ಬೆಂಗಳೂರಿಗೆ ಬರಲಿದೆ ಇಟಲಿಯ ಕಲಾ ವೈಭವ: 900 ಕೋಟಿ ಮೌಲ್ಯದ ಕಲಾಕೃತಿಗಳ ಅನಾವರಣ
x

ಬೆಂಗಳೂರಿಗೆ ಬರಲಿದೆ ಇಟಲಿಯ ಕಲಾ ವೈಭವ: 900 ಕೋಟಿ ಮೌಲ್ಯದ ಕಲಾಕೃತಿಗಳ ಅನಾವರಣ

‘ಒನ್ ಮದರ್, ಮೆನಿ ಮದರ್ ಟಂಗ್ಸ್’ ಎಂಬ ಅಂತಾರಾಷ್ಟ್ರೀಯ ಕಲಾ ಪ್ರದರ್ಶನವು ಬೆಂಗಳೂರಿನಲ್ಲಿ ನಡೆಯಲಿದ್ದು, ಇದು ರಾಜ್ಯದ ಸಾಂಸ್ಕೃತಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಘಟನೆಯಾಗಿ ದಾಖಲಾಗಲಿದೆ.


Click the Play button to hear this message in audio format

ಜಾಗತಿಕ ಸಾಂಸ್ಕೃತಿಕ ನಕ್ಷೆಯಲ್ಲಿ ಬೆಂಗಳೂರು ನಗರವು ಇದೀಗ ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಲು ಸಜ್ಜಾಗಿದೆ. ಇಟಲಿ ದೇಶದ ಅಪರೂಪದ ಕಲಾಕೃತಿಗಳನ್ನು ಬೆಂಗಳೂರಿಗೆ ತರುವ ಮೂಲಕ, ನಗರವನ್ನು ಅಂತಾರಾಷ್ಟ್ರೀಯ ಕಲಾ ಪ್ರವಾಸೋದ್ಯಮದ ಕೇಂದ್ರವನ್ನಾಗಿ ರೂಪಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ‘ಒನ್ ಮದರ್, ಮೆನಿ ಮದರ್ ಟಂಗ್ಸ್’ ಎಂಬ ಅಂತಾರಾಷ್ಟ್ರೀಯ ಕಲಾ ಪ್ರದರ್ಶನವು ಬೆಂಗಳೂರಿನಲ್ಲಿ ನಡೆಯಲಿದ್ದು, ಇದು ರಾಜ್ಯದ ಸಾಂಸ್ಕೃತಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಘಟನೆಯಾಗಿ ದಾಖಲಾಗಲಿದೆ.

ಭಾರತ ಮತ್ತು ಇಟಲಿ ದೇಶಗಳ ನಡುವೆ ದಶಕಗಳಿಂದಲೂ ಆಳವಾದ ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಬಾಂಧವ್ಯವಿದೆ. ಈ ಸ್ನೇಹದ ಸಂಕೇತವಾಗಿ ಮತ್ತು ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸಲು 2027ನೇ ವರ್ಷವನ್ನು "ಭಾರತ-ಇಟಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ವರ್ಷ" ಎಂದು ಘೋಷಿಸಲಾಗಿದೆ. ಇದರ ಪೂರ್ವಭಾವಿ ಅಂಗವಾಗಿ, ಇಟಲಿಯ ಕೌನ್ಸಲೇಟ್ ಜನರಲ್ ಜಿಯಾನ್‌ಡೊಮೆನಿಕೊ ಮಿಲಾನೊ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಡಾ. ವಿ. ರಾಮ್ ಪ್ರಸಾತ್ ಮನೋಹರ್ ನಡುವೆ ನಡೆದ ಸುದೀರ್ಘ ಚರ್ಚೆಗಳು ಫಲಪ್ರದವಾಗಿವೆ.

ಕಲಾಪ್ರಿಯರಿಗೆ ರಸದೌತಣ

ಈ ಪ್ರದರ್ಶನದ ವಿಶೇಷ ಆಕರ್ಷಣೆಯೆಂದರೆ, ಇಟಲಿಯ ಪುನರುಜ್ಜೀವನ ಯುಗದ ಮಹಾನ್ ಕಲಾವಿದ ಅಲೆಸ್ಸಾಂಧ್ರೊ ಬಾಟಿಚೆಲ್ಲಿ ಅವರ ಕೃತಿಗಳ ಪ್ರದರ್ಶನ. ಬಾಟಿಚೆಲ್ಲಿಯವರ ವಿಶ್ವಪ್ರಸಿದ್ಧ ಮಡೋನಾ ಕಾನ್ ಬಾಂಬಿನೋ ಸೇರಿದಂತೆ ಸುಮಾರು 100 ಮಿಲಿಯನ್ ಯೂರೋ (ಸುಮಾರು 900 ಕೋಟಿ ರೂಪಾಯಿಗೂ ಹೆಚ್ಚು) ಮೌಲ್ಯದ ಅಪರೂಪದ ಕಲಾಕೃತಿಗಳು ಬೆಂಗಳೂರಿನಲ್ಲಿ ಅನಾವರಣಗೊಳ್ಳಲಿವೆ. ಇಂತಹ ಅಮೂಲ್ಯ ಕಲಾಕೃತಿಗಳು ದಕ್ಷಿಣ ಭಾರತಕ್ಕೆ ಬರುತ್ತಿರುವುದು ಇದೇ ಮೊದಲು. ಕಲಾ ಇತಿಹಾಸದ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಪ್ರವಾಸಿಗರಿಗೆ ಇದು ಅಪರೂಪದ ಅವಕಾಶವಾಗಿದೆ.

ಸಮಯ ಹಾಗೂ ಸ್ಥಳ

ಈ ಕಲಾ ಜಾತ್ರೆಯು ಆಗಸ್ಟ್ 19ರಿಂದ ಸೆಪ್ಟೆಂಬರ್ 29ರವರೆಗೆ, ಬೆಂಗಳೂರಿನ ಕಬ್ಬನ್ ಪಾರ್ಕ್ ಸಮೀಪವಿರುವ ಪ್ರತಿಷ್ಠಿತ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ನಡೆಯಲಿದೆ. ಸುಮಾರು 40 ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನವು ಕೇವಲ ಕಲಾಪ್ರಿಯರಷ್ಟೇ ಅಲ್ಲದೆ, ಪ್ರವಾಸೋದ್ಯಮ ವಲಯದಲ್ಲೂ ಹೊಸ ಸಂಚಲನ ಮೂಡಿಸಲಿದೆ. ಪ್ರವಾಸೋದ್ಯಮ ಇಲಾಖೆಯು ಈ ಪ್ರದರ್ಶನವನ್ನು ರಾಜ್ಯಕ್ಕೆ ಮಾತ್ರ ಸೀಮಿತಗೊಳಿಸದೆ, ದಕ್ಷಿಣ ಭಾರತದ ಇತರ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ವಿಶೇಷ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು ಮತ್ತು ಕಲಾಸಕ್ತರಿಗೆ ಅನುಕೂಲವಾಗುವಂತೆ ಆನ್‌ಲೈನ್ ಬುಕ್ಕಿಂಗ್ ಮತ್ತು ಮಾರ್ಗದರ್ಶನದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.

ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ದೂರದೃಷ್ಟಿ

ಈ ಕುರಿತು ಪ್ರತಿಕ್ರಿಯಿಸಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, ವಿಶ್ವದ ಅತ್ಯಂತ ಪ್ರತಿಷ್ಠಿತ ಇಟಾಲಿಯನ್ ಕಲಾಕೃತಿಗಳನ್ನು ಬೆಂಗಳೂರಿಗೆ ತರುವ ಮೂಲಕ ಕರ್ನಾಟಕವನ್ನು ಜಾಗತಿಕ ಸಾಂಸ್ಕೃತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಬಲಪಡಿಸುವುದು ನಮ್ಮ ಉದ್ದೇಶ. ಇದು ಕೇವಲ ಒಂದು ಪ್ರದರ್ಶನವಲ್ಲ, ಭಾರತ ಮತ್ತು ಇಟಲಿ ನಡುವಿನ ಸಾಂಸ್ಕೃತಿಕ ಸೇತುವೆ. ಇಂತಹ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು ಹೆಚ್ಚಿನ ವಿದೇಶಿ ಪ್ರವಾಸಿಗರನ್ನು ಸೆಳೆಯುವುದಲ್ಲದೆ, ಬೆಂಗಳೂರನ್ನು ಜಾಗತಿಕ ಸಾಂಸ್ಕೃತಿಕ ರಾಜಧಾನಿಯನ್ನಾಗಿ ಬಿಂಬಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಟಲಿಯ ಇಂತಹ ಅಮೂಲ್ಯ ಕಲಾಕೃತಿಗಳನ್ನು ನೋಡಲು ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸಲಿದ್ದು, ಇದು ರಾಜ್ಯದ ಪ್ರವಾಸೋದ್ಯಮ ಆದಾಯವನ್ನು ಹೆಚ್ಚಿಸಲಿದೆ. ಸ್ಥಳೀಯ ಕಲಾವಿದರು ಮತ್ತು ಇಟಲಿಯ ಕಲಾ ಸಂಪ್ರದಾಯದ ನಡುವೆ ಸೈದ್ಧಾಂತಿಕ ವಿನಿಮಯ ನಡೆಯಲಿದ್ದು, ಇದು ಹೊಸ ಕಲಾ ಪ್ರಕಾರಗಳ ಉದಯಕ್ಕೆ ದಾರಿ ಮಾಡಿಕೊಡಲಿದೆ. ಬೆಂಗಳೂರು ನಗರವು ಐಟಿ ಹಬ್ ಆಗಿ ಮಾತ್ರವಲ್ಲದೆ, ಸಾಂಸ್ಕೃತಿಕ ತಾಣವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ. ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಡಾ. ವಿ. ರಾಮ್ ಪ್ರಸಾತ್ ಮನೋಹರ್ ನೇತೃತ್ವದಲ್ಲಿ, ಈ ಕಾರ್ಯಕ್ರಮದ ಭದ್ರತೆ, ಕಲಾಕೃತಿಗಳ ರಕ್ಷಣೆ ಮತ್ತು ಪ್ರವಾಸಿಗರ ನಿರ್ವಹಣೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಕಲಾವಿದರು, ದೂತಾವಾಸದ ಅಧಿಕಾರಿಗಳು ಮತ್ತು ಪ್ರವಾಸೋದ್ಯಮ ತಜ್ಞರೊಂದಿಗೆ ಸಮನ್ವಯ ಸಾಧಿಸಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ.

Read More
Next Story