ಗಗನಯಾನಕ್ಕೂ ಮುನ್ನ ಮಹತ್ವದ ಹೆಜ್ಜೆ: ಗಗನಯಾತ್ರಿಗಳ ಪರೀಕ್ಷೆಗಾಗಿ ಇಸ್ರೋದಿಂದ ಲಡಾಖ್‌ನಲ್ಲಿ ಮಿಷನ್ ಮಿತ್ರ
x
ಮಿಷನ್ ಮಿತ್ರದ ಚಿತ್ರ.

ಗಗನಯಾನಕ್ಕೂ ಮುನ್ನ ಮಹತ್ವದ ಹೆಜ್ಜೆ: ಗಗನಯಾತ್ರಿಗಳ ಪರೀಕ್ಷೆಗಾಗಿ ಇಸ್ರೋದಿಂದ ಲಡಾಖ್‌ನಲ್ಲಿ 'ಮಿಷನ್ ಮಿತ್ರ'

ಇದು ಗಗನ ಯಾತ್ರಿಗಳಿಗೆ ಸಂಪೂರ್ಣ ತರಬೇತಿ ಪಡೆಯುವ ಕೇಂದ್ರವಾಗಿದ್ದು, ಬೆಂಗಳೂರು ಮೂಲದ ಸ್ಥಾರ್ಟ್​ಅಪ್​ ಕಂಪನಿ ಪ್ರೊಟೊಪ್ಲಾನೆಟ್ ಪ್ರೈವೇಟ್ ಲಿಮಿಟೆಡ್ ಪಡೆದುಕೊಂಡಿರುವುದು ವಿಶೇಷ.


Click the Play button to hear this message in audio format

ಗಗನಯಾನ ಯೋಜನೆ ಸೇರಿದಂತೆ ಭವಿಷ್ಯದ ಮಾನವಸಹಿತ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಭರದ ಸಿದ್ಧತೆ ನಡೆಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಇದೀಗ ಗಗನಯಾತ್ರಿಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ 'ಮಿಷನ್ ಮಿತ್ರ' ಎಂಬ ವಿಶೇಷ ಹಾಗೂ ವಿಶಿಷ್ಟ ಕಾರ್ಯಕ್ರಮವನ್ನು ಆರಂಭಿಸಿದೆ. ಅಂದ ಹಾಗೆ ಇದರ ಸಂಪೂರ್ಣ ಜವಾಬ್ದಾರಿಯನ್ನು ಬೆಂಗಳೂರು ಮೂಲದ ಸ್ಟಾರ್ಟ್​​ಅಪ್​ ಕಂಪನಿಯೊಂದು ಪಡೆದುಕೊಂಡಿರುವುದು ವಿಶೇಷ.


ಮಿತ್ರ ಎಂದರೆ 'ಮ್ಯಾಪಿಂಗ್ ಆಫ್ ಇಂಟರ್‌ಆಪರೇಬಲ್ ಟ್ರೈಟ್ಸ್ ಅಂಡ್ ರೆಸ್ಪಾನ್ಸ್ ಅಸೆಸ್‌ಮೆಂಟ್' (Mapping of Interoperable Traits and Response Assessment) ಎಂದರ್ಥ. ಬಾಹ್ಯಾಕಾಶದಂತಹ ಸವಾಲಿನ ಪರಿಸ್ಥಿತಿಗಳಲ್ಲಿ ಗಗನಯಾತ್ರಿಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ, ಅವರ ಸಂವಹನ ಕೌಶಲ್ಯ, ಒತ್ತಡ ನಿಭಾಯಿಸುವ ಹಾಗೂ ಮಾನಸಿಕ ಸ್ಥೈರ್ಯ ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಅಳೆಯಲು ನಿಯಂತ್ರಿತ ನೈಜ ಪರಿಸರದಲ್ಲಿ ಈ ಅನಲಾಗ್ ಮಿಷನ್‌ಗಳನ್ನು ನಡೆಸಲಾಗುತ್ತದೆ.

ಲೇಹ್‌ನಲ್ಲಿ ಕಠಿಣ ಪರೀಕ್ಷೆ

ಈ ಮಹತ್ವದ ಮಿಷನ್ ಅನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೇಹ್‌ನಲ್ಲಿ ಏಪ್ರಿಲ್ 02 ರಿಂದ ಏಪ್ರಿಲ್ 09 ರವರೆಗೆ ಆಯೋಜಿಸಲಾಗಿದೆ. ಸಮುದ್ರ ಮಟ್ಟದಿಂದ ಸುಮಾರು 3,500 ಮೀಟರ್ ಎತ್ತರದಲ್ಲಿರುವ ಲೇಹ್ ಪ್ರದೇಶವು ಆಮ್ಲಜನಕದ ಕೊರತೆ, ವಿಪರೀತ ಚಳಿ ಮತ್ತು ಪ್ರತ್ಯೇಕ ಇರುವಂಥ ಬಾಹ್ಯಾಕಾಶ ಕಾರ್ಯಾಚರಣೆಗಳ ನೈಸರ್ಗಿಕ ಅನಲಾಗ್ ಪರಿಸರವನ್ನು ಹೊಂದಿದೆ. ಹೀಗಾಗಿ ಇದು ಗಗನಯಾತ್ರಿಗಳ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಪರೀಕ್ಷಿಸಲು ಹೇಳಿಮಾಡಿಸಿದ ತಾಣವಾಗಿದೆ.


ಇಸ್ರೋ- ವಾಯುಪಡೆಯ ಜಂಟಿ ಕಾರ್ಯಾಚರಣೆ

ಇದು ಇಸ್ರೋ ಮತ್ತು ಐಎಎಫ್-ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಜಂಟಿಯಾಗಿ ರೂಪಿಸಿರುವ ಮೊಟ್ಟಮೊದಲ ತಂಡದ ನಡವಳಿಕೆಯ ಅಧ್ಯಯನವಾಗಿದೆ. ಗಗನಯಾತ್ರಿಗಳು ಹಾಗೂ ಗ್ರೌಂಡ್ ಕಂಟ್ರೋಲ್ ತಂಡಗಳ ನಡುವಿನ ಪರಸ್ಪರ ಸಂವಹನ ಹಾಗೂ ಒತ್ತಡದ ಪರಿಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವುದು ಇದರ ಪ್ರಮುಖ ಗುರಿಯಾಗಿದೆ.

ಬೆಂಗಳೂರು ಸ್ಟಾರ್ಟ್-ಅಪ್‌ಗೆ ಮಹತ್ವದ ಜವಾಬ್ದಾರಿ

ಈ ಇಡೀ ಕಾರ್ಯಾಚರಣೆಯಲ್ಲಿ ಸೌಲಭ್ಯಗಳ ನಿರ್ವಹಣೆ ಮತ್ತು ಶಾಸನಬದ್ಧ ಪ್ರೋಟೋಕಾಲ್‌ಗಳ ಸಂಪೂರ್ಣ ಜವಾಬ್ದಾರಿಯನ್ನು ಬೆಂಗಳೂರು ಮೂಲದ ಭಾರತೀಯ ಸ್ಟಾರ್ಟ್-ಅಪ್ ಕಂಪನಿಯಾದ 'ಪ್ರೊಟೊಪ್ಲಾನೆಟ್ ಪ್ರೈವೇಟ್ ಲಿಮಿಟೆಡ್' (M/s Protoplanet Pvt. Ltd.) ವಹಿಸಿಕೊಂಡಿದೆ. ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಖಾಸಗಿ ಸ್ಟಾರ್ಟ್-ಅಪ್‌ಗಳ ಪಾಲ್ಗೊಳ್ಳುವಿಕೆಗೆ ಇದು ಉತ್ತಮ ನಿದರ್ಶನವಾಗಿದೆ.

ಮಿಷನ್ ಶುಭಾರಂಭ

ಏಪ್ರಿಲ್ 2ರಂದು ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಡಾ. ವಿ. ನಾರಾಯಣನ್ ಅವರು ಬೆಂಗಳೂರಿನಿಂದ ವರ್ಚುವಲ್ ಆಗಿ ಈ ಮಿಷನ್‌ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಐಎಎಂ (IAM) ನಿರ್ದೇಶಕ ಏರ್ ಕಮೊಡೋರ್ ಎನ್. ಕೆ. ತ್ರಿಪಾಠಿ, ಎಚ್‌ಎಸ್‌ಎಫ್‌ಸಿ (HSFC) ನಿರ್ದೇಶಕ ಡಿ. ಕೆ. ಸಿಂಗ್, ಇಸ್ರೋದ ಸೈಂಟಿಫಿಕ್ ಸೆಕ್ರೆಟರಿ ಗಣೇಶ್ ಎಂ. ಪಿಳ್ಳೈ ಹಾಗೂ ಹ್ಯೂಮನ್ ಸ್ಪೇಸ್ ಪ್ರೋಗ್ರಾಮ್ (DHSP) ನಿರ್ದೇಶಕ ಹಣಮಂತರಾಯ ಬಲುರಗಿ ಉಪಸ್ಥಿತರಿದ್ದರು. ಈ ಅಧ್ಯಯನದಿಂದ ಲಭ್ಯವಾಗುವ ವೈಜ್ಞಾನಿಕ ದತ್ತಾಂಶಗಳು ಮುಂಬರುವ 'ಗಗನಯಾನ' ಯೋಜನೆಗೆ ಬಹುದೊಡ್ಡ ಕೊಡುಗೆ ನೀಡಲಿವೆ.

Read More
Next Story