. ರಾಜ್ಯ ಸರ್ಕಾರ ಇತ್ತೀಚೆಗೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ತರಲು ಮುಂದಾಗಿ, ಉದ್ಯಮ ರಂಗದ ತೀವ್ರ ವಿರೋಧದಿಂದಾಗಿ ತಾತ್ಕಾಲಿಕವಾಗಿ ಹಿಂಪಡೆದಿತ್ತು. ಸರ್ಕಾರದ ಇಂತಹ ಅರೆಮನಸ್ಸಿನ ನಿರ್ಧಾರಗಳ ನಡುವೆ, ನಾಗರಿಕ ಸಮಾಜವೇ ನೇರವಾಗಿ ಅಖಾಡಕ್ಕಿಳಿದು ವಾಸ್ತವ ಸಂಗತಿಗಳನ್ನು ಕಲೆಹಾಕಲು ಹೊರಟಿರುವುದು ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ಹೆಜ್ಜೆಯಾಗಿದೆ.
ನವೆಂಬರ್ ತಿಂಗಳ ಪಯಣ
ಕರವೇ ಹಮ್ಮಿಕೊಂಡಿರುವ ಈ ‘ಆಗ್ರಹ ಅಭಿಯಾನ’ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ಪ್ರಮುಖ ಕೈಗಾರಿಕಾ ಜಿಲ್ಲೆಗಳಲ್ಲೂ ನವೆಂಬರ್ ಪೂರ್ತಿ ಮುಂದುವರಿಯಲಿದೆ. ತಿಂಗಳಾಂತ್ಯಕ್ಕೆ ನೂರಾರು ಕಂಪನಿಗಳಿಂದ ಸಂಗ್ರಹಿಸಿದ ಅಂಕಿ-ಅಂಶಗಳನ್ನು ಸಮಗ್ರವಾಗಿ ವಿಶ್ಲೇಷಿಸಿ, ಕನ್ನಡಿಗರ ಉದ್ಯೋಗ ಪ್ರಾತಿನಿಧ್ಯದ ನೈಜ ಸ್ಥಿತಿಯನ್ನು ಬಿಂಬಿಸುವ ವರದಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಸಲ್ಲಿಸಲಾಗುತ್ತದೆ. ರಿಲಯನ್ಸ್ನಂತಹ ಸಂಸ್ಥೆಗಳು ಮುಕ್ತವಾಗಿ ಮಾಹಿತಿ ನೀಡಿರುವುದು ಇತರ ಸಂಸ್ಥೆಗಳ ಮೇಲೂ ಸಕಾರಾತ್ಮಕ ಒತ್ತಡ ತರಲಿದೆ. ಸ್ಥಳೀಯರನ್ನು ನೇಮಿಸಿಕೊಳ್ಳುವುದರಿಂದ ಸ್ಥಳೀಯ ಭಾಷಿಕ ಸಮಸ್ಯೆಗಳು ಪರಿಹಾರವಾಗಿ ವ್ಯಾಪಾರ ವೃದ್ಧಿಯಾಗುತ್ತದೆ ಎಂಬ ಸತ್ಯವನ್ನು ಕಂಪನಿಗಳು ಮನಗಾಣಬೇಕಿದೆ. ಕೇವಲ ಭಾಷಣಗಳಿಗೆ ಸೀಮಿತವಾಗದೆ, ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಸಿ ಗ್ರೂಪ್ ಮತ್ತು ಡಿ ಗ್ರೂಪ್ ಮಾತ್ರವಲ್ಲದೆ, ನೈಪುಣ್ಯತೆ ಆಧಾರಿತ ಎ ಮತ್ತು ಬಿ ಗ್ರೂಪ್ ತಾಂತ್ರಿಕ ಹುದ್ದೆಗಳಲ್ಲೂ ಆದ್ಯತೆ ನೀಡುವಂತೆ ಸ್ಪಷ್ಟ ಕಾನೂನು ರೂಪಿಸಲು ಈ ವರದಿ ಸರ್ಕಾರಕ್ಕೆ ಪ್ರಬಲ ಅಸ್ತ್ರವಾಗಲಿದೆ.
