
ಎಸ್ಐಆರ್ ಬಗ್ಗೆ ಕಾಂಗ್ರೆಸ್ನಿಂದ ವ್ಯವಸ್ಥಿತ ಅಪಪ್ರಚಾರ: ಡಾ. ಜಿತೇಂದ್ರ ಸಿಂಗ್
ಚುನಾವಣೆಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷ ಇವಿಎಂ ಯಂತ್ರಗಳ ಮೇಲೆ ಗೂಬೆ ಕೂರಿಸುವುದನ್ನು ಚಾಳಿಯನ್ನಾಗಿಸಿಕೊಂಡಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಆರೋಪಿಸಿದ್ದಾರೆ.
ಮತದಾರರ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತಂತೆ ಸಾರ್ವಜನಿಕರಲ್ಲಿ ಭೀತಿ ಮತ್ತು ಗೊಂದಲ ಮೂಡಿಸಲು ಕಾಂಗ್ರೆಸ್ ಪಕ್ಷವು ವ್ಯವಸ್ಥಿತ ಅಪಪ್ರಚಾರದಲ್ಲಿ ತೊಡಗಿದೆ. ಈ ರೀತಿಯ ಆಧಾರರಹಿತ ಮತ್ತು ಹತಾಶೆಯ ಸುಳ್ಳುಗಳಿಗೆ ದೇಶದ ಜಾಗೃತ ಜನತೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಎಚ್ಚರಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗಳಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷವು ಇವಿಎಂ ಯಂತ್ರಗಳ ಮೇಲೆ ಗೂಬೆ ಕೂರಿಸುವುದನ್ನು ಚಾಳಿಯನ್ನಾಗಿಸಿಕೊಂಡಿದೆ. ಆದರೆ, ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯು ಹಳೆಯ ಬ್ಯಾಲಟ್ ಪೇಪರ್ ಪದ್ಧತಿಯಲ್ಲೇ ನಡೆದಿದ್ದರೂ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಸೋಲಿಗೆ ತನ್ನ ಆಡಳಿತ ವೈಫಲ್ಯಗಳನ್ನು ಹೊಣೆ ಮಾಡಿಕೊಳ್ಳುವ ಬದಲು, ಸುಪ್ರೀಂಕೋರ್ಟ್ ಹಾಗೂ ಭಾರತೀಯ ಚುನಾವಣಾ ಆಯೋಗದ ಸಾಂವಿಧಾನಿಕ ನಡಾವಳಿಗಳನ್ನೇ ಪ್ರಶ್ನಿಸುವುದು ಕಾಂಗ್ರೆಸ್ನ ಹತಾಶ ಮನಸ್ಥಿತಿಯನ್ನು ತೋರಿಸುತ್ತದೆ. ಪ್ರಸ್ತುತ ದೇಶದ ನಾಗರಿಕರು ಕಾಂಗ್ರೆಸ್ನ ಇಂತಹ ನಕಾರಾತ್ಮಕ ರಾಜಕಾರಣವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಜನಮಾನಸದಲ್ಲಿ ಕಾಂಗ್ರೆಸ್ ಬಗ್ಗೆ ತೀವ್ರ ಅಸಮಾಧಾನ ಮೂಡಿದೆ ಎಂದು ಹೇಳಿದರು.
20 ವರ್ಷಗಳ ಬಳಿಕ ಐತಿಹಾಸಿಕ ಎಸ್ಐಆರ್
ಪ್ರಜಾಪ್ರಭುತ್ವ ವ್ಯವಸ್ಥೆಯು ಜೀವಂತವಾಗಿರಬೇಕಾದರೆ ಚುನಾವಣಾ ಪ್ರಕ್ರಿಯೆಗಳು ನಿಷ್ಪಕ್ಷಪಾತ ಮತ್ತು ದೋಷರಹಿತವಾಗಿರಬೇಕು. ಮತದಾರರ ಸ್ಥಳಾಂತರ, ಮರಣ ಹಾಗೂ ಗಡಿಭಾಗಗಳಿಂದ ಹೊರದೇಶಗಳ ಅಕ್ರಮ ನುಸುಳುವಿಕೆಗಳಿಂದಾಗಿ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ದೋಷಗಳು ನುಸುಳುವುದು ಸಹಜ. ಈ ಹಿನ್ನೆಲೆಯಲ್ಲಿ ಎಸ್ಐಆರ್ ನಡೆಸುವುದು ಕಾಲದ ಅನಿವಾರ್ಯತೆಯಾಗಿತ್ತು. ವಿಪರ್ಯಾಸವೆಂದರೆ, ಕಳೆದ 20 ವರ್ಷಗಳಿಂದ ಇಂತಹ ಯಾವುದೇ ಬೃಹತ್ ಮತ್ತು ಸಮಗ್ರ ಪರಿಷ್ಕರಣಾ ಪ್ರಕ್ರಿಯೆ ದೇಶದಲ್ಲಿ ನಡೆದಿರಲಿಲ್ಲ. ಈ ದೀರ್ಘಾವಧಿಯ ನಿರ್ಲಕ್ಷ್ಯವನ್ನು ಸರಿಪಡಿಸಿ, ಚುನಾವಣಾ ಪಟ್ಟಿಯ ಶುದ್ಧೀಕರಣಕ್ಕೆ ದಿಟ್ಟ ಹೆಜ್ಜೆ ಇಟ್ಟ ಗೌರವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲುತ್ತದೆ. ಮೃತಪಟ್ಟವರ ಹೆಸರುಗಳನ್ನು ತೆಗೆದುಹಾಕುವುದು, ಅಕ್ರಮ ನುಸುಳುಕೋರರ ನಕಲಿ ಮತಗಳನ್ನು ರದ್ದುಪಡಿಸುವುದು ಮತ್ತು ಒಬ್ಬರೇ ವ್ಯಕ್ತಿ ಹಲವು ಕಡೆಗಳಲ್ಲಿ ಮತ ಚಲಾಯಿಸುವುದನ್ನು ತಡೆಯುವುದು ಪ್ರಜಾಪ್ರಭುತ್ವದ ಸಶಕ್ತೀಕರಣಕ್ಕೆ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
‘13 ಕೋಟಿ ಮತಗಳ ರದ್ದತಿ’ ಸುಳ್ಳಿನ ಬಲೂನ್ ಒಡೆದ ಸಚಿವರು
ಚುನಾವಣಾ ಆಯೋಗವು ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಏಕಾಏಕಿ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ರಾಷ್ಟ್ರವ್ಯಾಪಿ ಮಾಡುತ್ತಿರುವ ಸುಳ್ಳು ಆರೋಪಗಳನ್ನು ನಿಖರ ಅಂಕಿ-ಅಂಶಗಳೊಂದಿಗೆ ಸಂಪೂರ್ಣವಾಗಿ ತಳ್ಳಿಹಾಕಿದರು. ರದ್ದಾಗಿದೆ ಎನ್ನಲಾದ ಮತಗಳ ಪೈಕಿ ಬರೋಬ್ಬರಿ 6 ಕೋಟಿ 3 ಲಕ್ಷ ಮತದಾರರು ಶಿಕ್ಷಣ, ಉದ್ಯೋಗ ಅಥವಾ ವೈಯಕ್ತಿಕ ಕಾರಣಗಳಿಗಾಗಿ ತಮ್ಮ ಮೂಲ ಸ್ಥಳಗಳನ್ನು ತೊರೆದು ಬೇರೆಡೆಗೆ ವಲಸೆ ಹೋಗಿದ್ದಾರೆ. ಹೊಸ ಸ್ಥಳದಲ್ಲಿ ನೋಂದಣಿ ಮಾಡಿಕೊಂಡಾಗ ಹಳೆಯ ವಿಳಾಸದ ಮತ ರದ್ದಾಗುವುದು ಸಂವಿಧಾನಬದ್ಧ ನಿಯಮ. ಒಬ್ಬ ವ್ಯಕ್ತಿಗೆ ಎರಡು ಕಡೆ ಮತದಾನದ ಹಕ್ಕು ಇರಲು ಸಾಧ್ಯವೇ ಇಲ್ಲ. ದೇಶಾದ್ಯಂತ ಕಳೆದ ಹಲವು ವರ್ಷಗಳಲ್ಲಿ ಮೃತಪಟ್ಟಿರುವ ಸುಮಾರು 3 ಕೋಟಿ ಜನರ ಹೆಸರುಗಳು ಇಂದಿಗೂ ಮತದಾರರ ಪಟ್ಟಿಯಲ್ಲೇ ಮುಂದುವರಿದಿದ್ದವು. ಇವುಗಳನ್ನು ಗುರುತಿಸಿ ರದ್ದುಪಡಿಸಲಾಗಿದೆ. ಮೃತಪಟ್ಟವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವುದು ತಪ್ಪೇ ಎಂದು ಪ್ರಶ್ನಿಸಿದರು.
ಒಂದೇ ವ್ಯಕ್ತಿಯ ಹೆಸರು ಎರಡು ಅಥವಾ ಅದಕ್ಕಿಂತ ಹೆಚ್ಚು ಕಡೆಗಳಲ್ಲಿ ನೋಂದಣಿಯಾಗಿದ್ದ ಸುಮಾರು 1 ಕೋಟಿ ಪ್ರಕರಣಗಳನ್ನು ತಂತ್ರಜ್ಞಾನದ ನೆರವಿನಿಂದ ಪತ್ತೆಹಚ್ಚಿ, ಒಂದು ಕಡೆಯ ಹೆಸರನ್ನು ಮಾತ್ರ ಉಳಿಸಿ ಹೆಚ್ಚುವರಿ ನಮೂದುಗಳನ್ನು ರದ್ದುಪಡಿಸಲಾಗಿದೆ. ಈ ಮೂಲಕ, ಯಾವುದೇ ಒಬ್ಬನೇ ಒಬ್ಬ ಅರ್ಹ ಅಥವಾ ಜೀವಂತ ಮತದಾರನ ಕಾನೂನುಬದ್ಧ ಮತದಾನದ ಹಕ್ಕನ್ನು ಕಸಿದುಕೊಂಡಿಲ್ಲ. ಕೇವಲ ಬೋಗಸ್ ಮತ್ತು ಅಕ್ರಮ ಮತಗಳನ್ನು ಮಾತ್ರ ವ್ಯವಸ್ಥೆಯಿಂದ ಹೊರಹಾಕಲಾಗಿದೆ ಎಂದರು.
ಕಾಂಗ್ರೆಸ್-ಟಿಎಂಸಿ ಪಕ್ಷಗಳ ಆತಂಕಕ್ಕೆ ನೈಜ ಕಾರಣವೇನು?
ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ನಕಲಿ ಮತದಾನ ಮತ್ತು ಬೋಗಸ್ ಮತಗಳ ಜಾಲವೇ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯಂತಹ ಪಕ್ಷಗಳ ಚುನಾವಣಾ ಗೆಲುವಿನ ಮೂಲ ಬಂಡವಾಳವಾಗಿತ್ತು. ಮೃತಪಟ್ಟವರ ಹೆಸರಿನಲ್ಲಿ ನಕಲಿ ಮತ ಚಲಾಯಿಸುವುದು, ಒಂದೇ ಮತದಾರನಿಂದ ಹಲವೆಡೆ ಮತ ಹಾಕಿಸುವುದು ಹಾಗೂ ಅಕ್ರಮ ವಲಸಿಗರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದ ಪಕ್ಷಗಳಿಗೆ ಈ ಪರಿಷ್ಕರಣೆಯಿಂದ ತೀವ್ರ ಆಘಾತವಾಗಿದೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಡೂಪ್ಲಿಕೇಟ್ ಮತಗಳನ್ನು ತೆಗೆದುಹಾಕಲಾಗಿದೆ. ಕರ್ನಾಟಕ ರಾಜ್ಯವೊಂದರಲ್ಲೇ 7 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳು ಎರಡು ಕಡೆ ನಮೂದಾಗಿದ್ದುದು ಬೆಳಕಿಗೆ ಬಂದಿದ್ದು, ಅವುಗಳನ್ನು ಸರಿಪಡಿಸಲಾಗಿದೆ. ಈ ಅಕ್ರಮಗಳಿಗೆ ಮೋದಿಯವರ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಅಂಕುಶ ಹಾಕಿರುವುದರಿಂದಲೇ ವಿಪಕ್ಷಗಳು ಕಂಗೆಟ್ಟಿವೆ ಎಂದು ವ್ಯಂಗ್ಯವಾಡಿದರು.
ನವ ಮತದಾರರ ಸೇರ್ಪಡೆ ಮತ್ತು ವದಂತಿಗಳಿಗೆ ಸ್ಪಷ್ಟನೆ
ಮತದಾರರ ಪಟ್ಟಿಯಿಂದ ಕೇವಲ ಹೆಸರುಗಳನ್ನು ತೆಗೆದುಹಾಕಲಾಗಿಲ್ಲ, ಬದಲಿಗೆ 18 ವರ್ಷ ತುಂಬಿದ ಸುಮಾರು 2.5 ಕೋಟಿ ಹೊಸ, ಉತ್ಸಾಹಿ ಯುವ ಮತದಾರರನ್ನು ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಇದು ಭಾರತದ ಪ್ರಜಾಪ್ರಭುತ್ವದ ಹೊಸ ಚೈತನ್ಯವಾಗಿದೆ. ಕಾಂಗ್ರೆಸ್ ಪಕ್ಷವು ಫಾರಂ 6 ಅನ್ನು ಅಕ್ರಮವಾಗಿ ಬದಲಾಯಿಸಲಾಗಿದೆ ಎಂದು ಹಬ್ಬಿಸುತ್ತಿದೆ, ಆದರೆ ಅದಕ್ಕೆ ಯಾವುದೇ ದಾಖಲೆ ಅಥವಾ ಪುರಾವೆ ಒದಗಿಸಲು ಸಾಧ್ಯವಾಗಿಲ್ಲ. ಜತೆಗೆ, ಪಾಸ್ಪೋರ್ಟ್ ಮಂಜೂರಾತಿಗೆ ಎಸ್ಐಆರ್ ಅಂಕಿ-ಅಂಶಗಳನ್ನು ಪರಿಗಣಿಸಲಾಗುತ್ತದೆ ಎಂಬುದು ಸಂಪೂರ್ಣ ಸುಳ್ಳು. ಪಾಸ್ಪೋರ್ಟ್ಗೂ ಮತದಾರರ ಪಟ್ಟಿ ಪರಿಷ್ಕರಣೆಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ವಿದೇಶಾಂಗ ಮತ್ತು ಸಂಬಂಧಿತ ಇಲಾಖೆಗಳು ಈಗಾಗಲೇ ಅಧಿಕೃತವಾಗಿ ಸ್ಪಷ್ಟಪಡಿಸಿವೆ ಎಂದು ಮಾಹಿತಿ ನೀಡಿದರು.
ದೇಶವಿರೋಧಿ ಶಕ್ತಿಗಳ ವಿದೇಶಿ ನಂಟು
ರಾಷ್ಟ್ರೀಯ ಭದ್ರತೆ ಮತ್ತು ಆಂತರಿಕ ಸಾರ್ವಭೌಮತ್ವದ ಕುರಿತು ಮಾತನಾಡಿದ ಸಚಿವರು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಳಿ ತಪ್ಪಿಸಲು ಯತ್ನಿಸುತ್ತಿರುವ ಶಕ್ತಿಗಳಿಗೆ ವಿದೇಶಿ ನೆರವು ಹರಿದುಬರುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಕಾಕ್ರೋಚ್ ಪಕ್ಷದ ದೀಪ್ಕೆಗೆ ಅಮೆರಿಕದಿಂದ ಹಾಗೂ ಆಶುತೋಷ್ ಎಂಬಾತನಿಗೆ ಪಾಕಿಸ್ತಾನದ ರಾಜಕೀಯ ನಾಯಕರಿಂದ ನಿರಂತರ ಹಣಕಾಸಿನ ನೆರವು ಲಭಿಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಇಂತಹ ನಾಯಕರು ನೈತಿಕವಾಗಿ ದಿವಾಳಿಯಾಗಿದ್ದಾರೆ ಮತ್ತು ಅವರಲ್ಲಿ ಯಾವುದೇ ವಿಶ್ವಾಸಾರ್ಹತೆ ಉಳಿದಿಲ್ಲ ಎಂದರು. ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಕಿಡಿಕಾರಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ನಡೆದ ಸರ್ಕಾರಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಲಕ್ಷಾಂತರ ಯುವಕರ ಭವಿಷ್ಯ ಅತಂತ್ರವಾಗಿದೆ. ನೈತಿಕ ಹೊಣೆ ಹೊತ್ತು ಸಂಬಂಧಪಟ್ಟ ಸಚಿವರು ಇದುವರೆಗೂ ರಾಜೀನಾಮೆ ನೀಡದಿರುವುದು ರಾಜ್ಯ ಸರ್ಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
