Israel-Iran War Impact|ಬ್ಯಾಡಗಿ ಮೆಣಸಿನಕಾಯಿ,  ಇಂಡಿ ನಿಂಬೆ, ಅಕ್ಕಿ ರಫ್ತು ಅಸ್ತವ್ಯಸ್ತ
x

Israel-Iran War Impact|ಬ್ಯಾಡಗಿ ಮೆಣಸಿನಕಾಯಿ, ಇಂಡಿ ನಿಂಬೆ, ಅಕ್ಕಿ ರಫ್ತು ಅಸ್ತವ್ಯಸ್ತ

ಭಾರತಕ್ಕೆ ಮದ್ಯಪ್ರಾಚ್ಯವು ಕೇವಲ ತೈಲದ ಮೂಲವಲ್ಲ, ಬದಲಿಗೆ ರಾಜ್ಯದ ಕೃಷಿ ಉತ್ಪನ್ನಗಳಿಗೆ ಪ್ರಮುಖ ಮಾರುಕಟ್ಟೆಯಾಗಿದೆ. ಪ್ರಸ್ತುತ ಯುದ್ಧದ ಸನ್ನಿವೇಶವು ಈ ರಫ್ತು ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ.


Click the Play button to hear this message in audio format

ಇರಾನ್-ಇಸ್ರೇಲ್ ನಡುವಿನ ಯುದ್ಧದ ಪರಿಸ್ಥಿತಿಯಿಂದಾಗಿ ಇಡೀ ಜಗತ್ತಿನ ಸರಬರಾಜು ಸರಪಳಿಯನ್ನು ಅಸ್ತವ್ಯಸ್ತಗೊಳಿಸಿದೆ. ಭಾರತಕ್ಕೆ ಮದ್ಯಪ್ರಾಚ್ಯವು ಕೇವಲ ತೈಲದ ಮೂಲವಲ್ಲ, ಬದಲಿಗೆ ರಾಜ್ಯದ ಕೃಷಿ ಉತ್ಪನ್ನಗಳಾದ ಕೆಂಪು ಮೆಣಸಿನಕಾಯಿ, ಸೋನ ಮಸೂರಿ ಅಕ್ಕಿ ಮತ್ತು ಇಂಡಿ ನಿಂಬೆಯಂತಹ ಉತ್ಪನ್ನಗಳಿಗೆ ಪ್ರಮುಖ ಮಾರುಕಟ್ಟೆಯಾಗಿದೆ. ಪ್ರಸ್ತುತ ಯುದ್ಧದ ಸನ್ನಿವೇಶವು ಈ ರಫ್ತು ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ.

ಮದ್ಯಪ್ರಾಚ್ಯದ ಸಂಘರ್ಷದ ನೇರ ಪರಿಣಾಮವು ಸಮುದ್ರದ ನೌಕಾಯಾನದ ಮೇಲೆ ಬೀರಿದೆ. ಭಾರತದಿಂದ ಯುರೋಪ್ ಮತ್ತು ಅರಬ್ ರಾಷ್ಟ್ರಗಳಿಗೆ ಹೋಗುವ ಹಡಗುಗಳು ಸೂಯೆಜ್ ಕಾಲುವೆಯ ಮೂಲಕ ಹಾದುಹೋಗುತ್ತವೆ. ಆದರೆ ಯುದ್ಧದ ಭೀತಿಯಿಂದಾಗಿ ಈಗ ಹಡಗುಗಳು ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಮೂಲಕ ದೀರ್ಘ ಹಾದಿಯನ್ನು ಬಳಸಬೇಕಾಗಿದೆ. ಇದರಿಂದ ಸಾರಿಗೆ ಸಮಯ 15 - 20 ದಿನಗಳಷ್ಟು ಹೆಚ್ಚಾಗಿದೆ. ಶಿಪ್ಪಿಂಗ್ ವೆಚ್ಚ ಶೇಕಡಾ 40 ರಿಂದ 60 ರಷ್ಟು ಏರಿಕೆಯಾಗಿದೆ. ಇದು ರಫ್ತುದಾರರ ಲಾಭಾಂಶವನ್ನು ಕುಂಠಿತಗೊಳಿಸಿದೆ.

ಕೆಂಪು ಮೆಣಸಿನಕಾಯಿ ರಫ್ತಿನ ಮೇಲಿನ ಪರಿಣಾಮ

ಭಾರತವು ವಿಶ್ವದ ಅತಿದೊಡ್ಡ ಮೆಣಸಿನಕಾಯಿ ಉತ್ಪಾದಕ ಮತ್ತು ರಫ್ತುದಾರ ದೇಶವಾಗಿದೆ. ಆಂಧ್ರಪ್ರದೇಶದ ಗುಂಟೂರು ಮತ್ತು ಕರ್ನಾಟಕದ ಬ್ಯಾಡಗಿ ಮೆಣಸಿನಕಾಯಿಗೆ ಮದ್ಯಪ್ರಾಚ್ಯದಲ್ಲಿ ಭಾರಿ ಬೇಡಿಕೆಯಿದೆ. ಯುದ್ಧದ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಗಳಲ್ಲಿನ ಹೋಟೆಲ್ ಉದ್ಯಮ ಮತ್ತು ಆಹಾರ ಸಂಸ್ಕರಣಾ ಘಟಕಗಳು ಮಂದಗತಿಯಲ್ಲಿವೆ. ಇದರಿಂದ ರಫ್ತು ಪ್ರಮಾಣ ಕಡಿಮೆಯಾಗಿದೆ. ಸಾರಿಗೆ ವೆಚ್ಚ ಹೆಚ್ಚಾದ ಕಾರಣ, ಬ್ಯಾಡಗಿ ಮೆಣಸಿನಕಾಯಿ ರಫ್ತುದಾರರು ಸಂಕಷ್ಟ ಎದುರಿಸುವಂತಾಗಿದೆ. ರಫ್ತು ವಿಳಂಬವಾಗುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಗಳಲ್ಲಿ ಮೆಣಸಿನಕಾಯಿ ದಾಸ್ತಾನು ಹೆಚ್ಚಾಗಿ, ರೈತರಿಗೆ ಸಿಗಬೇಕಾದ ಬೆಲೆ ಕುಸಿಯುವ ಭೀತಿ ಎದುರಾಗಿದೆ.

ಈ ಕುರಿತು ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿದ ಹಾವೇರಿಯ ಬ್ಯಾಡಗಿ ಮೆಣಸಿನಕಾಯಿ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್‌.ಆರ್‌.ಪಾಟೀಲ್‌, ಸಾಮಾನ್ಯವಾಗಿ ತಿಂಗಳಿಗೆ ಒಂದೂವರೆ ಸಾವಿರಕ್ಕೂ ಹೆಚ್ಚು ಟನ್ ಬ್ಯಾಡಗಿ ಮೆಣಸಿನಕಾಯಿ ರಫ್ತಾಗುತ್ತಿತ್ತು. ಆದರೆ ಈಗ ಹಡಗು ಸಂಚಾರದ ಸಮಸ್ಯೆಯಿಂದಾಗಿ ಈ ರಫ್ತು ಪ್ರಮಾಣಗೆ ಪೆಟ್ಟು ಬಿದ್ದಿದೆ. ಹಡಗುಗಳು ಸಮುದ್ರದಲ್ಲಿ ನಿಂತಿರುವುದರಿಂದ ಬ್ಯಾಡಗಿ ಮೆಣಸಿನಕಾಯಿ ಹೊತ್ತ ಸಾವಿರಾರು ಕಂಟೈನರ್‌ಗಳು ಅಲ್ಲಿಯೇ ಸಿಲುಕಿಕೊಂಡಿವೆ ಎಂದರು.

"ಇದರಿಂದ ಆರ್ಥಿಕ ವಹಿವಾಟು ಸ್ಥಗಿತಗೊಂಡಂತೆ ಆಗಿದೆ. ಈ ಹಿಂದೆ ಸಾಮಾನ್ಯವಾಗಿದ್ದ ಬಾಡಿಗೆ ದರವು ಈಗ ಗಗನಕ್ಕೇರಿದೆ. ಕೇವಲ ಒಂದು ಕಂಟೈನರ್‌ಗೆ 2 ಲಕ್ಷ ರೂಪಾಯಿಗಳವರೆಗೆ ಬಾಡಿಗೆ ಕೇಳುತ್ತಿರುವುದು ರಫ್ತುದಾರರು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ. ಒಂದು ಹಡಗಿನ ಕಂಟೈನರ್‌ನಲ್ಲಿ ಸರಾಸರಿ 18 ಟನ್ ಸರಕು ಸಾಗಿಸುವ ಸಾಮರ್ಥ್ಯವಿರುತ್ತದೆ, ಆದರೆ ಈ ದುಬಾರಿ ಬಾಡಿಗೆಯಿಂದಾಗಿ ರಫ್ತು ವೆಚ್ಚವು ಲಾಭಕ್ಕಿಂತ ಹೆಚ್ಚಾಗುತ್ತಿದೆ," ಎಂದು ಹೇಳಿದರು.

ಅಕ್ಕಿ ರಫ್ತಿಗೆ ಪೆಟ್ಟು

ರಾಜ್ಯದ ಸೋನಮಸೂರಿ ಅಕ್ಕಿಯ ರಫ್ತಿಗೆ ಸೌದಿ ಅರೇಬಿಯಾ, ಇರಾನ್, ಯುಎಇ ಮತ್ತು ಇರಾಕ್ ಪ್ರಮುಖ ಗ್ರಾಹಕರಾಗಿದ್ದಾರೆ. ಯುದ್ಧದ ಭೀತಿಯಿಂದಾಗಿ ಕೆಲವು ರಾಷ್ಟ್ರಗಳು ಅಕ್ಕಿಯನ್ನು ಸಂಗ್ರಹಿಸಿಟ್ಟುಕೊಳ್ಳಲು ಪ್ರಯತ್ನಿಸುತ್ತಿವೆ. ಇದು ತಾತ್ಕಾಲಿಕವಾಗಿ ಬೇಡಿಕೆಯನ್ನು ಹೆಚ್ಚಿಸಿದರೂ, ಪಾವತಿ ಸಮಸ್ಯೆಗಳು ರಫ್ತುದಾರರನ್ನು ಕಾಡುತ್ತಿವೆ. ರಾಜ್ಯದ ಅತಿ ಹೆಚ್ಚು ಅಕ್ಕಿ ರಫ್ತು ಮಾಡುವ ಜಿಲ್ಲೆಯಾಗಿದ್ದು, ಇಲ್ಲಿನ ಸಿಂಧನೂರು ಮತ್ತು ಮಾನ್ವಿ ತಾಲೂಕುಗಳಿಂದ ಸಾವಿರಾರು ಟನ್ ಅಕ್ಕಿ ವಿದೇಶಕ್ಕೆ ರವಾನೆಯಾಗುತ್ತದೆ. ಕೊಪ್ಪಳ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ವಿದೇಶಕ್ಕೆ ಸೋನಮಸೂರಿ ಸೇರಿ ವಿವಿಧ ಮಾದರಿಯ ಅಕ್ಕಿಯಗಳು ವಿದೇಶಗಳಿಗೆ ರಫ್ತಾಗುತ್ತವೆ.

ರಾಜ್ಯದ ಸೋನ ಮಸೂರಿ ಅಕ್ಕಿಗೆ ಮದ್ಯಪ್ರಾಚ್ಯ ರಾಷ್ಟ್ರಗಳೇ ಪ್ರಧಾನ ಮಾರುಕಟ್ಟೆ. ಅಲ್ಲಿ ನೆಲೆಸಿರುವ ಲಕ್ಷಾಂತರ ದಕ್ಷಿಣ ಭಾರತೀಯರು ಈ ಅಕ್ಕಿಯ ಮುಖ್ಯ ಗ್ರಾಹಕರಾಗಿದ್ದಾರೆ. ರಾಜ್ಯದ ರೈಸ್‌ ಮಿಲ್‌ಗಳಿಂದ ಲೋಡ್ ಆಗುವ ಕಂಟೈನರ್‌ಗಳು ರೈಲು ಅಥವಾ ಲಾರಿಗಳ ಮೂಲಕ ಮಹಾರಾಷ್ಟ್ರದ ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ಅಥವಾ ಗೋವಾದ ಮುರ್ಮುಗೋವಾ ಬಂದರಿಗೆ ತಲುಪುತ್ತವೆ. ಅಲ್ಲಿಂದ ಹಡಗುಗಳ ಮೂಲಕ ಕೆಂಪು ಸಮುದ್ರದ ಹಾದಿಯಾಗಿ ಮದ್ಯಪ್ರಾಚ್ಯದ ಬಂದರುಗಳನ್ನು ತಲುಪುತ್ತವೆ. ಆದರೆ ಯುದ್ಧದಿಂದಾಗಿ ಇದಕ್ಕೂ ಪೆಟ್ಟಾಗಿದೆ.

ಈ ಕುರಿತು ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿದ ತುಮಕೂರಿನ ರೈಸ್‌ ಮಿಲ್‌ನ ಉದ್ಯಮಿ ಮೊಹಮದ್‌ ಇಸ್ಮಾಯಿಲ್‌, "ಪ್ರತಿ ರೈಸ್‌ಮಿಲ್‌ನಿಂದ ಅಂದಾಜು 50 ಟನ್‌ನಷ್ಟು ಪ್ರತಿನಿತ್ಯ ರಫ್ತಾಗುತ್ತದೆ. ಆದರೆ ಈಗ ಇದರ ಪ್ರಮಾಣ ಕಡಿಮೆಯಾಗಿದೆ. ಕೆಲವು ಕಡೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ರೈಸ್‌ಮಿಲ್‌ ಉದ್ಯಮವು ಕುಂಠಿತಗೊಂಡಿದೆ. ಉದ್ಯಮಿಗಳಿಗೆ ಪ್ರತಿಟನ್‌ಗೆ ಅಂದಾಜು ಎರಡು ಲಕ್ಷ ರೂ.ನಷ್ಟು ನಷ್ಟ ವಾಗುತ್ತಿದೆ," ಎಂದು ತಿಳಿಸಿದರು.

ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ರಮೇಶ್‌ ಚಂದ್ರ ಲಹೋಟಿ ಮಾತನಾಡಿ, "ಕೃಷಿ ಉತ್ಪನ್ನಗಳು ಭಾರತದಿಂದ ಕೇವಲ ಶೇ.4ರಷ್ಟು ರಫ್ತು ಆಗುತ್ತದೆ. ಬೇರೆ ಬೇರೆ ರಾಷ್ಟ್ರಗಳಿಂದಲೂ ರಫ್ತು ಆಗುತ್ತವೆ. ಯುದ್ಧದ ಪರಿಸ್ಥಿತಿ ಇದ್ದರೂ ಮುಂಗಡವಾಗಿಯೇ ಕಾಯ್ದಿರಿಸಲಾಗಿರುತ್ತದೆ. ಸದ್ಯಕ್ಕೆ ಆಹಾರ ಪದಾರ್ಥಗಳ ಸಮಸ್ಯೆ ಎದುರಾಗಿಲ್ಲ. ಆಹಾರ ಪದಾರ್ಥಗಳು ಮುಕ್ತಾಯವಾಗುಷ್ಟರಲ್ಲಿ ಯುದ್ಧ ನಿಲ್ಲುವ ಸಾಧ್ಯತೆ ಇದೆ. ಅನಗತ್ಯ ಆತಂಕ ಸೃಷ್ಟಿಸುವುದು ಸರಿಯಲ್ಲ," ಎಂದರು.

ಇಂಡಿ ನಿಂಬೆಗೂ ಹೊಡೆತ

ನಿಂಬೆಹಣ್ಣನ್ನು ಸಾಗಿಸಲು ಸಾಮಾನ್ಯ ಕಂಟೈನರ್ ಸಾಲದು, ಅದಕ್ಕೆ 'ಕೋಲ್ಡ್ ಸ್ಟೋರೇಜ್' ಸೌಲಭ್ಯವಿರುವ ಕಂಟೈನರ್‌ಗಳೇ ಬೇಕು. ಇವುಗಳ ಬಾಡಿಗೆ ಮೊದಲೇ ಹೆಚ್ಚಿರುತ್ತದೆ. ಈಗ ಯುದ್ಧದ ಕಾರಣದಿಂದ ಈ ಬಾಡಿಗೆ 3 ರಿಂದ 4 ಪಟ್ಟು ಹೆಚ್ಚಾಗಿದೆ. ಒಂದು ಕಂಟೈನರ್ ಸಾಗಿಸಲು 80 ಸಾವಿರದಿಂದ 1 ಲಕ್ಷ ರೂ. ಇದ್ದ ಬಾಡಿಗೆ ಈಗ 2.5 ರಿಂದ 3 ಲಕ್ಷ ರೂ. ದಾಟಿದೆ. ಇಷ್ಟು ದೊಡ್ಡ ಮೊತ್ತವನ್ನು ಭರಿಸಿದರೆ ರಫ್ತುದಾರರಿಗೆ ಲಾಭದ ಬದಲು ನಷ್ಟವೇ ಹೆಚ್ಚಾಗುತ್ತದೆ. ಮದ್ಯಪ್ರಾಚ್ಯದಲ್ಲಿ ಒಣಗಿಸಿದ ನಿಂಬೆಹಣ್ಣುಗಳಿಗೆ ಅಪಾರ ಬೇಡಿಕೆಯಿದೆ. ಯುದ್ಧದ ಕಾರಣದಿಂದಾಗಿ ಮಾರುಕಟ್ಟೆಗಳು ಸ್ಥಗಿತಗೊಂಡಿವೆ. ಇದರಿಂದ ರಫ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ ಎಂದು ಹೇಳಲಾಗಿದೆ.

ರಾಜ್ಯದ ಕೃಷಿ ಭೂಪಟದಲ್ಲಿ ವಿಜಯಪುರ ಜಿಲ್ಲೆಗೆ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ನಿಂಬೆ ಕೃಷಿಯ ತವರು ಎಂದೇ ಖ್ಯಾತವಾಗಿದೆ. ಈ ಭಾಗದ ರೈತರ ಜೀವನಾಡಿಯಾಗಿರುವ ನಿಂಬೆ ಬೆಳೆಯನ್ನು ಪ್ರೋತ್ಸಾಹಿಸಲು ಮತ್ತು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು 'ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ'ಯನ್ನು ಸ್ಥಾಪಿಸಿತು. ಸುಮಾರು 14 ಸಾವಿರ ಎಕರೆಗೂ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಹಬ್ಬಿರುವ ನಿಂಬೆ ಕೃಷಿಯು ಉತ್ತರ ಕರ್ನಾಟಕದ ಶುಷ್ಕ ಪ್ರದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ.


Read More
Next Story