Iran-Israel War Impact| ಆಟೊ ಗ್ಯಾಸ್‌ಗೆ ಹಾಹಾಕಾರ; ಚಾಲಕರ ಬದುಕು ದುಸ್ತರ
x
ಆಟೊ ಎಲ್‌ಪಿಜಿ ಬಂಕ್‌

Iran-Israel War Impact| ಆಟೊ ಗ್ಯಾಸ್‌ಗೆ ಹಾಹಾಕಾರ; ಚಾಲಕರ ಬದುಕು ದುಸ್ತರ

ಅನಿಲ ಪೂರೈಕೆ ಅಭಾವದಿಂದ ಬೆಂಗಳೂರಿನಲ್ಲಿ ಒಂದೊಂದೇ ಎಲ್‌ಪಿಜಿ ಹಾಗೂ ಸಿಎನ್‌ಜಿ ಬಂಕ್‌ಗಳು ಬಾಗಿಲು ಮುಚ್ಚುತ್ತಿವೆ. ಇದಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ ಎಲ್‌ಪಿಜಿ ಅನಿಲದ ಲಭ್ಯತೆಯೂ ಕಡಿಮೆಯಾಗಿರುವ ಕಾರಣ ಬೆಲೆಯೂ ಏರಿಕೆಯಾಗುತ್ತಿದೆ.


Click the Play button to hear this message in audio format

ಇರಾನ್‌-ಇಸ್ರೇಲ್ ನಡುವಿನ ಸಂಘರ್ಷದಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಎಲ್‌ಪಿಜಿ ಮತ್ತು ಸಿಎನ್‌ಜಿ ಚಾಲಿತ ವಾಹನಗಳ ಮಾಲೀಕರು ಹಾಗೂ ಚಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಅನಿಲ ಪೂರೈಕೆ ಅಭಾವದಿಂದ ಬೆಂಗಳೂರಿನಲ್ಲಿ ಒಂದೊಂದೇ ಎಲ್‌ಪಿಜಿ ಹಾಗೂ ಸಿಎನ್‌ಜಿ ಬಂಕ್‌ಗಳು ಬಾಗಿಲು ಮುಚ್ಚುತ್ತಿವೆ. ಇದಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ ಎಲ್‌ಪಿಜಿ ಅನಿಲದ ಲಭ್ಯತೆಯೂ ಕಡಿಮೆಯಾಗಿರುವ ಕಾರಣ ಬೆಲೆಯೂ ಏರಿಕೆಯಾಗುತ್ತಿದೆ. ಇದರಿಂದ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ.

ಮಧ್ಯಪ್ರಾಚ್ಯದಲ್ಲಿ ದಿನೇ ದಿನೇ ಇಸ್ರೇಲ್-ಇರಾನ್ ನಡುವಿನ ಸಂಘರ್ಷ ತಾರಕಕ್ಕೇರುತ್ತಿರುವ ಬೆನ್ನಲ್ಲೇ ತೈಲ ಹಾಗೂ ಅನಿಲ ಸ್ಥಾವರಗಳು ಪರಸ್ಪರ ದಾಳಿಯಿಂದ ನಾಶವಾಗುತ್ತಿವೆ. ಇದಲ್ಲದೇ, ಇರಾನ್‌ ದೇಶವು ಹಾರ್ಮುಜ್ (Hormuz) ಜಲಸಂಧಿಯಲ್ಲಿ ಹಡಗುಗಳ ಸಂಚಾರ ನಿರ್ಬಂಧಿಸಿರುವ ಕಾರಣ ಭಾರತದಲ್ಲಿ ಅನಿಲ ಪೂರೈಕೆಗೆ ಸಮಸ್ಯೆಯಾಗಿದೆ. ಮಾರ್ಚ್‌ ಆರಂಭದಿಂದ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದ ನಂತರ ಬೆಲೆಯಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ.

ಏರಿಕೆಯಾದ ಅನಿಲದ ಬೆಲೆ

2026ರ ಫೆಬ್ರವರಿ 1ರಂದು ಅನಿಲ ಬೆಲೆಗಳನ್ನು ಪರಿಷ್ಕರಿಸಲಾಗಿತ್ತು. ಲೀಟರ್‌ ಅನಿಲಕ್ಕೆ 59.17 ರೂ. ನಿಗದಿ ಮಾಡಲಾಗಿತ್ತು. ಯುದ್ಧದ ಪರಿಣಾಮ ಮಾ. 11ರಂದು ಲೀಟರ್‌ ಅನಿಲದ ಬೆಲೆ 69.74 ರೂ.ಗೆ ಏರಿಕೆಯಾಗಿದೆ. ಕೆಲ ಬಂಕ್‌ಗಳಲ್ಲಿ ಲೀಟರ್ ಅನಿಲವನ್ನು 80ರಿಂದ 85 ರೂ.ಗಳವರೆಗೂ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಎಲ್‌ಪಿಜಿ ಬಂಕ್‌ಗಳ ಮುಂದೆ 'ನೋ ಸ್ಟಾಕ್‌' ಎಂದು ಬೋರ್ಡ್‌ ಹಾಕಲಾಗಿದೆ. ಇನ್ನು ಕೆಲವೆಡೆ ಯುದ್ಧದ ಪರಿಣಾಮ ಎಲ್‌ಪಿಜಿ ಹಾಗೂ ಸಿಎನ್‌ಜಿ ಅನಿಲದ ಲಭ್ಯತೆ ಕಡಿಮೆಯಿದೆ ಎಂಬ ಬರಹದ ಬ್ಯಾನರ್‌ ಹಾಕಲಾಗಿದೆ.

"ಇರಾನ್‌-ಇಸ್ರೇಲ್ ಸಂಘರ್ಷದಿಂದಾಗಿ ಅನಿಲ ಪೂರೈಕೆ ಕಡಿಮೆಯಾಗಿದೆ. ನಿತ್ಯ 1ರಿಂದ 2 ಟನ್‌ ಮಾತ್ರ ಎಲ್‌ಪಿಜಿ ಹಾಗೂ ಸಿಎನ್‌ಜಿ ಅನಿಲ ಸರಬರಾಜು ಆಗುತ್ತಿದೆ. ಬೆಳಿಗ್ಗೆ 10.30ರವರೆಗೆ ಮಾತ್ರ ಬಂಕ್‌ ತೆರೆದಿರುತ್ತದೆ. ಅನಿಲ ಖಾಲಿಯಾದ ಮೇಲೆ ಬಾಗಿಲು ಹಾಕುತ್ತೇವೆ. ಬೆಂಗಳೂರಿನಲ್ಲಿ ನಮ್ಮ 11 ಗ್ಯಾಸ್‌ ಬಂಕ್‌ಗಳಿವೆ. ಬೇರೆ ಏಜೆನ್ಸಿಯ ಬಂಕ್‌ಗಳು ಅನಿಲ ಕೊರತೆಯಿಂದ ಬಾಗಿಲು ಮುಚ್ಚಿವೆ" ಎಂದು ಟೋಟಲ್‌ ಗ್ಯಾಸ್‌ ಏಜೆನ್ಸಿಯಾದ ಯಶವಂತಪುರದ ದಾರ್ಸ್‌ ಆಟೊಮೊಬೈಲ್‌ನ ಲಕ್ಷ್ಮಿಕಾಂತ್ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು

ಬೆಂಗಳೂರಿನ ಗೋ ಗ್ಯಾಸ್‌ ಬಂಕ್‌ನಲ್ಲಿ ಬೆಲೆ ಏರಿಕೆಯ ಬ್ಯಾನರ್‌ ಅಳವಡಿಸಿರುವುದು

ಕರ್ನಾಟಕದಲ್ಲಿ ಎಷ್ಟಿವೆ ಅನಿಲ ಬಂಕ್‌ಗಳು?

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್ ವೆಬ್‌ಸೈಟ್ ಪ್ರಕಾರ, ಕರ್ನಾಟಕದಲ್ಲಿ ಸುಮಾರು 212 ಎಲ್‌ಪಿಜಿ ಹಾಗೂ ಸಿಎನ್‌ಜಿ ಬಂಕ್‌ಗಳಿವೆ. ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಬಂಕ್‌ಗಳಲ್ಲಿ ಅನಿಲ ಪೂರೈಕೆ ವ್ಯತ್ಯಯವಾಗಿದೆ. ನಾಗರಬಾವಿ, ದೇವನಹಳ್ಳಿ ಮತ್ತು ಡಾಬಸ್‌ಪೇಟೆ ಹೊರವಲಯದ ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ.

ಇನ್ನು ಬೆಳಗಾವಿಯಲ್ಲಿ 5, ವಿಜಯಪುರದಲ್ಲಿ 3, ಧಾರವಾಡದಲ್ಲಿ 2, ಚನ್ನರಾಯಪಟ್ಟಣ, ಅಂಕೋಲಾ, ಭಟ್ಕಳ ಮತ್ತು ಧರ್ಮಸ್ಥಳದಂತಹ ಪ್ರವಾಸಿ ತಾಣಗಳಲ್ಲಿ ಒಂದೊಂದು ಆಟೊ ಗ್ಯಾಸ್‌ ಬಂಕ್‌ಗಳಿದ್ದು, ಬೆಲೆ ಏರಿಕೆಯ ನಂತರ ಗ್ಯಾಸ್‌ಗಾಗಿ ಅಲೆದಾಡುವಂತಾಗಿದೆ.

ಸಂಕಷ್ಟದಲ್ಲಿ ಸವಾರರು, ಏಜೆನ್ಸಿಗಳು

ಇಂಡಿಯನ್ ಆಯಿಲ್, ಎಚ್‌ಪಿ, ಭಾರತ್ ಪೆಟ್ರೋಲಿಯಂನಂತಹ ಸರ್ಕಾರಿ ಸ್ವಾಮ್ಯದ ಕಂಪನಿಗಳ ಜೊತೆಗೆ ರಿಲಯನ್ಸ್, ಗೋ ಗ್ಯಾಸ್ ಮತ್ತು ಟೋಟಲ್ ಗ್ಯಾಸ್‌ನಂತಹ ಖಾಸಗಿ ಕಂಪನಿಗಳೂ ಎಲ್‌ಪಿಜಿ ಹಾಗೂ ಸಿಎನ್‌ಜಿ ಅನಿಲ ಪೂರೈಕೆಯಲ್ಲಿ ತೊಡಗಿಸಿಕೊಂಡಿವೆ. ಅಭಾವದಿಂದ ಬೆಲೆ ಏರಿಕೆ ಹೆಚ್ಚಿರುವ ಕಾರಣ ಆಟೊ ಹಾಗೂ ಅನಿಲ ಆಧರಿತ ವಾಹನ ಸವಾರರು ಬವಣೆ ಅನುಭವಿಸುತ್ತಿದ್ದಾರೆ.

"ಖಾಸಗಿ ಬ್ಯಾಂಕ್‌ನಲ್ಲಿ ಸಾಲ ಪಡೆದು ಸಿಎನ್‌ಜಿ ಆಟೊ ಖರೀದಿಸಿದ್ದೇವೆ. ಈಗ ಬಂಕ್‌ಗಳಲ್ಲಿ ಸರದಿ ಸಾಲಿನಲ್ಲಿ ನಿಂತರೂ ಗ್ಯಾಸ್‌ ಸಿಗುತ್ತಿಲ್ಲ. ತಿಂಗಳಿಗೊಮ್ಮೆ 7 ಸಾವಿರ ರೂ. ಇಎಂಐ ಕಟ್ಟಬೇಕು. ಗ್ಯಾಸ್‌ ಇಲ್ಲದೇ ಆಟೊ ಪ್ರಯಾಣ ಅಸಾಧ್ಯವಾಗಿದ್ದು, ಇದರಿಂದ ಜೀವನ ನಿರ್ವಹಣೆಯೂ ಕಷ್ಟವಾಗಿದೆ" ಎಂದು ಆಟೊ ಚಾಲಕ ಶ್ರೀನಿವಾಸಮೂರ್ತಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಸಿಎನ್‌ಜಿ, ಎಲ್‌ಪಿಜಿ ಪೂರೈಕೆ ಎಲ್ಲಿಂದ?

ಭಾರತವು ಎಲ್‌ಪಿಜಿ ಬೇಡಿಕೆಯ ಸುಮಾರು ಶೇ. 65ರಷ್ಟು ಅನಿಲವನ್ನು ಸೌದಿ ಅರೇಬಿಯಾ, ಕತಾರ್, ಯುಎಇ ಮತ್ತು ಕುವೈತ್‌ನಿಂದ ಆಮದು ಮಾಡಿಕೊಳ್ಳುತ್ತದೆ. ಉಳಿದ ಶೇ. 35ರಷ್ಟು ಅನಿಲವನ್ನು ದೇಶೀಯ ರಿಫೈನರಿಗಳಿಂದ ಉತ್ಪಾದಿಸಲಾಗುತ್ತದೆ. ಸಿಎನ್‌ಜಿಯನ್ನು ದೇಶೀಯ ನೈಸರ್ಗಿಕ ಅನಿಲ ಬಾವಿಗಳಿಂದ ಮತ್ತು ಆಮದು ಮಾಡಿಕೊಂಡ ಎಲ್‌ಎನ್‌ಜಿ ಮೂಲಕ ಸಂಸ್ಕರಿಸಿ ಪೂರೈಸಲಾಗುತ್ತಿದೆ. ಇದನ್ನು ಗೇಲ್ ಮತ್ತು ಪೆಟ್ರೋನೆಟ್ ಎಲ್‌ಎನ್‌ಜಿ ನಿರ್ವಹಿಸುತ್ತವೆ.

ಮಂಗಳೂರು ಬಂದರಿನಲ್ಲಿರುವ ಎಲ್‌ಪಿಜಿ ಆಮದು ಟರ್ಮಿನಲ್‌ಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅನಿಲ ಪೂರೈಕೆಯಾಗುತ್ತಿದೆ. ಮೈಸೂರು, ಬೆಂಗಳೂರು ಮುಂತಾದ ಕಡೆಗಳಲ್ಲಿ ಥಿಂಕ್ ಗ್ಯಾಸ್‌ನಂತಹ ಕಂಪನಿಗಳು ಎಲ್‌ಎನ್‌ಜಿ ಮೂಲಕ ಸಿಎನ್‌ಜಿ ಪೂರೈಸುತ್ತಿವೆ. ಮಂಗಳೂರು, ವಿಶಾಖಪಟ್ಟಣಂ, ಕಾಂಡ್ಲಾ, ಮುಂಬೈ ಮತ್ತು ಎನ್ನೋರ್ ಬಂದರುಗಳು ಭಾರತದ ಪ್ರಮುಖ ಎಲ್‌ಪಿಜಿ ಆಮದು ತಾಣಗಳಾಗಿವೆ.

Read More
Next Story