
ಹಿರಿಯ ಪತ್ರಕರ್ತ ಜೋಸೆಫ್ ಹೂವರ್‌ಗೆ ‘ಎಕ್ಸಲೆನ್ಸ್ ಇನ್ ಸ್ಪೋರ್ಟ್ಸ್ ಜರ್ನಲಿಸಂ’ ಪ್ರಶಸ್ತಿ ಪ್ರದಾನ
ಅರಣ್ಯ ಸಿಬ್ಬಂದಿ ಹಾಗೂ ವೀಕ್ಷಕರನ್ನು ಕ್ರಿಕೆಟ್ ಮೂಲಕ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉಪಕ್ರಮಗಳಿಗೂ ಅವರು ಬೆಂಬಲ ನೀಡಿದ್ದಾರೆ. ಕ್ರೀಡಾ ಬರವಣಿಗೆಯ ಜೊತೆಗೆ ಆಡಳಿತದಲ್ಲೂ ಆಸಕ್ತಿ ಹೊಂದಿರುವ ಹೂವರ್, 2019ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು.
ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ದೀರ್ಘಕಾಲದ ಸೇವೆ ಮತ್ತು ಗಣನೀಯ ಕೊಡುಗೆಯನ್ನು ಪರಿಗಣಿಸಿ ಹಿರಿಯ ಕ್ರೀಡಾ ಪತ್ರಕರ್ತ ಹಾಗೂ ಪರಿಸರ ಸಂರಕ್ಷಣಾ ಹೋರಾಟಗಾರ ಜೋಸೆಫ್ ಹೂವರ್ ಅವರಿಗೆ ಪ್ರತಿಷ್ಠಿತ ‘ಎಕ್ಸಲೆನ್ಸ್ ಇನ್ ಸ್ಪೋರ್ಟ್ಸ್ ಜರ್ನಲಿಸಂ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕರ್ನಾಟಕ ಮೀಡಿಯಾ ಅಕಾಡೆಮಿ ಮತ್ತು ಬೆಂಗಳೂರಿನ ಸೇಂಟ್ ಪಾಲ್ಸ್ ಕಾಲೇಜು ಸಹಯೋಗದಲ್ಲಿ ಆಯೋಜಿಸಲಾದ ‘ಸೇಂಟ್ ಪಾಲ್ಸ್ ನ್ಯಾಷನಲ್ ಮೀಡಿಯಾ ಅವಾರ್ಡ್ಸ್ (SPNMA 2026)’ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಪತ್ರಿಕೋದ್ಯಮ ಮತ್ತು ಕ್ರಿಕೆಟ್ ನಂಟು:
ಹಿರಿಯ ಕ್ರೀಡಾ ಪತ್ರಕರ್ತ ರಾಜನ್ ಬಾಲಾ ಅವರ ಪ್ರೋತ್ಸಾಹದೊಂದಿಗೆ 1986ರಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಜೋಸೆಫ್ ಹೂವರ್, ಸ್ವತಃ ಕ್ರಿಕೆಟ್ ಆಟಗಾರರಾಗಿಯೂ ಗುರುತಿಸಿಕೊಂಡಿದ್ದರು. ಕ್ರೀಡೆಯ ಕುರಿತ ಆಳವಾದ ಜ್ಞಾನದೊಂದಿಗೆ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು, ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಅವರ ಪರಿಕಲ್ಪನೆಯಲ್ಲಿ ಆರಂಭವಾದ ಯುವ ಕ್ರಿಕೆಟ್ ಪಂದ್ಯಾವಳಿ ‘ಟೈಗರ್ ಕಪ್’ನೊಂದಿಗೆ ಆರಂಭದಿಂದಲೂ ನಿಕಟ ಸಂಪರ್ಕ ಹೊಂದಿದ್ದಾರೆ. ಅರಣ್ಯ ಸಿಬ್ಬಂದಿ ಹಾಗೂ ವೀಕ್ಷಕರನ್ನು ಕ್ರಿಕೆಟ್ ಮೂಲಕ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉಪಕ್ರಮಗಳಿಗೂ ಅವರು ಬೆಂಬಲ ನೀಡಿದ್ದಾರೆ. ಕ್ರೀಡಾ ಬರವಣಿಗೆಯ ಜೊತೆಗೆ ಆಡಳಿತದಲ್ಲೂ ಆಸಕ್ತಿ ಹೊಂದಿರುವ ಹೂವರ್, 2019ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು.
ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯ ಪಾತ್ರ:
ಕ್ರೀಡಾ ಕ್ಷೇತ್ರದಾಚೆಗೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಜೋಸೆಫ್ ಹೂವರ್ ಅವರು ‘ಯುನೈಟೆಡ್ ಕನ್ಸರ್ವೇಷನ್ ಮೂವ್‌ಮೆಂಟ್’ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. ಕರ್ನಾಟಕದ ಅರಣ್ಯ ಪ್ರದೇಶಗಳು, ವನ್ಯಜೀವಿ ಆವಾಸಸ್ಥಾನಗಳು ಮತ್ತು ಪರಿಸರ ಕಾರಿಡಾರ್‌ಗಳ ರಕ್ಷಣೆಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಪಶ್ಚಿಮ ಘಟ್ಟಗಳ ಸಂರಕ್ಷಣೆ, ನಗರ ಹಸಿರು ಪ್ರದೇಶಗಳ ಉಳಿವು, ಜೀವವೈವಿಧ್ಯ, ಮಾನವ–ಆನೆ ಸಂಘರ್ಷ ನಿರ್ವಹಣೆ, ವನ್ಯಜೀವಿ ಚಿಕಿತ್ಸಾ ಸೌಲಭ್ಯಗಳ ಅಭಿವೃದ್ಧಿ ಹಾಗೂ ಜವಾಬ್ದಾರಿಯುತ ಪರಿಸರ ಪ್ರವಾಸೋದ್ಯಮದ ಕುರಿತು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ ಅವರ ಬಹುಮುಖಿ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
