
ಜಾಮಿಯಾ ವಿವಿ: ಚುನಾವಣೆ ಭರವಸೆ ತಿರಸ್ಕರಿಸಿದ ವಿದ್ಯಾರ್ಥಿಗಳು- ಮುಂದುವರಿದ ಪ್ರತಿಭಟನೆ
ಪ್ರತಿಭಟನೆ ಸಂದರ್ಭದಲ್ಲಿ ಆಡಳಿತದ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿರುವುದು, ಕ್ರಮಗಳನ್ನು ಕೈಗೊಂಡಿರುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಪ್ರಕಟಿಸಿರುವುದಕ್ಕೆ ವಿದ್ಯಾರ್ಥಿಗಳು ಪತ್ರಿಕಾಗೋಷ್ಠಿ ನಡೆಸಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ವಿಶ್ವವಿದ್ಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುವಂತೆ ಆಗ್ರಹಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದೆ. ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುವುದಾಗಿ ವಿಶ್ವವಿದ್ಯಾಲಯ ಆಡಳಿತ ಭರವಸೆ ನೀಡಿದ್ದರೂ, ಅದು ಸ್ಪಷ್ಟವಾಗಿಲ್ಲ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ತಮ್ಮ ಬೇಡಿಕೆಗಳಿಗೆ ಲಿಖಿತ ರೂಪದಲ್ಲಿ ಖಚಿತ ಭರವಸೆ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಮುಂಜಾನೆ ವಿದ್ಯಾರ್ಥಿಗಳೊಂದಿಗೆ ರಿಜಿಸ್ಟ್ರಾರ್ ಮಾತುಕತೆ
ವಿದ್ಯಾರ್ಥಿ ಸಂಘಟನೆಯ ಹೇಳಿಕೆ ಪ್ರಕಾರ, ಸೋಮವಾರ ಮುಂಜಾನೆ ಸುಮಾರು 4.30ಕ್ಕೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ. ಮೊಹಮ್ಮದ್ ಮಹತಾಬ್ ಆಲಂ ರಿಜ್ವಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ವಿಶ್ವವಿದ್ಯಾಲಯ ಆಡಳಿತ ಹೊರಡಿಸಿದ್ದ ಅಧಿಕೃತ ಆದೇಶವನ್ನು ಪ್ರದರ್ಶಿಸಿ, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಆಡಳಿತ ತಿಳಿಸಿದೆ ಎಂದು ಸಂಘಟನೆ ಹೇಳಿದೆ.
ಆದರೆ, ವಿದ್ಯಾರ್ಥಿ ಸಂಘವನ್ನು ಮರುಸ್ಥಾಪಿಸುವ ಕುರಿತು ಆದೇಶದಲ್ಲಿ ಸ್ಪಷ್ಟ ಘೋಷಣೆ ಇಲ್ಲ. ಅಲ್ಲದೆ, ವಿದ್ಯಾರ್ಥಿ ಸಂಘದ ಸಂವಿಧಾನಕ್ಕೆ ಯಾವಾಗ ಅನುಮೋದನೆ ದೊರೆಯಲಿದೆ ಎಂಬುದರ ಬಗ್ಗೆಯೂ ನಿರ್ದಿಷ್ಟ ಕಾಲಮಿತಿ ನೀಡಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.
ಸಂವಿಧಾನಕ್ಕೆ ಅನುಮೋದನೆ ದೊರೆತ 15 ದಿನಗಳಲ್ಲಿ ಚುನಾವಣೆ
ಅಕ್ಟೋಬರ್ 26ರಂದು ಹೊರಡಿಸಲಾದ ವಿಶ್ವವಿದ್ಯಾಲಯದ ಆದೇಶದ ಪ್ರಕಾರ, ವಿದ್ಯಾರ್ಥಿ ಸಂಘದ ಸಂವಿಧಾನಕ್ಕೆ ಅನುಮೋದನೆ ದೊರೆತ 15 ದಿನಗಳ ಬಳಿಕ ಚುನಾವಣೆ ನಡೆಸಲಾಗುತ್ತದೆ. ಆದರೆ, ಸಂವಿಧಾನಕ್ಕೆ ಅನುಮೋದನೆ ನೀಡುವ ದಿನಾಂಕವನ್ನೇ ಆಡಳಿತ ಸ್ಪಷ್ಟಪಡಿಸಿಲ್ಲ ಎಂಬುದು ಪ್ರತಿಭಟನಾಕಾರರ ಪ್ರಮುಖ ಆಕ್ಷೇಪವಾಗಿದೆ.
ಇದಲ್ಲದೆ, ಪ್ರತಿಭಟನೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿರುದ್ಧ ಹೊರಡಿಸಲಾಗಿದ್ದ ಅಮಾನತು ಆದೇಶಗಳು ಮತ್ತು ಕಾರಣ ಕೇಳುವ ನೋಟಿಸ್‌ಗಳನ್ನು ಹಿಂಪಡೆಯಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿಯ ವರ್ತನೆ ಕುರಿತು ತನಿಖೆ ನಡೆಸಲು ಸಮಿತಿಯನ್ನೂ ರಚಿಸುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
