
ಕುಮ್ ನಗರದಲ್ಲಿರುವ ಅಬೀಬ್ ರಜಾಕ್ ಅವರು ಅಲ್ಲಿನ ಸದ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಇರಾನ್ ಮೇಲೆ ವಾಯುದಾಳಿ: ಆತಂಕದ ನಡುವೆಯೂ ಸುರಕ್ಷಿತವಾಗಿದ್ದೇವೆ ಎಂದ ಕನ್ನಡಿಗರು
ರಾಜಧಾನಿ ಟೆಹರಾನ್‌ನಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಕುಮ್ ನಗರದಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಆತಂಕದ ವಾತಾವರಣವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇರಾನ್ ರಾಜಧಾನಿ ಟೆಹರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಜಂಟಿಯಾಗಿ ನಡೆಸಿದ ದಿಢೀರ್ ವಾಯುದಾಳಿಯಿಂದಾಗಿ ಇಡೀ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಈ ಭೀಕರ ದಾಳಿಯ ಬೆನ್ನಲ್ಲೇ ಇರಾನ್‌ನಲ್ಲಿ ನೆಲೆಸಿರುವ ಭಾರತೀಯರು ಹಾಗೂ ಕನ್ನಡಿಗರ ಸುರಕ್ಷತೆಯ ಬಗ್ಗೆ ತಾಯ್ನಾಡಿನಲ್ಲಿ ತೀವ್ರ ಆತಂಕ ಮನೆಮಾಡಿದೆ. ಈ ಬಿಕ್ಕಟ್ಟಿನ ಪರಿಸ್ಥಿತಿಯ ಕುರಿತು ಇರಾನ್‌ನಲ್ಲಿರುವ ಕನ್ನಡಿಗರು 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿ, ಪ್ರಸ್ತುತ ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ಕುಮ್ ನಗರದಲ್ಲಿ ಸಹಜ ಸ್ಥಿತಿ, ಆತಂಕವಿಲ್ಲ
ಇರಾನ್‌ನ ಪ್ರಮುಖ ನಗರಗಳಲ್ಲೊಂದಾದ ಕುಮ್ ನಗರದಲ್ಲಿ ನೆಲೆಸಿರುವ ಕನ್ನಡಿಗ ಅಬೀಬ್ ರಜಾಕ್ ಅವರು ಅಲ್ಲಿನ ಸ್ಥಳೀಯ ಪರಿಸ್ಥಿತಿಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ರಾಜಧಾನಿ ಟೆಹರಾನ್‌ನಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಕುಮ್ ನಗರದಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಆತಂಕದ ವಾತಾವರಣವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಜನಜೀವನ ಎಂದಿನಂತೆಯೇ ಮುಂದುವರಿದಿದ್ದು, ದಿನನಿತ್ಯದ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗಿಲ್ಲ. ಎಲ್ಲಾ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಹಾಗೂ ಬ್ಯಾಂಕ್‌ಗಳು ಎಂದಿನಂತೆ ತೆರೆದಿವೆ. ಇದಲ್ಲದೆ, ಯುದ್ಧದ ಭೀತಿಯ ನಡುವೆಯೂ ಕುಮ್ ನಗರದ ಸ್ಥಳೀಯ ಆಡಳಿತದಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತುರ್ತು ಸಂದೇಶ ಅಥವಾ ಆತಂಕಪಡುವಂತಹ ಎಚ್ಚರಿಕೆಯ ಸೂಚನೆಗಳು ಈವರೆಗೂ ಬಂದಿಲ್ಲ ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಇರಾನ್‌ನ ಕುಮ್ ನಗರದಲ್ಲಿ ನೆಲೆಸಿರುವ ಕನ್ನಡಿಗ ಅಬೀಬ್ ರಜಾಕ್ ಮಾತು
ಟೆಹರಾನ್‌ನಲ್ಲಿ ತೀವ್ರ ಆತಂಕ, ಸಂಪರ್ಕ ಕಡಿತ
ಕುಮ್ ನಗರದಲ್ಲಿ ಶಾಂತಿಯುತ ವಾತಾವರಣವಿದ್ದರೆ, ಇತ್ತ ವೈಮಾನಿಕ ದಾಳಿಗೆ ತುತ್ತಾಗಿರುವ ರಾಜಧಾನಿ ಟೆಹರಾನ್‌ನಲ್ಲಿ ಸಂಪೂರ್ಣ ಭೀತಿ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಿಂದಾಗಿ ತೀವ್ರ ಆತಂಕಕ್ಕೊಳಗಾಗಿರುವ ಟೆಹರಾನ್ ನಿವಾಸಿಗಳು ತಮ್ಮ ಪ್ರಾಣರಕ್ಷಣೆಗಾಗಿ ತವರಿನಿಂದ ಜಾಗ ಖಾಲಿ ಮಾಡುತ್ತಿದ್ದಾರೆ. ರಾಜಧಾನಿಯನ್ನು ತೊರೆದು ಹೊರವಲಯದ ನಗರಗಳತ್ತ ಹಾಗೂ ಸುರಕ್ಷಿತ ತಾಣಗಳತ್ತ ವಲಸೆ ಹೋಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಭದ್ರತಾ ದೃಷ್ಟಿಯಿಂದ ಟೆಹರಾನ್ ನಗರದಾದ್ಯಂತ ಮೊಬೈಲ್ ನೆಟ್‌ವರ್ಕ್ ಹಾಗೂ ಇಂಟರ್ನೆಟ್ ಸಂಪರ್ಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಅಲ್ಲಿನ ಜನರನ್ನು ಹೊರಜಗತ್ತಿನ ಸಂಪರ್ಕದಿಂದ ಕಡಿತಗೊಳಿಸಲಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಅಬೀಬ್ ರಜಾಕ್ ಹಂಚಿಕೊಂಡಿದ್ದಾರೆ.
ರಾಯಭಾರ ಕಚೇರಿಯ ನಿರಂತರ ಸಂಪರ್ಕದಲ್ಲಿ ಭಾರತೀಯರು
ಇರಾನ್‌ನಲ್ಲಿ ದಿಢೀರನೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಅನಿವಾಸಿ ಭಾರತೀಯರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಕುಮ್ ನಗರದಲ್ಲಿ ಕನ್ನಡಿಗರು ಹಾಗೂ ಭಾರತೀಯರು ಗಣನೀಯ ಸಂಖ್ಯೆಯಲ್ಲಿ ನೆಲೆಸಿದ್ದು, ಅವರೆಲ್ಲರೂ ಈಗಾಗಲೇ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ತಮ್ಮ ಹೆಸರು ಮತ್ತು ವಿವರಗಳನ್ನು ಅಧಿಕೃತವಾಗಿ ನಮೂದಿಸಿಕೊಂಡಿದ್ದಾರೆ. ಸದ್ಯಕ್ಕೆ ತಾವು ನೆಲೆಸಿರುವ ಭಾಗದಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಭಾರತೀಯ ರಾಯಭಾರ ಕಚೇರಿಯಿಂದ ಬರುವ ಪ್ರತಿಯೊಂದು ಅಧಿಕೃತ ಸಂದೇಶ ಮತ್ತು ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಿದ್ಧರಿರುವುದಾಗಿ ಅಲ್ಲಿನ ಕನ್ನಡಿಗರು ಅಭಯ ನೀಡಿದ್ದಾರೆ. ಭಾರತೀಯ ರಾಯಭಾರ ಕಚೇರಿ ಕೂಡ ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ತನ್ನ ನಾಗರಿಕರಿಗೆ ಮನೆಯೊಳಗೇ ಇರುವಂತೆ ಎಚ್ಚರಿಕೆ ರವಾನಿಸಿದೆ.

