ಡಾ. ಸಮೀಕ್ಷಾ ಸಾವಿಗೆ ಸರ್ಕಾರವೇ ಹೊಣೆ. ಕೇಸ್ ಹಾಕಬೇಕು: ವನ್ಯಜೀವಿ ತಜ್ಞ ಜೋಸೆಫ್ ಹೂವರ್ ಆಗ್ರಹ
x

ಡಾ. ಸಮೀಕ್ಷಾ ಸಾವಿಗೆ ಸರ್ಕಾರವೇ ಹೊಣೆ. ಕೇಸ್ ಹಾಕಬೇಕು: ವನ್ಯಜೀವಿ ತಜ್ಞ ಜೋಸೆಫ್ ಹೂವರ್ ಆಗ್ರಹ

ಮೃಗಾಲಯಗಳಲ್ಲಿ ವೈದ್ಯರ ಭಾರಿ ಕೊರತೆ ಇದೆ. ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ ಅರಣ್ಯ ಇಲಾಖೆಗೆ ಕಾಯಂ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ.


Click the Play button to hear this message in audio format

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಗರ್ಭಿಣಿ ನೀರಾನೆಗೆ ಚಿಕಿತ್ಸೆ ನೀಡುವ ವೇಳೆ ದಾಳಿಗೊಳಗಾಗಿ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸಾವನ್ನಪ್ಪಿರುವ ಘಟನೆಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗೂ ಆಡಳಿತಾತ್ಮಕ ಲೋಪಗಳೇ ನೇರ ಕಾರಣ ಎಂದು ಖ್ಯಾತ ವನ್ಯಜೀವಿ ತಜ್ಞ ಜೋಸೆಫ್ ಹೂವರ್ ಗಂಭೀರ ಆರೋಪ ಮಾಡಿದ್ದಾರೆ. 'ದ ಫೆಡರಲ್ ಕರ್ನಾಟಕ'ದೊಂದಿಗೆ ಈ ಕುರಿತು ವಿಶೇಷವಾಗಿ ಮಾತನಾಡಿದ ಅವರು, ಮೃತ ವೈದ್ಯೆಯ ಕುಟುಂಬವು ಸರ್ಕಾರದ ವಿರುದ್ಧವೇ ಅಧಿಕೃತವಾಗಿ ದೂರು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಯುವ ವೈದ್ಯೆಯೊಬ್ಬರು ಈ ರೀತಿ ದುರಂತ ಅಂತ್ಯ ಕಂಡಿರುವುದು ಅತ್ಯಂತ ದುಃಖದ ಸಂಗತಿ. ಆದರೆ, ಇಲ್ಲಿ ಅರಣ್ಯ ಇಲಾಖೆಯು ಕಡ್ಡಾಯವಾಗಿ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ಸಂಪೂರ್ಣವಾಗಿ ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಹುಲಿಗಳ ನಿರ್ವಹಣೆ ವಿಷಯದಲ್ಲಿ ಇದೇ ರೀತಿಯ ಎಸ್‌ಒಪಿ ಉಲ್ಲಂಘನೆಗಳಾಗಿದ್ದವು, ಆ ಬಗ್ಗೆ ಸ್ವತಃ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿಯೂ ಅಧಿಕಾರಿಗಳ ಇದೇ ರೀತಿಯ ನಿರ್ಲಕ್ಷ್ಯದಿಂದ ಚಿರತೆಯೊಂದು ಸಿಬ್ಬಂದಿಯ ಮೇಲೆ ದಾಳಿ ಮಾಡಿದ ಘಟನೆ ನಡೆದಿತ್ತು. ಇಷ್ಟೆಲ್ಲಾ ಉದಾಹರಣೆಗಳಿದ್ದರೂ ಪ್ರಾಣಿಗಳ ವರ್ತನೆಯನ್ನು ಎಂದಿಗೂ ಕಡಿಮೆ ಅಂದಾಜು ಮಾಡಬಾರದು ಎಂಬ ಪಾಠವನ್ನು ಅಧಿಕಾರಿಗಳು ಕಲಿಯದಿರುವುದು ದುರಂತ ಎಂದು ಹೂವರ್ ಅಸಮಾಧಾನ ಹೊರಹಾಕಿದರು. ಇಂತಹ ಸೂಕ್ಷ್ಮ ಘಟನೆಗಳು ಸಂಭವಿಸಿದಾಗ ಏನು ಮಾಡಬೇಕು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಿದ್ದರೂ, ಇಲ್ಲಿ ಕನಿಷ್ಠ ಮುಂಜಾಗ್ರತಾ ಕ್ರಮಗಳನ್ನು ಏಕೆ ಪಾಲಿಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಯಂ ಸಿಬ್ಬಂದಿ ಕೊರತೆ: ಸರ್ಕಾರದ ವಿರುದ್ಧ ಕಿಡಿ

ಮೃಗಾಲಯಗಳಲ್ಲಿ ವೈದ್ಯರ ಭಾರಿ ಕೊರತೆ ಇದೆ. ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ ಅರಣ್ಯ ಇಲಾಖೆಗೆ ಕಾಯಂ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿಲ್ಲ. ಪ್ರಾಣಿ ಪಾಲನೆ ಮತ್ತು ಪಶುವೈದ್ಯಕೀಯ ವಿಜ್ಞಾನ ಇಲಾಖೆಯ ಸಿಬ್ಬಂದಿಯನ್ನು ಕೇವಲ ನಿಯೋಜನೆ (ಡೆಪ್ಯುಟೇಷನ್) ಆಧಾರದ ಮೇಲೆ ಕರೆಸಿಕೊಂಡು ದುಡಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ವನ್ಯಜೀವಿ ನಿರ್ವಹಣೆಯಲ್ಲಿ ಭಾರಿ ತೊಂದರೆಯಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

2019 ರಿಂದಲೂ ನಾನು ಈ ಗಂಭೀರ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಲೇ ಇದ್ದೇನೆ. ಆದರೆ ಸರ್ಕಾರವು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಕಾರ್ಯವಿಧಾನಗಳನ್ನು ಅನುಸರಿಸುವಂತೆ ಯಾವುದೇ ನಿರ್ದೇಶನ ನೀಡುತ್ತಿಲ್ಲ. ಇವರ ಈ ಬೇಜವಾಬ್ದಾರಿತನಕ್ಕೆ ಬಲಿಯಾಗುತ್ತಿರುವುದು ಯಾರು? ನಮ್ಮ ಯುವ ವೈದ್ಯೆ ಸಮೀಕ್ಷಾ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು. ಈಗಲೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಘೋರ ದುರಂತಗಳು ಸಂಭವಿಸುವುದು ನಿಶ್ಚಿತ. ಹೀಗಾಗಿ ಡಾ. ಸಮೀಕ್ಷಾ ಅವರ ಸಾವಿಗೆ ನೇರವಾಗಿ ಸರ್ಕಾರವೇ ಹೊಣೆಗಾರರಾಗಿದ್ದು, ಅವರ ಕುಟುಂಬದವರು ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾತ್ರಿ ವೇಳೆ ಒಂಟಿಯಾಗಿ ಕಳುಹಿಸಿದ್ದು ಯಾಕೆ?

ಈ ಘಟನೆಯ ಕುರಿತು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ ಜೋಸೆಫ್ ಹೂವರ್, ರಾತ್ರಿ 11 ಗಂಟೆಯ ಸಮಯದಲ್ಲಿ ನೀರಾನೆಗೆ ಚಿಕಿತ್ಸೆ ನೀಡಲು ತೆರಳುವ ತುರ್ತು ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಆ ಪ್ರಾಣಿಗೆ ಹುಷಾರಿರಲಿಲ್ಲ ಹಾಗೂ ಅದು ಗರ್ಭಿಣಿ ಎಂಬುದು ಮೃಗಾಲಯದ ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿತ್ತು. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಆಕೆಯೊಂದಿಗೆ ಬೇರೆ ಯಾವುದೇ ಸಿಬ್ಬಂದಿ ಅಥವಾ ಹಿರಿಯ ಅಧಿಕಾರಿಗಳು ಏಕೆ ಹೋಗಿರಲಿಲ್ಲ? ಒಂದು ವೇಳೆ ಸಾಕಷ್ಟು ಸಿಬ್ಬಂದಿ ಜೊತೆಯಲ್ಲಿದ್ದಿದ್ದರೆ, ಇಂತಹ ದುರಂತವನ್ನು ಖಂಡಿತವಾಗಿಯೂ ತಪ್ಪಿಸಬಹುದಿತ್ತು. ಜೊತೆಗೆ, ತುರ್ತು ಸಂದರ್ಭದಲ್ಲಿ ಪ್ರಾಣಿಗಳನ್ನು ಶಾಂತಗೊಳಿಸುವ ಟ್ರ್ಯಾಂಕ್ವಿಲೈಸಿಂಗ್ ಗನ್‌ಗಳನ್ನು (ಅರಿವಳಿಕೆ ಬಂದೂಕು) ಯಾಕೆ ಬಳಸಲಿಲ್ಲ ಎಂಬುದು ಇಲ್ಲಿನ ಆಡಳಿತಾತ್ಮಕ ವೈಫಲ್ಯವನ್ನು ಎತ್ತಿತೋರಿಸುತ್ತದೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.

Read More
Next Story