
ನ್ಯಾ.ವರ್ಮಾ ನಿವಾಸದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ : ಸಭಾಧ್ಯಕ್ಷರಿಗೆ ವರದಿ ಸಲ್ಲಿಕೆ
ಕೊಠಡಿಯಲ್ಲಿ ಸಂಗ್ರಹವಾಗಿದ್ದ ಅಕ್ರಮ ಸಂಪತ್ತಿನ ಬಗ್ಗೆ ನ್ಯಾ.ಯಶವಂತ್ ವರ್ಮಾಗೆ ಸಂಪೂರ್ಣ ಅರಿವಿತ್ತು ಮತ್ತು ಅದು ಅವರ ನೇರ ಮೇಲ್ವಿಚಾರಣೆಯಲ್ಲೇ ಇತ್ತು ಎಂಬುದು ಸಾಬೀತಾಗಿದೆ ಎನ್ನಲಾಗಿದೆ.
ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ, ನ್ಯಾ. ಯಶವಂತ್ ವರ್ಮಾ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಿದ ನ್ಯಾಯಮೂರ್ತಿಗಳ ವಿಚಾರಣಾ ಸಮಿತಿಯು ತನ್ನ ಅಂತಿಮ ವರದಿಯನ್ನು ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಸಲ್ಲಿಸಿದೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಯಶವಂತ್ ವರ್ಮಾ ಅವರ ದೆಹಲಿಯ ನಿವಾಸದಲ್ಲಿ ಅಗ್ನಿಶಾಮಕ ಕಾರ್ಯಾಚರಣೆಯ ವೇಳೆ ಲೆಕ್ಕಕ್ಕೆ ಸಿಗದ ಅಪಾರ ಪ್ರಮಾಣದ ನಗದು ಪತ್ತೆಯಾದ ಪ್ರಕರಣ ಸಂಬಂಧ ವರದಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದೆ.
ನ್ಯಾಯಮೂರ್ತಿ ವಿರುದ್ಧದ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ನ್ಯಾಯಾಧೀಶರ (ವಿಚಾರಣೆ) ಕಾಯ್ದೆ, 1968ರ ಅಡಿಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ಘಟನೆ ಬಳಿಕ ಅಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಉನ್ನತ ಮಟ್ಟದ ಆಂತರಿಕ ಸಮಿತಿಯನ್ನು ರಚಿಸಿದರು. ಸಮಿತಿಯು ಸುದೀರ್ಘ ವಿಚಾರಣೆ ಮತ್ತು ಸಾಕ್ಷ್ಯಾಧಾರಗಳ ಪರಿಶೀಲನೆಯನ್ನು ನಡೆಸಿತು. ವರದಿಯ ಅನ್ವಯ ನ್ಯಾಯಮೂರ್ತಿ ವರ್ಮಾ ಅವರು ಹಣವಿದ್ದ ಕೊಠಡಿಯ ಮೇಲೆ ಅವರದ್ದೇ ನಿಯಂತ್ರಣ ಇತ್ತು ಎಂಬುದು ಗೊತ್ತಾಗಿದೆ. ಕೊಠಡಿಯಲ್ಲಿ ಸಂಗ್ರಹವಾಗಿದ್ದ ಅಕ್ರಮ ಸಂಪತ್ತಿನ ಬಗ್ಗೆ ಅವರಿಗೆ ಸಂಪೂರ್ಣ ಅರಿವಿತ್ತು ಮತ್ತು ಅದು ಅವರ ನೇರ ಮೇಲ್ವಿಚಾರಣೆಯಲ್ಲೇ ಇತ್ತು ಎಂಬುದು ಸಾಬೀತಾಗಿದೆ ಎನ್ನಲಾಗಿದೆ.
200 ಸಂಸದರ ಸಹಿ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ದೇಶದ 200ಕ್ಕೂ ಹೆಚ್ಚು ಸಂಸದರು ನ್ಯಾ.ಯಶವಂತ್ ವರ್ಮಾ ಅವರ ವಿರುದ್ಧ ಮಹಾಭಿಯೋಗ ಪ್ರಸ್ತಾವನೆಯನ್ನು ಮಂಡಿಸಲು ಸಹಿ ಹಾಕಿದರು. ಸಂವಿಧಾನದ ವಿಧಿಗಳ ಅನ್ವಯ, ನ್ಯಾಯಾಧೀಶರ ವಿರುದ್ಧ ಇಂತಹ ಕ್ರಮ ಜರುಗಿಸಲು ಸಂಸತ್ತಿನ ಪ್ರಬಲ ಬೆಂಬಲ ಅತ್ಯಗತ್ಯ. ಈ ಸಹಿಗಳ ಸಂಗ್ರಹಣೆಯು ನ್ಯಾಯಾಂಗದ ಜವಾಬ್ದಾರಿಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಶಾಸಕಾಂಗದ ಬದ್ಧತೆಯನ್ನು ತೋರಿಸಿತು. ಈ ಸಂದರ್ಭದಲ್ಲಿ ಲೋಕಸಭೆ ಸಭಾಧ್ಯಕ್ಷರು ನ್ಯಾಯಾಂಗದ ಘನತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ತನಿಖೆಯು ಅತ್ಯಂತ ಪಾರದರ್ಶಕವಾಗಿ ನಡೆಯಬೇಕು ಎಂದು ಹೇಳಿದ್ದರು.
ಸಮಿತಿಯು ಕಳೆದ ಹಲವಾರು ತಿಂಗಳುಗಳಿಂದ ಯಶವಂತ್ ವರ್ಮಾ ಅವರ ವಿರುದ್ಧದ ಆರೋಪಗಳ ಕುರಿತು ಆಳವಾದ ತನಿಖೆ ನಡೆಸಿದೆ. ಸಾಕ್ಷ್ಯಾಧಾರಗಳ ಸಂಗ್ರಹಣೆ, ಸಂಬಂಧಪಟ್ಟ ವ್ಯಕ್ತಿಗಳ ವಿಚಾರಣೆ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಲಭ್ಯವಿರುವ ಎಲ್ಲ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ಇತರ ಸದಸ್ಯರು ಸೇರಿ ಸಭಾಧ್ಯಕ್ಷ ಓಂ ಬಿರ್ಲಾ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಸಮಿತಿಯು ಮುಚ್ಚಿದ ಲಕೋಟೆಯಲ್ಲಿ ತನ್ನ ವರದಿಯನ್ನು ಸಲ್ಲಿಕೆ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಓಂ ಬಿರ್ಲಾ, ನ್ಯಾಯಾಧೀಶರ (ವಿಚಾರಣೆ) ಕಾಯ್ದೆ, 1968ರ ಕಡ್ಡಾಯ ನಿಬಂಧನೆಗಳಿಗನುಗುಣವಾಗಿ ಈ ವರದಿಯನ್ನು ಸ್ವೀಕರಿಸಲಾಗಿದೆ. ಮುಂದಿನ ಕ್ರಮವಾಗಿ, ಈ ವರದಿಯನ್ನು ಸಂಸತ್ತಿನ ಉಭಯ ಸದನಗಳ ಮುಂದಿಡಲಾಗುವುದು ಎಂದು ತಿಳಿಸಿದ್ದಾರೆ.
ಮುಂದಿನ ಕ್ರಮಗಳು
ವರದಿಯು ಇದೀಗ ಸಂಸತ್ತಿನ ಆಸ್ತಿಯಾಗಿದೆ. ನ್ಯಾಯಾಧೀಶರ ವಿಚಾರಣಾ ಕಾಯ್ದೆಯ ನಿಯಮಾವಳಿಗಳ ಪ್ರಕಾರ, ವರದಿಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸುವುದು ಕಡ್ಡಾಯವಾಗಿದೆ. ವರದಿಯಲ್ಲಿನ ಶಿಫಾರಸುಗಳು ಮತ್ತು ತೀರ್ಮಾನಗಳ ಆಧಾರದ ಮೇಲೆ ಮುಂದಿನ ಸಾಂವಿಧಾನಿಕ ಪ್ರಕ್ರಿಯೆಗಳು ನಡೆಯಲಿವೆ. ಒಂದು ವೇಳೆ ವರದಿಯಲ್ಲಿನ ಆರೋಪಗಳು ಸಾಬೀತಾದಲ್ಲಿ, ನ್ಯಾಯಾಧೀಶರ ವಿರುದ್ಧ ಸಂವಿಧಾನದ ವಿಧಿಗಳ ಅನ್ವಯ ಮಹಾಭಿಯೋಗ ಅಥವಾ ಅಂತಹ ನಿರ್ಣಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ, ಇದು ಸಂಪೂರ್ಣವಾಗಿ ಸದನದ ಒಮ್ಮತ ಮತ್ತು ಕಾನೂನು ಪ್ರಕ್ರಿಯೆಗೆ ಒಳಪಟ್ಟಿರುತ್ತದೆ.
ಅಲ್ಲದೇ, ಆರೋಪಗಳನ್ನು ಸಾಬೀತುಪಡಿಸಿದರೆ, ಸಂಸತ್ತು ಮಹಾಭಿಯೋಗದ ನಿರ್ಣಯವನ್ನು ಅಂಗೀಕರಿಸುವ ಮೂಲಕ ನ್ಯಾಯಮೂರ್ತಿಯನ್ನು ಹುದ್ದೆಯಿಂದ ವಜಾಗೊಳಿಸುವ ಹಾದಿಯನ್ನು ಸುಗಮಗೊಳಿಸುತ್ತದೆ. ಇದು ದೇಶದ ಸಂಸದೀಯ ಇತಿಹಾಸದಲ್ಲಿ ಐತಿಹಾಸಿಕ ಘಟನೆಯಾಗಲಿದೆ.

