Exclusive Interview: ಇಂಗ್ಲಿಷ್ ಮೀಡಿಯಂ ಶಾಲೆ ದುರ್ಗತಿ; 7ನೇ ಕ್ಲಾಸ್‌ಗೆ ಬಂದ್ರೂ ಇಂಗ್ಲಿಷ್ ಬರಲ್ಲ: ಬಿಳಿಮಲೆ
ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಪುಟ್ಟ ಇಂಗ್ಲಿಷ್ ಕಥೆಯನ್ನು ಸರಳವಾಗಿ ಹೇಳಲೂ ಸಾಧ್ಯವಾಗುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ಪುಟ್ಟ ಇಂಗ್ಲಿಷ್ ಕಥೆಯನ್ನು ಸರಳವಾಗಿ ಹೇಳಲೂ ಸಾಧ್ಯವಾಗುತ್ತಿಲ್ಲ, ಓದಿದ ಪಠ್ಯದ ಅರ್ಥವನ್ನು ಗ್ರಹಿಸಲಾಗದೆ ಕೇವಲ ಅಕ್ಷರಗಳನ್ನು ಜೋಡಿಸುವ ಯಾಂತ್ರಿಕ ಸ್ಥಿತಿಯಲ್ಲಿದ್ದಾರೆ ಎಂಬ ಆಘಾತಕಾರಿ ಸಂಗತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ವಿಸ್ತೃತ ಅಧ್ಯಯನದಿಂದ ಬಹಿರಂಗವಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಬಹಿರಂಗಪಡಿಸಿರುವ ಸಮಗ್ರ ಮೌಲ್ಯಮಾಪನ ವರದಿಯು ರಾಜ್ಯದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಗುಣಮಟ್ಟದ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಅವಧಿಯಲ್ಲಿ ರಾಜ್ಯದ 1 ಸಾವಿರ ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಲಾಗಿತ್ತು. ಅಂದು ಸೇರಿದ ಮಕ್ಕಳು ಇಂದು 7ನೇ ತರಗತಿಗೆ ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ, ಶಿಕ್ಷಣ ತಜ್ಞ ಜಿ.ಎಸ್. ಜಯದೇವ ಅವರ ನೇತೃತ್ವದಲ್ಲಿ, ಕರ್ನಾಟಕ ಪಬ್ಲಿಕ್ ಶಾಲೆಗಳು ಸೇರಿದಂತೆ ರಾಜ್ಯದ ಸುಮಾರು 200 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಆಳವಾದ ಕ್ಷೇತ್ರಮಟ್ಟದ ಅಧ್ಯಯನ ನಡೆಸಲಾಗಿದ್ದು, ಹಲವು ಕಟು ಸತ್ಯಗಳು ಮುನ್ನೆಲೆಗೆ ಬಂದಿವೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ದ ಫೆಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಕುರಿತು ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳ ದಾಖಲಾತಿ ಗಣನೀಯವಾಗಿ ಕುಸಿಯುತ್ತಿತ್ತು. ಖಾಸಗಿ ಇಂಗ್ಲಿಷ್ ಶಾಲೆಗಳ ಆಕರ್ಷಣೆಗೆ ಮರುಳಾದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಪರಿಣಾಮವಾಗಿ ನೂರಾರು ಕನ್ನಡ ಶಾಲೆಗಳು ಮುಚ್ಚುವ ಅಂಚಿಗೆ ತಲುಪಿದ್ದವು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ, ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಮತ್ತು ಬಡ ಮಕ್ಕಳಿಗೂ ಇಂಗ್ಲಿಷ್ ಶಿಕ್ಷಣ ಸಿಗುವಂತೆ ಮಾಡಲು ಸರ್ಕಾರವು ಸರ್ಕಾರಿ ಶಾಲೆಗಳಲ್ಲೇ ಇಂಗ್ಲಿಷ್ ಮಾಧ್ಯಮ ವಿಭಾಗಗಳನ್ನು ಆರಂಭಿಸಿತು. ಸರ್ಕಾರದ ಈ ತಂತ್ರಗಾರಿಕೆ ಮೇಲ್ನೋಟಕ್ಕೆ ಯಶಸ್ವಿಯಾಯಿತು; ಸರ್ಕಾರಿ ಶಾಲೆಗಳಿಗೆ ಬರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಯಿತು, ಪೋಷಕರಲ್ಲಿ ಹೊಸ ಆಸೆ ಚಿಗುರಿತು. ಆದರೆ, ಮಕ್ಕಳ ಸಂಖ್ಯೆ ಹೆಚ್ಚಿದರೂ, ಅವರ ಕಲಿಕೆಯ ಗುಣಮಟ್ಟ ಏನಾಗಿದೆ ಎಂಬುದನ್ನು ಪರಿಶೀಲಿಸಿದಾಗ ಕಳವಳಕಾರಿ ಚಿತ್ರಣ ಅನಾವರಣಗೊಂಡಿದೆ.
ವರದಿಯ ಪ್ರಕಾರ, ಸರ್ಕಾರಿ ಶಾಲೆಗೆ ಬರುವ ಬಹುತೇಕ ಮಕ್ಕಳು ಕೃಷಿಕರು, ದಿನಗೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಸಮುದಾಯಗಳಿಂದ ಬಂದವರಾಗಿದ್ದಾರೆ. ಭಾಷಾ ಪರಿಸರದ ಸಂಪೂರ್ಣ ಅಭಾವ. ಇಂತಹ ಮಕ್ಕಳ ಮನೆ, ಗ್ರಾಮ ಅಥವಾ ನೆರೆಹೊರೆಯಲ್ಲಿ ಸಂಪೂರ್ಣವಾಗಿ ಅವರ ಮಾತೃಭಾಷೆಯನ್ನೇ ಮಾತನಾಡಲಾಗುತ್ತದೆ. ಅಲ್ಲಿ ಇಂಗ್ಲಿಷ್ ಭಾಷೆಯ ಯಾವುದೇ ನೈಸರ್ಗಿಕ ಪರಿಸರವಿಲ್ಲ. ಕೇವಲ ಶಾಲಾ ತರಗತಿಯ ನಾಲ್ಕು ಗೋಡೆಗಳ ನಡುವೆ ಶಿಕ್ಷಕರು ಮಾತನಾಡುವ ಕೆಲವೇ ಕೆಲವು ಸೀಮಿತ ಇಂಗ್ಲಿಷ್ ವಾಕ್ಯಗಳನ್ನು ಹೊರತುಪಡಿಸಿದರೆ, ಮಕ್ಕಳಿಗೆ ಇಂಗ್ಲಿಷ್ ಆಲಿಸಲು ಅಥವಾ ತಾವೇ ಮಾತನಾಡಲು ಯಾವುದೇ ಸಹಜ ಅವಕಾಶಗಳಿಲ್ಲ. ಶಿಕ್ಷಣ ತಜ್ಞರ ಪ್ರಕಾರ, ಭಾಷೆಯೊಂದು ರಕ್ತಗತವಾಗಬೇಕಾದರೆ ಅದು ನಿರಂತರವಾಗಿ ಕಿವಿಗೆ ಬೀಳಬೇಕು ಮತ್ತು ದೈನಂದಿನ ಜೀವನದಲ್ಲಿ ಬಳಕೆಯಾಗಬೇಕು. ಆದರೆ ಗ್ರಾಮೀಣ ಮಕ್ಕಳಿಗೆ ಶಾಲೆಯ ಗಂಟೆ ಮುಗಿದ ತಕ್ಷಣ ಇಂಗ್ಲಿಷ್‌ನೊಂದಿಗೆ ಸಂಪರ್ಕವೇ ಕಡಿದುಹೋಗುತ್ತದೆ. ಇದು ಅವರ ಸಹಜ ಕಲಿಕೆಗೆ ಬಹುದೊಡ್ಡ ಅಡ್ಡಿಯಾಗಿದೆ ಎಂಬಂತಹ ಅಂಶಗಳನ್ನು ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
